Monday 27 May 2019

ಒಂದು ಹೂವಿನ ಕಥೆಯು



ಅದೇನು ಹೊಳಪು ನಿನ್ನ ಕಣ್ಣಾಲಿಯಲಿ  ?
ಚಂದಿರನ ಊರಿಂದ ಚಂದಿರನನ್ನೆ ತಂದಂತೆ !
ನೂರು ನಕ್ಷತ್ರಗಳನ್ನೆಲ್ಲ ಒಗ್ಗೂಡಿಸಿಟ್ಟಂತೆ ;
ನುಣು ನುಣುಪು ನೋಟ ನೋಡಿ ಈ ಮನಸು
ತ್ಸುನಾಮಿಯಲಿ ಸಿಲುಕಿದಂತಾಗಿದೆ ಭಾವದಗಣಿತ ಕನಸು.

ಹಾಲಗೆನ್ನೆ , ಹವಳದುಟಿಯ ನಿನ್ನ ನಗು
ರಂಭೆ, ಊರ್ವಶಿ,ತಿಲೋತ್ತಮೆಯರನ್ನೂ ಬದಿಗಿಟ್ಟಂತೆ ;
ಬಿಗುಮಾನವೆಲ್ಲ ಬದಿಗಿಟ್ಟು ನಗು ಚೆಲ್ಲು ಮತ್ತೊಮ್ಮೆ ,
ದಿನಗಳೆದಂತೆಲ್ಲ ಬೆಳೆ ಬೆಳೆದು ನಿಂತಂತೆ
ಇದಾವ ನಗುವೂ ನಿನ್ನ ಮೊಗದಲ್ಲಿ ಸುಳಿಯದು ಮುಂದೊಮ್ಮೆ.

ಅರಳದ ಹೂ ಮೊಗ್ಗು ನೀನಿನ್ನೂ ಮಡಿಲಲಿ
ಎಳೆ ಬಿಸಿಲಿನ ಕಿರಣಕೆ ವಜ್ರಖಚಿತ ಮೇಲೆ ;
ಬಿಸಿಲೇರಿದಂತೆ ವಜ್ರ ಮಂಜಿನ ಹನಿಯೂ ಕರಗಿ
ಬಿಸಿಲ ಝಳಕ್ಕೊ , ಯಾವುದಕ್ಕೊ ಹೋಗುವುದು ಮರೆಯಾಗಿ -
ಮೊಗದಲ್ಲಿನ ನಗು, ಕಣ್ಣ ಕಾಂತಿ, ಮನದ ಆ ಮುಗ್ಧತೆ.

ಮೂರ್ನಾಲ್ಕು ದಳಗಳರಳಿದ ಹೂವು ನೀನೀಗ
ಹೋಗ ಬರುವವರೆಲ್ಲರ ನೋಟ ನಿನ್ನತ್ತ ಈಗ ;
'ಏನು ಅಂದ-ಚಂದ, ನಿನಗೆ ನೀನೇ ಸರಿಸಾಟಿ' ಎಂದು :
ನೂರಾರು ದುಂಬಿಗಳ ಚುಂಬಣ, ಎದೆಯಾಳಕೆದೆ- ಆಳಕೆ
ಬಿಸಿಲೇರಿತ್ತು ನೆತ್ತಿಯ ಮೇಲೆ , ಎದೆಯಲಿ ಭಾವ ಬುಗ್ಗೆ.

ಹೊರಳುವುದು ಹೊತ್ತು ಮೂಡನದಿ ಪಡುವಣಕೆ
ನಳನಳಿಸುವ ಹೂವ ಕಿತ್ತು, ಅರ್ಪಿಸುವುದ ನೋಡುವುದಕೆ ;
ಮಹೋತ್ತರ ಘಟ್ಟ - ಜೀವನದಲ್ಲಿ ನೀಡಿ ಒಂದು ಪಟ್ಟ :
ಬಿಸಿಲು-ನೆರಳು, ಸಿಹಿ-ಕಹಿ, ಅಗಲಿಕೆ-ಪರಾಧೀನ, ಸ್ವಂತಿಕೆ
ಕೆಳಗಿನಿಂದ ಮೇಲೇರಿದ ಚಕ್ರ ಕೆಳಗಿಳಿಯಲನಿಯಾಗುತ್ತಿದೆ.


ಯಾವ ತೋಟದ ಹೂವು ಯಾವ ದೈವದ ಮುಡಿಗೇರಿತು ?
ಹೂವಿಗೇನು ಗೊತ್ತು , ಸೃಷ್ಠಿ ಚಕ್ರದಲ್ಲಿ ಬೆಳೆದು ಬಂದಿತ್ತಷ್ಟೆ .
ಅದೇನು ಆಶ್ಚರ್ಯ ಪ್ರತಿಯೊಂದರ ಲಯಬದ್ಧತೆಯಲಿ ?

                        ✍ ಸತೀಶ ಉ ನಡಗಡ್ಡಿ