Thursday, 10 December 2015

ನನ್ನ ಜನರು




ನಿಮಗೇನು ಗೊತ್ತು
ನನ್ನ ಜನರ ಬಗ್ಗೆ..?
ಅವರೇನು ಅಸಾಮಾನ್ಯರಲ್ಲ.
ಶೂರರು, ವೀರರು,
ಕಡು ವೈರಿಗಳು;
ಅವರವರೊಳಗೆ ಆಗದವರು

ದೊಡ್ಡವರು, ಚಿಕ್ಕವರು
ಯಾರೊಬ್ಬರೂ ಎಲ್ಲಿಯೂ
ಯಾರೊಂದಿಗೂ ಹೊಂದಿಕೊಳ್ಳದ
ಹುಂಬರು ನನ್ನ ಜನರು.
ಆಡಂಬರದ್ದು ಅವರ ಮನ:
ಅವರಿಗವರೆ ಸರಿಸಮಾನರು....

ತಾಳ್ಮೆ ಇಲ್ಲದಂತಹ
ತರಾತುರಿಯವರು
ಇಲ್ಲವೇ, ಸೋಂಬೇರಿಗಳು.
ಮಾತಿನೊಳಗೆ ....
ಅವರೆ ಮಲ್ಲರು,
ಎಲ್ಲವನೂ ಬಲ್ಲ ಮೈಗಳ್ಳರು.

ಸಾರ್ವಜನಿಕ ಸ್ಥಳ- ಅವರ ಕಕ್ಕಸದ ಮನೆ.
ಮೂತ್ರ ವಿಸರ್ಜನೆ- ಚರಂಡಿ ಕಾಂಪೌಂಡು.
ಕಸದ ತೊಟ್ಟಿಯೋ ? ಅವರೆಸೆದ ಸ್ಥಳವೆಂದುಕೊ.

ಮಕ್ಕಳು,ಪಾಲಕರು,ವೃದ್ಧರು ಅಲ್ಲ. ಎಲ್ಲರೂ
ಪದೇ ಪದೇ ಹೇಳಬೇಕೇನು ?
ಸಿಡುಕರು, ಕೆಡುಕರು ಅಷ್ಟೆ ಅಲ್ಲ; ಕುಡುಕರು.
ಎಲ್ಲವೂ ಅವರಲುಂಟು ಗೊತ್ತೆ ?

- ಸತೀಶ ಉ ನಡಗಡ್ಡಿ

ಜಗದ ಸೂಜಿಗ



ಮರ ಚಿಗುರಿದೆ ಮರ
ನಮ್ಮನೆ ಎದುರಿನ ಮಾಮರ.
ಹಸುರ್ಗೆಂಪು ಚಿಗುರೆಲೆ
ಮಂಜಿನಿಬ್ಬನಿಯ ನೀರೆಲೆ,
ಓಣಿಯ ಹಕ್ಕಿ-ಪಿಕ್ಕಿಗಳಿಗೆಲ್ಲ
ಇದೆ ತವರು ಮನೆ; ಯಾರೂ ಪ್ರಶ್ನಿಸಿಲ್ಲ.

ಮೂಡಣದಿ ರವಿ ಮೂಡುತಲಿ
ನಸುಕಿನ ಚಳಿಯಲಿ ನಾದ ಚಿಲಿಪಿಲಿ,
ಮಲಗಿದ ಸೋಂಬೇರಿಯ ಕಿವಿಯಲಿ
ನಿದ್ದೆ ಕದಡಿದವನಾದ ವಿಲಿವಿಲಿ !
ಅದೆಷ್ಟೊಂದು ಭಿನ್ನ ಈ ಸೃಷ್ಠಿಯಲಿ..?

