Tuesday, 1 September 2026

ಮಾತಿನ ಜೀವನ (The Life of Word)

ಮಾತಿನಲ್ಲೇ ಇದೆ ಮನಸ್ಸಿನ ಆಳ
ಮಾತಿಲ್ಲದಾದರೆ ಮನಸಿಗೆ ತಳಮಳ:
ಒಡುಕು-ಕೆಡುಕಿದೆ ಕಟು ಮಾತಿನಿಂದ;
ಭ್ರಾತೃತ್ವ-ಶತ್ರುತ್ವವು ದಿಟದ ಮಾತಿಂದ.

ಶಿಶುವಿನ ತೊದಲು ಮಾತು 
ಮನೆಯೊಳಗೆ ಸಂತಸ ಮೂಡಿಸೆ,
ಕಲ್ಮಶ ಕುಟಿಲ ಬುದ್ಧಿಯ ನಗೆಮಾತು 
ನವಪಾಶಾನ ತುಂಬಿರುವ ಶೀಶೆ !!

ಮಾತುಗಳು - ಬಣ್ಣದವು, ದ್ವೇಷದವು, 
ಕುಹಕ-ಮೋಸದವು, ಸ್ನೇಹ-ಪ್ರೀತಿಯವು!
ಗರ್ಭದೊಳು ಒಳ-ಹೊರಾರ್ಥಗಳ - ಅವು
ಹುದುಗಿಸಿಟ್ಟುಕೊಂಡು ನಾಲಿಗೆಯ ಮೆಲ್ಕುಣಿಯುವವು!!

ಮಾತಿಗೆ ಸೋತವರು
ಸೋತು ಮಾತನಾಡುವರು;
ಮಾತಿನೊಳಗಿಹುದು ಮಾನ 
ಮಾತಿನಿಂದಲೇ ಹೋಗಿವೆ ಪ್ರಾಣ.
--------*---------

The Life of Word (AI translation)

There is a depth within the heart
that only words can reveal;
and when words retreat into silence,
the heart trembles
beneath the weight of all it cannot say.

A careless word can fracture what years have built;
a bitter tongue can turn kin into strangers.
For in the breath of a word
live both—
the tenderness of brotherhood
and the fire of enmity.

A child’s first, faltering syllables
can fill an entire home with sunlight;
yet the honeyed laughter
of a crooked, poisoned mind
may hide a vial of venom
behind its smile.

Words wear many colours—
the colour of hatred,
the colour of deceit and mockery,
the colour of friendship,
the colour of love.

And deep within their womb
sleep meanings—
some revealed,
some concealed,
some never meant to be spoken—
until they rise,
alive and restless,
upon the tip of the tongue.

There are those
who lose themselves to words;
and having lost,
speak only from the ruins.

For a person’s honour
can dwell within a single word,
just as a single word
can strip it away.

Words have crowned the mighty,
broken the proud,
kindled wars,
severed bonds—

and sometimes,
with nothing but a breath
passing from one tongue to another,
they have taken a life.

Friday, 6 February 2026

ಆಪತ್ಭಾಂದವನಾದ IPPB ಜೀವವಿಮೆ

ಮಾನವ ಜೀವನವು ಎಷ್ಟು ಅನಿಶ್ಚಿತತೆಯಿಂದ ಕೂಡಿದೆ ಎಂದರೆ - ನಾವು ಎಷ್ಟೇ ಜಾಗರೂಕರಾಗಿದ್ದರೂ, ಎಚ್ಚರಿಕೆಯಿಂದ ಇದ್ದರೂ, ಎಲ್ಲ ರೀತಿಯ ಕ್ರಮಗಳನ್ನು ಕೈಗೊಂಡು ಸಿದ್ಧತೆ ಮಾಡಿಕೊಂಡಿದ್ದರು ಯಾವಾಗ, ಯಾವ ರೀತಿಯಲ್ಲಿ, ಹೇಗೆ ಸಮಸ್ಯೆಗಳು ಎದುರಾಗುತ್ತವೆ ಎಂದು ನಿಖರವಾಗಿ ಹೇಳಲಾಗದು ! ಇಡೀ ಜೀವ ಸಂಕುಲದಲ್ಲಿಯೇ ಮಾನವ ಜೀವಿ ಬುದ್ಧಿವಂತನಿರಬಹುದು. ಆದರೆ ಆತ ತನಗೆ ಭವಿಷ್ಯದಲ್ಲಿ ಎದುರಾಗಬಹುದಾದ ಆತಂಕ, ಅಸ್ಥಿರತೆ, ಸಂತೋಷವನ್ನು ಸಹ ಸ್ಪಷ್ಟವಾಗಿ ಗ್ರಹಿಸಲಾಗದಿರುವ ಬುದ್ಧಿಮಾಂದ್ಯನೆ ಸರಿ.

