Thursday, 24 August 2017

Saturday, 3 June 2017

ದಲಿತ !!?

'ದಲಿತ ದಲಿತ' ಎಂದು
ನಮ್ಮನ್ನು ಮತ್ತಷ್ಟು 
ಮತಾಂಧರನ್ನಾಗಿ ಮಾಡಿ ;
ಇನ್ನೂ ಅದೆಷ್ಟು ದಿನ 
ನಮ್ಮನ್ನು ಅಶಕ್ತರನ್ನಾಗಿಸುವಿರಿ ?
ಹುರುಪು ತುಂಬಿ, 
ನಾವೂ ಮಾನವರೆಂಬ ಸ್ವಾಭಿಮಾನ
ಬಡಿದೆಬ್ಬಿಸಲು ಬರದೇ ನಿಮಗೆ ?

ನಮ್ಮಲ್ಲೂ ಶಕ್ತಿ ಇದೆ
ಛಲವಿದೆ, ಚಾರಿತ್ರ್ಯವಿದೆ,
ಅದಮ್ಯ ಅಭಿಮಾನದ ಕೆಚ್ಚು
ಎದೆಯೊಳಗೆ ಜ್ವಾಲಾಮುಖಿಯಾಗಿ
ಉರಿಯುತ್ತಿದೆ ಹಗಲಿರುಳು -
ಮತ್ತೆ ನಮ್ಮನ್ನು "ದಲಿತ"ರೆಂದು
ಹಿಯ್ಯಾಳಿಸಬೇಡಿ..

'ದಲಿತ' ಎಂದರೆ ಯಾರು ?
ದೌರ್ಜನ್ಯಕ್ಕೆ ಒಳಗಾದವನೆ ?
ದೌರ್ಜನ್ಯ ; ಯಾವ ದೌರ್ಜನ್ಯ ?
ಯಾರಿಂದ ದೌರ್ಜನ್ಯ ?

ಹೊಸದೊಂದು ವ್ಯಾಖ್ಯಾನ 
ನೀಡಬೇಕಿದೆ ನಮಗಿನ್ನು :
'ದಲಿತ' ಎಂಬುದಕೆ.

✍ ಸತೀಶ ಉ ನಡಗಡ್ಡಿ

Sunday, 14 May 2017

ಗರ್ಭದೊಳಗಿನ ಸ್ವರ್ಗ



ನನಗೊಂದೆ ಜನ್ಮ ಸಾಲದಮ್ಮ
ನಿನ್ನ ಋಣವ ನಾನು ತೀರಿಸಲು;
ಕನ್ನಡಮ್ಮನ ಪದಪುಂಜ ಸಾಲದಮ್ಮ
ನಿನ್ನ ಗುಣಗಾನ ಮಾಡಿ ಹಾಡಲು.

ಅನ್ನಂತ ನೋವುಗಳನುಂಡು
ಸಾಂತ್ವನದ ಸೋಲನುಂಡು ..
ಮೆಟ್ಟಿ ನಿಂತೆ ನೀ ನೋವಿನ ಗಂಟು !
ಈ ಜಗದಲ್ಲಿ ನೀನಿಲ್ಲದೇ ಏನುಂಟು ?

ನನಗೆ ಯಾವ ದೇವರಿಲ್ಲ,
ನೀನೇ ಇರುವಾಗ ಯಾಕೆ ಅವೆಲ್ಲ ?
ನವಮಾಸ ಹೊತ್ತು ತಿರುಗೆದೆಯಲ್ಲ,
ಆ ದೇವರಾರೂ ನಿನಗೆ ಸರಿಸಾಟಿಯಲ್ಲ.

ನಿನ್ನ ಗರ್ಭದ ಒಳಗಿನ ಸ್ವರ್ಗ
ಆಗರ್ಭ ಶ್ರೀಮಂತನಾದರೂ ಶೂನ್ಯ.
ನಿನ್ನ ಪ್ರೀತಿ-ಮಮತೆಯಲಿಲ್ಲ ವರ್ಗ
ಅಮ್ಮ, ಅವ್ವ, ತಾಯಿ - ನೀ ಅನನ್ಯ.
                                                 ✍ ಸತೀಶ ಉ ನಡಗಡ್ಡಿ.

Friday, 28 April 2017

ಮೋಹಿ ಕವಿ.



