Wednesday 13 July 2016

ನಮ್ಮೂರಿಗೆ ಹೋಗುವ ಕೊನೆಯ ಬಸ್ಸು......

ನಮ್ಮೂರಿಗೆ ಹೋಗುವ ಕೊನೆಯ ಬಸ್ಸು......

  

         "ಯಾವನಿಗೆ ಬೇಕೊ ಮಾರಯ್ಯಾ ಈ ಗೋಳು ಅಂತ್ಹೇಳಿನ ಬೈಕ್ ಮ್ಯಾಲ ಊರಿಗಿ ಬರಬೇಕ ಅನಸ್ತೈತಿ...." ಅಂತ ಮನಸ್ಸಿನಲ್ಲಿ ವಟಗುಡುತ್ತ ಬೆಳಗಾವಿ ಕೇಂದ್ರೀಯ ಬಸ್ ನಿಲ್ದಾಣದಲ್ಲಿರುವ ಎತ್ತರದ ವಿದ್ಯುತ್ ಕಂಬದ ಕೆಳಗೆ ನಿಂತಿದ್ದೆ. ಶುರು ಮಾಡಿ ಮರೆತು ಹೋದ ಶವರ್ ತರಹ ಮಳೆ ಒಂದೇ ಸಮನೆ 'ಧೋ......' ಎಂದು ಸುರಿಯುತ್ತಿತ್ತು. ಮಳೆಯಲಿ ತಲೆ ನೆನೆದು ಮಳೆಹನಿಯೊಂದು ಮೂಗಿಗುಂಟ ಜಾರಿ ಬಂದು, ತುಟಿಗೆ ತಾಗಿ  'ಉಫ್.....' ಎಂದು ಊದಿದ್ದರ ರಭಸಕ್ಕೆ ಚಿಮ್ಮಿ, ಮೇಲಿನ ವಿದ್ಯುತ್ ದೀಪದ ಬೆಳಕಿಗೆ ಒಮ್ಮೆ ಮಿನುಗಿ ಕೆಳಗೆ ಹರಿಯುತ್ತಿರುವ ತನ್ನ ಸಂಗಾತಿ ಹನಿಗಳನ್ನು ಸೇರಿತು. 

      ಸಮಯ 08:15 ಆಗುತ್ತಿದ್ದಂತೆಯೆ 'ಬಸ್ ಇಂದ ಯಾಕೊ ಇನ್ನಾ ಬರಲಿಲ್ಲ ಲಾ,,,' ಎಂದುಕೊಂಡು ಬಸ್ ನಿಲ್ದಾಣದ ಒಳಗೆ ಕುಳಿತ ನಮ್ಮ ಹಳ್ಳಿಯ, ಸುತ್ತ-ಮುತ್ತಲ ಹಳ್ಳಿಯ ಪ್ರಯಾಣಿಕರೂ, ಪರಿಚಯದ ನಾಲ್ಕೈದು ಜನ ನಮ್ಮೂರಿನ ಯುವಕರು ಬಂದು ಉಭಯ ಕುಶಲೋಪರಿಯನ್ನು ಮಾತನಾಡಿದರು. ಮಾತನಾಡಿದೆವು.

   ಈ ತರದ ನಮ್ಮ ಊರಿನ ಪ್ರಯಾಣಿಕರ ಬಗ್ಗೆ ನಾನಿಲ್ಲಿ ಹೇಳಲೇಬೇಕು. ಯಾಕೆಂದರೆ, ಕಳೆದ 5-6 ವರ್ಷಗಳ ಹಿಂದೆ ನಾನೂ ಹೀಗೆ, ಇವರಂತೆಯೇ, ಇವರ ಓರಗೆಯವರೊಂದಿಗೆ ಕಾಲೇಜಿನ ಬೇಸಿಗೆಯ ರಜಾ ದಿನಗಳಲ್ಲಿ ಈ ಬೆಳಗಾವಿಗೆ ಕೆಲಸಕ್ಕೆ ಬರುತ್ತಿದ್ದೆ. ನಮ್ಮೂರಿನ, ನನಗಿಂತಲೂ ನಾಲ್ಕೈದು ವರ್ಷ ಹಿರಿಯರಿಂದ ಹಿಡಿದು ನನ್ನ ಗೆಳೆಯರ ಹಾಗೂ ನನಗಿಂತ ಎರಡ್ಮೂರು ವರ್ಷ ಕಿರಿಯ ಹುಡುಗರೆಲ್ಲರೂ ಈ ತರಹ ಕೆಲಸಕ್ಕೆ ಬರುತ್ತಿದ್ದೆವು. ಆಗೆಲ್ಲ ನಮ್ಮವರೆಲ್ಲ ಹೇಳಿಕೊಳ್ಳುವಷ್ಟು ಹಣವಂತರಲ್ಲದ್ದರಿಂದ ನಾವೆಲ್ಲ ದಿನಕ್ಕೆ 90 ರಿಂದ 100 ರೂ.ಗಳವರೆಗೆ ಹಣ ಸಂಪಾದಿಸಲು ಆ ಊರನ್ನು ಬಿಟ್ಟು ಇಲ್ಲಿಗೆ ಬರುತ್ತಿದ್ದೆವು. ಅಂತವರಲ್ಲಿ ಕೆಲವರು ಕುಟುಂಬ ನಿರ್ವಹಣೆಗಾಗಿ, ಇನ್ನು ಕೆಲವರು ಮನೆಯಲ್ಲಿ ಭಾರವಾಗಿ ಬೈಸಿಕೊಂಡು 'ಆದಷ್ಟು ನಾಲ್ಕ ರೂಪಾಯಿ ಆದ್ರೂ ಆಗ್ತೈತಿ....' ಎಂದುಕೊಂಡು. ಮತ್ತೆ ಕೆಲವರು ಮುಂದಿನ ಓದಿಗೆ ಕಾಲೇಜ್ ಫೀ ಗಳಿಸಲು, ಮತ್ತೆ ಕೆಲವರು ಶೋಕಿಯನ್ನು ಮಾಡಲು ಹಣ ಸಾಲದ್ದಕ್ಕಾಗಿ...! ಇನ್ನೂ ಕೆಲವರು ಹೊಸ ಮೊಬೈಲ್ ಕೊಳ್ಳಲು ಹಣಕ್ಕಾಗಿ ದುಡಿಯಲು ಬರುತ್ತಿದ್ದರು. ಸ್ಟಾರ್-ಗುಟಕಾ ತಿನ್ನಲು ಹಣ ಸಂಪಾದಿಸಲು,,!! ಸಾರಾಯಿ ಹೆಂಡ ಕುಡಿತಕ್ಕೆ ಹಣ ಸಾಲದ್ದಕ್ಕೆ.... ಹೀಗೆ ಒಂದೊ,,,? ಎರಡೊ....? ನೂರಾರು ಕಾರಣಗಳಿಂದ ಒಟ್ಟಿನಲ್ಲಿ ದುಡಿಯಲು, ಹಣ ಗಳಿಸಲು ಬರುತ್ತಿದ್ದರು. ಇವರ ಕೆಲಸದ ಕ್ಷೇತ್ರಗಳೆಂದರೆ, ದೊಡ್ಡ ದೊಡ್ಡ ಮಸಾಲೆ ಅಂಗಡಿಗಳಲ್ಲಿ ಸಹಾಯಕ್ಕೆ, ಬೇಕರಿ, ಸ್ವೀಟ್ ಮಾರ್ಟಗಳಲ್ಲಿನ ಪುಡಿಗೆಲಸಕ್ಕೆ, ಈ ಎಲ್ಲಕ್ಕಿಂತ ಇನ್ನೊಂದು ದೊಡ್ಡ ಕ್ಷೇತ್ರ ಇದೆ. ಅದೆಂದರೆ, ಬಂಗಲೆಗಳನ್ನು ಕಟ್ಟುವ ಕಾಂಟ್ರಾಕ್ಟರುಗಳ, ಗೌಂಡಿಗಳ ಕೈಯಲ್ಲಿ ಕೂಲಿಗಳಾಗಿ, ಸಿಮೆಂಟ್ ಚೀಲ ಹೊರಲು, ಮಾಲ್ ಮಿಕ್ಸ್ ಮಾಡಲು, ತಗ್ಗು  ತೋಡಲು.... ಇತ್ಯಾದಿ, ಇತ್ಯಾದಿ. ಬೆಳಗಾವಿಯಲ್ಲಿ ತಲೆ ಎತ್ತಿದ ಪ್ರಸಿದ್ಧ ಆಸ್ಪತ್ರೆ ಎಂದು ಹೆಸರು ಪಡೆದ ಕೆ.ಎಲ್.ಇ ಯ ಡಾ. ಪ್ರಭಾಕರ ಕೋರೆ ಆಸ್ಪತ್ರೆಯ ಗೋಡೆ-ಗೋಡೆಗೆ ಇಟ್ಟಂಗಿಯನ್ನಿಟ್ಟು ಸಿಮೆಂಟನ್ನು ಮೆತ್ತಿದವರೆ ಈ ತರದ ಸುತ್ತಲ ಹಳ್ಳಿಯ ನೂರಾರು, ಸಾವಿರಾರು ಯುವಕರೆಂದರೆ ಅದು ಸಂಶಯ ಪಡಬೇಕಾದ ಸಂಗತಿಯಲ್ಲ. ಇಂತಲ್ಲಿ ಸಾದಾ ಕೂಲಿಗಳಾಗಿ ಸೇರಿಕೊಂಡು ಮೇಸ್ತ್ರೀಯ, ಮಾಲಿಕರ ಹಾಗೂ ಕಾಂಟ್ರಾಕ್ಟರುಗಳ ನಂಬಿಕೆ ಗಳಿಸಿ ಕೂಲಿ ಗೌಂಡಿಯಾಗಿ, ಗೌಂಡಿಯು ಮೇಸ್ತ್ರೀಯಾಗಿ ಕಳೆದ ಎರಡು ವರ್ಷದಿಂದ ನಮ್ಮೂರಲ್ಲಿಯೇ ಐದರಿಂದ ಆರು ಹೊಸ ಬಿಲ್ಡಿಂಗುಗಳನ್ನು ಕಟ್ಟಿದ್ದಾರೆಂದರೆ ನಿಜಕ್ಕೂ ಪ್ರಶಂಸನೀಯವೇ ಸರಿ.