ಅದಕ್ಕೆ ಅಲ್ಲವೇ ಜೀವವನ್ನು " ನೀರ ಮೇಲನ ಗುಳ್ಳೆ " ಗೆ ಹೋಲಿಸುವುದು ! 

ಬದುಕಿನ ಈ ಅನಿಶ್ಚಿತತೆಯಿಂದ ತುಸು ನೆಮ್ಮದಿ ಪಡೆಯಲು ಯಾರೇ ಆಗಲಿ ತಮ್ಮನ್ನು ಆಶ್ರಯಿಸಿದ ವ್ಯಕ್ತಿಗಳಿಗೆ ತಮ್ಮ ಅನುಪಸ್ಥಿತಿಯಲ್ಲಿ ಸಹಾಯಕ್ಕೆ ಬರಲಿ ಎಂದು ಗೆಳೆಯರ, ಸಂಬಂಧಿಕರ ಮತ್ತು ಹಿತೈಷಿಗಳ ಸೂಚನಾನುಸಾರ ಉಳಿತಾಯ, ವಿಮೆ ಹಾಗೂ ಠೇವಣಿ ಇತ್ಯಾದಿಗಳನ್ನು ಯೋಚಿಸಿ, ಯೋಜನೆ ಹಾಕುತ್ತಾರೆ. ಇದು ಮಧ್ಯಮ ವರ್ಗದ ಜನರ ಕಥೆಯಾದರೆ: ಇನ್ನು ಆರ್ಥಿಕವಾಗಿ ಹಿಂದುಳಿದ; ಅದರಲ್ಲಿಯೂ ಗ್ರಾಮೀಣ ಪ್ರದೇಶಗಳಲ್ಲಿನ ಜನರ ಪರಿಸ್ಥಿತಿ ಊಹಿಸುವುದು ಕೂಡ ಅಸಾಧ್ಯ. ಯಾಕೆಂದರೆ, ಅವರ ಬದುಕು ನಡೆಯುವುದೇ ದಿನಗೂಲಿ ಕೆಲಸದ ಮೇಲೆ ! ಹೀಗಿರಲು ಅವರು ಮಧ್ಯಮ ವರ್ಗದ ಜನರಂತೆ ಭವಿಷ್ಯದ ಬದುಕಿನ ಕುರಿತು ಯೋಚಿಸಿದರು ಆ ಯೋಚನೆಯನ್ನು ಕಾರ್ಯರೂಪಕ್ಕೆ ತರುವ ಆರ್ಥಿಕ ಕ್ಷಮತೆ ಅವರನ್ನು ಅಸಹಾಯಕರನ್ನಾಗಿ ಮಾಡುತ್ತದೆ. ಕುಟುಂಬದ ಯಜಮಾನನೊಬ್ಬ ದುರದೃಷ್ಟವಶಾತ್ ಅಪಘಾತಗಳಲ್ಲಿ ತೀರಿಹೋದ ನಂತರ ಆ ಕುಟುಂಬ ಅನಾಥವಾದ ಅದೆಷ್ಟೋ ಉದಾಹರಣೆಗಳು ಇಂದಿನ ದಿನಗಳಲ್ಲಿ ಸಹಜವಾಗಿಬಿಟ್ಟಿವೆ.
ಹಾಗೋ ಹೀಗೋ ಏನೇನೋ ಪ್ರಯತ್ನ ಮಾಡಿ ಸಾಧ್ಯವಾದಷ್ಟು ಅನುಕೂಲತೆಗಳನ್ನು ಬಳಸಿಕೊಳ್ಳಬೇಕೆಂದರೆ ಬ್ಯಾಂಕು, ಸೇವಾಸಂಸ್ಥೆಗಳ ಕಾರ್ಯವಿಧಾನ, ರೀತಿ ರಿವಾಜು ಪೂರ್ಣಗೊಳಿಸಿ ಅಗತ್ಯ ದಾಖಲೆಗಳನ್ನು ಹೊಂದಿಸುವಷ್ಟು ಶಿಕ್ಷಣ ಪಡೆಯದೇ ಇರುವ ಅಸಹಾಯಕ ಪರಿಸ್ಥಿಗಳನ್ನು ನೆನೆದರೆ ಕೆಳವರ್ಗದ ಜನರ ಬದುಕು ಒಂದು ಶಿಕ್ಷೆಯಲ್ಲದೆ ಮತ್ತೇನೂ !? ಇನ್ನೊಂದು ಕಡೆಯಲ್ಲಿ, ಅಲ್ಪ ತಿಳುವಳಿಕೆ ಅಥವಾ ಬದುಕಿನ ಕುರಿತು ಪಕ್ವಗೊಂಡಿಲ್ಲದ ಕಾರಣ ದುಶ್ಚಟಕ್ಕೆ ಬಲಿಯಾಗುವ ಮನೋವೃತ್ತಿ ಅವರನ್ನು ಭವಿಷ್ಯದ ಬಗ್ಗೆ ಹೇಳಿಕೊಳ್ಳುವ ಮಟ್ಟದ ಭದ್ರತೆಯನ್ನು ಹೊಂದಲು ಮುಂದೆ ಬಿಡುವುದಿಲ್ಲ.

