Monday 12 November 2018

ಕೊತ್ತಂ-ಬರ್ರೀss ಕೊಡ್ತಂಬರ್ರಿss


ಮೂವತ್ರುಪಾಯಿಗೆ 
ಮುರ್ರುಪಾಯ್ ಕಡಿಮಿ ಕೊಡ್ತೇನ್ 
ಅಂದ್ರೂ ಮೂಗು ಮುರದಿದ್ಯಲ್ಲ ಪೋರಿ
"ಮುಟ್ಟಬ್ಯಾಡ್ "ಅಂತಂದ-
ಕೊತ್ತಂಬ್ರಿ.

ಇಂದ.........
'ಹ್ಹಾ ಬರ್ರೀ, 
ಐದ್ರುಪಾಯ್ಕ್ ಯಾಡ್ಡ್ 
ಐದ್ರುಪಾಯ್ಕ್ ಯಾಡ್ಡ್ 
ಸೂಡ ಕೊಡ್ತಂಬರ್ರಿ'
ಅಂತ ವದರಲಿಕ್ಕತ್ಯಲ್ಲ "ಕೊತ್ತಂಬರಿ"
ಹಾದ್ಯಾಗ್ ಮಾಡಿ ಸದ್ದ.
       ✍ ಸತೀಶ ಉ ನಡಗಡ್ಡಿ


Wednesday 7 November 2018

ದೀಪಾವಳಿ


ದಿಂಡು, ಬಾಳೆಲೆ
ಕಬ್ಬಿನ ಜಲ್ಲೆ
ಹೂವಿನ ಹಾರ l
ಹಸಿರು ತೋರಣದೆಲೆ
ಅಂಗಳದಿ ಮಿಂಚುತಾವಲೆ
ರಂಗೋಲಿ ಚಿತ್ತಾರ !
ಹೋಳಿಗೆ-ತುಪ್ಪ ಭೋಜನ
ಏ, ಬರಪ್ಪ ಮಾಡೋಣ !!!!

ಹಚ್ಚಿಸಿಕೊಳ್ಳೋ ಸುರಬತ್ತಿ
ಎತ್ತಿಸಿಕೊಳ್ಳೋ ಆರತಿ
'ಹುಷಾರ್  ಮಗನ,..
ಹೊಗ್ಗೋ ಅವನೌನ..
ಬೆಂಕಿ ಐತಿ ಲೇ ....
ಹಚ್ಚು ಕಿಡಿ ಜೋಕಿಲೇ.'
    ✍ ಸತೀಶ ಉ ನಡಗಡ್ಡಿ

Saturday 7 July 2018

-:ಮದುವೆಯಾದ ಮೂರೇ ತಿಂಗಳಲ್ಲಿ ಮುರಿದು ಬಿದ್ದ ಮೂರು ಗಂಟಿನ ನಂಟು:-




               ಹುಬ್ಬಳ್ಳಿಗೆ  ಬರ್ತಾ ಇದ್ದೆ ಟ್ರೈನಿನಲ್ಲಿ, ನಿಗದಿತ ಸಮಯಕ್ಕಿಂತ 30 ನಿಮಿಷ ಟ್ರೈನ್ ಲೇಟ್ ಆಗಿದ್ದಕ್ಕೊ ಏನೋ ಒಂದು ಹೊಸ ವಿಷಯ ಸಿಕ್ಕಿತು ಬರೆಯಲು. 

     ಮೂರು ಜನ ಓಡೋಡಿ ಬಂದು ಟ್ರೈನ್ ಹತ್ತಿದರು, ನಾಲ್ಕನೆಯವನು ಸ್ವಲ್ಪ ಲೇಟ್ ಆಗಿ ಓಡಿ ಬಂದು ಹತ್ತಿದ. ಕೈಯಲ್ಲಿ ಟಿಕೆಟ್ ಇದ್ದುದನ್ನು ಕಂಡು , 'ಟಿಕೆಟ್ ತರಲು ಹೋಗಿ ಲೇಟ್ ಆಯಿತು; ಅದಕ್ಕೆ ಓಡಿ ಬರ್ತಿದೆ ಹುಲಿ'  ಎಂದು ಮನಗಂಡು ನನ್ನ ಪಾಡಿಗೆ ನಾನು ನೀರು ಕುಡಿದು ಕುಳಿತಿದ್ದೆ. ಟ್ರೈನ್ ಹೊರಟಿತು. ನಾಲ್ವರೂ ಮಾತನಾಡಲು ಶುರುವಿಟ್ಟರು. ಎಂದಿನಂತೆ ಪ್ರಯಾಣದಲ್ಲಿರುವಾಗ ಹುಡುಕುವ ಹೊಸ ಜಗತ್ತಿನ ಹುಡುಕಾಟದಲ್ಲಿ ನಾನಿದ್ದೆ. ಹಾಗಾಗಿ ಇವರ ಮಾತಿನ ಕಡೆ ಅಷ್ಟೊಂದು ಗಮನ ಕೊಟ್ಟಿರಲಿಲ್ಲ.

