Thursday 5 October 2017

ನಾವು ಆಚರಿಸುವ ಮೊಹರಂ



ನಮ್ಮ ಊರಿನಲ್ಲಿ ಪ್ರತೀ ವರ್ಷ ಆಚರಿಸುವ ಈ ಹಬ್ಬದ ಬಗ್ಗೆ ಒಂದಿಷ್ಟು ಹೇಳಲೇಬೇಕೆನಿಸಿತು.

ಆ ಊರಲ್ಲಿ ಈ ಹಬ್ಬದ ಆಚರಣೆಯ ಪದ್ಧತಿ 18ನೇ ಶತಮಾನದಿಂದಲೂ ಬೆಳೆದು ಬಂದಿದೆ. ಶಹಾಬಂದರ ಊರಿನ ಪಶ್ಚಿಮಕ್ಕೆ ಇರುವ ಚಿಕ್ಕಲದಿನ್ನಿ ಗ್ರಾಮದ ಗುಡದಪ್ಪನಾಯಕ ಎಂಬ ಪಾಳೇಗಾರನು  ಚಿಕ್ಕಲದಿನ್ನಿಯನ್ನೊಳಗೊಂಡು ಶಹಾಬಂದರ, ಇಸ್ಲಾಂಪೂರ, ಬೀರನಹೊಳಿ, ಜಾರಕಿಹೊಳಿ, ಅರಳಿಕಟ್ಟಿ, ಬಸ್ಸಾಪುರ, ಹಗೆದಾಳ, ರಂಗದಹೊಳಿ, ಗುತ್ತಿ, ಪನಗುತ್ತಿ, ರಾಜಕಟ್ಟಿ, ಯಲ್ಲಾಪುರ, ಗೆಜಪತಿ, ಗುಟಗುದ್ದಿ ಹಳ್ಳಿಗಳನ್ನು ಅಳುತ್ತಿದ್ದನು. ಹೀಗಿದ್ದಾಗ ಒಂದು ದಿನ ರಾತ್ರಿಯಲ್ಲಿ ಐವರು ಮುಸಲ್ಮಾನ ಸಂತರು ಒಟ್ಟು ಮೂರು ಊರುಗಳಲ್ಲಿ ಮೂರು ಮಸೀದಿಗಳನ್ನು ನಿರ್ಮಿಸಿದರು (ಮಸೀದಿ ನಿರ್ಮಾಣದ ಕುರಿತಾಗಿ ನಾನು ಚಿಕ್ಕಂದಿನಲ್ಲಿ ನನ್ನ ಅಜ್ಜನ ಬಾಯಿಂದ ಕೇಳಿದ್ದು, ಅದರಲ್ಲಿ ಎಷ್ಟು ನಿಜ ಎಷ್ಟು ಸುಳ್ಳು ಎಂಬುದು ನನಗೆ ತಿಳಿದಿಲ್ಲ; ಬಹುಶ ಈ ಊರಿನ ಒಂದೊಂದು ಸ್ಥಳಕ್ಕೂ ಒಂದೊಂದು ಕಥೆ ಹೇಳಿದ್ದ ಅಜ್ಜ ಈಗ ಇಲ್ಲ ಎನ್ನುವುದು ಎಷ್ಟು ದಿಟವೋ ಆ ಕಥೆಗಳ ಅಸ್ತಿತ್ವವೂ ಅಷ್ಟೇ ದಿಟವಿರಬಹುದು.)

ಮೊದಲೆರಡು ಮಸೀದಿಗಳನ್ನು ಬೇರೆಯಲ್ಲೋ ಯಾವುದೊ ಊರ ಹೆಸರನ್ನು ಅಜ್ಜನ ಬಾಯಿಂದ ಕೇಳಿದ ನೆನಪು, ಆದರೆ ಈಗ ಹೊಳೆಯುತ್ತಿಲ್ಲ. ಇರಲಿ. ಮೂರನೇ ಈ ಊರಿಗೆ ಬಂದು ಮಸೀದಿ ಕಟ್ಟಿ ಮುಗಿಸುವಷ್ಟರಲ್ಲಿ ಬೆಳಗಿನ 5ಗಂಟೆ ಆಗಿತ್ತಂತೆ. ಆ ಹೊತ್ತಿಗೆ ಹೆಂಗಸೊಬ್ಬಳ ಬಳೆಯ ಸದ್ದಾಗಿ ಆ ಐವರು ಮುಸಲ್ಮಾನ ಸಂತರು ಅಲ್ಲಿಯೇ ಮಾಯವಾದರಂತೆ. ಮಸೀದಿಯನ್ನು ಕಟ್ಟಲು ಬೇಕಾದ ಕಲ್ಲುಗಳು ಭೂಮಿಯಿಂದ ತಾನಾಗೇ ಎದ್ದು ಉರುಳಿಕೊಂಡು ಮಸೀದಿ ಕಟ್ಟಡದ ಜಾಗದಲ್ಲಿ ಬರುತ್ತಿದ್ದವಂತೆ( ಇತ್ತೀಚಿನ 6-7 ವರ್ಷಗಳಲ್ಲಿ ಕಟ್ಟಲಾದ ಉರ್ದು ಪ್ರಾಥಮಿಕ ಶಾಲೆಯ ಅವರಣವೆಲ್ಲ ಅರೆ ಮೇಲೆದ್ದ ಬಂಡೆಗಳಿಂದ ಮತ್ತು ತಗ್ಗುಗಳಿಂದ ಕೂಡಿತ್ತು). ಹೆಂಗಸಿನ ಬಳೆಯ ಸದ್ದಾದ ಕೂಡಲೇ ಸಂತರು ಮಾಯವಾದರು, ಭೂಮಿಯಿಂದ ಎದ್ದು ಬರುತ್ತಿದ್ದ ಕಲ್ಲುಗಳೂ ಅಲ್ಲಲ್ಲೇ ನಿಂತವಂತೆ, ದೊಡ್ಡ ದೊಡ್ಡ ಬಂಡೆಗಲ್ಲುಗಳು ಅರೆಹೂತಿದ್ದ ಅವಸ್ಥೆಯಲ್ಲಿ, ಉರುಳಿಕೊಂಡು ಬಂದು ನಿಂತ ಗುಂಡುಗಲ್ಲುಗಳನ್ನೂ ಕಂಡ ಮೇಲೆ ನನಗೆ ಇದು ನಿಜವೇ ಎನಿಸಿದೆ.