ವಿಭಿನ್ನ ಬ್ಯಾಂಕುಗಳು, ವಿಮಾ ಸಂಸ್ಥೆಗಳು ಹಾಗೂ ಇತರ ಠೇವಣಿ ಸೇವಾ ಸೌಲಭ್ಯ ಒದಗಿಸುವ ಅಂಗಗಳು ಭಿನ್ನ ಭಿನ್ನ ಮಾದಂಡಗಳನ್ನು ನಿಗದಿಪಡಿಸಿದ ಫಲವಾಗಿ ಎಲ್ಲರೂ ಬಯಸುವ ಭವಿಷ್ಯದ ಕುರಿತ ಅನಿಶ್ಚಿತತೆಯ ಭದ್ರತೆಯನ್ನು ಪಡೆಯುವಲ್ಲಿ ವಿಫಲರಾಗಿದ್ದಾರೆ ಎಂದರೆ ತಪ್ಪಾಗಲಾರದು.

ಮೊನ್ನೆ ಮೊನ್ನೆ ಧಾರವಾಡದ ಮುಖ್ಯ ಅಂಚೆ ಕಚೇರಿಯಲ್ಲಿ ನಡೆದ ಘಟನೆ ಇದು. ಧಾರವಾಡ ಜಿಲ್ಲೆ ದಾಸ್ತಿಕೊಪ್ಪ ಹಳ್ಳಿಯ ನಿವಾಸಿಯಾಗಿರುವ ಮಲ್ಲಿಕಾರ್ಜುನ್ ಮೆಣಸಿನಕಾಯಿ ಅವರು ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರು. ಅವರು 557/- ರೂಪಾಯಿಗಳ Bajaj General Insurance ವಿಮೆಯನ್ನು ತೆಗೆದುಕೊಂಡಿದ್ದರು. ಹಾಗೂ ಆ ವಿಮೆಯು ದಿನಾಂಕ 28.10.2025 ರಂದು ಸ್ವಯಂ ನವೀಕರಣಗೊಂಡಿತ್ತು.

ವಿಮೆಯನ್ನು ಹೊಂದಿದ ಮಲ್ಲಿಕಾರ್ಜುನ ಮೆಣಸಿನಕಾಯಿಯವರು VRL ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು ದಿನಾಂಕ 05.11.2025ರಂದು ಹಳಿಯಾಳ ಬಳಿಯ ರಸ್ತೆ ಅಪಘಾತದಲ್ಲಿ ಮರಣಹೊಂದಿದ್ದರು. ಅವರು ಮಾಡಿಸಿದ್ದ ವಿಮೆಗೆ ಪವಿತ್ರಾ ಮೆಣಸಿನಕಾಯಿ ಎಂಬುವವರು ನಾಮನಿರ್ದೇಶಿತವಾಗಿದ್ದರಿಂದ ವಿಮೆಗೆ ಒಳಪಟ್ಟ ವ್ಯಕ್ತಿ ಮರಣಹೊಂದಿದ ಸರಿಯಾಗಿ 8 ದಿನಕ್ಕೆ ನಾಮನಿರ್ದೇಶಿತ ವ್ಯಕ್ತಿಯ ಖಾತೆಗೆ ವಿಮಾಮೊತ್ತ 10 ಲಕ್ಷ ರೂಪಾಯಿಗಳನ್ನು ಧಾರವಾಡ IPPB Branch ವ್ಯವಸ್ಥಾಪಕರು ಹುಬ್ಬಳ್ಳಿ ಪ್ರಧಾನ ಅಂಚೆ ಕಚೇರಿಯಲ್ಲಿ ಜಮಾ ಮಾಡಿದ್ದಾರೆ.