      "ನೀ ಏನೇ ಹೇಳು ರಾಘಣ್ಣಾ ..... ಮನೇಲಿ ಎಲ್ಲಾ ಹೊಂದಿಕೊಂಡು ಹೋದರೆನೇ ಜೀವನ. ಇಲ್ಲಾಂದ್ರೆ ಭಾಳ ಕಠಿಣ."  ಎಂದು ಬೇಸರ ವ್ಯಕ್ತಪಡಿಸಿದ.
"ಒಬ್ಬೊಬ್ಬರ ಜೀವನ ಒಂದೊಂದು ತರ..... " ಎಂದೊಬ್ಬ  ನಿಟ್ಟುಸಿರು ಬಿಟ್ಟ.

     ನನ್ನ ತಪಸ್ಸು ಭಂಗವಾದಂತೆ ಭಾಸವಾಗಿ, ಅವರ ಮಾತಿನತ್ತ ಗಮನ ಕೊಟ್ಟೆ.

" ಮದ್ವೆ ಮಾಡಿ ಇಬ್ಬರ  ಜೀವ್ನಾ ಹಾಳು ಮಾಡಿದ್ರು ..."
"ಖರೆ...ಖರೆ"

"ಹಿಂಗೆಲ್ಲಾ ಆದೀತಂತ  ಯಾರಿಗೆನ್ ಕನಸ ಬೀಳತ್ತೆನ್ ಲಾ... ನೀನೊಳ್ಳೆ..? "

ಏನಿರಬಹುದು ಕಥೆ ಎಂದು ಆಲಿಸುತ್ತಿದ್ದೆ. ಅಷ್ಟರಲ್ಲಿ ಒಬ್ಬ ...
"ಏನ್ ಅಂದ್ರೂ ..... ಆ ಹುಡ್ಗೀ ಮನೆಯವ್ರು ಹಾಗೆಲ್ಲ ಮಾಡಬಾರ್ದಿತ್ಲಾ."

"ಮಕ್ಕಳನ್ನ ಮುದ್ದ ಮಾಡಿ ಬೆಳಿಸಿರ್ತಾರ್ ಅಂದಮ್ಯಾಲ ಅಷ್ಟ ಇರೋದsss."

"ಮುದ್ದು ಮಾಡೋದು ತಪ್ಪಲ್ಲ ಕಣಣ್ಣಾ...ಮಾಡುವ ಆ ಮುದ್ದುತನ ಮಕ್ಕಳ್ನ ತಮ್ಮ್ ಜೀವಂದಾಗ  ಅಸಮರ್ಥನ್ ಮಾಡಬಾರ್ದು.... ನನ್ನ ಮಗಳು ಭಾಳ  ಸೂಕ್ಷ್ಮ ಅಂತ  ಬೆಳಿಸಿರ್ತಾರ್ ಮುಂದ ಬಂದ್ಮ್ಯಾಲ್ ಸ್ವಲ್ಪ ಅಸ್ತವ್ಯಸ್ಥ ಅಯ್ತಂತಂದ್ರೆ ಬಿಟ್ಟ ನಿಲ್ಲೋ ಹಂತಕ್ಕ ಬರ್ತಾವ.."
"ಈ ರಾಮನು ಜಾಣ ಆಗ್ಲಿಲ್ಲ.. ಹೆಂಗಾರಾಗ್ಲಿ ಅಂತಂದು ಬ್ಯಾರೆ ಮನಿ ಮಾಡ್ಕಂಡಿದ್ರೆ ಚಂದಿತ್ತು ಅನ್ಸತಾಯಿತಿ. " 

"ಹೆಂಗಂತಿಯಾ ಮಂಜಣ್ಣ ಹಂಗೆ... ಹುಟ್ದಾಗಿಂತ ಅಮ್ಮಪ್ಪನ್ ಜತಿಗಿದ್ದು, ಹೆಂಡ್ತಿ ಬಂತಕ್ಷಣ ಅವರನ್ನ ಬಿಟ್ಟ, ಹುಟ್ದೂರ್ ಬಿಟ್ಟು ಬಂದಾನಾ ಆ ಸಾಮಿ ?"