ಪಕ್ಕಪಕ್ಕದಲಿ ಕುಳಿತು
ಈ ಜಗವನ್ನೆ ಮರೆತು !
ಮಾತಿಗೆ ಮಾತು ಸಾಗಿತಲ್ಲ
ಕೈ ಬೆರಳುಗಳು ಹೆಣೆದವಲ್ಲ.

ಬಣ್ಣ ಬಳಿದ ಕಾಲುಬೆರಳು
ಏನೋ ಬಯಸಿದಂತಿವೆ,
ಮೂಗ ಮೇಲಿನ ರತ್ನದ ಹರಳು
ಅದನ್ನೇ ಪುನರುಚ್ಛರಿಸಿದೆ ಹೂವೆ.

ಸ್ಪರ್ಶಕ್ಕೆ ಹಾತೊರೆದ ಮನಕೆ
ಅಪ್ಪನ್ನು ನೀಡಿದ ಮೇನಕೆ ;
ಕಪ್ಪನ್ನು ಕೇಳಿ, ದೃಷ್ಠಿ ನೆಟ್ಟು
ಸುಮ್ಮನೆ ತೋರುವೆ ಸಿಟ್ಟು.

ಹೇಳದೆ ಕೇಳದೆ ಬಿಗಿದಪ್ಪಿ
"ಹೂಂ.."ಗುಟ್ಟುತಿರುವ ನಲ್ಲೆ :
ನಿನ್ನ ತೋಳಹಾರವ ನನಗೊಪ್ಪಿ-
ಸಿ ಮೂಗಿಗೆ ಮೂಗನುಜ್ಜುವೆಯಲ್ಲೆ.

ನಿನ್ನ ದೃಷ್ಟಿಗೆ ದೃಷ್ಟಿಗೊಟ್ಟು
ನಾ ತಿಳಿದ ಮನದಾಳ ಎಷ್ಟು ?
ಒತ್ತಿ ಬಂದಾಸೆಯ ತೋರದಿರಲೇ ,
ತುಟಿಯ ಮುದ್ರೆಯನೊತ್ತೆ ಬಿಡಲೇ ?

ಮತ್ತೆ "ಹೂಂ" ಗುಟ್ಟುವೆ
ನಾನೂ "ಹೂಂ" ಗುಟ್ಟುವೆ
"ಊಹುಂ" ಎಂದು ನೀ ಕುಳಿತೆ
ಮುಗಿಸಿ ಬಿಟ್ಟೆನು ನಾ ಕವಿತೆ.
   ✍ ಸತೀಶ ಉ ನಡಗಡ್ಡಿ

Tuesday, 7 March 2017

ಅವಳೆಂದರೆ..

ಅವಳೆಂದರೆ.....

ಬೆಳ್ಳಂಬೆಳಿಗ್ಗೆ ಎದ್ದು ಅಂಗಳದ ಕಸ ಗುಡಿಸಿ,
ಹೊಸ್ತಿಲಿಗೆ ನೀರು ಚುಮುಕಿಸಿ,
ತುಳಸಿ ಕಟ್ಟೆಗೆ ಪೂಜಿಸಿ,
ಪಾಕ ಕೋಣೆಯೊಳಗಿನ
ಸ್ಟೋವ್-ಪಾತ್ರೆ , ಅಕ್ಕಿ-ಬೇಳೆ,
ಸಕ್ಕರೆ-ಉಪ್ಪು-ಖಾರ-ಹುಳಿ-
ಗಳ ಗೆಳತಿಯಲ್ಲ.
ಅವಳೆಂದರೆ ,
ಹೊತ್ತು ಹೊತ್ತಿನ ತುತ್ತು ತುತ್ತು ಅನ್ನಕ್ಕೂ
ಅಮೃತವನ್ನೆ ಬೆರೆಸಿ, ಉಣಿಸಿ, ಬೆಳೆಸುವ
ಶಕ್ತಿ ದೇವತೆ.

