Friday, 6 April 2018

ಕಣ್ಣು


ಇದ್ದ ಕಣ್ಣು ನೋಡಲು, ನೋಡಿ ನೋಡಿ ಕೆಟ್ಟಿತು.
ನೋಡಿ ಕೆಟ್ಟ ಕಣ್ಣು ಸುಮ್ಮನಿರಲಾರದೆ
ಮಸ್ತಿಷ್ಕಕ್ಕೆ ದೂಡಿತು.
ಮಸ್ತಿಷ್ಕ ಕೆಟ್ಟು ಸುಮ್ಮನಿರಲಾರದೆ, 
ನಾಲಗೆಗೆ ಹೇಳಿತು
'ಬೈಯಿ, ಬಾಯಿಗೆ ಬಂದಂಗೆ ಬೈಯಿ' ಎಂದು.
ಬೈಯಿತು ಬಾಯಿ ಊರ ಹೊಲಗೇರಿಯೇ ತನ್ನೊಳಗಿರುವಂತೆ !!!
ಕೆಟ್ಟ ಮಸ್ತಿಷ್ಕ ಸುಮ್ಮನಿರದೆ 
ಕೈಗೆ ಹೇಳಿತು
'ಹೊಡಿ, ಹೊಡಿ ಕಲ್ಲು ಎತ್ತಿ ಹಾಕು, ಸಾಯಿಸು'
ನೂರು ಭಾವನೆಗಳೆಲ್ಲ ಸತ್ತವು !!
ಮಸ್ತಿಷ್ಕ ಕೆಟ್ಟು ಕಾಲಿಗೆ ಹೇಳೇ ಬಿಟ್ಟಿತು
'ಒದೆ, ತುಳಿ 'ಎಂದು,
ಎಲ್ಲವೂ ಮುಗಿಯಿತು. ಸುಮ್ಮನೆ ಕುಳಿತ ಮಸ್ತಿಷ್ಕ
ಹುಚ್ಚೆದ್ದು  ನಿಂತಿತು ಕಿವಿ ನಿಮಿರಿಸಿಕೊಂಡು
'ನನಗೆ ಯಾರು ಏನೇನೆಂದರು' ಎಂದು.
ಕಣ್ಣು ಇರಬಾರದಿತ್ತು ನನಗೆ
ಕಣ್ಣು ಬೇಕಿತ್ತು ಕುರುಡಗೆ.
                              ✍ ಸತೀಶ ಉ ನಡಗಡ್ಡಿ

ನನ್ನೂರ ಸಂಜೆ

ಇದು, ಇಂದು ನಾ ಕಂಡ ನನ್ನೂರಿನ ಸೂರ್ಯಾಸ್ತ. ನೀಲಿಯಾಗಸ, ಈಗಷ್ಟೇ ದಿಗಂತದಲ್ಲಿ ಮುಳುಗಿದ ಸೂರ್ಯ. ಹೊನ್ನ ಆಗಸ ಪ್ರಶಾಂತವಾಗಿದೆ. ಅಲ್ಲೊಂದು ಇಲ್ಲೊಂದು ತೆಂಗು, ಬೇವು, ಹುಣಸೆ, ನೀಲಗಿರಿ ಮರಗಳು. ಊರ ಜನರ ದಾಹ ತಣಿವ ಎತ್ತರದ ನೀರಿನ ಟ್ಯಾಂಕು. ಯುಗ ಡಿಜಿಟಲ್ ಆಗಿ, ಮಕ್ಕಳ ಕೈಗೂ ಮೊಬೈಲ್ ಸಿಕ್ಕಿ, 4G ಸ್ಪೀಡಿನಲ್ಲಿ ಬೆಳೆಯುತ್ತಿರುವ ಪೀಳಿಗೆಗೆ ನಿದರ್ಶನವಾಗಿ ನಿಂತ ನೆಟ್ವರ್ಕು ಕಂಬ. ಓಣಿಗೊಂದು ಸಾರ್ವಜನಿಕ ದೀಪದ ಕಂಬ; ಊರು ಬೆಳಗಿದೆ !! ಆದರೂ ಜನ, ಜನರ ಮನಸ್ಸು, ಬುದ್ಧಿಮತ್ತೆ ಇನ್ನೂ ಕತ್ತಲಲ್ಲೆ ಇದೆ: ಅದಕ್ಕೆ ಉದಾಹರಣೆ ಎಂದರೆ, ಹಬ್ಬ ಹರಿದಿನಗಳು ಬಂದಾಗ ಹಾರಾಡುವ ಅವರವರ ಮತದ ಝೇಂಡಾಗಳು.