    6-7 ವರ್ಷಗಳ ಹಿಂದಿನ ಜನರೇ ಬೇರೆ, ಅವರ ವೃತ್ತಿಯೇ ಬೇರೆ, ಜೀವನ ಶೈಲಿಯೇ ಬೇರೆ. ಆದರೆ ಆ ತಲೆಮಾರು ಸಾಗಿ ತದನಂತರದ ಪೀಳಿಗೆ ಉಚ್ರಾಯ ಸ್ಥಿತಿಗೆ ಬಂದು ತಮ್ಮಷ್ಟಕ್ಕೆ ತಾವೇ ನಗರದತ್ತ ಮುಖಮಾಡಿದ್ದು. ಬದಲಾದ ಜೀವನ ಶೈಲಿ, ಉಡುಗೆ-ತೊಡುಗೆ, ಸುಧಾರಿಸಿದ ಜೀವನ ಕ್ರಮ. ಜೀವನ ಮಟ್ಟ..... ಅಬ್ಬಾ !!!!!! ಹಳೆ ಕೊಂಡಿಗೂ, ಹೊಸ ಕೊಂಡಿಗೂ ಸೇತುವೆ.

        "ಮಗs ಬಸ್ಸಿನ್ಯಾಂವ ಒಂದ್ಯಾಡ ದಿನದಿಂದ ವಟ್ಟs ಟಾಯಿಂ ಸರಳ      ಬರವಾಲ್ಲ..."

"ಅವನೌನ್ ಹ್ವಾದ ವರ್ಷ ಈ ಮಳಿ ಒಂದ.., ಒಂದ ಹನಿ ಆಗಿಲ್ಲ. ಈ ಸಲಾ ನೋಡ.... ಅಕಿನ ಮುಂಬ ಹಚ್ಚಿ ಬಿಟ್ಟೈತಿ ಬಂದಾಗಿಂದಾ,,"

        "ಗಾಳ್ಪಿಶ್ಯಾನ್ ಮಳೀ ರೀ...... ಗಾಳೀನೂ ಹಂಗ ಬೀಸತೈತಿ, ಮಳೀನೂ ಹಂಗ  ಬಡಿತೈತಿ...."

    ಸುತ್ತ-ಮುತ್ತ ನಿಂತ ಜನರಿಂದ ಇಂತಹ ನಾಲ್ಕೈದು ಸಂಭಾಷಣೆಗಳು ಕಿವಿಗೆ ಬಿದ್ದವು. ಊರಲ್ಲಿನ ಆಗು-ಹೋಗುಗಳನ್ನು, ಏರು-ಪೇರುಗಳನ್ನು, ವ್ಯತ್ಯಾಸಗಳನ್ನೆಲ್ಲ ಹೀಗೆ ದಿನಾ ರಾತ್ರಿಯ ವೇಳೆ ಬಸ್ಸಿಗಾಗಿ ಕಾಯುತ್ತ ನಿಂತಾಗ ಚಚರ್ಿಸುತ್ತಿದ್ದರು. "ಆ ಮಗಾ ಹಂಗಾ..., ಈ ಮಗಾ ಹಿಂಗಾ... ಅದ ಹಂಗ  ಆಗಾಕ ಅದ ಕಾರಣ.... ಇದ ಹಿಂಗ ಆಗಾಕ ಇದ ಕಾರಣ..." ಎಂದು ತಮ್ಮ ತಮ್ಮ ತರ್ಕದ ಕುದುರೆ ತನ್ನ ಸಾಮಥ್ರ್ಯ ಇರುವರೆಗೆ ಓಡಿದಷ್ಟು ಹೊಗಳು ಭಟ್ಟ ಬಾಯಿಯು ವದರುತ್ತಿತ್ತು. ಅದರಲ್ಲಿನ ಒಂದೆರಡು ಇಲ್ಲಿ ಹಾಗೇ ಸುಮ್ಮನೆ ಇರಲಿ ಎಂದು......
       
    ಬಾಯಿ ತುಂಬ ಗುಟಕಾ ಜಗಿದ ರಸ ಇಟ್ಟುಕೊಂಡು.........

        "ಹಲ ಅವನೌನ... ಮಗಾ ಬಂದ್ನೋಡಲ್ಲಿ, ಯಾಡ ಪಾಕಿತ್ ಹೊತ್ಯಾಗ್ ಹಾಕೊಂಲ್......."

        "ಯಾಡ ಪಾಕಿಟ್ ಹೊಟ್ಟಿಯಾಗ..... ಯಾಡ ಪಾಕಿಟ್ ಕಿಸೆದಾಗ........ ಏನ್ ಉದ್ಧಾರ  ಆಗತೈತಿ ಪಾ ಮನಿ ಈ ಮಕ್ಕಳಿಂದ...? ಇದ್ದದ್ದೂ ಹಾಳಾಗತೈತಿ.."

        "ಹಿಂತಾ ಮಳ್ಯಾಗ ಕುಡದ ಬರಾತಾರ ಮಕ್ಕಳ. ಮನಿಗಿ ಹೋಗೋದರೊಳಗ ನೀಶೆನ ಇಳದಿರತೈತಿ ಎಲ್ಲಾ.." ಎಂದನು ಕುಡುಕರ ಗುರು ಒಬ್ಬ.

        "ಮತ್ತ ಅವರ ಕಿಸೆದಾಗ ಇನ್ ಯಾಡ ಪಾಕಿಟ ಯಾಕ ತಂದಾರ ಅಂತ ತಿಳದೀ....? ಅದಕ್ಕ.  ಊರಿಗಿ ಹೋಗೋದ್ರೊಳಗ ಇದ ಇಳಿತೈತಿ.... ಬಸ್ ಇಳದ್ಕೂಡಲೇ ಮತ್ತ ಆ ಯಾಡ  ಪಾಕಿಟ್ ಬಾಯಾಗ ಇಟ್ಗೊಂಡ ಮನಿ ಕಡೆ ಹೋಗ್ತಾರ ....."