ಮನೆ ಮನೆಗೆ ಟಪಾಲು ಹಂಚಲು ಬರುತ್ತಿದ್ದ ಅಂಚೆ ಪೇದೆಯಾದಂತಹ ಸಿದ್ದಮ್ಮ ಹೆಬಸೂರ ಅವರು ಒಂದು ದಿನ ಮಲ್ಲಿಕಾರ್ಜುನ ಅವರಿಗೆ Bajaj General Insurance ಪಡೆಯುವುದರ ಬಗ್ಗೆ ಮಾಹಿತಿ ನೀಡಿದ್ದರು. ಪಡೆದ ಮಾಹಿತಿಯ ಪ್ರಕಾರ, ' ಬೇರೆ insurance ಕಂಪನಿಗಳಿಗೆ ಹೋಲಿಸಿದರೆ ಯಾವುದೇ ದಾಖಲೆ ಒದಗಿಸದೇ ಕೇವಲ ಆಧಾರ್ ಲಿಂಕ್ ಇರುವ ಮೊಬೈಲ್ ನಂಬರ್ ಹಾಗೂ thumb Impression ಒದಗಿಸುವ ಮೂಲಕ IPPB ಖಾತೆ ತೆರೆದು ಆ ಮೂಲಕ Bajaj General Insurance ವಿಮೆಯನ್ನು ಹೊಂದುವುದು ಒಂದೆರಡು ಗಂಟೆಯಲ್ಲಿ ಯಾವುದೇ ಅಲೆದಾಟ ಇಲ್ಲದೆ, ವೈದ್ಯಕೀಯ ಪರೀಕ್ಷೆಗಳಿಗೆ ಒಳಗಾಗುವ ಪ್ರಮೇಯವೂ ಇರದೇ, ಯಾವುದೇ ದಾಖಲೆ ಪ್ರತಿಯನ್ನು ಒದಗಿಸದೇ ಎಲ್ಲವೂ online ಮುಖೇನ ' ಸಾಧ್ಯವಿದ್ದರಿಂದ ಮಲ್ಲಿಕಾರ್ಜುನ ಅವರದ್ದು ಅಂದಿನ ಅತ್ಯುತ್ತಮ ಆಯ್ಕೆಯಾಗಿತ್ತು. ಆ ಆಯ್ಕೆಯ ಪ್ರತಿಫಲ ವಿಮಾ ಹಣ ನಾಮನಿರ್ದೇಶಿತ ವ್ಯಕ್ತಿಯ ಖಾತೆಗೆ ಜಮಾ ಆದಾಗ ಸಿಕ್ಕು, ನಾವಿಕನಿಲ್ಲದ ದೋಣಿಯಲ್ಲಿ ಭವದ ಪಯಣ ಸಾಗಿಸುತ್ತಿದ್ದ ಅವರ ಅವಲಂಬಿತರಿಗೆ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದರು.

ಖಂಡಿತವಾಗಿಯೂ ಮರಣಹೊಂದಿದ ವ್ಯಕ್ತಿಯನ್ನು ಯಾರೂ ಮರಳಿ ತರಲಾರರು. ದಿಕ್ಕೇ ತೋಚದ. ಸೂತ್ರ ಹರಿದ ಗಾಳಿಪಟದಂತೆ ಆಗಿದ್ದ ಆ ಕುಟುಂಬದಲ್ಲಿ ಆ ವ್ಯಕ್ತಿಗೆ ಇದ್ದಷ್ಟು ಕುಟುಂಬದ ಜವಾಬ್ಧಾರಿಯನ್ನು ಅವರಷ್ಟು ಸಮರ್ಥವಾಗಿ ನಿಭಾಯಿಸಲು ಯಾರಿಗೆ ಸಾಧ್ಯವಾಗಬಹುದು ? ಆದರೆ, ಈ ವಿಮೆಯ ಹಣ - ಸ್ವಲ್ಪವಾದರೂ ಅವರ ಕುಟುಂಬಕ್ಕೆ ಸಹಾಯಕವಾಗಬಹುದು, ಅವರ ಭವಿಷ್ಯದ ಕನಸುಗಳ ಸಾಕಾರಕ್ಕೆ ಸಹಕಾರಿಯಾಗಬಹುದು. ಇಂತಹ ಅದೆಷ್ಟೋ ಪತನದತ್ತ ಮುಖ ಮಾಡಿದ ಕುಟುಂಬಗಳಿಗೆ ಆರ್ಥಿಕ ಬೆಂಬಲವಾಗಿ ನಿಲ್ಲುವ ಈ ವಿಮಾ ಸೌಲಭ್ಯಗಳು ಆಪತ್ಭಾಂಧವ ಎನ್ನುವುದು ಸೂಕ್ತವೆನಿಸುತ್ತದೆ.