"ಇದೊಳ್ಳೆ ಕಾತ್ಯಾಯ್ತು ಕಣಪ್ಪಾ.. ... ಮತ್ತ ಆ ಹೆಣ್ ಮಗಿ ಏನ್ ಅವ್ರಪ್ಪಮ್ಮನ್ ಕರ್ಕೊಂಡ್ ಬಂದೈತಾ.....? ಬಿಟ್ಟ ಬಂದಿಲ್ವೆ...?"

"ಬಿಟ್ಬಂದಾರೆ ಅಣ್ಣಾ, ಸರಿ.. ಅದ್ ಅವ್ನಿಗೂ ಗೊತ್ತು, ಅವ್ನೆನ್ ಸಣ್ಣ ಮಗು ಅಲ್ಲಾ. Ph.D ಮಾಡಿ ಪ್ರೊಫೆಸ್ಸಾರ್ ಆಗಿ ಕೆಲಸ ಮಾಡ್ತಿದಾನಂದ್ರೆ ಇದೆಲ್ಲ ತಿಳಿಯಲ್ವೆ ಅವ್ನಿಗೆ...?  ಆದರೆ ಸ್ವಲ್ಪ ದಿನ ಅಪ್ಪಮ್ಮನ್ ಜತಿಗೆ ಹೆಂಡತಿ ಇರಲಿ, ಅಪ್ಪಮ್ಮನೂ ಸ್ವಲ್ಪ ಹಾಯಾಗಿರ್ಲಿ ಅಂತ ಬಯ್ಸಲ್ವೆ ಅವನುವೆ..? ಆಮೇಲೆ ಗಂಡನ್ ಜತಿಗೆ ಹೆಂಡತಿ ಇದ್ದದ್ದೇ .... ಮನೆ ಒಳಿಗೆ ಅಪ್ಪಮ್ಮರೆ , ಆಮ್ಯಾಲೆ ಗಂಡನ ಜತಿ ಹೆಂಡ್ತಿ ಇರಬಕು ಅಂತ ಕಳಸಲ್ವೇ ? "

"ಪಟ್ನದಲ್ ಓದಿದ್ ಹುಡ್ಗಿ ಕಣ್ಲಾ ಅದು. ಅದ್ಕೆಯ ಆ ಮನೆಲ್ ಇರೋಕೆ ಒಪ್ದೆ ಅಮ್ಮನ ಮನೆಗೆ ಹೋಂಟಾಗಿತ್ತಂತೆ... ... "

"ಪಟ್ನದ್ ಒಳಿಗ ಇದ್ ಮಾತ್ರಕ್ಕೆ.  ಗಂಡನ ಮನೇಲಿ, ಅವ್ರಪ್ಪಮ್ಮನ್ ಜತಿಗೆ ಇರ್ಬಾರ್ದ್ ಅಂತ ಐತಾ..?"

"ಅಂಗಲ್ಲಾ ಕಣಸಾಮಿ ನಾನ್ ಏಳಿದ್ದು.. ಪಟ್ನದ್ ಒಳಿಕೆ ಬೆಳೆದು ಹೆಣ್ಣು ಆ ಊರಿಗಿನ್ ಒಲ್ಲೆ ಅಂದಿರ್ಬೆಕು..."

"ಇರಪ್ಪಾ ಅಂಗಾರೆ. ಅಲ್ಲ ಕಣಾ.. ನಾಲ್ಕ್ ದಿಸಾ ಆ ಊರ್ನಾಗೆ ಇರೋ ಅಷ್ಟು ಗಟ್ಟಿ ಇಲ್ದ ಹೆಣ್ಣು ಇನ್ ಏನ್ಲಾ ಜೀವನ್ ಮಾಡ್ತಾಳೆ ಸಾಯೋಗಂಟಾ..? 