ಊರ ಬಗ್ಗೆ ಕಾಳಜಿ ಇದೆ, ಆದರೆ ಜನರ ಬಗ್ಗೆ ಸಿಟ್ಟು ಇದೆ. ಮೇಲಿನ ಬಸ್ ಸ್ಟ್ಯಾಂಡಿನಿಂದ ಕೆಳಗಿನ ಹುಣಿಸೆಮರದ ತನಕ ಇರುವ ಮನೆಗಳಲ್ಲೆಲ್ಲ ಒಬ್ಬೊಬ್ಬರು ಶಿಕ್ಷಣ ಪಡೆದು, ಸರಕಾರಿ ನೌಕರಿಯಲ್ಲಿದ್ದರೂ ಅವರ ಬಡತನ ನೀಗಿಲ್ಲ. ಹೆಂಚಿನ ಮನೆಗಳು ಹಾಳುಬಿದ್ದು ಸಿಮೆಂಟಿನ ಸ್ಲ್ಯಾಪ್ ಬಿದ್ದ ಮನೆಗಳು ಮಿಂಚುತ್ತಿವೆ. ಅಲ್ಪ-ಸ್ವಲ್ಪ ಇತಿಹಾಸವನ್ನು ಹೇಳುತ್ತಿದ್ದ ಗುಡಿಗಳೂ, ಮಸೀದಿಗಳೂ ಶಿಕ್ಷಿತ ಮತಾಂಧರ ಕೈಗೆ ಸಿಕ್ಕು ಅಳಿದಿವೆ, ಬೆಳೆದಿವೆ. ಇದು ಬೆಳವಣಿಗೆಯೇ ? ನನಗೂ ಗೊತ್ತಿಲ್ಲಾ. ಮಹಾನ್ ನಾಯಕರುಗಳ ಬಲ ಗೈ ಬಂಟರೆ ಊರಲ್ಲಿದ್ದರೂ 3 ಮೈಲು ದೂರದಲ್ಲಿರುವ ಹೊಳೆಯಿಂದ ಕುಡಿಯಲು ನೀರು ತರಿಸಿಕೊಂಡಿದ್ದನ್ನು ಬಿಟ್ಟರೆ "ಭೂಮಿಗೆ ನೀರು ಬೇಕು" ಎಂದು ಬಹುಶಃ ಇವರಿಗೆ ಅನಿಸಿರಲಿಕ್ಕಿಲ್ಲ. ವರ್ಷದಿಂದ ವರ್ಷಕ್ಕೆ ಹೊಸ ಹೊಸ ಜನರು ಬರುತ್ತಿದ್ದುದು ಕಂಡು ಊರು ಬದಲಾಗುತ್ತಿದೆ, ಬದಲಾಗಿದೆ ಅಂದುಕೊಂಡರೆ ಮೂರ್ಖತನದ ಪರಮಾವಧಿ ಆದೀತು. ಬಂದವರೆಲ್ಲ ನೆಂಟರು; ಇದ್ದವರೆಲ್ಲ ಕುಂಟರು, ಸೊಂಟರು, ಕುರುಡರು. ಇಷ್ಟೇ ನನ್ನೂರು.

Thursday, 5 October 2017

ನಾವು ಆಚರಿಸುವ ಮೊಹರಂ



ನಮ್ಮ ಊರಿನಲ್ಲಿ ಪ್ರತೀ ವರ್ಷ ಆಚರಿಸುವ ಈ ಹಬ್ಬದ ಬಗ್ಗೆ ಒಂದಿಷ್ಟು ಹೇಳಲೇಬೇಕೆನಿಸಿತು.

