Wednesday 10 July 2019

ಟ್ರಾಫಿಕ್ ಸಿಗ್ನಲ್ - ಪೋಸ್ಟ್ ಆಫೀಸ್


             ಮಧ್ಯಾಹ್ನ, ಆಫೀಸಿನಿಂದ ಊಟಕ್ಕೆ ಅಂತ ಬರ್ತಿದ್ದೆ. ಓಲ್ಡ್ ಎಸ್ಪಿ ಸರ್ಕಲ್ ದಾಟಿ ಬಂದು, ಪೆಟ್ರೋಲ್ ಪಂಪ್ ಹತ್ತಿರದಲ್ಲಿ ಆಗುತ್ತಿರುವ ಕಾಂಕ್ರೀಟ್ ರೋಡು ಕಾಮಗಾರಿಯನ್ನು ಕಂಡು "ಏನ್ ಡೆವೆಲಪ್ ಮಾಡ್ತಾರೋ ಏನೋ.... ಸರಿಯಾಗಿ ಡ್ರೈನೇಜ್ ವ್ಯವಸ್ಥೆ ಮಾಡಲ್ಲಾ, ಚರಂಡಿ ಸಂಪರ್ಕ ಹೋಗಿ ಕುಡಿಯೋ ನೀರಿಗೆ ಕುಡಿರ್ತದ... ಬಿಸಿಲಲ್ಲಿ ಮಾಡಿರೋ ಡ್ರೈನೇಜಗಳು ಮಳ್ಯಾಗ ನೀರು ವಾಂತಿ ಮಾಡ್ತಿರ್ತಾವ... " ಅಂತ ಏನೇನೋ ಮನಸ್ಸಿನಲ್ಲಿ ಅಂದುಕೊಳ್ಳುತ್ತಾ ಹೊರಟಿದ್ದೆ. ಪೀಟರ್ ಇಂಗ್ಲೆಂಡ್ ಎದುರಿಗೆ ನಿಂತಿದ್ದ ಆಟೋ ಡ್ರೈವರ್ ಒಬ್ಬಂವ 'ಗರ್ರ್ರ್ರ್...' ಅಂತ ಜುಬಲಿ ಸರ್ಕಲ್ ಕಡೆ ಆಟೋ ತಿರಿವಿದ. ಮೊದಲೇ ಸ್ವಲ್ಪ ಅವಸರದಲ್ಲಿದ್ದೆ, ಬ್ರೇಕ್ ಹಾಕಿದೆ, ಬೈಕ್ 'ಟರ್ರ್ರ್ರ್...'  ಎಂದು ಎಳೆಯಿತು. ಅವನೋ ಅವನ ಪಾಡಿಗೆ ಹೋದ. "ಆ ಇಂಡಿಕೇಟರ್ ಏನ್ ಚಂದಕ್ಕ ಇಟ್ಟರ ಅಂದ್ಕೊಂಡಿ ಏನ್ ಪಾ..... ? " ಅಂದೆ. ಅದಾಗಲೇ ಆಟೋ 10 ಅಡಿ ಮುಂದೆ ಹೋಗಿತ್ತು. 
                  ಜ್ಯೂಬಿಲಿ ಸರ್ಕಲ್ ಗೆ ಬಂದಾಗ ಸಿಗ್ನಲ್ ಇತ್ತು. ಆಟೋ ರಿಕ್ಷಾ ದಾಟಿತು. ನಾನು ಅಲ್ಲೇ ನಿಂತೆ. ಪಕ್ಕದಲ್ಲಿ ಒಂದು ಸ್ಕೂಟಿ ಬಂದು ನಿಂತಿತು. ಇಬ್ಬರು ಇದ್ದರು. ಸುಮ್ಮನೆ ಕಣ್ಣು ಹಾಯಿಸಿದೆ. 
         " ಎಲ್ಯಂತ ಹುಡುಕೂದ್ಲೇ.... " ಹಿಂದೆ ಕುಳಿತವ ಕೇಳಿದ.
         " ಇಲ್ಲಿ ಪೋಸ್ಟ್ ಆಫೀಸ್ ಎಲ್ಯವs ರೀ...?" ಮುಂದಿನವ ನನ್ನ ಕೇಳಿದ.
         " ನಿಮಗ ಯಾವ ಪೋಸ್ಟ್ ಆಫೀಸ್ ಬೇಕ....?"
         "ಯಾವ್ದಾದ್ರೂ ನಡಿತದ....?" 