ಬಾಯಲ್ಲಿರು ಗುಟಕಾ ಎದುರಿಗಿರುವವರ ಮುಖಕ್ಕೆ ಚಿಮ್ಮುವಂತೆ, ಸೇದುತ್ತಿರುವ ಗಣೇಶ ಬೀಡಿಯ ಹೊಗೆ ಮುಂದಿರುವವನ ನಾಸಿಕ ಕಟ್ಟುವಂತೆ ಮಾತನಾಡಿ 'ಕೊ ಕ್ಕೊ... ಕೊ ಕ್ಕೊ ಕ್ಕೊ...' ಎಂದು ನಕ್ಕು ಮತ್ತೆ ತಮ್ಮ ಗಮನವನ್ನು ಊರಲ್ಲಿಯ ಇನ್ನೊಂದು ವಿಷಯದ ಕಡೆಗೆ ಹರಿಸಿದರು.

        "ಐತಾರ ದೇವರ ಗುಡಿಗೆ ಶ್ಲಾಪ್ ಹಾಕಿರು. ಸಾಮಾರದಿಂದ ಮಳಿ ಹಿಡ್ಕೊತ್ ನೋಡ.... ಸಡ್ಲ  ಬಿಡದಂಗ...."

        "ಖರೆ ಅನ್ಯಿಲಾ.... ನಿನ್ನ ಮಾತ....."

        "ನೀ ಏನ ಹೇಳ.... ಒಂದೊಂದ ಬಾಗದೊಳಗ ಒಂದೊಂದ ದೇವರದ ಭಾಳ ಅಂದ್ರ ಭಾಳ, ಫಾವರ ಫುಲ್ಲ ಮತ್ತ...."

        "ಏನ ಅಂದ್ರೂನೂ ದೇವ್ರ ದೇವ್ರ ಅಲೋ.....ಅಂವಗೂ ಆಸರ ಆತ್ಲಾ. ಅದಕ ಮಳಿ ಕೊಟ್ಟ..."

        "ಈ ವರ್ಷ ಬೆಳಿ ಮತ್ತರ ಪುರಮಾಶಿ ಬರತಾವ ಮತ್ತ ನೀ ಹಿಂಗ್ಯಾಕ ಅಂತಿ ಅನವಾಲ್ಯಾಕ..."

        "ಹ್ಯ.... ಹಿಂಗ ಮಳಿ ಹೊಳವ ಕೊಟ್ಟ, ಕೊಟ್ಟ..... ಅಗದಿ.. ಒಂದ.... ಒಂದ... ಇದರಂಗ  ಮಳೀ ಆಗೋವಾಗ ಬೆಳಿ ಬರದೇನ್ ಮಾಡ್ಯಾವೋ...?"

        " ಹೌದನ್ಯಲಾ ಈ ಮಾತಿಗಿ....."

    ದೇವರ ಗುಡಿಗೆ ಸ್ಲ್ಯಾಬ್ ಬಿದ್ದಿದ್ದಕ್ಕೂ, ಅದರ ನಂತರದ ದಿನ ಮಳೆ ಆಗಿದ್ದಕ್ಕೂ ದೈವ ಕೃಪೆಯನ್ನು ಕಲ್ಪಿಸಿದ ಮಾತುಗಳನ್ನು ಕೇಳಿ ಆಶ್ಚರ್ಯ ಆಯ್ತು. ಹಾಗೆಯೇ " ಅಯ್ಯೋ ಹುಚ್ಚಪ್ಪಗಳಾ....? ಎಂದು ಮರುಕವೂ ಆಯ್ತು. ಯಾಕೆ ಅಂದ್ರೆ, ಹೋದ ಚುನಾವಣೆಯಲ್ಲಿ ಮತ ಪ್ರಚಾರಕ್ಕೆ ಬಂದ ಜನ ಪ್ರತಿನಿಧಿ ಅಲ್ಲಲ್ಲಿ ಸಭೆ ಸಮಾರಂಭಗಳನ್ನು ನಡೆಸಿ, ಆಶ್ವಾಸನೆ ಕೊಟ್ಟು, ಮತಗಳನ್ನು ಭದ್ರಪಡಿಸಿಕೊಂಡು ಹೋಗಿದ್ದರು. ಅದಕ್ಕೆ ಪ್ರತಿಯಾಗಿ ಈ ನಮ್ಮ ಊರ ಮತಬಾಂಧವರು "ನಮ್ಮ ಊರಾಗಿನ ದೇವರ ಗುಡಿಗೋಳ ಒಂದ..... ಹಿಂತಾ ಮಾತ ಹಿಂಗಾ....." ಎಂದು ಪ್ರತಿನಿಧಿಗಳ ಗಮನಕ್ಕೆ ತಂದು ಒಂದಿಷ್ಟು ಸಹಾಯ ಕೇಳಿದರು. ಅವರೂ ಒಂದಷ್ಟು ಸಹಾಯ ಮಾಡಿದರು. ಆದರೆ ಗುಡಿ ಮಾತ್ರ ಇದಾಗಿ ಎರಡು-ಮೂರು ವರ್ಷಗಳೇ ಸರಿಯುತ್ತ ಬಂದರೂ, 1/4 ರಷ್ಟೂ ಕೆಲಸ ಆಗಿಲ್ಲ. ಯಾಕಂದ್ರೆ, ಕೇಳಿದ ಒಂದಷ್ಟರಲ್ಲಿ, ಬಂದ ಒಂದಷ್ಟರಲ್ಲಿ, ಅಲ್ಲಲ್ಲಿ ಇಷ್ಟಿಷ್ಟು, ಇಷ್ಟಿಷ್ಟು ಹಂಚಿಕೊಂಡು ಉಳಿದ ಒಂದಷ್ಟರಲ್ಲಿ ಎಷ್ಟಾಗಬೇಕಿತ್ತೋ ಅಷ್ಟು ಕೆಲಸ ಆಗಿದೆ. ಮುಂದೆ ಇಷ್ಟಕ್ಕೆ ಬಿಟ್ಟರೆ ಊರ ಜನರೆದುರು ತಲೆ ಎತ್ತದ ಹಾಗೆ ಆಗಬಾರದೆಂದು ಊರಲ್ಲಿರುವ ಮನೆಗಳಿಂದ ಇಂತಿಷ್ಟು ಅಂತ ವಸೂಲಿ ಮಾಡಿ, ಹಣ ಕೂಡಿಸಿ, ಚೂರು-ಪಾರು ಆದ ಕೆಲಸವನ್ನು ಒಂದು ಹಂತಕ್ಕೆ ಅನ್ನಬಹುದಾದಂತೆ ತಂದಿದ್ದಾರೆ. ಅದೇ ಖುಷಿ. ಹೀಗೆ ನಿಮರ್ಾಣಗೊಂಡ ದೇವರ ಗುಡಿಯ ಸ್ಲ್ಯಾಬಿಗೂ, ಮಾನ್ಸೂನ ಮಾರುತಗಳ ಆಗಮನದಲ್ಲಿ ಏರು-ಪೇರಾಗಿ ಮಳೆ ಸೋಮವಾರಕ್ಕೆ ಬಂದಿರಬಹುದು. ಅಕಸ್ಮಾತ್, ಸೋಮವಾರ ಬರುವ ಮಳೆ ರವಿವಾರವೇ ಬಂದಿದ್ದರೇ.....???? "ದೇವರಿಗೆ ಆಸರ ಬ್ಯಾಡ ಅಂತ ಕಾಣಸ್ತದ.... ಅದಕ್ಕ ಮಳಿ ಬರಿಸಿ, ತಡದ ನೋಡ..." ಅಂತ ತಿಳಿಯೋ ಜನ ಇವರು.! ಈ ದೈವ ಕೃಪೆ ಗ್ರಹಿಕೆಯಾದಷ್ಟು ಬೇಗ ಲಂಪಟರ ಲಂಚ ಬುದ್ಧಿಯನ್ನು ಯಾಕೆ ಗ್ರಹಿಸಲಾರರು ಜನ ಅನ್ನೋದೆ ಒಂದು ಯಕ್ಷ ಪ್ರಶ್ನೆ.

