Monday 14 May 2018

ಅಮ್ಮನ ಚಹಾ ಮತ್ತು ಸಂಜೆಯ ತಂಗಾಳಿ

                   

      ಸಂಜೆ ಮನೆಗೆ ಬಂದು ಫ್ರೆಶ್ ಆಗಿ ಕುಳಿತುಕೊಳ್ಳುವಷ್ಟರಲ್ಲಿ "ಅಮ್ಮ" ಒಂದು ಲೋಟದಲ್ಲಿ ಕಾಲು ಭಾಗ ಚಹಾದ ಜೊತೆ ಮುಕ್ಕಾಲು ಭಾಗ ಹಾಲು ಸೇರಿಸಿ ಕೊಟ್ಟರು.

 "ಇಷ್ಟ ಸುಡು ಸುಡು, ಅದೂ ಈ ಬಿಸಲಾಗ ಹೆಂಗ್ ಕುಡಿಲಿ... ನನಗ ಬ್ಯಾಡ್ "

    ತಕ್ಷಣವೇ ಒಳಗಿನಿಂದ ಒಂದು ಸಣ್ಣ ಪ್ಲೇಟ್ ತೆಗೆದುಕೊಂಡು ಬಂದು ಅದರಲ್ಲಿ ಸುಡು ಸುಡು ಚಹ ಹಾಕಿ 'ಉಫ್....' ಎಂದು ಆರಿಸಿ ಕೊಟ್ಟರು. ಕುಡಿದೆ. 

               ಚಹಾ ಕುಡಿದ ಗ್ಲಾಸ್ ತೆಗೆದುಕೊಂಡು ಅಮ್ಮ ಒಳಗೆ ಹೋದರು. ನಾನು ಒಂದು ರೌಂಡ್ ಹೊರಗೆ ಹೋಗಿ ಬಂದು, ಮೊಬೈಲ್ ತೆಗೆದುಕೊಂಡು ಮೇಲೆ ಹೋಗುವ ಅಸೆ ಆಯಿತು.  ಹೊರಟಿದ್ದೆ, ಮೆಟ್ಟಿಲು ಹತ್ತುವಾಗ ತುಂಬಾ ದಿನಗಳಿಂದ ಆ ಕಿಟಕಿಯಿಂದ ಬರುವ 'ದಕ್ಷಿಣದ ಗಾಳಿ'ಯ ತಂಪಲ್ಲಿ ತೇಲಾಡಬೇಕೆನಿಸಿ ಮೆಟ್ಟಿಲುಗಳ ಮೇಲೆ ಕುಳಿತು ಕಿಡಕಿಯನ್ನು ಸರಿಸಿದೆ.. ತಂಗಾಳಿ ಒಮ್ಮೆಗೆ ಸುಯ್ ಎಂದು ಒಳಗೆ ನುಗ್ಗಿ, ಬೆವರಿದ ಮೈಗೆಲ್ಲಾ ತಂಪುಣಿಸಿತು. ಆ ತಂಪಿನೊಂದಿಗೆ ಏನೋ ಒಂದು ಕಂಪು ಮೂಗಿಗೆ ತಾಗಿತು. ಮತ್ತೊಮ್ಮೆ ಮೂಸಿದೆ.

              ಅಮ್ಮ ನೆಟ್ಟ ಮಲ್ಲಿಗೆ ಬಳ್ಳಿ ಹಬ್ಬಿ, ಮೇಲಿನ ಕಿಟಕಿಯ ತನಕ ಬೆಳೆದು ಹೂವು ಬಿಟ್ಟಿತ್ತು. ತಂಗಾಳಿಯಲ್ಲಿ ಮಲ್ಲಿಗೆಯ ಕಂಪು ಆಹ್ಲಾದಕರವಾಗಿತ್ತು. ದೇಹದ ಬೆವರು, ಮನಸ್ಸಿನ ದುಗುಡ ತುಸು ಹೊತ್ತು ಮರೆಯಾಗಿ ಪ್ರಕೃತಿಯಲ್ಲಿ ಕರಗಿದಂತೆ ಭಾಸವಾಯಿತು. ಸೃಷ್ಠಿಯ ನಿಗೂಢತೆ, ತಾಯಿಯ ಮಮತೆ, ಮನಸ್ಸಿನ ಒಳಗಿನ ಈ ಎರಡರ ಬಗೆಗಿನ ಸಾಮ್ಯತೆ ನೋಟ... ಅಚ್ಚರಿಯಾಯಿತು, ಗಾಳಿಯಲ್ಲಿ ಬಂದ ಮಲ್ಲಿಗೆಯ ಕಂಪು: ಸಂಜೆಯಲ್ಲಿ ಅಮ್ಮ ಆರಿಸಿ ಕೊಟ್ಟ ಚಹಾದ ಕಂಪು ನನ್ನನ್ನು ಧನ್ಯತಾ ಭಾವದಲ್ಲಿ ಮುಳುಗಿಸಿತು.