"ನೋಡು ದ್ಯಾವಣ್ಣ.. ನಮ್ ಮನಸಿ ಜೀವನಕ್ಕಿಂತ್ಲು ಅವರಿವರು ಆಡೋ ಮಾತಿನ ಮ್ಯಾಲೆ ನಮ್ಮ ಮುಂದಿನ ಕನಸ್ಗಳು ಬೆಳಿತಾ  ಹೋಗ್ತಾವೆ.... ಆ ಹುಡ್ಗೀ  ಓರ್ಗಿತ್ತಿಯರು, ಮನೆ ಸುತ್ತ್ಲಿನ ಚಿಕ್ಕ-ದೊಡಮ್ಮಂದ್ರು ಆಡೋ ಮಾತಗಳೆಲ್ಲ ಈ ಹುಡ್ಗೀ ಮನಸಿನ ಮ್ಯಾಲೆ ಪ್ರಭಾವ ಇರ್ತವೆ.... "

"ಹೂಂ. ಅದು ನಿಜಾ ಅನ್ನು ರಾಘಣ್ಣ... ನಿನ್ ಯಜ್ಮಾನ್ರಿಗೆ ಏನ್ ಕಡಿಮೆ, ಪ್ರೊಫೆಸರ್... ಅಷ್ಟು ಸಂಬಳ ಬರತ್ತಿಷ್ಟು ಸಂಬಳ ಬರತ್ತ್ ಅಂದು ಅಂದು ಹುಡಗಿನ್ ಗೋಪ್ರಾಕ್ಕ್ ಏರಿಸಿರ್ತಾರೆ... ಆ ಗೋಪ್ರಾ ಕನ್ಸು ಅಂತ ಅನ್ನಿಸೋಕ್ ಶುರು ಆಗಿ, ಹಿಂಗ್ ಆಗ್ತಾವೆ."

"ತಗೊಳ್ಳಪ್ಪಾ... ಅವರಿವರು ಹೊಗಳಿ ಅಟ್ಟಕ್ಕ ಕೂರಸ್ತಾರ್ ಅಂದ್ರೆ ಜೀವನ ಮಾಡೋರಿಗೆ ತಿಳಿಯಾಕಿಲ್ವೆ....ಅಂದೋರ್ ಬಂದು ಮಾಡಿಯಾರೆಯಾ..?."

"ಕೆಟ್ಟ ಮ್ಯಾಲೆ ಎಲ್ಲಾ ಕಾರಣಗಳೂವೇ ಎದ್ದು ಕಾಂತಾವೆ ಬಿಡ್ರಣ್ಣ ಅತ್ಲಾಗೆ ಓಗ್ಲಿ.. ಹುಡ್ಗನ್ ಜೀವನ ಏನ್ ತಿರಗಾ ಬರತ್ತಾ.. ಮಾತಾಡಿ ಏನುಪಯೋಗ..?"

"ನನ್ನ ಮಾತ್ ಒಸಿ ಕೇಳಣ್ಣೋ, ನಿನ್ ಆಮೇಲೆ ಉಸ್ರುವಂತೆ...... "

" ಹೂಂ... ಹೇಳಪ್ಪಾ..."

"ಅಮ್ಮನ ಮನೇಲಿ ಬಂಗಾರದ್ ಲೋಟ್ದಾಗೆ ಊಟಾ ಮಾಡಿರ್ಬೋದು, ಬೆಳ್ಳಿ ಲೋಟ್ದಾಗೆ ನೀರು ಕುಡದಿರ್ಬೋದು.. ಗಂಡನ ಮನೆನು ಅಂಗೆ ಬರಲಿ ಅಂದ್ರೆ ಇದ್ ಯಾವ  ಬುದ್ಧಿವಂತಿಕೆನಪಾ....? ಇರೋರು ಇಬ್ಬರು ಮಕ್ಕಳು ಇವರು.. ಇವ್ನ ದುಡಿಯೋದ್ರಾಗೆ ಮನೆ ಸಂತೆ, ತಮ್ಮನ್ ಓದು, ಅವನ್ ಅಲ್ಲಿ ಜೀವನ, ಎಲ್ಲಾ.... ಅಂದ್ಮೇಲೆ  ಹೆಂಡತಿ ಬಯಸಿದ ಹಾಗೆಲ್ಲಾ ಎಲ್ ನೆರ್ವೇರ್ಸೋಕೆ ಆದೀತು  ಆ ರಾಮನಿಗೆ....?  .... ಬರಿ ಮುದ್ದು ಮಾಡಿ ಬೆಳಸಿದ್ರೆ ಅಲ್ಲ ಕಣಣ್ಣೋ ಅಪ್ಪಮ್ಮ, ಕಷ್ಟ ಬಂದಾಗ ಹೆಂಗ್ ನಿಭಾಯ್ಸಿಬೇಕು, ಹೆಂಗ್ ಹೊಂದ್ಕೇ0ಡು ಹೋಗ್ಬೇಕು ಅನ್ನೋದನ್ನು ಕಲಿಸಬೇಕು...... ಅದು ಮಾರ್ಗ್ದರ್ಶನ."