    ಅಂತೂ 8:30 ರ ಸುಮಾರಿಗೆ ಬಸ್ಸು ಬಂದು ಪ್ಲಾಟ್ ಪಾರಂ ನಲ್ಲಿ ನಿಂತಿತು. ಓಡಿ ಹೋಗಿ ಹತ್ತುವವರು ಬಸ್ ಇನ್ನು ಬರುತ್ತಿರುವಾಗಲೇ  ಓಡೋಡಿ ಹತ್ತಿದರು. ಸೀಟು ಹಿಡಿದರು ಎನ್ನಲೋ... ಕಬ್ಜಾ ಮಾಡಿಕೊಂಡರು ಎನ್ನಲೋ...? ಏನೋ ಒಂದು. ಒಟ್ಟಿನಲ್ಲಿ ಬೇಕ ಬೇಕಾದವರಿಗೆ, ಬೇಕ ಬೇಕಾದವರು, ಬೇಕ ಬೇಕಾದಲ್ಲಿ ಸೀಟು ಹಿಡಿದರು. ಕಂಡಕ್ಟರ್ ಒಂದ ರೌಂಡ್ ಟಿಕೇಟ್ ಕೊಟ್ಟು ಎಂಟ್ರಿ ಮಾಡಿಸಿಕೊಂಡು ಬರಲು ಹೋದ. ಬಸ್ ನಿಧಾನವಾಗಿ ರಷ್ ಆಗುತ್ತಿದ್ದಂತೆ ಅಕ್ಕ-ಪಕ್ಕ ನಿಂತವರ, ಕುಂತವರ ತಿಕ್ಕಾಟಗಳು ಹೆಚ್ಚಾದವು. ಇದು ಅತಿರೇಕಕ್ಕೆ ಹೋಗಿ ಹಿಂದೆ ಜಗಳವೇ ಶುರುವಾಯ್ತು.

        "ಯಾಂವ್ ಸೂಳಿಮಗಾ ಕೇಳ್ತಾನ ನಾನೂ ನೋಡ್ತೇನ್..... ಸೀಟ್ ನಾ ಹಿಡದ್ದೇನ. ನಂಗ  ಅಷ್ಟು ಸೀಟ್ ಬೇಕ. ನಾ ಅಷ್ಟೂ ಸೀಟಿನ ತಿಕೀಟ ತುಗೊತೇನ್..... ಯಾಂವರೆ ಮಗಾ ನನಗ ಕೊಂಯ್ ಅಂದ್ರ.... ಗುದ್ದಿ ಜೀವಾಂನ ತುಗೋತೇನ...."

    ಕರ್ಣ ಕಠೋರವಾದ ವಾಕ್ಯಗಳು ಕಿವಿಗೆ ಬಿದ್ದವು. ಎದ್ದು ನೋಡಿದರೆ, ಕೊನೆಯ ಉದ್ದನೆಯ ಸೀಟಿಗಾಗಿ ಯುದ್ಧ ನಡೆದಿತ್ತು !

        "ನಿನಗ ಒಂದ ಬೇಕೊ..? ಯಾಡ ಬೇಕೊ...? ಹಿಡ್ಕೊಂದ ಬಾಕಿದೂನ ಬ್ಯಾರೆದಾವ್ರಿಗಿ ಕೊಡ....." ಎಂದು ಬುದ್ಧಿ ಹೇಳಿದವನಿಗೆ,

        "ನೀ ಯಾಂವೋ ಮಗನ ನನಗ ಹೇಳಾಂವ..? ಹೋಗೋ ಬಸ್ಸಿನ್ಯಾಗ ಓಡಿಹೋಗಿ ಸೀಟ  ಏನ್ ಹಡಸಾಕ ಹಿಡದ್ದೇನು...? ನನ್ನ ಮಗ ಬಂದಿಲ್ಲಿ ...... ನನಗ ಹೇಳಾಕ...."

    ಬಸ್ ತುಂಬ ಇವನದ್ದೆ ಬಾಯಿ, ಬಿದ್ದು ಝಕಂಗೊಂಡಿರೊ ತಾಮ್ರದ ಬಿಂದಿಗೆಯಂತ ಮುಖದಲ್ಲಿ ಕಿಸಿದ ಎರಡು ಕಣ್ಣುಗಳು, ನಿಮಿರಿ ನಿಂತ ಮೂಗಿನ ಹೊಳ್ಳೆಗಳು... ಏನ್ ಕೇಳ್ತೀರಾ ಆ ಅವತಾರ....

    ಹತ್ತು ನಿಮಿಷಗಳಾಗಿರಬಹುದು, ಕಂಡಕ್ಟರ್ ಬಂದು ಡಬಲ್ ಶಿಳ್ಳೆ ಹಾಕಿದ. ಡ್ರೈವರ್ ಬಸ್ ಸ್ಟಾರ್ಟ ಮಾಡಿ, ಸ್ಟೀಯರಿಂಗ್ ತಿರುವಿ,  ಗಿಯರ್ ಹಾಕೊಂಡ್ ಮುಂದ ಬರುವವರಿಗೆ 'ಪಾಂವ್..... ಪಾಂವ್...." ಹಾರ್ನನ್ನು ಕೊಡುತ್ತ ನಡೆದ. 

   ದಿನವೀಡಿ ದುಡಿದ ದೇಹಗಳು ದಣಿದಿದ್ದವು. ಆಯಾಸಗೊಂಡ ಜೀವಗಳು ಬಸ್ ಹೋಗಿತ್ತಿದ್ದಂತೆಯೇ ಸೀಟಿಗೊರಗಿ ಗೊರಕೆಯ ನಾದ ತೆಗೆದಿದ್ದವು. ಸುಮಾರು ಜನರ ಕೈಯಲ್ಲಿ ಟಚ್ ಸ್ಕ್ರೀನ್ ಮೊಬೈಲ್ ಮಿನುಗುತ್ತಿದ್ದವು. ನಗು ಬಂತು. ನಾನೂ ಆಗ ಕೆಲಸಕ್ಕೆ ಹೋಗಿ 3500/- ರೂ. ಸಂಪಾದಿಸಿ ಮೊಬೈಲ್ ತಗೊಂಡಿದ್ದೆ. ಅದೂ ಹೇಳಿಕೊಳ್ಳುವಂತ್ತದ್ದಾಗಿರಲಿಲ್ಲ. ಆದರೂ ಆಗ ಅದು ದೊಡ್ಡದೇ ಆಗಿತ್ತು. ಆದರೆ ಈಗ..? ಎಲ್ಲರ ಕೈಯಲ್ಲಿಯೂ ಟಚ್ ಸ್ಕ್ರೀನ್ ಮೊಬೈಲ್.!!!! ನೋಡಿ ಉರುಳಿದ ಕಾಲ ಚಕ್ರದ ಗತಿಯನ್ನು ಗಮನಿಸಿ ಎಷ್ಟೊಂದು ಅಭೀವೃದ್ಧಿಯಾಯ್ತು ನಮ್ಮ ಜನ ಅಂತ ಆಶ್ಚರ್ಯ ಪಡಬೇಕೋ...?  ಹಣ ತನ್ನ ಮೌಲ್ಯವನ್ನು ಕಳೆದುಕೊಂಡು, ಮೊಬೈಲ್ ಎಂಬ ಮಾಯಾ ಜಗದಲ್ಲಿ ಮುಳುಗಿದ ಈ ಜನರನ್ನು ಕಂಡು ಉದ್ಗರಿಸಬೇಕೋ...? ತಿಳಿಯದೇ ತಡಕಾಡಿದೆ.