ಅವಳೆಂದರೆ.....
ಹಿತ್ತಲ ಕಡೆಯ ಮೂರು
ಕಲ್ಲುಗಳ ಮೇಲೆ ನೀರು
ಹಂಡೆಯನಿಟ್ಟು , ಸೌದೆಯ ತುರುಕಿ,
ಸೀಮೆ ಎಣ್ಣೆ ಸುರಿದು , ಕಡ್ಡಿ ಗೀರಿ,
ಉರಿದು ಕೆಂಡವಾಗಿ, ಆರಿ ಬೂದಿಯಾಗಿ,
ಷರ್ಟು-ಪ್ಯಾಂಟು-ಟೈ-ಕರ್ಚೀಪು
ಗಳ ಕಸೂತಿ ಕೆಲಸದವಳಲ್ಲ.
ಅವಳೆಂದರೆ ,
ಅನು ದಿನದ  ಆನಂದ ಸಂತೋಷವೂ
ತನ್ನದೆಂದೆ ಭಾವಿಸಿ, ಲಟಿಕೆ ತೆಗೆವ
ತಾಯಿ-ಮಡದಿ-ಪುತ್ರಿ- ದೈವ.

ಅವಳೆಂದರೆ......
ಕತ್ತಲ ಕೋಣೆಯ ನಾಲ್ಕು ಗೋಡೆಗಳ ಮಧ್ಯ
ನಗ್ನಳಾಗಿ, ತುಟಿಗೆ ತುಟಿಯಿಕ್ಕಿ , ಬಾಹುಗಳೊಳಗೆ ಬಂಧಿಯಾಗಿ,
ಮಾಂಸ ಮುದ್ದೆಯ "ಮೈ-ದಾನ" ಮಾಡಿಕೊಟ್ಟು
ಹಾಸಿಗೆ-ದಿಂಬು-ಹೊದಿಕೆಗಳ ಜೊತೆಗೂಡಿ,
ತಾರಕಕ್ಕೇರಿಸಿ, ಸ್ವರ್ಗಕ್ಕೆ ಆಹ್ವಾನಿಸಿ,
ಕಾಮ ತೃಷೆ ನೀಗುವ ಬೊಂಬೆಯಲ್ಲ.
ಅವಳೆಂದರೆ ,
ಅವಳೇ,.... ಹೌದು ಅವಳೇ
ಸ್ತ್ರೀ  ಸ್ತ್ರೀ  ಸ್ತ್ರೀ  ಸ್ತ್ರೀ
ಪ್ರತೀ ಹುಟ್ಟಿನ ಮೂಲ
ಸೃಷ್ಠಿಯ ಮೂಲ - ಸೃಷ್ಠಿ ದೇವತೆ.
                        ✍ ಸತೀಶ ಉ ನಡಗಡ್ಡಿ

Thursday, 16 February 2017

ಸಿಹಿ ಜೇನು


ಬಾ ನೋಡೋಣ ಜೊತೆಯಾಗಿ
ಹೂ, ಬಣದ ಪಾತರಗಿ-
ತ್ತಿಯ: ಕಣ್ಣು ಚಂದ, ಬಣ್ಣ ಚಂದ ;
ಹೂ ಪಾತರಗಿತ್ತಿಗಳೊಳಗೆಲ್ಲ ನೀ ಚಂದ.

ನಿನ್ನ ಕೆನ್ನೆಗೆ ಮುತ್ತಿಟ್ಟ ಈ ತುಟಿ
ನಿತ್ಯವೂ ಆ ಜೇನನೆ ಮೀಟಿ-
ಮನ ಹೂ ಬಣದಲ್ಲೆಲ್ಲ ನಿನ್ನೆ ನಿಲ್ಲಿಸಿ,
ತಬ್ಬಿ ನಿಂದಿಹೆನು ಬಣವೆ ನೀನೆಂದು ಭಾವಿಸಿ.

ಕಣ್ಣು ಮುಚ್ಚಿ ಸವಿದ ಮೊದಲ
ಜೇನ ಸಿಹಿಯನುಭವಿಸಿದ ತೊದಲ-
ಕ್ಷಣ, ಮರೆಯಬೇಕೆ ಸಹಜವಾಗಿ !
ಇರಲಿ ಸಾಯುವರೆಗೆ ನೆನೆದಾಗಲೂ ಹೊಸದಾಗಿ.

ಕಣ್ಣೊನಗಿ ಬತ್ತಿ ಹೋದರೂನು
ಆ ನಿನ್ನ ಮುದ್ದು ಮುಖದ ಬಿಂಬವನು-
ಮರೆತೀತೆ !!? ಹೇಳು ಓ ಹುಡುಗಿ;
ಬರುವೆ ಅದೆಂದು ನನಗೆ ವಧುವಾಗಿ ?

   ✍ ಸತೀಶ ನಡಗಡ್ಡಿ