"ಸರಿನಪಾ.. ನಿನ್ ಪ್ರಕಾರನೇ ಬರೋಣ.. ಅಂಗಾರೆ, ರಾಮನ್ ಅಪ್ಪಮ್ಮ ಯಾಕ ಸೊಸೆ ಮನೇಲೆ ಇರಲಿ ಅಣಬೇಕಿತ್ತು ... ಎಲ್ಲರ ಇರಲಿ ಒಟ್ನಾಗೆ ಚಂದಿರಲಿ ಅಂತ ಅವರ ಪಾಡಿಗೆ ಅವ್ರನ್ ಬಿಟ್ಟಿದ್ರಾಗ್ತಿರ್ಲಿಲ್ವೆ..?"

"ಏನ್ಲಾ ತಪ್ಪು ಸೊಸೆ ಮನಿಯಾಗೆ ಇರ್ಲಿ ಅಂದ್ರಲ್ಲಿ..... ಯಾವನಾದರೂ ತಪ್ಪು ಅನ್ನಲಿ ಅವ್ನಿಗೆ ಮೆಟ್ಟು ತಗೊಂತಿನಿ....ಒಹೋಹೊ ಬಂದ್ಬಿಟ್ಟಾ ಇಲ್ಲಿ...." ಎಣ್ಣೆಯ ಏಟಿನಲ್ಲಿ ಮಂಜಣ್ಣ ಕೆಂಡವಾದ.

"ಏ ಮಂಜಾ... ನಿಂಗ ಎಣ್ಣೆ ಜಾಸ್ತಿ ಅಗೈತೆ ಕಣ್ಲಾ.. ಅದ್ಕೆ ಭಾಳ ಮಾತಾಡ್ತಿದಿಯಾ..... "

"ಅದ್ಕೆ ಅಲ್ಲೇನ್ ರಾಜು ತಾಳಿಕೋಟೆ ಹೇಳಿದ್ದು: 'When wine is in, wit is out'  ಅಂತ".

"ವಿಟ್ಟೋ ಸೊಟ್ಟೋ.. ಒಟ್ನಾಗೆ ರಾಮಣ್ಣನ್ ಕಥೆ ಸುಟ್ಟ ಕರಕ್ಲಾತು. ಇದೆ ಮೇ ತಿಂಗಳಾಗೆ ಮದ್ವೆ ಆಗಿದ್ದ... ಇವತ್ತು ಬಿಡುಗಡೆ ಪತ್ರ ತಗೊಂಡ್ ಬಂದ....ಛೆ... ಆಗಬಾರ್ದಿತ್ತು ಹಿಂಗ್."

ಮದುವೆಯಾದ ಮೂರು ತಿಂಗಳೂ ಆಗದೆ ಇರುವ  ದಂಪತಿಗಳ  ಮೂರು ಗಂಟಿನ ನಂಟು ಅದೆಷ್ಟು ಬೇಗ ಕಳಚಿತು !!!!
ಕರಿಮಣಿ ಸರ ಕಟ್ಟುವಾಗ ಶಾಸ್ತ್ರಿಗಳು ಹೇಳಿದ ಮಂತ್ರಘೋಷ ವಾಕ್ಯಗಳೆಲ್ಲ ಇಷ್ಟು ಬೇಗ ಸತ್ವ ಕಳೆದುಕೊಂಡು ಬಿಟ್ಟವೇ ???? 
ಅಪ್ಪಮ್ಮನ ಪ್ರೀತಿ-ವಾತ್ಸಲ್ಯದಲ್ಲಿ ಬಂಧಿಯಾದ ಮಗನು ಜೀವನ ನಡೆಸಲು ಅಸಮರ್ಥನೇ ? ?????
ಅವರಿವರ ಮಾತಿನ ಹೊಗಳಿಕೆಯ ಮೇಲೆ ಭವಿಷ್ಯದ ಆಶಾ ಗೋಪುರ ಕಟ್ಟಿಕೊಂಡ ಆ ಹೆಣ್ಣು ಜೀವನದಲ್ಲಿ ಸಮರ್ಥಳೇ !!!!