    ಪ್ರೇಮಿಯೊಬ್ಬ ಪ್ರೇಮಗೀತೆಯ ಆಲಾಪನೆಯಲ್ಲಿದ್ದರೆ, ವಿರಹಿಯೊಬ್ಬ ವೇದನೆಯಲ್ಲಿ ಮುಳುಗಿದ್ದ, ಮತ್ತೊಬ್ಬ ದೃಶ್ಯ(ವೀಡಿಯೋ) ನೋಡುತ್ತಿದ್ದ. ಅದು ಅವನ ಸಂಗೀತ ಆಲಾಪನೆಯೋ....? ಕಲಾ ಆರಾಧನೆಯೋ...? ನೃತ್ಯಾಕರ್ಷಣೆಯೋ....? ನಟನ ಸ್ಟೈಲೋ...? ನಟಿಯ ಕಟ್ಟುಮಸ್ತಾದ ಮೈಕಟ್ಟೋ...?! ಅಥವಾ ಈ ಎಲ್ಲವೂನೂ ಇರಬಹುದು. ಒಟ್ಟಿನಲ್ಲಿ ರಸಾಸ್ವಾದದಲ್ಲಿ ಮಗ್ನರಾಗಿದ್ದರು.

    ತರಕಾರಿ ಮಾರಲು ಬಂದಿದ್ದ ಮುದುಕಿಯೊಬ್ಬಳು ಸೀಟು ಸಿಗದೇ ಕೆಳಗೆ ಕುಳಿತು, ಬುಟ್ಟಿಯೊಳಗಿನ ಮಿರ್ಚಿ ಭಜ್ಜಿಯ ಗಂಟಿಗೆ ಕೈ ಹಾಕಿ, ಒಂದನ್ನು ತೆಗೆದು ಬಾಯಿ ಚಪಲ ತೀರಿಸಿಕೊಂಡು ಕೈಗಳನ್ನು ಕೊಡವಿ, ದುಡ್ಡನ್ನು ಕಟ್ಟಿ ಕಚ್ಚೆಗೆ ಸಿಕ್ಕಿಸಿದ ಗಂಟನ್ನು "ಸರಕ್....." ಎಂದು ಎಳೆದುಕೊಂಡು ಕಟ್ಟು ಬಿಚ್ಚಿ ಈ ದಿನ ಎಷ್ಟು ವ್ಯಾಪಾರ ಆಯಿತು ಎಂದು ಲೆಕ್ಕ ಹಾಕಲು ಅಣಿಯಾದಳು. ಒಂದೊಂದೆ ಬಿಡಿಬಿಡಿಸಿ ಇಟ್ಟುಕೊಂಡಿದ್ದ ನೋಟುಗಳನ್ನೆಲ್ಲ ಸರಿಯಾಗಿ ಜೋಡಿಸಿಕೊಂಡು 10 ರ ನೋಟನ್ನು ಒಂದು ಬೆರಳಲ್ಲಿ, 20 ರ ನೋಟನ್ನು ಒಂದು ಬೆರಳಲ್ಲಿ, 50 ರ ನೋಟನ್ನು ಒಂದು ಬೆರಳಲ್ಲಿ, ನೂರು ಮತ್ತು ಐದು ನೂರರ ನೋಟುಗಳನ್ನು ಒಂದು ಬೆರಳಲ್ಲಿ ವಿಂಗಡಣೆ ಮಾಡಿ ಹಿಡಿದುಕೊಂಡು ಎಣಿಸಿತ್ತುದ್ದಳು.

        "10...20...30...40....."
        "10...20...30...40....."
        "10...20...30...40....."

    ಎಷ್ಟೇ ಎಣಿಸಿದರೂ 40ರ ಮುಂದೆ ಏನು ಎಂಬುದೇ ಬರುತ್ತಿಲ್ಲ ಅಜ್ಜಿಗೆ. ಐದು ಸಲ ಎಣಿಸಿದಳು. ಆರು ಸಲ ಎಣಿಸಿದಳು. ಊಹೂಂ. ಬರಲೇ ಇಲ್ಲ. ಕೊನೆಗೆ ಯಾರದ್ದಾದರೂ ಸಹಾಯ ಸಿಗಬಹುದೆಂದು ಸುತ್ತ ಕಣ್ಣಾಡಿಸಿದಳು. ಅದೂ ಭಯದಲ್ಲಿ. 'ಎಣಸಾಕ ಅಂತ ತುಗೊಂದ್.... ಎಬಿಸಿ ಬಿಟ್ಟರ ಏನ್ ಮಾಡ್ಲಿ....." ಅಂತ. ಸ್ವಲ್ಪ ಧೈರ್ಯ ಮಾಡಿ ನಾನೇ ಕೇಳಿದೆ.

        "ಆಯಿ.... ತಾ ಇಲ್ಲಿ ನಾ ಎಣಿಸಿ ಕೊಡತೇನಿ..."

        ".............." ಅಪನಂಬಿಕೆಯ ನಗು ನಕ್ಕಳು.

        "ನಿನ್ನ.... ಮುಂದ ಎಣಸ್ತೇನ್ ಕೊಡ.... ಆಯಿ."
ಎಂದು ಆಶ್ವಾಸನೆ ಕೊಟ್ಟಾಗ ನೋಟುಗಳ    ಕಟ್ಟನ್ನು ತೆಗೆದು ಕೈಗಿತ್ತಳು. ಎಣಿಸಿದೆ. "500ರವು 4. 100ರವು 15. 50ರವು 2. ಮತ್ತ 10ರವು 20. ವಟ್ಟ.... 3800/- ರೂಪಾಯಿ ಅದಾವ ನೋಡ.." ಎಂದು ಹೇಳಿ ಹಿಂತಿರುಗಿಸಿದೆ. ಒಂದು ಮಿರ್ಚಿ ತೆಗೆದು ಕೊಟ್ಟಳು. ತಿಂದೆ. ತಿಂದ ಮೇಲೆ ಅಜ್ಜಿ ಇನ್ನೊಂದು ಗಂಟನ್ನು ತೆಗೆದಳು.!!!! "ಎಲಾ ಮುದಿಕಿ.... ನೀ ಸಾಮಾನ್ಯದವಳಲ್ಲ ಕಣೆ." ಅಂದ್ಕೊಡೆ. ಬರೊಬ್ಬರಿ 1 ಕೆಜಿ ತೂಗುವ ಪುಡಿಗಾಸು. "ಚಲಕ್...... ಚಲಕ್......" ಎಂದು ಎರಡು ಸಲ ಜಾಡಿಸಿ ಕೊಟ್ಟಳು. ಕಂಗಾಲ ಆದೆ. ಯಾವಾಗ ಎಣಿಸಲಿ ಇವನ್ನೆಲ್ಲ....? ಎಂದು. ಮಿರ್ಚಿ ತಿಂದ ಮೇಲೆ ಎಣಿಸದೇ ಇದ್ದರೆ ಹೇಗೆ..? ಋಣ ತೀರಿಸಬೇಕಲ್ಲಾ. ಎಣಿಸಿದೆ ಅಷ್ಟೂ. ವಿಂಗಡಣೆ ಮಾಡಲಿಲ್ಲ. ಹಾಗೆ ಎಣಿಸುತ್ತಾ ಅಜ್ಜಿಯ ಕೈಗಿಡ್ತಾ ಹೋದೆ. ಒಟ್ಟು 400/- ಚಿಲ್ಲರೆ. 1, 2, 5, 10 ಎಲ್ಲ ತರದ ನಾಣ್ಯಗಳು. "ನಮಪ್ಪs ಶಾನ್ಯಾ...." ಅಂತ ಎರಡೂ ಕೈಯಿಂದ ಕೆನ್ನೆ ಸವರಿ ಲಟಿಕೆ ತೆಗೆದಳು ಅಜ್ಜಿ. ಅಂತೂ ಅಜ್ಜಿಯ ಪ್ರೀತಿಗೆ ಪಾತ್ರನಾಗಿ, ಸುಧಾರಿಸಿಕೊಂಡು ಸರಿಯಾಗಿ ಕುಳಿತೆ.