ಈ ರೀತಿಯಲ್ಲಿ ವಿಧಿಯ ಪ್ರವಾಹಕ್ಕೆ ಸಿಲುಕಿ ಹೊಯ್ದಾಡುವ ಕುಟುಂಬಗಳಿಗೆ ಆಧಾರವಾಗಿ ನಿಲ್ಲುವ Bajaj General Insurance ವಿಮೆಯ ಲಾಭಗಳ ಸಂಕ್ಷಿಪ್ತ ವಿವರಗಳು ಹೀಗಿವೆ ;

ಅಂಚೆ ಇಲಾಖೆಯಲ್ಲಿ ಈ ರೀತಿಯ ಗ್ರಾಹಕಸ್ನೇಹಿ ಮತ್ತು ಲಾಭದಾಯಕ ವಿಮಾ ಯೋಜನೆಗಳು ಅಷ್ಟೇ ಅಲ್ಲದೇ ಸ್ಥಿರ ಠೇವಣಿಗಳು ಸಹ ಲಭ್ಯವಿರುತ್ತವೆ ಎಂದರೆ ನೀವು ನಂಬಲೇಬೇಕು. ಇದೇ ರೀತಿಯಲ್ಲಿ ಹಲವು ಸಮೂಹ ಅಪಘಾತ ವಿಮಾ ಯೋಜನೆಗಳು ಲಭ್ಯವಿದ್ದು ಅವುಗಳು ಸಹ ಹತ್ತು ಲಕ್ಷಗಳ ಮೌಲ್ಯದ ವಿಮೆಯನ್ನು ಹೊಂದಿವೆ. ಅವುಗಳ ವಿಸ್ತೃತ ಲಾಭಗಳನ್ನು ಈ ಕೆಳಗಿನಂತೆ ವಿಶ್ಲೇಷಿಸಲಾಗಿದೆ .

ಇನ್ನು ಈ ವಿಮಾ ಯೋಜನೆಗಳಿಗೆ ಒಳಪಡಲು ಏನು ಮಾಡಬೇಕು ಎಂಬ ಪ್ರಶ್ನೆಗೆ ಉತ್ತರವೆಂದರೆ - ಈ ಮೊದಲೇ ಹೇಳಿದಂತೆ ' ಮನೆ ಮನೆಗೆ ಟಪಾಲು ಕೊಡಲು ಬರುವ ಅಂಚೆ ಪೇದೆ ' ಯನ್ನು ಸಂಪರ್ಕಿಸಬಹುದು. ಅಂಚೆ ಕಚೇರಿಯ ಪ್ರತಿ ಅಂಚೆ ಪೇದೆಗೂ ಈ ಕುರಿತು ಮಾಹಿತಿ ಇರುವುದರಿಂದ ಗ್ರಾಹಕರು ನಿಗದಿತ ಸ್ಥಳಕ್ಕೆ ಹೋಗಬೇಕು ಎಂಬ ಚಿಂತೆಯೇ ಬೇಡ. ದಿನಂಪ್ರತಿ ನಗರ, ಪಟ್ಟಣಗಳ ಗಲ್ಲಿ-ಗಲ್ಲಿ, ಊರು-ಕೇರಿ ಒಳಗೆ ಸೇವಾನಿರತ ಅಂಚೆ ಪೇದೆಗಳು ಸಾರ್ವಜನಿಕರ ಆಪ್ತ ಸಲಹೆಗಾರರಾಗಿರುತ್ತಾರೆ. ಅವರು ಬೇಕಾದ ಎಲ್ಲ ಮಾಹಿತಿಯನ್ನು ಒದಗಿಸಿ ಕೆಲವೇ ನಿಮಿಷಗಳಲ್ಲಿ ಈ ಜೀವ ವಿಮೆಯನ್ನು ನಿಮಗೆ ಮಾಡಿಕೊಡುತ್ತಾರೆ. ಇದಲ್ಲದೆ https://karnatakapost.gov.in ವೆಬ್ಸೈಟ್ ಗೆ ಹೋಗಿ ಸೇವಾ ವಿನಂತಿ (Service Request) ಮಾಡುವ ಮೂಲಕ ಗ್ರಾಹಕರು ಅಂಚೆ ಸಿಬ್ಬಂದಿಯನ್ನು ಮನೆ ಬಾಗಿಲಿಗೆ ಆಹ್ವಾನಿಸಿಯೂ ಈ ಜೀವ ವಿಮೆ ಮತ್ತು ಇತರೆ ಅಂಚೆ ಸೌಲಭ್ಯಗಳನ್ನು ಪಡೆಯಬಹುದು.