ಹೀಗೆ ನಿರ್ಮಾಣವಾದ ಮಸೀದಿಗೆ ಮುಸಲ್ಮಾನ ಪದ್ದತಿಯ ಪ್ರಕಾರವಾಗಿ ಪೂಜೆ, ಸಂಪ್ರದಾಯ ನಡೆಸುವ ಇಚ್ಛೆಯಿಂದ ಪಾಳೇಗಾರ ಗುಡದಪ್ಪನಾಯಕರು ಬಿಜಾಪುರದಿಂದ ಮುಲ್ಲಾಗಳನ್ನು ಕರೆದುಕೊಂಡು ಬಂದು, ಆ ಮಸೀದಿಯ ಸುತ್ತಲಿನ ಒಂದಷ್ಟು ಭೂಮಿಯನ್ನು ಆ ಮೌಲ್ವಿಗಳಿಗೆ ನೀಡಿ ಅವರ ಜೀವನೋಪಾಯಕ್ಕೆ ದಾರಿ ಮಾಡಿಕೊಟ್ಟರಂತೆ. ಅಲ್ಲಿಯೇ ಬಂದ ಸಾಬರು (ಮುಲ್ಲಾ) ಮನೆ ಕಟ್ಟಿಕೊಂಡು ಅಲ್ಲಿಯ ಜನರೊಂದಿಗೆ ಜೀವಿಸತೊಡಗಿದರು. ಹೀಗಾಗಿ ಬರುಬರುತ್ತಾ ಆ ಊರ ಜನರು 'ಸಾಬರುರು ಬಂದರು'.....'ಸಾಬರು ಬಂದರು'... 'ಸಾಬರು ಬಂದ ಊರು' ಎಂಬುದೇ ಮುಂದೆ "ಶಹಾಬಂದರ"ಎಂದು ಮಾರ್ಪಾಡಾಗಿರುವುದರಲ್ಲಿ ಸಂಶಯವಿಲ್ಲ ಎನಿಸುತ್ತದೆ. ಅಂದಿನಿಂದ ಇತ್ತೀಚಿನವರೆಗೆ ಶಹಾಬಂದರದಲ್ಲಿ ನಾನು ಹಿಂದೂ, ನೀನು ಮುಸ್ಲಿಮನೆಂಬ ಭೇದ-ಭಾವ ಮಾಡದೇ ಐಕ್ಯತೆಯಿಂದ ಆಚರಿಸುತ್ತ ಬಂದಿರುವರು.