ಆ ಊರಲ್ಲಿ ಈ ಹಬ್ಬದ ಆಚರಣೆಯ ಪದ್ಧತಿ 18ನೇ ಶತಮಾನದಿಂದಲೂ ಬೆಳೆದು ಬಂದಿದೆ. ಶಹಾಬಂದರ ಊರಿನ ಪಶ್ಚಿಮಕ್ಕೆ ಇರುವ ಚಿಕ್ಕಲದಿನ್ನಿ ಗ್ರಾಮದ ಗುಡದಪ್ಪನಾಯಕ ಎಂಬ ಪಾಳೇಗಾರನು  ಚಿಕ್ಕಲದಿನ್ನಿಯನ್ನೊಳಗೊಂಡು ಶಹಾಬಂದರ, ಇಸ್ಲಾಂಪೂರ, ಬೀರನಹೊಳಿ, ಜಾರಕಿಹೊಳಿ, ಅರಳಿಕಟ್ಟಿ, ಬಸ್ಸಾಪುರ, ಹಗೆದಾಳ, ರಂಗದಹೊಳಿ, ಗುತ್ತಿ, ಪನಗುತ್ತಿ, ರಾಜಕಟ್ಟಿ, ಯಲ್ಲಾಪುರ, ಗೆಜಪತಿ, ಗುಟಗುದ್ದಿ ಹಳ್ಳಿಗಳನ್ನು ಅಳುತ್ತಿದ್ದನು. ಹೀಗಿದ್ದಾಗ ಒಂದು ದಿನ ರಾತ್ರಿಯಲ್ಲಿ ಐವರು ಮುಸಲ್ಮಾನ ಸಂತರು ಒಟ್ಟು ಮೂರು ಊರುಗಳಲ್ಲಿ ಮೂರು ಮಸೀದಿಗಳನ್ನು ನಿರ್ಮಿಸಿದರು (ಮಸೀದಿ ನಿರ್ಮಾಣದ ಕುರಿತಾಗಿ ನಾನು ಚಿಕ್ಕಂದಿನಲ್ಲಿ ನನ್ನ ಅಜ್ಜನ ಬಾಯಿಂದ ಕೇಳಿದ್ದು, ಅದರಲ್ಲಿ ಎಷ್ಟು ನಿಜ ಎಷ್ಟು ಸುಳ್ಳು ಎಂಬುದು ನನಗೆ ತಿಳಿದಿಲ್ಲ; ಬಹುಶ ಈ ಊರಿನ ಒಂದೊಂದು ಸ್ಥಳಕ್ಕೂ ಒಂದೊಂದು ಕಥೆ ಹೇಳಿದ್ದ ಅಜ್ಜ ಈಗ ಇಲ್ಲ ಎನ್ನುವುದು ಎಷ್ಟು ದಿಟವೋ ಆ ಕಥೆಗಳ ಅಸ್ತಿತ್ವವೂ ಅಷ್ಟೇ ದಿಟವಿರಬಹುದು.)

ಮೊದಲೆರಡು ಮಸೀದಿಗಳನ್ನು ಬೇರೆಯಲ್ಲೋ ಯಾವುದೊ ಊರ ಹೆಸರನ್ನು ಅಜ್ಜನ ಬಾಯಿಂದ ಕೇಳಿದ ನೆನಪು, ಆದರೆ ಈಗ ಹೊಳೆಯುತ್ತಿಲ್ಲ. ಇರಲಿ. ಮೂರನೇ ಈ ಊರಿಗೆ ಬಂದು ಮಸೀದಿ ಕಟ್ಟಿ ಮುಗಿಸುವಷ್ಟರಲ್ಲಿ ಬೆಳಗಿನ 5ಗಂಟೆ ಆಗಿತ್ತಂತೆ. ಆ ಹೊತ್ತಿಗೆ ಹೆಂಗಸೊಬ್ಬಳ ಬಳೆಯ ಸದ್ದಾಗಿ ಆ ಐವರು ಮುಸಲ್ಮಾನ ಸಂತರು ಅಲ್ಲಿಯೇ ಮಾಯವಾದರಂತೆ. ಮಸೀದಿಯನ್ನು ಕಟ್ಟಲು ಬೇಕಾದ ಕಲ್ಲುಗಳು ಭೂಮಿಯಿಂದ ತಾನಾಗೇ ಎದ್ದು ಉರುಳಿಕೊಂಡು ಮಸೀದಿ ಕಟ್ಟಡದ ಜಾಗದಲ್ಲಿ ಬರುತ್ತಿದ್ದವಂತೆ( ಇತ್ತೀಚಿನ 6-7 ವರ್ಷಗಳಲ್ಲಿ ಕಟ್ಟಲಾದ ಉರ್ದು ಪ್ರಾಥಮಿಕ ಶಾಲೆಯ ಅವರಣವೆಲ್ಲ ಅರೆ ಮೇಲೆದ್ದ ಬಂಡೆಗಳಿಂದ ಮತ್ತು ತಗ್ಗುಗಳಿಂದ ಕೂಡಿತ್ತು). ಹೆಂಗಸಿನ ಬಳೆಯ ಸದ್ದಾದ ಕೂಡಲೇ ಸಂತರು ಮಾಯವಾದರು, ಭೂಮಿಯಿಂದ ಎದ್ದು ಬರುತ್ತಿದ್ದ ಕಲ್ಲುಗಳೂ ಅಲ್ಲಲ್ಲೇ ನಿಂತವಂತೆ, ದೊಡ್ಡ ದೊಡ್ಡ ಬಂಡೆಗಲ್ಲುಗಳು ಅರೆಹೂತಿದ್ದ ಅವಸ್ಥೆಯಲ್ಲಿ, ಉರುಳಿಕೊಂಡು ಬಂದು ನಿಂತ ಗುಂಡುಗಲ್ಲುಗಳನ್ನೂ ಕಂಡ ಮೇಲೆ ನನಗೆ ಇದು ನಿಜವೇ ಎನಿಸಿದೆ.