         " ಈ ಕಾರ್ನೆರ್ ಒಳಗ ಹೋಗಿ, ಹಣಮಂತ ದೇವರ ಗುಡಿ ಹಿಂದ RIGHT TURN ತುಗೊಂಡ್ LEFT ಹೋದ್ರ Line Bazar ಪೋಸ್ಟ್ ಆಫೀಸ್ ಅದ. ಹಿಂಗss ಸ್ಟ್ರೆಟ್ ಹೋದ್ರ Head ಪೋಸ್ಟ್ ಆಫೀಸ್ ಸಿಗ್ತದೆ. ಅದನೂ ದಾಟಿ ಮುಂದ ಹೋದ್ರ ರೈಲ್ವೆ ಸ್ಟೇಷನ್ ಪೋಸ್ಟ್ ಆಫೀಸ್ ಬರ್ತದ. Head ಪೋಸ್ಟ್ ಆಫೀಸ್ ಇಂದ BSNL ಆಫೀಸ್ ಮೂಲಕ DC ಕಾಂಪೌಂಡ್ ಹೋದ್ರ ಕಚೇರಿ post ಆಫೀಸ್ ಅದ. ಹಂಗss ಆಲೂರ್ ವೆಂಕಟರಾವ್ ಸಭಾಭವನ ಕಡೆ ಇಂದ, KCD ಸರ್ಕಲ್ ಗೆ ಬಂದು SBM ATM ಹತ್ರ ನಿಂತ್ರ ಸಪ್ತಾಪುರ ಪೋಸ್ಟ್ ಆಫೀಸ್ ಸಿಗ್ತದೆ. ಅಲ್ಲಿಂದ ಮುಂದ ಸರ್ಕಲ್ ಗೆ ರೈಟ್ TURN ತುಗೊಂಡ್ ಹಳಿಯಾಳ ರೋಡ್ ಇಂದ ಜರ್ಮನ್ ಹಾಸ್ಪಿಟಲ್ ರೋಡ್ ಹಿಡ್ಕೊಂಡ್ ಬಂದು ಕೆನರಾ ಬ್ಯಾಂಕ್ ಎದುರಿನ ರೋಡಿಗೆ ಹೋದ್ರ ನಾರಾಯಣಪುರ ಪೋಸ್ಟ್ ಆಫೀಸ್ ಅದ. ಅಲ್ಲಿಂದ ಬಂದು TV ಟವರ್ ಸರ್ಕಲ್ ಗೆ ಲೆಫ್ಟ್ TURN ತುಗೊಂಡ್ ಗಿರಿಯಾಸ್ ದಾಟಿ ಹೋದ್ರ ಅಲ್ಲಿ K C ಪಾರ್ಕ್ ಪೋಸ್ಟ್ ಆಫೀಸ್ ಅದ. ಹಾಂಗSS ಮುಂದ ಓಲ್ಡ್ ಎಸ್ಪಿ ಸರ್ಕಲ್ ಇಂದ ಸವದತ್ತಿ ರೋಡಿಗೆ ಹೋದ್ರ M J ನಗರ ಪೋಸ್ಟ್ ಆಫೀಸ್ ಸಿಗ್ತದ. ಅಲ್ಲಿಂದ ಶಿವಾಜಿ ಸರ್ಕಲ್ ಕಡಿಂದ ಹಳೆ ಬಸ್ ಸ್ಟ್ಯಾಂಡ್ ದಾಟಿ ಸುಭಾಸ ರೋಡಿಲೆ KCC ಬ್ಯಾಂಕ್ ದಾಟಿ ಗಾಂಧಿ ಚೌಕ್ ದಾಟಿದ್ರ ಧಾರವಾಡ ಸಿಟಿ ಮತ್ತ ಮಾರ್ಕೆಟ್ ಪೋಸ್ಟ್ ಆಫೀಸ್ ಸಿಗ್ತಾವ್...... "
     "  ಸಾಕ್ ಬಿಡ ಅಣ್ಣಾ..." ಎಂದು ಗೊಂದಲಕ್ಕೀಡಾದ.
     "ಅದ್ಕ ಕೇಳಿದೆ ನಾ ಯಾವ ಪೋಸ್ಟ್ ಆಫೀಸ್ ಬೇಕ ನಿಮಗ ಅಂತ..."
    " THANKS ಅಣ್ಣಾ..."
  ಅಷ್ಟರಲ್ಲಿ ಟ್ರಾಫಿಕ್ ಪೋಲಿಸ್ ಸೀಟಿ ಹಾಕಿ ಕೈ ಮಾಡಿದ. ನನ್ನ ದಾರಿಗೆ ನಾ ಬಂದೆ. ಆದರ ಟ್ರಾಫಿಕ್ ಸಿಗ್ನಲ್ ಒಳಗ ನಿಂತ 'ಪೋಸ್ಟ್ ಆಫೀಸ್ ಎಲ್ಯವ ...?' ಅಂತ ಕೇಳಿ ತಲಿ ಒಳಗ ಟ್ರಾಫಿಕ್ ಜಾಮ್ ಮಾಡ್ಕೊಂಡ ಹೋದ್ರ ಅವರ.

                                         ✍ ಸತೀಶ ಉ ನಡಗಡ್ಡಿ