Tuesday 7 March 2017

ಅವಳೆಂದರೆ.....

ಬೆಳ್ಳಂಬೆಳಿಗ್ಗೆ ಎದ್ದು ಅಂಗಳದ ಕಸ ಗುಡಿಸಿ,
ಹೊಸ್ತಿಲಿಗೆ ನೀರು ಚುಮುಕಿಸಿ,
ತುಳಸಿ ಕಟ್ಟೆಗೆ ಪೂಜಿಸಿ,
ಪಾಕ ಕೋಣೆಯೊಳಗಿನ
ಸ್ಟೋವ್-ಪಾತ್ರೆ , ಅಕ್ಕಿ-ಬೇಳೆ,
ಸಕ್ಕರೆ-ಉಪ್ಪು-ಖಾರ-ಹುಳಿ-
ಗಳ ಗೆಳತಿಯಲ್ಲ.
ಅವಳೆಂದರೆ ,
ಹೊತ್ತು ಹೊತ್ತಿನ ತುತ್ತು ತುತ್ತು ಅನ್ನಕ್ಕೂ
ಅಮೃತವನ್ನೆ ಬೆರೆಸಿ, ಉಣಿಸಿ, ಬೆಳೆಸುವ
ಶಕ್ತಿ ದೇವತೆ.

ಅವಳೆಂದರೆ.....
ಹಿತ್ತಲ ಕಡೆಯ ಮೂರು
ಕಲ್ಲುಗಳ ಮೇಲೆ ನೀರು
ಹಂಡೆಯನಿಟ್ಟು , ಸೌದೆಯ ತುರುಕಿ,
ಸೀಮೆ ಎಣ್ಣೆ ಸುರಿದು , ಕಡ್ಡಿ ಗೀರಿ,
ಉರಿದು ಕೆಂಡವಾಗಿ, ಆರಿ ಬೂದಿಯಾಗಿ,
ಷರ್ಟು-ಪ್ಯಾಂಟು-ಟೈ-ಕರ್ಚೀಪು
ಗಳ ಕಸೂತಿ ಕೆಲಸದವಳಲ್ಲ.
ಅವಳೆಂದರೆ ,
ಅನು ದಿನದ  ಆನಂದ ಸಂತೋಷವೂ
ತನ್ನದೆಂದೆ ಭಾವಿಸಿ, ಲಟಿಕೆ ತೆಗೆವ
ತಾಯಿ-ಮಡದಿ-ಪುತ್ರಿ- ದೈವ.

ಅವಳೆಂದರೆ......
ಕತ್ತಲ ಕೋಣೆಯ ನಾಲ್ಕು ಗೋಡೆಗಳ ಮಧ್ಯ
ನಗ್ನಳಾಗಿ, ತುಟಿಗೆ ತುಟಿಯಿಕ್ಕಿ , ಬಾಹುಗಳೊಳಗೆ ಬಂಧಿಯಾಗಿ,
ಮಾಂಸ ಮುದ್ದೆಯ "ಮೈ-ದಾನ" ಮಾಡಿಕೊಟ್ಟು
ಹಾಸಿಗೆ-ದಿಂಬು-ಹೊದಿಕೆಗಳ ಜೊತೆಗೂಡಿ,
ತಾರಕಕ್ಕೇರಿಸಿ, ಸ್ವರ್ಗಕ್ಕೆ ಆಹ್ವಾನಿಸಿ,
ಕಾಮ ತೃಷೆ ನೀಗುವ ಬೊಂಬೆಯಲ್ಲ.
ಅವಳೆಂದರೆ ,
ಅವಳೇ,.... ಹೌದು ಅವಳೇ
ಸ್ತ್ರೀ  ಸ್ತ್ರೀ  ಸ್ತ್ರೀ  ಸ್ತ್ರೀ
ಪ್ರತೀ ಹುಟ್ಟಿನ ಮೂಲ
ಸೃಷ್ಠಿಯ ಮೂಲ - ಸೃಷ್ಠಿ ದೇವತೆ.
                        ✍ ಸತೀಶ ಉ ನಡಗಡ್ಡಿ