Friday 11 December 2015

ಮುಂಗಾರಿನ ಕಂಕಣ



ಅರಿಶಿನ ಬಳಿದಂತೆ ವಧುವಿಗೆ
ಹಸುರು ಮೆತ್ತಿದೆ ಮಣ್ಣಿಗೆ
ಸುತ್ತ ಹಾಯಿಸಿದಲ್ಲೆಲ್ಲ ದಿಟ್ಟಿ
ಹೇರಳವಾಗಿ ರಾಚುವುದು ಚಿಗುರು
ಹಸುರೋ ಹಸುರು ಬರೀ ಹಸುರು

ವಸಂತ ಶುರುವಾಗಿ ಶ್ರಾವಣ-
ವ ಕರೆಯುವ ಸಂಭ್ರಮದ ಚಣ
ಭೂ ಗರ್ಭದಿ ಮೊಳೆತು ಐದೆಳೆ
ಎಲೆಯ ತೊಟ್ಟು ನಗುತಿವೆ ಬೆಳೆ
ಸಂಭ್ರಮವೋ ಸಂಭ್ರಮ ರೈತನಿಗೆ ಸಂಭ್ರಮ

ಜೋಡೆತ್ತನು ಕೊಳ್ಳಗಟ್ಟಿ, ನಸುಕಿನಿಂದ ಸಂಜಿತನ
ಹರಗಿ ಹೊಲವ, ಹದ ಮಾಡಿ ನೆಲವ ಬೆಳೆಗೆ
"ಮಕ್ಕಳೋ.. ಇವು ನನ್ನ ಮಕ್ಕಳು"- ಎಂದು
ನೇವರಿಸುವೆ ಮೊಳೆತ ಎಳೆ ಎಲೆಯನು
ಸಂತಸವೋ ಸಂತಸ ಬೆಳೆಗೆ ಹೇಳ ತೀರದ ಸಂತಸ.

ಓದಿಲ್ಲ ಕಲಿತಿಲ್ಲ. ಪುರಾಣ ಕೇಳಿದ್ದ ನಾ ಕಂಡಿಲ್ಲ.
ಆದರೂ ರಾಮಾಯನದ ಪಾರಾಯಣ ಮಾಡುವೆಯಲ್ಲ..!!
"ರಾಮ-ಲಕ್ಷ್ಮಣ"ರಿಗೆ ರಾಮ-ಲಕ್ಷ್ಮಣರ ಕತೆ ಹೇಳಿ
ದಣಿವಡಗಿಸಿ, ದಣಿವಾರಿಸುವೆ ನಿಮ್ಮದಾವ ನಂಟೋ ತಂದೆ ?
ಇರಬಹುದು ಇರಬಹುದು ರೈತಂಗೂ-ರಾಮಂಗೂ ಎಂದೆ.

ನೋಡಲ್ಲಿ ನಿನ್ನ ಜೋಡಿ ಬರುತಿದೆ
ನಿನಗಾಗಿ ಬುತ್ತಿಗಂಟು ತರುತಿದೆ
ಮಾವಿನ ಮರದ ನೆರಳ್ ನಗುತಿದೆ
'ಬಂದರೆನ್ನ ಕಂದರ್ ಮಡಿಲಿಗೆ’ನುತಿದೆ
ಶಿವ-ಗೌರಿ ಶಿವ-ಗೌರಿ ಹೌದು ನೀವೇ ಶಿವ-ಗೌರಿ
          (ಗಂಗೆಯದೋ ಭೂ ತಾಯಿ)
                                                         - ಸತೀಶ ಉ ನಡಗಡ್ಡಿ

ಮತ್ತೆ ಬರುವೆ



ಹೋಗುತಿಹದು ಕೊನೆಯ ಪಯಣ
ನೆರೆದ ನೂರು ಜನರ ಮಧ್ಯೆ
ಪಡೆದುಕೊಂಡು ಅಂತಿಮ ನಮನ
ನಾಲ್ಕು ಜನರ ಹೆಗಲ ಮೇಲೆ

ಅಳುತ ಕಳುಹಿದಿರೆಂದರೆ ನೀವು
ನನಗದೆಲ್ಲಿಯ ಶಾಂತಿ ? ನೆಮ್ಮದಿ ?
ಹರುಷದಿಂದ ಕಳುಹಿರಿಂದೆನ್ನನು
ಮರುಜನ್ಮವಿದ್ದರೆ ಮತ್ತೆ ಬರುವೆ.

ಉದಯಾಸ್ತಮಾನದ ನಡುವೆ
ಸುದೈವದ ಕೈ ಕೆಳಗೆ- ಅಂತೆ
ಬಣ್ಣ ಹಚ್ಚಿ, ಪಾತ್ರ ನಿರ್ವಹಿಸಿ
ನಿಶ್ಚಿಂತನಾಗಿ ಹೊರಟಿರುವೆ ನಸುನಗುತ.

ತಂದೆ ಎಂದರೆ ನನಗಾದೀತು
ತೊಂದರೆ; ಯಾಕೆಂದರೆ...
ನಾನಾಗಲಿಲ್ಲ ಆದರ್ಶ ತಂದೆ.
ಮತ್ತೆ ಬರುವೆ ಮಗನ ಮಗನಾಗಿ.