ಹೀಗೆ ನಿರ್ಮಾಣವಾದ ಮಸೀದಿಗೆ ಮುಸಲ್ಮಾನ ಪದ್ದತಿಯ ಪ್ರಕಾರವಾಗಿ ಪೂಜೆ, ಸಂಪ್ರದಾಯ ನಡೆಸುವ ಇಚ್ಛೆಯಿಂದ ಪಾಳೇಗಾರ ಗುಡದಪ್ಪನಾಯಕರು ಬಿಜಾಪುರದಿಂದ ಮುಲ್ಲಾಗಳನ್ನು ಕರೆದುಕೊಂಡು ಬಂದು, ಆ ಮಸೀದಿಯ ಸುತ್ತಲಿನ ಒಂದಷ್ಟು ಭೂಮಿಯನ್ನು ಆ ಮೌಲ್ವಿಗಳಿಗೆ ನೀಡಿ ಅವರ ಜೀವನೋಪಾಯಕ್ಕೆ ದಾರಿ ಮಾಡಿಕೊಟ್ಟರಂತೆ. ಅಲ್ಲಿಯೇ ಬಂದ ಸಾಬರು (ಮುಲ್ಲಾ) ಮನೆ ಕಟ್ಟಿಕೊಂಡು ಅಲ್ಲಿಯ ಜನರೊಂದಿಗೆ ಜೀವಿಸತೊಡಗಿದರು. ಹೀಗಾಗಿ ಬರುಬರುತ್ತಾ ಆ ಊರ ಜನರು 'ಸಾಬರುರು ಬಂದರು'.....'ಸಾಬರು ಬಂದರು'... 'ಸಾಬರು ಬಂದ ಊರು' ಎಂಬುದೇ ಮುಂದೆ "ಶಹಾಬಂದರ"ಎಂದು ಮಾರ್ಪಾಡಾಗಿರುವುದರಲ್ಲಿ ಸಂಶಯವಿಲ್ಲ ಎನಿಸುತ್ತದೆ. ಅಂದಿನಿಂದ ಇತ್ತೀಚಿನವರೆಗೆ ಶಹಾಬಂದರದಲ್ಲಿ ನಾನು ಹಿಂದೂ, ನೀನು ಮುಸ್ಲಿಮನೆಂಬ ಭೇದ-ಭಾವ ಮಾಡದೇ ಐಕ್ಯತೆಯಿಂದ ಆಚರಿಸುತ್ತ ಬಂದಿರುವರು.