    ಮುಂದೆ ನೋಡುತ್ತ ಕುಳಿತಿದ್ದೆ, ಕಾಲೇಜಿನ ಹುಡುಗಿಯೊಬ್ಬಳು ನಿಂತಿದ್ದಳು. "ಯಾರಪ್ಪಾ ಇದು ? ಇಷ್ಟು ಹೊತ್ತಾದರೂ ಮನೆ ಸೇರದ ಮಾಣಿನಿ....?" ಅನಿಸಿತು. "ಯಾರೋ...... ನಿನಗ್ಯಾಕ ಅದೆಲ್ಲ...?" ಎಂದು ನನ್ನೋಳಗಿನ ಸತೀಸಾ ಹೇಳಿದ. ಅದಕ್ಕೆ ಸುಮ್ಮನೆ ನನ್ನ ಪಾಡಿಗೆ ನಾ ಕುಳಿತೆ. ಆದರೂ ಅವಳತ್ತ ಸ್ವಲ್ಪ ಗಮನ ಹರಿಸಿದೆ. ಸೀಟಿಗೆ ಆಧಾರ ಆಗಿ ನಿಂತಿದ್ದಳು. ಕೈಯಲ್ಲಿ ಒಂದು ಮೊಬೈಲ್ ಹಿಡಕೊಂಡು, ಇನ್ನೊಂದ ಕೈ ಬೆರಳಿಂದ ಮುಂಗುರುಳನ್ನು 'ರಿಂಗ್... ರಿಂಗ್...' ಮಾಡಿ ಎಳೆಯುತ್ತಿದ್ದಳು. ಮೊಬೈಲ್ ಮಿನುಗುತ್ತೆ. ನೋಡ್ತಾಳೆ, ಮುಗುಳ್ನಗೆ ನಗ್ತಾಳೆ. 'ಟಕ್ ಟಕಾ ಟಕ್ ಟಕ್...' ಅಂತ ಟೈಪ್ ಮಾಡಿ, ಮೂಗಲ್ಲಿ ನಕ್ಕು, ಮತ್ತೆ ಮುಂಗುರುಳನ್ನು 'ರಿಂಗಿಂಗ್ ರಿಂಗಿಂಗ್...' ಇಷ್ಟಾದ ಮೇಲೆ ಗೊತ್ತಾಯ್ತು 'ಜಿಂಕೆ ಹಳ್ಳಕ್ಕೆ ಬಿದ್ದಿದೆ. ಕುಲು ಕುಲು ನಗ ನಗತಾ ಚಳ್ಳೆ ಹಣ್ಣು ತಿನ್ನತಾ ಇದೆ. ಇಲ್ಲಾ ತಿನನಿಸ್ತಾ ಇದೆ ಅಂತ. ಅದರಷ್ಟಕ್ಕೆ ಅದನ್ನು ಬಿಟ್ಟು ನಾ ನನ್ನಷ್ಟಕ್ಕೆ ಕುಳಿತೆ.

    ಬಸ್ ಸಿಟಿಯ ಪರೀಧಿಯನ್ನು ಬಿಟ್ಟು ಹಳ್ಳಿಯ ಕಡೆ ಹೊರಟಿತ್ತು. ಆದರೆ ಮನಸ್ಸು, ಹಳ್ಳಿಯ ಪರಮಾವಧಿಯನ್ನು ಬಿಟ್ಟು ಸಿಟಿಯ ಸೊಗಡಿನತ್ತ ವಾಲಿರುವ ಜನರನ್ನು ನೋಡಿತ್ತು.! ಅಲ್ಲಿ, ಹಣ್ಣು ಬೇಕು ? ಹೊಲಕ್ಕೆ ಹೋಗು. ತರಕಾರಿ ಬೇಕು ? ಹೂಂ, ಹೊಲಕ್ಕೆ ಹೋಗು. ಏನೇ ತಿಂದರೂ ತಗೊಂಡರೂ ತಾಜಾ. ತಾಜಾ. ತಾಜಾ. ಹೊಲದೊಳಗೆ. ಅದೇ ಸಿಟಿಯಲ್ಲಿ..? ಪ್ರೆಶ್ ವೆಜ್, ಪ್ರೆಶ್ ಪ್ರುಟ್ಸ್. ಎಲ್ಲಾ ಪ್ರೆಶ್ ಪ್ರೆಶ್ ಪ್ರೆಶ್. ಹೌದು ಈ ಪ್ರೆಶ್ ಅಂದ್ರೆ ಏನು ? ನಿನ್ನೆ ಮೊನ್ನೆ ಕಿತ್ತು ತಂದು, ಪ್ಲಾಸ್ಟಿಕ್ ನಲ್ಲಿ ಪ್ಯಾಕ ಮಾಡಿ ಇಂದು ಮೋರ್, ರಿಲಯನ್ಸ್ ಮಳಿಗೆಗಳಲ್ಲಿ ತಂದು ಇಟ್ಟರೆ ಅದು ಪ್ರೆಶ್ ಆ...? ಇಲ್ಲ. ಏನು ಪ್ರೆಶ್? ಅಲ್ಲ, ತಾಜಾ.? ಈ ತಾಜಾ ಸಿಗುವುದು ಹಳ್ಳಿಗಳಲ್ಲಿ ಮಾತ್ರ. ಮೋರ್, ರಿಲಯನ್ಸ್ ಗಳಲ್ಲಿಯ ಪ್ರೆಶ್ ಪ್ರುಟ್ಸ್, ವೆಜ್ ತಿಂದು ಬದುಕುವ ಜನರು ನಗರ ನಾಗರೀಕರು. ಮರದಿಂದ ಹಣ್ಣು, ನೆಲದಿಂದ ತರಕಾರಿ ಕಿತ್ತು ತಾಜಾ ತಾಜಾ ತಿನ್ನುವ ಜನ ಗ್ರಾಮೀಣ ನಾಗರೀಕರು. ಅದಕ್ಕೆ ನನಗೆ ಸುಮಾರು ಸಲ ಅನಿಸಿದೆ "Rural LIFE is Real LIFE: Urban LIFE is Carbon LIFE" ಎಂದು.

    ಈ ಮೊಬೈಲ್ ಬರುವುದಕ್ಕೂ ಮೊದಲು ಜನರು ಅಕ್ಕ-ಪಕ್ಕದವರ ಜೊತೆ ಬೆರೆಯುತ್ತಿದ್ದರು. ಒಬ್ಬರಿಗೊಬ್ಬರು ಚಿರಪರಿಚಿತರಾರಿಗಿರುತ್ತಿದ್ದರು, ಕಷ್ಟ-ಸುಖ ಹಂಚಿಕೊಳ್ಳಿತ್ತಿದ್ದರು, ಹೊರ ಜಗತ್ತಿಗೆ ತಮ್ಮನ್ನು ತಾವು ತೆರೆದುಕೊಳ್ಳುತ್ತಿದ್ದರು. ಮೊಬೈಲ್ ಬಂದು ಇದನ್ನೆಲ್ಲ ತದ್ವಿರುದ್ಧವಾಗಿ ಮಾಡಿದೆ. ಮಗ್ಗುಲಲ್ಲಿ ನಿಂತವರ ಪ್ರಜ್ಞೆ ಇಲ್ಲ. ಎಲ್ಲರಿಗೂ ಅಪರಿಚತರು. ಕಷ್ಟ-ಸುಖ ಹೇಳೋದಿಲ್ಲ, ಕೇಳೋದಿಲ್ಲ. ತಮಗೆ ತಮ್ಮ ಮೊಬೈಲೆ  ಹೊಸ ಜಗತ್ತು. ಎಂಥಾ ದುರಂತ ಆಗ್ತಾ ಇದೆ..!!!!

        "ಬೆನ್ನಾಳಿಗಿ ಬಂತ್ರಲಾ ಬಸ್.....?"

        "ಹೂಂ. ಬೆನ್ನಾಳಿ ದಾಟಿ ಮುಕ್ತಿಮಠಕ್ಕ ಬಂತ ನೋಡ ಪಾ..." ಎಂದೆ.

    'ಇಷ್ಟು ಹೊತ್ತು ನಾ ಎಲ್ಲಿ ಇದ್ದೆ..?' ಎಂದು ನನ್ನನ್ನು ನಾನೇ ಕೇಳಿಕೊಂಡೆ. ಕಾಲ ಚಕ್ರದ ಉರುಳು ಗಾಲಿ ಆಟದಲ್ಲಿ ಈ ಎಲ್ಲವೂ ಸಹಜ ಬದಲಾವಣೆಗಳು ಅನಿಸಿ ಸೃಷ್ಠಿಯ ಗೌಪ್ಯತೆಗೆ ತಲೆದೂಗಿದೆ.