ಮೊದಲೇ ಹೇಳಿದಂತೆ ಈ ಬದುಕು ಎಂಬುದು ' ಅನಿಶ್ಚಿತತೆಗಳ ಸಾಗರ.' ಇಲ್ಲಿ ಸುಖದ ಅಲೆಗಳ ನಡುವೆ ಕಷ್ಟದ ಸುಳಿಗಳು ಯಾವಾಗ ಎದುರಾಗುತ್ತವೆ ಎಂದು ಹೇಳಲಾಗದು. ಇಂತಹ ಸಂದರ್ಭದಲ್ಲಿ ನಮ್ಮ ಕುಟುಂಬದ ಹಿತರಕ್ಷಣೆಗೆ ನಿಲ್ಲುವ ಜೀವ ವಿಮೆಯು ಕೇವಲ ಒಂದು ಆರ್ಥಿಕ ಹೂಡಿಕೆಯಲ್ಲ; ಅದು ನಮ್ಮ ಅನುಪಸ್ಥಿತಿಯಲ್ಲೂ ಪ್ರೀತಿಪಾತ್ರರಿಗೆ ನೀಡುವ ಭದ್ರತೆಯ ಭರವಸೆ.

ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (IPPB) ಇಂದು ಮನೆಮನೆಯ ಬಾಗಿಲಿಗೆ ವಿಮಾ ಸೇವೆಯನ್ನು ತಲುಪಿಸುವ ಮೂಲಕ ಸಾಮಾನ್ಯ ಜನರಿಗೆ 'ಆಪತ್ಬಾಂಧವ'ನಾಗಿ ಮೂಡಿಬಂದಿದೆ. "ಹನಿ ಹನಿ ಕೂಡಿದರೆ ಹಳ್ಳ" ಎಂಬಂತೆ, ನಾವು ಇಂದು ಪಾವತಿಸುವ ಸಣ್ಣ ಮೊತ್ತದ ಪ್ರೀಮಿಯಂ, ನಾಳೆ ನಮ್ಮ ಕುಟುಂಬದ ಪಾಲಿಗೆ ಬೆಟ್ಟದಂತಹ ಆಸರೆಯಾಗಬಲ್ಲದು. ಸಾವು ಅನಿವಾರ್ಯ ಇರಬಹುದು, ಆದರೆ ಸಾವಿನ ನಂತರದ ಅನಾಥಪ್ರಜ್ಞೆಯನ್ನು ಹೋಗಲಾಡಿಸುವ ಶಕ್ತಿ ಈ ಜೀವ ವಿಮೆಗಿದೆ.

ಆದುದರಿಂದ, ವಿಳಂಬ ಮಾಡುವುದು ವಿವೇಕವಲ್ಲ. 'ನನಗೇನೂ ಆಗದು' ಎಂಬ ಅತಿಯಾದ ಆತ್ಮವಿಶ್ವಾಸಕ್ಕಿಂತ, 'ಏನಾದರೂ ಆದರೂ ನನ್ನವರು ಸುರಕ್ಷಿತ' ಎಂಬ ಮುನ್ನೆಚ್ಚರಿಕೆ ಮುಖ್ಯ. ಬನ್ನಿ, ಇಂದೇ IPPB ಜೀವ ವಿಮೆಯ ಸೌಲಭ್ಯವನ್ನು ಪಡೆದುಕೊಳ್ಳೋಣ. ನಮ್ಮವರ ಮುಖದ ನಗುವು ಎಂದೂ ಮಸುಕಾಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಲ್ಲವೇ? ಮುನ್ನೆಚ್ಚರಿಕೆಯೇ ಸಂಕಷ್ಟಗಳಿಗೆ ಪರಮೌಷಧ.

Saturday, 15 November 2025

ಮರಗಳ ಮಾತೆ

ಸಾಲು ಸಾಲು ಮರಗಳನು 
ಸಾಕಿ ಸಲುಹಿದಳು ತಾಯಿ
ತಾನೆ ಹೆತ್ತ ತನ್ನ ಮಕ್ಕಳಂತೆ 
ನಾಡಿಗೆ ನಾಡೇ ಹಾಡಿ ಹೊಗಳಲಿ 
ಈ ಹಿರಿ ಜೀವದ ಜೀವನ ಗಾಥೆ.

ದೇವಿ ಪ್ರಕೃತಿಗೆ ತಾಯಿ
ತೊಡಿಸಿಹಳು ಹಸಿರ ಸೀರೆ;
ಉಸಿರಾಡುವ ಜೀವಗಳೆಲ್ಲ
ಮರೆಯದಿರಲಿ ಈ ತಾಯಿಯ 
ನಿಸ್ವಾರ್ಥ ಸೇವೆ, ತ್ಯಾಗ ಸಮರ್ಪಣೆ.

ಹೆಣ್ಣಿಗೆ (ಪ್ರಕೃತಿಗೆ) ಹೆಣ್ಣು (ತಿಮ್ಮಕ್ಕ)
ಪರಸ್ಪರ ಸಮರ್ಪಿಸಿಕೊಂಡು 
ಬದುಕಿದರೆ ಸ್ವರ್ಗವೆಂಬುದು
ಬೇರೆಲ್ಲಿಲ್ಲ : ಭುವಿಯ ನಿಜದ ಸ್ವರ್ಗ !
ತಿಮ್ಮಕ್ಕ ತಿಳಿಸಿದಳು ಈ ನಿಜ ತತ್ವ.