ಅಭಿವೃದ್ಧಿಯತ್ತ ನುಗ್ಗಿದ ಜಗ
ಸಂಶೋಧನೆಗಳ ಸಮರ ಸೂಜಿಗ
ಜಗದಗಲ ಮುಗಿಲಗಲಕ್ಕೂ ಈಗ
ಹೊಸತು ಹೊಸತೆಂಬುದರ ಸೋಗ
ಅಪ್ಪನ ಮೇಲಿನವ ಈ ಮಗ
ಮುರಿಯುತಿಹವು ಅವೆಷ್ಟೊ ಬಾಳನೊಗ.
                                   - ಸತೀಶ ಉ ನಡಗಡ್ಡಿ

Tuesday, 8 December 2015

ಸೃಷ್ಠಿ ಸಮತೋಲನ

          ಈ ಜಗತ್ ಸೃಷ್ಠಿಯಲಿ ಒಂದು ಬೆಳೆಯಬೇಕೆಂದರೆ ಒಂದು ಬಲಿಯಾಗಲೇಬೇಕು. ಅದೇ ಈ ಸೃಷ್ಠಿಯಲಿ ಅಡಗಿರುವ ನಿಗೂಢ. ಇಡೀ ಪ್ರಕೃತಿಯೇ ಒಂದು ತರದ ರಣಾಂಗಣ. ಹಕ್ಕಿ ತನ್ನ ಕರುಳ ಕುಡಿಯ ಹಸಿವಡಗಿಸಲು ಅಲ್ಲೆಲ್ಲೋ ಎಲೆಯಿಂದೆಲೆಗೆ ಜಿಗಿವ, ದುಂಬಿಯಿಂದ ದುಂಬಿಗೆ ಮಕರಂದ ಹೀರುವ ಪತಂಗವೊಂದನ್ನು ಬೇಟೆಯಾಡಿದೆ. ಹಕ್ಕಿಗೆ ಆಹಾರ ದೊರೆತ ಆನಂದ;  ಉಂಡ ಜೀವಕ್ಕೆ ಪರಮಾನಂದ. ತಾಯಿಯ ಕಾಳಜಿ, ಪ್ರೀತಿ, ಶ್ರಮ ಅಮೋಘ  ಅನನ್ಯ. ಆದರೆ ಪತಂಗ......... ? ಪತಂಗ, ಅದೂ ಸಹ ಅದರ ಕರುಳ ಕುಡಿಗಾಗಿಯೋ ಇಲ್ಲ ಮಕರಂದ ಹೀರುವ ನೆಪದಲ್ಲಿ ಪರೋಕ್ಷ ಸಂತಾನೋತ್ಪತ್ತಿಯ ವಾಹಕವಾಗಿಯೋ ಸೃಷ್ಠಿಯಲ್ಲಿ ತನ್ನ ಕಾರ್ಯ ನಿರ್ವಹಿಸುತ್ತಿತ್ತು. ಪಾಪ "ಅಮ್ಮ ಬರುತ್ತಾಳೆ ಹೊಟ್ಟೆಗೇನನ್ನೋ ತರುತ್ತಾಳೆ" ಎಂದು ದಾರಿ ಕಾಯುತ್ತ ಪತಂಗದ ಮಕ್ಕಳೂ ಸಹ ಕಾಯುತ್ತಿರಬಹುದಲ್ಲ .....? 

                   ಕೆದಕುತ್ತ ಹೋದಂತೆ ಕುಪ್ಪೆ ಕುಪ್ಪೆ ಸಿಗತ್ತೆ ಈ ನಿಗೂಢ ಸೃಷ್ಠಿಯಲ್ಲಿ. ಪ್ರಕೃತಿ ತನ್ನ ಸಮತೋಲನ ಕಾಯ್ದುಕೊಳ್ಳುವುದು ಅದೆಷ್ಟು ಚಂದ. ಅದಕ್ಕೆ ಇರಬೇಕು ಜಗತ್ತು ಇಷ್ಟು ಸುಂದರವಾಗಿರುವುದು. ಪತಂಗದ ಅಶಾ ಗೋಪುರದ  ಸಮಾಧಿಯ ಮೇಲೆ ಹಕ್ಕಿಯ ಆನಂದದ ಮಹಲು ಕಳೆಗಟ್ಟಿ ನಳನಳಿಸುತ್ತಿರುವುದು. ಹಕ್ಕಿಗಳ ಆನಂದವನ್ನಷ್ಟೇ ಕಂಡು ಹುಬ್ಬೆರಿಸಿದರೆ ಪತಂಗದ ತ್ಯಾಗಕ್ಕೆ ಶಬಾಷಗಿರಿ ಕೊಡೋದು ಬೇಡ್ವಾ,, ?
ಎಲ್ಲವೂ ನಿನ್ನಲ್ಲೇ  ಇದೆ ಮನುಜ. ಒಳಿತು ನಿನ್ನಲ್ಲೇ  ಕೆಡುಕು ನಿನ್ನಲ್ಲೇ .