    ಭುತರಾಮನಟ್ಟಿ ಊರಿನಿಂದ ಸ್ವಲ್ಪ ಮುಂದೆ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಮತ್ತು ಶೇಖ್ ಇಂಜಿನಿಯರಿಂಗ್ ಕಾಲೇಜ್ ಇದೆ, ಅಲ್ಲಿ ಹಾಸ್ಟೆಲ್ ಸೌಲಭ್ಯವೂ ಇರುವುದರಿಂದ ಅಲ್ಲಿ ಕಲಿಯುವ, ಹಾಸ್ಟೆಲಿನಲ್ಲಿರುವ ಹುಡುಗರು ಸಿಟಿ ಸುತ್ತೋಕೆ ಅಂತ ಮಧ್ಯಾಹ್ನ ಬಂದವರು ಇದೇ ಬಸ್ ಗೆ ಬರುವರು. ಆ ಕಡೆ ಹೋಗಲು ಕೊನೆಯ ಬಸ್ಸೂ ಇದೆ. ಏನೇನೋ ಮಾತಾಡ್ತಾ ನಿಂತಿದ್ದ ಹುಡುಗರಲ್ಲಿ ಒಬ್ಬನು ಈಗ ತಾನೆ ಚಿಗುರುತ್ತಿರುವ ಮುಸುಡಿ ಮೇಲಿನ ನಾಲ್ಕೈದು ಕೂದಲುಗಳನ್ನು ತೀಡಿಕೊಳ್ಳುತ್ತ ಆ ಮೊಬೈಲ್ ಹುಡುಗಿಗೆ ಕಾಳು ಹಾಕುತ್ತಿದ್ದನು. ಆದರೆ ಏನು ಮಾಡೋದು ಆ ಮೊಬೈಲ್ ಮಾಣಿನಿಯ ಜಗತ್ತೆ ಬೇರೆಯದಾಗಿತ್ತು. ಅಷ್ಟಾದರೂ ಈ ಬಡ್ಡಿ ಮಗಾ ಎಡೆಬಿಡದೇ ಪ್ರಯತ್ನಿಸುತ್ತಲೇ ಇದ್ದ. ಏನ್ ಜೋರು ಜೋರಾಗಿ ಮಾತಾಡೋದು, ಹ್ಹಾ.. ಹ್ಹಾ,,, ಹ್ಹಾ... ಎಂದು ನಗೋದು, ಏಯ್ ಅಲ್ಲಿ ನೋಡಲೇ.... ಇಲ್ಲಿ ನೋಡಲೇ.. ಎಂದು ಸ್ನೇಹಿತರನ್ನು ದಬಾಯಿಸಿ ಆಕೆಯ ಗಮನ ತನ್ನತ್ತ ಸೆಳೆಯಲು ಹರ ಸಾಹಸ ಪಡುತ್ತಿದ್ದನು. ಆಗ ನನಗೆ ತಲೆಯಲಿ 'ಢಣ್....' ಎಂದು ಹೊಳೆಯಿತು. ಸಜಾತಿಯ ದೃವಗಳು ವಿಕರ್ಷಿಸುತ್ತವೆ, ವಿಜಾತಿಯ ದೃವಗಳು ಆಕರ್ಷಿಸುತ್ತವೆ" ಎಂಬ ಹೈಸ್ಕೂಲಿನಲ್ಲಿ ಕೇಳಿದ ವಿಜ್ಞಾನ ವಿಷಯದಲ್ಲಿನ ವಾಕ್ಯ. ಅದು ನನಗೆ ಇಂದು, ನಮ್ಮೂರಿನ ಕೊನೆಯ ಬಸ್ಸಲ್ಲಿ, ಇಂತಾ ಮಳೆಯಲ್ಲಿ ಅರಿವಾಯಿತು. 'ಔರ ಕುಚ್ ಹೈ ಸಾಯನ್ಸ್ ಮೇ.." ಎಂದು ನಕ್ಕೆನು. ಇದು ಮಾನವ ಸಹಜ ಗುಣ. ನನ್ನತ್ತ ಎಲ್ಲರೂ ನೋಡಬೇಕು. ಅದರಲ್ಲೂ ವಿರುದ್ಧ ಲಿಂಗಿಗಳು. ನನ್ನೆಡೆಗೆ ಎಲ್ಲರೂ ಆಕರ್ಷಿತರಾಗಬೇಕು. ಅದು ಮಾತುಗಾರಿಕೆಯಿಂದಲೋ, ಮೈ ಕಟ್ಟಿನಿಂದಲೋ, ಹೆಣ್ಣಿಗೋ, ಗಂಡಿಗೋ, ಇದು ಯಾರಿಗೂ ಹೊರತಾಗಿಲ್ಲ.