ಐದು ದಿನದ ಈ ಹಬ್ಬ ಒಂದರಿಂದ ಮೂರನೇ ದಿನದವರೆಗೆ ಮಂದವಾಗಿರುತ್ತದೆ. ಪ್ರತಿದಿನ ಇಬ್ಬರಂತೆ ಹುಲಿಯಂತೆ ಮೈಗೆಲ್ಲ ಬಣ್ಣ ಬಳಿದುಕೊಂಡು ಹಸಿದ ಹುಲಿಯ ತೆರೆದ ಬಾಯಿಯ ಮುಖವಾಡ ಹಾಕಿರುತ್ತಾರೆ; ಮೊದಲ ಎರಡು ದಿನ ಅಕ್ಕ-ಪಕ್ಕದ ಊರಿಗೆ ಹೋಗಿ ಹುಲಿಗಳು ಕುಣಿದು ಬರುತ್ತವೆ ಮತ್ತು ಮೂರು ಹಾಗೂ ನಾಲ್ಕನೆಯ ದಿನ ಇಬ್ಬಿಬ್ಬರು ಇಡೀ ಊರಿನ ಮನೆ ಮನೆಯ ಮುಂದೆ ಹುಲಿ ವೇಷ ಹಾಕಿ ಕುಣಿಯುತ್ತಾರೆ, ನಾಲ್ಕನೆಯ ದಿನ ಸಾಯಂಕಾಲ ಹರಕೆ ಕಟ್ಟಿಕೊಂಡವರು ಕೊಡ್ಡ(ಮರದ ದಿಮ್ಮೆ)ಗಳನ್ನು ಎತ್ತುಗಳಿಗೆ ಭರ್ಜರಿ ಸಿಂಗಾರ ಮಾಡಿ ಬಸ್ ಸ್ಟ್ಯಾಂಡಿನಿಂದ ಮಸೀದಿಯವರೆಗೆ ಕುಣಿದಾಡುತ್ತ, ಪಟಾಕಿ ಸಿಡಿಸುತ್ತ ಎಳೆದು ತಂದು ಹಾಕುತ್ತಾರೆ, ಅದೇ ದಿನದ ರಾತ್ರಿಯಿಡೀ ಮಸೀದಿಯ ಮುಂದೆ ತೋಡಲಾದ ಹೊಂಡಕ್ಕೆ ಹಾಕಿ ಸುಡುತ್ತಾರೆ. ಐದನೆಯ ದಿನ ಮಾತ್ರ ನಾಲ್ಕು ಜನ ಹುಲಿಯ ವೇಷ ಹಾಕಿರುತ್ತಾರೆ: ನಮ್ಮ ಅಜ್ಜನ ಕಾಲದಲ್ಲಿ ರಾಕ್ಷಸ, ಕುದುರೆ, ಕರಡಿಯ ವೇಷವನ್ನೂ ಹಾಕುತ್ತಿದ್ದರಂತೆ; ಆ ವೇಷಗಳ ಮುಖವಾಡವನ್ನು ನಾನೂ ನೋಡಿದ್ದುಂಟು.  ಹುಲಿ ವೇಷದ ಕುಣಿತಕ್ಕೆ ಬಾರಿಸುವ ತಾಶೆ(ತಮಟೆ) ದಿದ್ದನಂಗ್ ದಿದ್ದನಂಗ್ ದಿದ್ದನಂಗ್ ದಿದ್ದನಂಗ್ ಮತ್ತು ರಪ್ಪರ್ರ್ರ್ರ್ ರಪ್ಪರ್ರ್ರ್ ರಪ್ಪರ್ರ್ರ್ರ ರಪ್ಪರ್ರ್ರ್ರ್, ಡೊಳ್ಳಿನ ದುಂಬ ದುಂಬ್ ದುಂಬಕ್ ದುಂಬ ದುಂಬ್ ದುಂಬಕ್, ದುಂಬ ದುಂಬ್ ದುಂಬಕ್ ದುಂಬ ದುಂಬ್ ದುಂಬಕ್ ಬಡಿತದ ಜೊತೆ ಶಹನಾಯಿಯ ಪಿಪಿ ಪಿಪಿ ಪಿಪಿಪಿ.... ಪಿಪಿ ಪಿಪಿ ಪಿಪಿಪಿ.. ಪಿಪಿ ಪಿಪಿ ಪಿಪಿಪಿಪಿ ಪಿಪಿ ಮತ್ತು ಪಿಯಿಯಿ ಪಿಯಿಯಿ ಪಿಯಿಯಿ ವಾದನದ ಜೊತೆಗೆ ಹುಲಿ ವೇಷಧರಿಗಳ ಸೊಂಟಕ್ಕೆ ಕಟ್ಟಿದ ಗೆಜ್ಜೆ ಸದ್ದು ಅಲ್ಲಿಯ ಯುವಕರ ಮೈಯಲ್ಲಿ ಹುಲಿಯನ್ನು ಸೇರಿಸಿ ಹುಚ್ಚೆದ್ದು ಕುಣಿಯುವಂತೆ ಮಾಡುತ್ತವೆ. ಆದರೆ ಕೆಲ ದಿನಗಳ ಹಿಂದೆ, ತುಂಬಾ ಓದಿಕೊಂಡವರಂತೆ ! ಏನೇನೋ ಸುದ್ದಿ ಎಬ್ಬಿಸಿದ್ದಾರೆಂಬ ಮಾತು ಕಿವಿಗೆ ಬಿತ್ತು !!!! ಹುಬ್ಬುಗಳು ಮೇಲೇರಿ, ಕಿವಿ ನಿಮಿರಿದವು!!!!!!!!!
                      ✍ ಸತೀಶ ಉ ನಡಗಡ್ಡಿ