ವಯಸ್ಸು ಮುಪ್ಪುಗಳೆಂಬ ಕಾರಣ
ದೇಹಕ್ಕೆ ಸೀಮಿತ - ಆತ್ಮಕ್ಕಲ್ಲ;
ಧ್ಯೇಯಕ್ಕಿದ್ದರೆ ಸತ್ಯ, ಪ್ರೇಮ, ನ್ಯಾಯ
ದೈವವೇ ಸಂಗಮಿಸುವುದು ಆತ್ಮನ:
ತಿಮ್ಮಕ್ಕ ಸ್ವರ್ಗಾರೋಹಿ - ಮರಮರಗಳಲಿ .

Saturday, 1 November 2025

ಸೋತಿದ್ದೇನೆ - ಸತ್ತಿಲ್ಲ !


ಸೋತಿದ್ದೇನೆ - ಸತ್ತಿಲ್ಲ !
ಮರುಹುಟ್ಟು ಪಡೆದರೂ 
ಹಳೇ ನೆನಪು ಪ್ರವಾಹದೋಪಾದಿಯಲ್ಲಿ 
ಇಲ್ಲಸಲ್ಲದ ಸಮಯದಲ್ಲಿ
ಮರುಕಳಿಸಿ ನಿದ್ದೆಗೆಡಿಸಿ,
ನನ್ನ 'ನಾನೇ ಮೂರ್ಖ'ನನ್ನಾಗಿಸಿ,
"ದೇಹವೆಂಬ ದೇವಾಲಯ"ವನ್ನು
ಹಾಳುಗೆಡವಿ, ಕನ್ನಡಿಯ ಕೈಯಲ್ಲೂ
ಉಗಿಸಿಕೊಳ್ಳುತ್ತಿದ್ದೇನೆ ನೋಡಿಕೊಂಡಾಗ
ನನ್ನನೇ ನಾನು ಅದರೆದುರು !!!
ಸೋತಿದ್ದೇನೆ ನಾನು
ಆದರೆ, ಇನ್ನೂ ಸತ್ತಿಲ್ಲ !!

ಆದರ್ಶಗಳಿಗೆ ಕಟ್ಟುಬಿದ್ದು,
ಪ್ರತಿಷ್ಠೆಗೆ ಪಟ್ಟುಬಿದ್ದು 
"ಕೆಲಸಕ್ಕೆ ಬಾರದ ಮರದ ದಿಮ್ಮಿ"
ಬಿದ್ದಲ್ಲಿ ಬಿದ್ದು ಲಡ್ಡಾಗಿ ಹೋಗದೆ
'ಬಳಸಿ ಬಳಸಿ' ಸವೆದಾಗ ಎಸೆದ 
ಮರದ ತುಂಡು ನಾನಾದೆನೋ? 
ಮೂರ್ಖನೊಂದಿಗೆ ವಾದಕ್ಕಿಳಿದ 
"ಶತಮುರ್ಖ"ನು ನಾನಾದೆನೋ ?
ನಿಯಮ, ಕಟ್ಟುಪಾಡುಗಳ ಕಾಲಡಿಯಲ್ಲಿ
ಸಿಲುಕಿ ಹುಡಿ ಹಾರಿದ 'ತರಗೆಲೆ'ಯಾದೆನೋ ?
ಏನಾದೆನೋ ಏನೋ - ಒಂದಂತೂ ನಿಜ
ಸೋತಿದ್ದೇನೆ - ಆದರೆ ಸತ್ತಿಲ್ಲ !!
                 

Tuesday, 1 April 2025

ನಾನೇ ನೀನು - ನೀನೇ ನಾನು

ನಾನಿರುವುದು ನಿನ್ನೊಳಗೆಯೇ 
ನನ್ನೊಳಗಿರುವುದು ನೀನೆಯೇ
ನಿನ್ನ ಹೊರತು ' ನನ್ನ ' ಹೇಗೆ ಊಹಿಸಲಿ
'ನಿನ್ನ' ಮರೆತು ಹೇಗೆ ನಾನು ಜೀವಿಸಲಿ ?