ಐದು ದಿನದ ಈ ಹಬ್ಬ ಒಂದರಿಂದ ಮೂರನೇ ದಿನದವರೆಗೆ ಮಂದವಾಗಿರುತ್ತದೆ. ಪ್ರತಿದಿನ ಇಬ್ಬರಂತೆ ಹುಲಿಯಂತೆ ಮೈಗೆಲ್ಲ ಬಣ್ಣ ಬಳಿದುಕೊಂಡು ಹಸಿದ ಹುಲಿಯ ತೆರೆದ ಬಾಯಿಯ ಮುಖವಾಡ ಹಾಕಿರುತ್ತಾರೆ; ಮೊದಲ ಎರಡು ದಿನ ಅಕ್ಕ-ಪಕ್ಕದ ಊರಿಗೆ ಹೋಗಿ ಹುಲಿಗಳು ಕುಣಿದು ಬರುತ್ತವೆ ಮತ್ತು ಮೂರು ಹಾಗೂ ನಾಲ್ಕನೆಯ ದಿನ ಇಬ್ಬಿಬ್ಬರು ಇಡೀ ಊರಿನ ಮನೆ ಮನೆಯ ಮುಂದೆ ಹುಲಿ ವೇಷ ಹಾಕಿ ಕುಣಿಯುತ್ತಾರೆ, ನಾಲ್ಕನೆಯ ದಿನ ಸಾಯಂಕಾಲ ಹರಕೆ ಕಟ್ಟಿಕೊಂಡವರು ಕೊಡ್ಡ(ಮರದ ದಿಮ್ಮೆ)ಗಳನ್ನು ಎತ್ತುಗಳಿಗೆ ಭರ್ಜರಿ ಸಿಂಗಾರ ಮಾಡಿ ಬಸ್ ಸ್ಟ್ಯಾಂಡಿನಿಂದ ಮಸೀದಿಯವರೆಗೆ ಕುಣಿದಾಡುತ್ತ, ಪಟಾಕಿ ಸಿಡಿಸುತ್ತ ಎಳೆದು ತಂದು ಹಾಕುತ್ತಾರೆ, ಅದೇ ದಿನದ ರಾತ್ರಿಯಿಡೀ ಮಸೀದಿಯ ಮುಂದೆ ತೋಡಲಾದ ಹೊಂಡಕ್ಕೆ ಹಾಕಿ ಸುಡುತ್ತಾರೆ. ಐದನೆಯ ದಿನ ಮಾತ್ರ ನಾಲ್ಕು ಜನ ಹುಲಿಯ ವೇಷ ಹಾಕಿರುತ್ತಾರೆ: ನಮ್ಮ ಅಜ್ಜನ ಕಾಲದಲ್ಲಿ ರಾಕ್ಷಸ, ಕುದುರೆ, ಕರಡಿಯ ವೇಷವನ್ನೂ ಹಾಕುತ್ತಿದ್ದರಂತೆ; ಆ ವೇಷಗಳ ಮುಖವಾಡವನ್ನು ನಾನೂ ನೋಡಿದ್ದುಂಟು.  ಹುಲಿ ವೇಷದ ಕುಣಿತಕ್ಕೆ ಬಾರಿಸುವ ತಾಶೆ(ತಮಟೆ) ದಿದ್ದನಂಗ್ ದಿದ್ದನಂಗ್ ದಿದ್ದನಂಗ್ ದಿದ್ದನಂಗ್ ಮತ್ತು ರಪ್ಪರ್ರ್ರ್ರ್ ರಪ್ಪರ್ರ್ರ್ ರಪ್ಪರ್ರ್ರ್ರ ರಪ್ಪರ್ರ್ರ್ರ್, ಡೊಳ್ಳಿನ ದುಂಬ ದುಂಬ್ ದುಂಬಕ್ ದುಂಬ ದುಂಬ್ ದುಂಬಕ್, ದುಂಬ ದುಂಬ್ ದುಂಬಕ್ ದುಂಬ ದುಂಬ್ ದುಂಬಕ್ ಬಡಿತದ ಜೊತೆ ಶಹನಾಯಿಯ ಪಿಪಿ ಪಿಪಿ ಪಿಪಿಪಿ.... ಪಿಪಿ ಪಿಪಿ ಪಿಪಿಪಿ.. ಪಿಪಿ ಪಿಪಿ ಪಿಪಿಪಿಪಿ ಪಿಪಿ ಮತ್ತು ಪಿಯಿಯಿ ಪಿಯಿಯಿ ಪಿಯಿಯಿ ವಾದನದ ಜೊತೆಗೆ ಹುಲಿ ವೇಷಧರಿಗಳ ಸೊಂಟಕ್ಕೆ ಕಟ್ಟಿದ ಗೆಜ್ಜೆ ಸದ್ದು ಅಲ್ಲಿಯ ಯುವಕರ ಮೈಯಲ್ಲಿ ಹುಲಿಯನ್ನು ಸೇರಿಸಿ ಹುಚ್ಚೆದ್ದು ಕುಣಿಯುವಂತೆ ಮಾಡುತ್ತವೆ. ಆದರೆ ಕೆಲ ದಿನಗಳ ಹಿಂದೆ, ತುಂಬಾ ಓದಿಕೊಂಡವರಂತೆ ! ಏನೇನೋ ಸುದ್ದಿ ಎಬ್ಬಿಸಿದ್ದಾರೆಂಬ ಮಾತು ಕಿವಿಗೆ ಬಿತ್ತು !!!! ಹುಬ್ಬುಗಳು ಮೇಲೇರಿ, ಕಿವಿ ನಿಮಿರಿದವು!!!!!!!!!
                      ✍ ಸತೀಶ ಉ ನಡಗಡ್ಡಿ

#Huliraaya #ಹುಲಿರಾಯ #ಹುಲಿ_ಹುಲಿ_ಹೆಬ್ಬುಲಿ