    -ಸತೀಶ ಉ ನಡಗಡ್ಡಿ

Saturday, 21 November 2015

ಒಂದು ಸಂಜೆ ತಂದೆ ಮಗನನ್ನು ......


              ಒಂದು ಸಂಜೆ ತಂದೆ ಮಗನನ್ನು ಊರ ಮುಂದೆ ಇರುವ ದೇವಾಲಯಕ್ಕೆ ಕರೆದುಕೊಂಡು ಹೋದ..ದೇವಾಲಯದ ಹೆಬ್ಬಾಗಿಲಲ್ಲಿ ಕೆತ್ತಿದ್ದ ಸಿಂಹದ ವಿಗ್ರಹಗಳನ್ನ ನೋಡಿ ಮಗ  ಕಿರುಚುತ್ತಾ ಹೇಳಿದ "ಅಪ್ಪಾ !!ಓಡು ಓಡು ಇಲ್ಲಿ ಸಿಂಹಗಳು ಇದ್ದಾವೆ ನಮ್ಮನ್ನು ತಿಂದುಬಿಡುತ್ತವೆ...." ಓಡುತ್ತಿದ್ದ ಮಗನನ್ನು ನಿಲ್ಲಿಸಿ ತಂದೆ ಹೇಳಿದ "ಭಯ ಬೇಡ ಮಗೂ ಅವು ಕಲ್ಲಿನ ಸಿಂಹಗಳು ಅವುಗಳಿಂದ ನಮಗೆ ಏನೂ ಆಗುವುದಿಲ್ಲ."...ಮಗ ಮರುಪ್ರಶ್ನೆ ಎಸೆದ "ಕಲ್ಲಿನ ಸಿಂಹಗಳಿಂದ ನಮಗೆ ಏನೂ ಆಗುವುದಿಲ್ಲ ಎನ್ನುವುದಾದರೆ ಕಲ್ಲಿನ ದೇವರಿಂದ ಏನಾದರೂ ಆಗುತ್ತದೆ ಎಂದು ಹೇಗೆ ನಿರೀಕ್ಷಿಸುತ್ತೀಯೆ ಅಪ್ಪಾ..!! ?"
ತಂದೆ ತನ್ನ ಡೈರಿಯಲ್ಲಿ ಈ ರೀತಿ ಬರೆಯುತ್ತಾನೆ.."'ಇದುವರೆಗೆ ನನ್ನ ಮಗನ ಪ್ರಶ್ನೆ ಗೆ ಉತ್ತರ ಕೊಡಲು ಸಾಧ್ಯವಾಗಿಲ್ಲ .ಅಂದಿನಿಂದ ಕಲ್ಲಿನ ವಿಗ್ರಹ ಬಿಟ್ಟು ಮನುಷ್ಯರಲ್ಲಿ ದೇವರನ್ನು ಹುಡುಕಲು ಪ್ರಾರಂಭಿಸಿದೆ..ದೇವರನ್ನು ಕಾಣಲಾಗಲಿಲ್ಲ ಆದರೆ ಮಾನವೀಯತೆಯನ್ನು ಕಂಡೆ"...
ಎಂಥಾ ಮಾತು   !!!!


* found via WhatsApp *