    ಅವರವರ ನಿಲ್ದಾಣಗಳು ಬಂದಾಗ ಅವರೆಲ್ಲ ಇಳಿದು ಹೋದರು. ಪ್ರೇಮಿಯೂ ಹೋದನು. ಮೊಬೈಲ್ ಮಣಿನಿಯೂ ಹೋದಳು. ಬೆಳಗಾವಿಯಿಂದ 20.5 ಕೀ.ಮೀ ರಾಷ್ಟ್ರೀಯ ಹೆದ್ದಾರಿಯನ್ನು ಕ್ರಮಿಸಿದ ಬಸ್, ಹೊರಗೆ ಬಂದು, ಬ್ರಿಡ್ಜ್ ಕೆಳಗೆ ಪಾಸ್ ಆಗಿ, ವಂಟಮೂರಿಯ ಡೌನ್ ನ್ನು ಇಳಿಯುತ್ತಿತ್ತು. ಅಲ್ಲೋಂದು ಬಾವಿ. ಆ ಬಾವಿ ಎಂತಹ ಬರಗಾಲ ಬಂದರೂ ಬತ್ತಿಲ್ಲ. ನೀರು ಆಳಕ್ಕೆ ಹೋಗಿರಬಹುದು. ಆದರೆ ಬತ್ತಿ ಹೋಗಿಲ್ಲ. ಹೀಗಾಗಿ ಆ ಎರಡು ಊರಿನ ಜನರ ದಾಹವನ್ನು ಎಂದಿನಿಂದಲೋ ಏನೋ ಇಂಗಿಸುತ್ತ ಬಂದ ಬಾವಿ ಅದು. ಹಾಗೆಯೆ ಮುಂದೆ ಸಾಗಿದಂತೆಲ್ಲ ಮಿನಿ ಮಲೆನಾಡು ಶುರುವಾದಂತೆ ಲೆಕ್ಕ. ಇದು ನನ್ನ ಅನಿಸಿಕೆ ಅನ್ನುವುದಕ್ಕಿಂತಲೂ ನನ್ನ ನಂಬಿಕೆ. ಅಲ್ಲೊಂದು ITBP ತರಬೇತಿ ಕೇಂದ್ರ ಇತ್ತೀಚೆಗೆ 2-3 ವರ್ಷಗಳ ಹಿಂದಷ್ಟೆ ತಲೆ ಎತ್ತಿದೆ. ಆಗಿಂದ ಹೈವೇ ಪಕ್ಕದ ಈ ಹಳ್ಳಿಯಲ್ಲಿ ಒಂದೈದು ಬಿಲ್ಡಿಂಗುಗಳು ಜಾಸ್ತಿ ಮತ್ತು ಎತ್ತರಕ್ಕೆ ಬೆಳೆದಿವೆ ಎನ್ನಬಹುದು. ಬಸ್ಸಿನ ಗಾಜು ಸರಿಸಿ ನೋಡಿದೆ. ರಾತ್ರಿ ಸಮಯವಾಗಿದ್ದರಿಂದ ಕಣ್ಣಿಗೆ ಬರೀ ಕತ್ತಲಿನ ಹಬ್ಬ. ಮಳೆ ನಿಂತಿರಲೇ ಇಲ್ಲ. "ಸಾಕ ಬಿಡ ಪೋರಿ........... ಸಾಕ ಬಿಡ ಪೋರಿ......." ಎಂದು ಎಷ್ಟು ಹೇಳಿದರೂ ಹಾಲಿನ ಗಡಿಗೆಯ ತಳದ ತೂತಿಗೆ ರಾಮಪ್ಪ ಹೇಳಿದಂತೆ ಮಳೆ ಸುರಿಯುತ್ತಲೇ ಇತ್ತು. ಈ ಮಿನಿ ಮಲೆನಾಡಲ್ಲಿ ಸಣ್ಣ ತುಂಗೆಯೊಬ್ಬಳು ಆರರಿಂದ ಏಳು ಸಲ ಅಂಕುಡೊಂಕಾಗಿ ಬಳಸಿ ಸಾಗಿ ಘಟಪ್ರಭೆಯನ್ನು ಕೂಡುತ್ತಾಳೆ. ಹೆಬ್ಬಂಡೆಯ ಬೆಟ್ಟದಲ್ಲೊಬ್ಬ ಗವಿ ಸಿದ್ದೇಶ ನೆಲೆಸಿದ್ದಾನೆ. ಅನಾದಿಕಾಲದ ಬಾವಿಯೊಂದು ಸ್ವಲ್ಪ ಆಯ ತಪ್ಪಿದರೂ ನುಂಗಲು ಕುಳಿತಂತೆ ಬಾಯಿ ತೆಗೆದುಕೊಂಡು ರಸ್ತೆಯ ಎದುರಿಗೆ ಇದೆ. "ಈ ಸಿದ್ದನಿಗೆ ಬೇರೆ ಜಾಗವೇ ಸಿಗುವುದಿಲ್ಲವೇನೊ ಪಾ....? ಬರೀ ಗವಿ, ಗುಡ್ಡ, ಇಂತವುಗಳಲ್ಲೆ ಇರ್ತಾನೆ. ಪಾಪಾ..... ಸಂಸಾರದ ಜಂಜಾಟ ಸಾಕಾಗಿ, ಬ್ಯಾಡ ಬ್ಯಾಡ ಸರಿ ಅವನೌನ ಸಂಸಾರ... ಅಂತ ಹೇಳಿ ಗವಿ, ಗುಡ್ಡ ಹೊಕ್ಕಿರಬಹುದು. ಅದೂ ಅಲ್ಲದೆ, ಇಬ್ಬರು. ಒಬ್ಬಳು ತೋಡೆಯ ಮೇಲೆ, ಇನ್ನೊಬ್ಬಳು ತಲೆಯ ಮೇಲೆ !! ಹರ ಹರ ಮಹಾದೇವ. ಶಂಭೋ ಶಂಕರ." ಎಂದು ಮನದೊಳಗೆ ಏನೇನೋ ವಿಚಾರ ಸರಣಿ ಮುಂದುವರಿಯುತ್ತಿದ್ದಂತೆ 7 ಕೀಮೀಯ ಮಿನಿ ಮಲೆನಾಡನ್ನು ಸೀಳಿದ ಬಸ್ಸು ನಮ್ಮ ಊರಿಗೆ ಬಂದು ನಿಂತಿತ್ತು. ಸಮಯ 9:30 ಆಗಿತ್ತು. ಹಾಗಾಗಿ ಯಾವ ಸುರೇಶ ಅಣ್ಣನ ಟೀ ಅಂಗಡಿಯೂ ತೆಗೆದಿರಲಿಲ್ಲ. ಖುದ್ದು ಬಯ್ಯಾ ಕಾ ದೂಕಾನ ಭೀ ಬಂದ್ ಹೋ ಗಯಾ ಥಾ ಬಾ. ಸ್ವಲ್ಪ ಮಳೆ ಕಡಿಮೆ ಆಗಿತ್ತು. ಜನ ಊಟಾ-ಗೀಟಾ ಮಾಡಿ, ಎಲೆ-ಅಡಿಕೆ ತಿನ್ನುತ್ತ ಹೊರಗೆ ಕೂತಿದ್ದರು.

        " ಈಗ ಬಂದಿ ಅಲೋ ಯಪ್ಪು...?" ಅಂದೋರಿಗೆ
 
        "ಹೂಂ. ಈಗ ಬಂದೆ.." ಎಂದು

        "ಆರಾಮಾ...?" ಕೇಳಿದೋರಿಗೆ

        "ಆರಾಮ, ನೀ ಆರಾಮಾ..? ಅಂತ ಕೇಳಿ

        "ಯಾಕೋ ಈ ಸಲಾ ಇಷ್ಟ ದಿನಾ ಆದ್ಮ್ಯಾಲ....?" ಎಂದವರಿಗೆ

        "ಇವತ್ತ ಬಂದೆನಲ್ಲೋ" ಅಂದು

    ಮನೆಯನ್ನು ತಲುಪಿದೆ. ಟಿ.ವಿ ನೋಡುತ್ತ ಕುಳಿತಿದ್ದ ಅಮ್ಮ-ಅಪ್ಪ ಮಗನ ಆಗಮನದಿಂದ ಸಂತಸಗೊಂಡರು.

        "ಬಸ್ ಭಾಳ ಲೇಟ್ ಮಾಡಿತೇನ ಇವತ್..?" ಅಪ್ಪ ಕೇಳಿದರು.

        "ಹೂಂ, ಲೇಟ್ ಆಯ್ತ.?"

        "ಬಿಸಿ ನೀರ ಇಟ್ಟೇನ ಕಾಲಿಗೆ. ಕಾಲ ತೊಳಕೊ; ಅಗಲ ಮಾಡತೇನ..." ಅಮ್ಮ ಹೇಳಿದಳು.
   
    ಬಿಸಿ ಬಿಸಿ 5 ರೊಟ್ಟಿ, ಪಲ್ಯ, ಅನ್ನ, ಸಾಂಬಾರು, ಮೇಲೊಂದ ಗ್ಲಾಸ್ ಮಜ್ಜಿಗೆ ಕುಡಿದು ಅಡುಗೆ ಮನೆಯಿಂದ ಹಾಲ್ ಗೆ ಬಂದು ಕುಳಿತು ಅದು, ಇದು, ಹಾಗೆ, ಹೀಗೆ, ಮಾತಾಡುತ್ತಾ ಮಾತಾಡುತ್ತಾ ಸುಮಾರು 11:00 ಗಂಟೆ ಆಗಿತ್ತು. ಅಮ್ಮ ಹಾಸಿಗೆ ಮಾಡಿ "ಸಾಯಿಬ್ರ..,.. ಮಲಕೋರಿ ಇನ್ನ.." ಅಂದಳು. ಅಮ್ಮನ ಆಜ್ಞೆಗೆ ಸಮ್ಮತಿ ಸೂಚಿಸಿ ಮಗ ಹಾಸಿಗೆಯಲ್ಲಿ ಬಿದ್ದ. ಆದರೆ ತಲೆಯೊಳಗೆ "ಇವತ್ತು ನಾನು ಬೈಕ್ ಮೇಲೆ ಊರಿಗೆ ಬಂದಿದ್ರೆ ಬಸ್ಸಲ್ಲಿ ಸಿಗುವ ಈ ಅನುಭವ, ನಮ್ಮ ಜನ ಸಿಗೋದಿಲ್ಲ..." ಅನಿಸಿತು. "ನಾನೂ ಬೈಕ್ ಮೇಲೆ ಬರುತ್ತ ನಮ್ಮ ಜನರಿಂದ ದೂರ ಉಳಿತಿದೀನಿ" ಅಂತಾನೂ ಅನಿಸಿತು. ಅಂದುಕೊಳ್ಳುತ್ತ, ಅಂದುಕೊಳ್ಳುತ್ತಲೇ  ಕಣ್ಣು ಎಳೆದು ಮುಚ್ಚಿದಂತಾಗಿ, ನಿದ್ದೆಗೆ ಜಾರಿದ್ದೆ.
               
                                - ಸತೀಶ ಉಮೇಶ ನಡಗಡ್ಡಿ