ದಾವಣಗೆರೆಗೆ ಹತ್ತಿದ್ದ ಈ ನಾಲ್ವರು ಹಾವೇರಿಗೆ ಇಳಿದು ನನಗೆ ನಾಲ್ಕು ಪ್ರಶ್ನೆಗಳನ್ನು ಬಹುಮಾನ ನೀಡಿ ಹೊರಟು ಹೋದರು. 

***ಅಂತೆ-ಕಂತೆಗಳ ಮೇಲಿನ ಕಥೆ ಇದಾಗಿರಬಹುದು, ನೈಜ ಕಥೆಯೂ ಆಗಿರಬಹುದು.

                                             ✍ ಸತೀಶ ಉ ನಡಗಡ್ಡಿ

Monday 14 May 2018

ಅಮ್ಮನ ಚಹಾ ಮತ್ತು ಸಂಜೆಯ ತಂಗಾಳಿ

                   

      ಸಂಜೆ ಮನೆಗೆ ಬಂದು ಫ್ರೆಶ್ ಆಗಿ ಕುಳಿತುಕೊಳ್ಳುವಷ್ಟರಲ್ಲಿ "ಅಮ್ಮ" ಒಂದು ಲೋಟದಲ್ಲಿ ಕಾಲು ಭಾಗ ಚಹಾದ ಜೊತೆ ಮುಕ್ಕಾಲು ಭಾಗ ಹಾಲು ಸೇರಿಸಿ ಕೊಟ್ಟರು.

 "ಇಷ್ಟ ಸುಡು ಸುಡು, ಅದೂ ಈ ಬಿಸಲಾಗ ಹೆಂಗ್ ಕುಡಿಲಿ... ನನಗ ಬ್ಯಾಡ್ "

    ತಕ್ಷಣವೇ ಒಳಗಿನಿಂದ ಒಂದು ಸಣ್ಣ ಪ್ಲೇಟ್ ತೆಗೆದುಕೊಂಡು ಬಂದು ಅದರಲ್ಲಿ ಸುಡು ಸುಡು ಚಹ ಹಾಕಿ 'ಉಫ್....' ಎಂದು ಆರಿಸಿ ಕೊಟ್ಟರು. ಕುಡಿದೆ. 

               ಚಹಾ ಕುಡಿದ ಗ್ಲಾಸ್ ತೆಗೆದುಕೊಂಡು ಅಮ್ಮ ಒಳಗೆ ಹೋದರು. ನಾನು ಒಂದು ರೌಂಡ್ ಹೊರಗೆ ಹೋಗಿ ಬಂದು, ಮೊಬೈಲ್ ತೆಗೆದುಕೊಂಡು ಮೇಲೆ ಹೋಗುವ ಅಸೆ ಆಯಿತು.  ಹೊರಟಿದ್ದೆ, ಮೆಟ್ಟಿಲು ಹತ್ತುವಾಗ ತುಂಬಾ ದಿನಗಳಿಂದ ಆ ಕಿಟಕಿಯಿಂದ ಬರುವ 'ದಕ್ಷಿಣದ ಗಾಳಿ'ಯ ತಂಪಲ್ಲಿ ತೇಲಾಡಬೇಕೆನಿಸಿ ಮೆಟ್ಟಿಲುಗಳ ಮೇಲೆ ಕುಳಿತು ಕಿಡಕಿಯನ್ನು ಸರಿಸಿದೆ.. ತಂಗಾಳಿ ಒಮ್ಮೆಗೆ ಸುಯ್ ಎಂದು ಒಳಗೆ ನುಗ್ಗಿ, ಬೆವರಿದ ಮೈಗೆಲ್ಲಾ ತಂಪುಣಿಸಿತು. ಆ ತಂಪಿನೊಂದಿಗೆ ಏನೋ ಒಂದು ಕಂಪು ಮೂಗಿಗೆ ತಾಗಿತು. ಮತ್ತೊಮ್ಮೆ ಮೂಸಿದೆ.