#Huliraaya #ಹುಲಿರಾಯ #ಹುಲಿ_ಹುಲಿ_ಹೆಬ್ಬುಲಿ

Saturday, 26 August 2017

ಮನಸು ಅಂತೈತಿ


ಹಾಡಬೇಕ ಅಂತೈತಿ ಮನಸು - ಪದ
ಹಾಡಬೇಕ ಅಂತೈತಿ ll ಪ ll

ನಿಂತ ಜನಾ ನಿಂತಲ್ಲೇ,
ಕುಂತ ಜನಾ ಕುಂತಲ್ಲೆ
ಮೈ ಮರತ ಕೇಳು ಹಾಂಗ ll ಪ ll

ಕೈ ಬೆರಳಷ್ಟೂ ಹಾತೊರಿತಾವ
ಕೊಳಲಿನ ಮ್ಯಾಲ ಕುಣದಾಡಾಕ
ತುಟಿಗಿ ತುಟಿಗೂಡಿ ಹುಡುಕತೈತಿ
ಕೊಳಲನೂದಾಕ ಉಸರ ನಿಲ್ಲೂ ತನಕ
ಊದಬೇಕ ಅಂತೈತಿ ಮನಸು-ಕೊಳಲು

ತಕಿಟ ಧೀಮ್ ಧೀಮ್ ಧೀಮ್
ತರಕಿಟ ಧೋಮ್ ಧೋಮ್ ಧೋಮ್
ಧೋಮ್ ತಕಿಟ ಧೀಮ್ ತಕಿಟ 
ತರಕಿಟ ತರಕಿಟ ತಕ ಧೋಮ್
ಬಾರಸಬೇಕ ಅಂತಾವ ಅಂಗೈ - ತಬಲಾ

ಒಮ್ಮಿ ಹಾಡಬೇಕ ಅಂತೈತಿ
ಇನ್ನೊಮ್ಮಿ ಊದಬೇಕ ಅಂತೈತಿ
ಮತ್ತೊಮ್ಮಿ ಬಾರಸಬೇಕ ಅಂತೈತಿ
ಒಮ್ಮೊಮ್ಮಿ ಉಸರs ನಿಲ್ಲಸಬೇಕ 
ಅಂತೈತಿ
ಇದ ಎಂಥಾ ಮನಸ ಐತಿ !!!

✍ ಸತೀಶ ಉ ನಡಗಡ್ಡಿ

Thursday, 24 August 2017

ಮೇಲಧಿಕಾರಿಗಳ ಗಮನಕ್ಕೆ

         
 ಸುಮ್ಮನೆ ಕೂರಲಾಗದೆ ತಲೆ- ಕೆರೆದುಕೊಂಡು ಬರೆಯಬೇಕೆಂದೆನಿಸಿತು ನಿಮಗೊಂದು ಪತ್ರ. 
 'ನಮ್ಮೂರು ಕೇರಿಯ ಗಲ್ಲಿ ಗಲ್ಲಿಯೊಳಗಿನ ರಸ್ತೆಗಳು ಕೆಟ್ಟುಹೋಗಿವೆ.
 ಅಲ್ಲ,... ರಸ್ತೆಗಳನ್ನು ಕೆಡಿಸಿ ಬಿಟ್ಟಿದ್ದಾರೆ; ನೀರಾವರಿ ಸರಬರಾಜು ಇಲಾಖೆಯವರು- ಮನೆ ಮನೆಗೂ ನಲ್ಲಿ ಸೌಕರ್ಯ ಒದಗಿಸುವಾಗ. 
 ಅವರೇ ರಸ್ತೆಯನ್ನು ಕೆಡಿಸಿದರೆಂದು ನಾ ಹೇಗೆ ಅರೋಪಿಸಲಿ..? ಇಲ್ಲ. 
ನಿಜವಾಗಿ ರಸ್ತೆ ಕೆಡಿಸಿದವರು, ಕೇಬಲ್ ಕನೆಕ್ಷನ್ ಕೊಡುವ ಕಂಪನಿಯವರು ಮನೆ ಮನೆಗೂ ಗ್ಯಾಸ್ ಕನೆಕ್ಷನ್ ಕಾಂಟ್ರಾಕ್ಟ್ ತೆಗೆದುಕೊಂಡವರು ಎಂದೆನಿಸಿದರೂ, 
ಕೊನೆಗೆ ತಪ್ಪಿತಸ್ತರೆಂದು ಕಂಡಿದ್ದು ರಸ್ತೆ ದುರಸ್ತಿ ಕಾಮಗಾರಿಗೆ ಸಹಿ ಹಾಕುವ ಅಧಿಕಾರಿಗಳೇ. 