ಹಾರದೊಳಗಿನ ದಾರ ದಾಟಿ
ಸಾವಿರ ಹೂಗಳ ಬಂಧಿಸಿಟ್ಟುಕೊಂಡಂತೆ,
ದೇಹದೊಳಗಿನ ಲಕ್ಷ ಕೋಟಿ
ಜೀವಕೋಶಗಳ ಚೈತನ್ಯದ ಒಟ್ಟು ಮೊತ್ತ ನಾನಾದಂತೆ;
ನನ್ನಂತಹ ಅನಂತಾನಂತ ಕೋಟಿ ಜೀವತಂತಿ ಮೀಟಿ-
ಪ ಪರಮ ಚೈತನ್ಯದ ಒಟ್ಟು ಮೊತ್ತ ನೀನಾಗಿರುವೆ !!

ದೇಹದೊಳು ಉಪಸ್ಥಿತ ಶ್ವಾಸ, ನೆತ್ತರು,
ಮಾಂಸ, ಮೂಳೆ, ಹೊಲಸು ಕಲಸು ಇತ್ಯಾದಿಗಳಂತೆ
ನೆಲ, ಜಲ, ಕಲ್ಲು, ಮಣ್ಣು, 
ಅಂಡ - ಪಿಂಡ - ಬ್ರಹ್ಮಾಂಡ ಸರ್ವಲೋಕಗಳ
ತನ್ನೊಳಗೇ ಅಡಗಿಸಿಕೊಂಡ ಮಹತ್  ರೂಪಿ
ನಿನ್ನ ವಿರಾಟ್ ರೂಪ ಕಂಡು ಧನ್ಯನಾದೆ !

Sunday, 13 October 2024

ಮುದುಕಿ ಮನೆ - ಹುಣಸೆ ಮರ


 

ಮನೆ ಎದುರಿಗಿನ
ಮನೆಯೊಂದರಲಿ 
ಮುದುಕಿ ಜೀವನ ಮುಗಿಸಿದ್ದಳು;
ದಿನಗೂಲಿ, ಮತ್ತೇನೋ
ಕೆಲಸಗಳನು ಮಾಡಿದ
ಆಕೆ ಕೊನೆಗೊಮ್ಮೆ ಅಂತ್ಯಗೊಂಡಿದ್ದಳು !

ನಾನು ಎಳೆವಯಸ್ಸಿನಲ್ಲಿ
ಇದ್ದಾಗಿನಿಂದ ನೋಡಿದ
ಮನೆ - ಮುದುಕಿ ಇಬ್ಬರೂ ಈಗ ಇಲ್ಲ.
ಅದೆಂದಿನಿಂದಲೋ ಬೆಳೆದು
ಉಳಿದಿದ್ದ ಹುಣಸೆ ಮರವನು 
ಮುದುಕಿಯ ಹಿಂದೆ ಹಿಂದೆಯೇ ಸಾಗ ಹಾಕಿದರು !!

ಮನೆಯಲ್ಲಿದ್ದ ಮುದುಕಿಯೂ
ಹಾಗೂ ಆ ಹುಣಸೆ ಮರವೂ
ಅದೆಷ್ಟೋ 'ಕಿಡಿಗೇಡಿ'ಗಳ ಕಲ್ಲಿನೇಟು ತಿಂದಿವೆ:
ಆದರೂ, ಬದುಕಿದ್ದವು ಮನೆ
ಮತ್ತು ಮರ- ನೆರೆಹೊರೆಯವರಂತೆ;
ಈಗ ನೋಡಿದರೆ ಅಲ್ಲಿ ಎಲ್ಲವೂ ಖಾಲಿ ಖಾಲಿ ...

ನೇಸರನುದಯಕ್ಕೆ ಅಡ್ಡಿಯಾದ
ಮರವಿಂದು ಇಲ್ಲವಾಗಿ ಮನೆಯ
ಒಳ ನುಗ್ಗಿದೆ ಎಳೆ ಬಿಸಿಲ ಕಿರಣ ಹೊಸ್ತಿಲು ದಾಟಿ !
ಕಣ್ಣಳತೆಯ ದೂರಕ್ಕೆ ದೃಷ್ಟಿ
ಹಾಯಿಸಿದರೆ ಸಾಕು ಅದೋ 
ಕಾಣುತ್ತೇವೆ - ಬಸವಣ್ಣನ ಗುಡಿ, ಅರಗುಡಿ!

ಕಂಬಗಳು ಅರು ನಿಂತಿವೆ,
ಅವು ಹಾಗೆ ನಿಂತಲ್ಲೇ ನಿಂತು 
ಒಂದಷ್ಟು ವರ್ಷಗಳು ಕಳೆದಿವೆ, ಕಳೆಯಬೇಕು!
ಮನೆಯನ್ನು ಕೆಡವಿ
ಮತ್ತೊಂದನ್ನು ಕಟ್ಟುವ
ತವಕದಲ್ಲಿದ್ದಾರೆ ನಾಲ್ಕಾರು ಜನರು - ಮತ್ತೊಬ್ಬರಿಗೆ !!