              ಅಮ್ಮ ನೆಟ್ಟ ಮಲ್ಲಿಗೆ ಬಳ್ಳಿ ಹಬ್ಬಿ, ಮೇಲಿನ ಕಿಟಕಿಯ ತನಕ ಬೆಳೆದು ಹೂವು ಬಿಟ್ಟಿತ್ತು. ತಂಗಾಳಿಯಲ್ಲಿ ಮಲ್ಲಿಗೆಯ ಕಂಪು ಆಹ್ಲಾದಕರವಾಗಿತ್ತು. ದೇಹದ ಬೆವರು, ಮನಸ್ಸಿನ ದುಗುಡ ತುಸು ಹೊತ್ತು ಮರೆಯಾಗಿ ಪ್ರಕೃತಿಯಲ್ಲಿ ಕರಗಿದಂತೆ ಭಾಸವಾಯಿತು. ಸೃಷ್ಠಿಯ ನಿಗೂಢತೆ, ತಾಯಿಯ ಮಮತೆ, ಮನಸ್ಸಿನ ಒಳಗಿನ ಈ ಎರಡರ ಬಗೆಗಿನ ಸಾಮ್ಯತೆ ನೋಟ... ಅಚ್ಚರಿಯಾಯಿತು, ಗಾಳಿಯಲ್ಲಿ ಬಂದ ಮಲ್ಲಿಗೆಯ ಕಂಪು: ಸಂಜೆಯಲ್ಲಿ ಅಮ್ಮ ಆರಿಸಿ ಕೊಟ್ಟ ಚಹಾದ ಕಂಪು ನನ್ನನ್ನು ಧನ್ಯತಾ ಭಾವದಲ್ಲಿ ಮುಳುಗಿಸಿತು. 

Friday 6 April 2018

ಕಣ್ಣು


ಇದ್ದ ಕಣ್ಣು ನೋಡಲು, ನೋಡಿ ನೋಡಿ ಕೆಟ್ಟಿತು.
ನೋಡಿ ಕೆಟ್ಟ ಕಣ್ಣು ಸುಮ್ಮನಿರಲಾರದೆ
ಮಸ್ತಿಷ್ಕಕ್ಕೆ ದೂಡಿತು.
ಮಸ್ತಿಷ್ಕ ಕೆಟ್ಟು ಸುಮ್ಮನಿರಲಾರದೆ, 
ನಾಲಗೆಗೆ ಹೇಳಿತು
'ಬೈಯಿ, ಬಾಯಿಗೆ ಬಂದಂಗೆ ಬೈಯಿ' ಎಂದು.
ಬೈಯಿತು ಬಾಯಿ ಊರ ಹೊಲಗೇರಿಯೇ ತನ್ನೊಳಗಿರುವಂತೆ !!!
ಕೆಟ್ಟ ಮಸ್ತಿಷ್ಕ ಸುಮ್ಮನಿರದೆ 
ಕೈಗೆ ಹೇಳಿತು
'ಹೊಡಿ, ಹೊಡಿ ಕಲ್ಲು ಎತ್ತಿ ಹಾಕು, ಸಾಯಿಸು'
ನೂರು ಭಾವನೆಗಳೆಲ್ಲ ಸತ್ತವು !!
ಮಸ್ತಿಷ್ಕ ಕೆಟ್ಟು ಕಾಲಿಗೆ ಹೇಳೇ ಬಿಟ್ಟಿತು
'ಒದೆ, ತುಳಿ 'ಎಂದು,
ಎಲ್ಲವೂ ಮುಗಿಯಿತು. ಸುಮ್ಮನೆ ಕುಳಿತ ಮಸ್ತಿಷ್ಕ
ಹುಚ್ಚೆದ್ದು  ನಿಂತಿತು ಕಿವಿ ನಿಮಿರಿಸಿಕೊಂಡು
'ನನಗೆ ಯಾರು ಏನೇನೆಂದರು' ಎಂದು.
ಕಣ್ಣು ಇರಬಾರದಿತ್ತು ನನಗೆ
ಕಣ್ಣು ಬೇಕಿತ್ತು ಕುರುಡಗೆ.
                              ✍ ಸತೀಶ ಉ ನಡಗಡ್ಡಿ