ಒಲವಿನೊಡಲ ಮಡದಿಯೆ
ಕ್ಷಮಿಸು ನನ್ನ; ದಡ ಸೇರಿಸದೇ
ಭವ ಸಾಗರದ ನಡು ನೀರಿನಲ್ಲಿ
ದೂಡಿ ನಿನ್ನ ಹೊರಟು ಬಿಟ್ಟೆನು.
                  - ಸತೀಶ ಉ ನಡಗಡ್ಡಿ

Thursday 10 December 2015

ಒಂದು ಸಂಜೆಯಲಿ



ನಸುಗೆಂಪು ಹದಿಯಾಗಸ
ಎಷ್ಟು ನೋಡಿದರೂ ಆಗದಾಯಾಸ.
ನವಿರಾಗಿ ಬೀಸುವ ತಂಗಾಳಿ,
ಮಿಗ-ಕಗಗಳ ನಾದ ಕೇಳಿ
ನಿಸರ್ಗ ದೇವಿಗೊಂದು ನಮನ
ಸಲ್ಲಿಸಿದೆ ಹೃತ್ಪೂರ್ವವಾಗಿ ಮನ.

ಊರ ಕೆರೆಯಿಂದ ಮನೆಯೆಡೆಗೆ
ಹಸು,ಎಮ್ಮೆ,ಕುರಿ ಕಾಯ್ವ ಬೀ(ವೀ)ರನ ನಡಿಗೆ
ಅದೇಕೊ ರುಮಾಲೆಳೆವ ನಾಯಿ
ಉಧ್ಗರಿಸಿ ಬಿಟ್ಟ. ’ತಗೊಂಡ್ ಸಾಯಿ’
ಖೇತಗಳಿಂದ ಮರಳು
ರೈತನ ಹೆಜ್ಜೆ ಹೆಜ್ಜೆಗೆ ಮಡದಿಯ ಜೀವ.

ಹುಟ್ಟಿದ ಹನ್ನೆರಡು ಗಂಟೆಗೆ
ಸಾಯಲನಿಯಾದ ಸರಿಹೊತ್ತಿಗೆ.
ಯಾರನೂ ಕೇಳದೆ ಹೇಳದೆ;
ನೋಡು ಕಾಲ ಚಕ್ರ ತಿರುಗುತಿದೆ.
ಅದರೊಂದಿಗೆ ಸಾಗಬೇಕೆಲ್ಲ
ನಿನಗಾಗಿ ಅದು ಕಾಯುವುದಿಲ್ಲ.ತಿಳಿದಿಕೊ.
                   - ಸತೀಶ ಉ ನಡಗಡ್ಡಿ

ನನ್ನ ಜನರು




ನಿಮಗೇನು ಗೊತ್ತು
ನನ್ನ ಜನರ ಬಗ್ಗೆ..?
ಅವರೇನು ಅಸಾಮಾನ್ಯರಲ್ಲ.
ಶೂರರು, ವೀರರು,
ಕಡು ವೈರಿಗಳು;
ಅವರವರೊಳಗೆ ಆಗದವರು

ದೊಡ್ಡವರು, ಚಿಕ್ಕವರು
ಯಾರೊಬ್ಬರೂ ಎಲ್ಲಿಯೂ
ಯಾರೊಂದಿಗೂ ಹೊಂದಿಕೊಳ್ಳದ
ಹುಂಬರು ನನ್ನ ಜನರು.
ಆಡಂಬರದ್ದು ಅವರ ಮನ:
ಅವರಿಗವರೆ ಸರಿಸಮಾನರು....

ತಾಳ್ಮೆ ಇಲ್ಲದಂತಹ
ತರಾತುರಿಯವರು
ಇಲ್ಲವೇ, ಸೋಂಬೇರಿಗಳು.
ಮಾತಿನೊಳಗೆ ....
ಅವರೆ ಮಲ್ಲರು,
ಎಲ್ಲವನೂ ಬಲ್ಲ ಮೈಗಳ್ಳರು.

ಸಾರ್ವಜನಿಕ ಸ್ಥಳ- ಅವರ ಕಕ್ಕಸದ ಮನೆ.
ಮೂತ್ರ ವಿಸರ್ಜನೆ- ಚರಂಡಿ ಕಾಂಪೌಂಡು.
ಕಸದ ತೊಟ್ಟಿಯೋ ? ಅವರೆಸೆದ ಸ್ಥಳವೆಂದುಕೊ.

ಮಕ್ಕಳು,ಪಾಲಕರು,ವೃದ್ಧರು ಅಲ್ಲ. ಎಲ್ಲರೂ
ಪದೇ ಪದೇ ಹೇಳಬೇಕೇನು ?
ಸಿಡುಕರು, ಕೆಡುಕರು ಅಷ್ಟೆ ಅಲ್ಲ; ಕುಡುಕರು.
ಎಲ್ಲವೂ ಅವರಲುಂಟು ಗೊತ್ತೆ ?

- ಸತೀಶ ಉ ನಡಗಡ್ಡಿ