 ಆಶ್ಚರ್ಯಪಡಬೇಡಿ 
ನಾನು ಮಾಡುವ ಆರೋಪಕ್ಕೆ ನನ್ನದೇ ಸಮಜಾಯಿಷಿ ಕೇಳಿ ನೋಡಿ. 
 ನೀರು ಸರಬರಾಜು ಮಾಡುವವರಿಗೆ- 
"ಕೆದರಿದ ರಸ್ತೆಗೆ ಡಾಂಬರು ಹಾಕಿ" ಎಂದೇ, 
ಅದಕ್ಕೆ "ಪೈಪ್ ಲೈನ್ ಎಳೆಯಲು ಮಾತ್ರ ಹಣ ಬಂದಿದೆ" ಎಂಬುತ್ತರ ಬಂತು. 
"ಹೌದು ಬಿಡಪ್ಪಾ, ಎಳೆಯಲು ಮಾತ್ರ ಬಂದ ಹಣದಲ್ಲಿ, ನೀನೊಂದಿಷ್ಟು ಎಳೆದುಕೊಂಡು ಉಳಿದಿದ್ದರಲ್ಲಿ ಕೆಲಸ ಚನ್ನಾಗಿ ಮುಗಿಸಿದ್ದೀಯ" ಎಂದುಕೊಂಡೆ. 

 ಹುಚ್ಚ ನಾನು ಸುಮ್ಮನೆ ಕೂರಲಿಲ್ಲ, ಕೇಬಲ್ ಗ್ಯಾಸ್ ಕನೆಕ್ಷನ್ ಕಂಪನಿಗೆ- 
"ಕೆದರಿದ ರಸ್ತೆಗೆ ಡಾಂಬರು ಹಾಕಿ" ಎಂದೇ, 
ಅದಕ್ಕವರು, "ರಸ್ತೆ ದುರಸ್ತಿ ಮಾಡುವವರು ಬಂದಾಗ ಸರಿಯಾಗತ್ತೆ ಬಿಡಿ" ಎಂದರು. 

 ಹೀಗೆ ಒಬ್ಬರ ಮೇಲೊಬ್ಬರು ಹಾಕಿ, ಕೈ ತೊಳೆದುಕೊಳ್ಳುವುದು ಬೇಡ ಮೇಲಧಿಕಾರಿಗಳೇ, 
ಒಂದಾದ ಮೇಲೆ ಒಂದು ಯೋಜನೆಗೆ ಅನುಮೋದನೆ ಕೊಡುವ ಬದಲು ಪೂರ್ವ-ಯೋಜನೆ ರೂಪಿಸಿ, ಏಕಕಾಲಕ್ಕೆ ಯೋಜನೆ- 
ಗಳನ್ನು ಜಾರಿಗೊಳಿಸಿದರೆ ರಸ್ತೆಯಾದ ಮೇಲೆ 
ನೀರು ಸರಬರಾಜಿಗೆ, ನೀರು ಸರಬರಾಜಿನ ಕೆಲಸ ಮುಗಿದ ಮೇಲೆ 
ಕಂಟ್ರಾಕ್ಟರ್ ಗುತ್ತಿಗೆ ನೀಡಿ, 
ಈ "ಅಡೋಣು ಬಾ ಕೆಡಿಸೋಣು ಬಾ" ಮಾಡುತ್ತ ಕೂರುವುದು ಮಕ್ಕಳಾಟ. 
         
                                            ✍ ಸತೀಶ ಉ ನಡಗಡ್ಡಿ