ನನ್ನೂರ ಸಂಜೆ

ಇದು, ಇಂದು ನಾ ಕಂಡ ನನ್ನೂರಿನ ಸೂರ್ಯಾಸ್ತ. ನೀಲಿಯಾಗಸ, ಈಗಷ್ಟೇ ದಿಗಂತದಲ್ಲಿ ಮುಳುಗಿದ ಸೂರ್ಯ. ಹೊನ್ನ ಆಗಸ ಪ್ರಶಾಂತವಾಗಿದೆ. ಅಲ್ಲೊಂದು ಇಲ್ಲೊಂದು ತೆಂಗು, ಬೇವು, ಹುಣಸೆ, ನೀಲಗಿರಿ ಮರಗಳು. ಊರ ಜನರ ದಾಹ ತಣಿವ ಎತ್ತರದ ನೀರಿನ ಟ್ಯಾಂಕು. ಯುಗ ಡಿಜಿಟಲ್ ಆಗಿ, ಮಕ್ಕಳ ಕೈಗೂ ಮೊಬೈಲ್ ಸಿಕ್ಕಿ, 4G ಸ್ಪೀಡಿನಲ್ಲಿ ಬೆಳೆಯುತ್ತಿರುವ ಪೀಳಿಗೆಗೆ ನಿದರ್ಶನವಾಗಿ ನಿಂತ ನೆಟ್ವರ್ಕು ಕಂಬ. ಓಣಿಗೊಂದು ಸಾರ್ವಜನಿಕ ದೀಪದ ಕಂಬ; ಊರು ಬೆಳಗಿದೆ !! ಆದರೂ ಜನ, ಜನರ ಮನಸ್ಸು, ಬುದ್ಧಿಮತ್ತೆ ಇನ್ನೂ ಕತ್ತಲಲ್ಲೆ ಇದೆ: ಅದಕ್ಕೆ ಉದಾಹರಣೆ ಎಂದರೆ, ಹಬ್ಬ ಹರಿದಿನಗಳು ಬಂದಾಗ ಹಾರಾಡುವ ಅವರವರ ಮತದ ಝೇಂಡಾಗಳು.

ಊರ ಬಗ್ಗೆ ಕಾಳಜಿ ಇದೆ, ಆದರೆ ಜನರ ಬಗ್ಗೆ ಸಿಟ್ಟು ಇದೆ. ಮೇಲಿನ ಬಸ್ ಸ್ಟ್ಯಾಂಡಿನಿಂದ ಕೆಳಗಿನ ಹುಣಿಸೆಮರದ ತನಕ ಇರುವ ಮನೆಗಳಲ್ಲೆಲ್ಲ ಒಬ್ಬೊಬ್ಬರು ಶಿಕ್ಷಣ ಪಡೆದು, ಸರಕಾರಿ ನೌಕರಿಯಲ್ಲಿದ್ದರೂ ಅವರ ಬಡತನ ನೀಗಿಲ್ಲ. ಹೆಂಚಿನ ಮನೆಗಳು ಹಾಳುಬಿದ್ದು ಸಿಮೆಂಟಿನ ಸ್ಲ್ಯಾಪ್ ಬಿದ್ದ ಮನೆಗಳು ಮಿಂಚುತ್ತಿವೆ. ಅಲ್ಪ-ಸ್ವಲ್ಪ ಇತಿಹಾಸವನ್ನು ಹೇಳುತ್ತಿದ್ದ ಗುಡಿಗಳೂ, ಮಸೀದಿಗಳೂ ಶಿಕ್ಷಿತ ಮತಾಂಧರ ಕೈಗೆ ಸಿಕ್ಕು ಅಳಿದಿವೆ, ಬೆಳೆದಿವೆ. ಇದು ಬೆಳವಣಿಗೆಯೇ ? ನನಗೂ ಗೊತ್ತಿಲ್ಲಾ. ಮಹಾನ್ ನಾಯಕರುಗಳ ಬಲ ಗೈ ಬಂಟರೆ ಊರಲ್ಲಿದ್ದರೂ 3 ಮೈಲು ದೂರದಲ್ಲಿರುವ ಹೊಳೆಯಿಂದ ಕುಡಿಯಲು ನೀರು ತರಿಸಿಕೊಂಡಿದ್ದನ್ನು ಬಿಟ್ಟರೆ "ಭೂಮಿಗೆ ನೀರು ಬೇಕು" ಎಂದು ಬಹುಶಃ ಇವರಿಗೆ ಅನಿಸಿರಲಿಕ್ಕಿಲ್ಲ. ವರ್ಷದಿಂದ ವರ್ಷಕ್ಕೆ ಹೊಸ ಹೊಸ ಜನರು ಬರುತ್ತಿದ್ದುದು ಕಂಡು ಊರು ಬದಲಾಗುತ್ತಿದೆ, ಬದಲಾಗಿದೆ ಅಂದುಕೊಂಡರೆ ಮೂರ್ಖತನದ ಪರಮಾವಧಿ ಆದೀತು. ಬಂದವರೆಲ್ಲ ನೆಂಟರು; ಇದ್ದವರೆಲ್ಲ ಕುಂಟರು, ಸೊಂಟರು, ಕುರುಡರು. ಇಷ್ಟೇ ನನ್ನೂರು.