Monday, 3 June 2019
Monday, 27 May 2019
ಒಂದು ಹೂವಿನ ಕಥೆಯು
ಅದೇನು ಹೊಳಪು ನಿನ್ನ ಕಣ್ಣಾಲಿಯಲಿ ?
ಚಂದಿರನ ಊರಿಂದ ಚಂದಿರನನ್ನೆ ತಂದಂತೆ !
ನೂರು ನಕ್ಷತ್ರಗಳನ್ನೆಲ್ಲ ಒಗ್ಗೂಡಿಸಿಟ್ಟಂತೆ ;
ನುಣು ನುಣುಪು ನೋಟ ನೋಡಿ ಈ ಮನಸು
ತ್ಸುನಾಮಿಯಲಿ ಸಿಲುಕಿದಂತಾಗಿದೆ ಭಾವದಗಣಿತ ಕನಸು.
ಹಾಲಗೆನ್ನೆ , ಹವಳದುಟಿಯ ನಿನ್ನ ನಗು
ರಂಭೆ, ಊರ್ವಶಿ,ತಿಲೋತ್ತಮೆಯರನ್ನೂ ಬದಿಗಿಟ್ಟಂತೆ ;
ಬಿಗುಮಾನವೆಲ್ಲ ಬದಿಗಿಟ್ಟು ನಗು ಚೆಲ್ಲು ಮತ್ತೊಮ್ಮೆ ,
ದಿನಗಳೆದಂತೆಲ್ಲ ಬೆಳೆ ಬೆಳೆದು ನಿಂತಂತೆ
ಇದಾವ ನಗುವೂ ನಿನ್ನ ಮೊಗದಲ್ಲಿ ಸುಳಿಯದು ಮುಂದೊಮ್ಮೆ.
ಅರಳದ ಹೂ ಮೊಗ್ಗು ನೀನಿನ್ನೂ ಮಡಿಲಲಿ
ಎಳೆ ಬಿಸಿಲಿನ ಕಿರಣಕೆ ವಜ್ರಖಚಿತ ಮೇಲೆ ;
ಬಿಸಿಲೇರಿದಂತೆ ವಜ್ರ ಮಂಜಿನ ಹನಿಯೂ ಕರಗಿ
ಬಿಸಿಲ ಝಳಕ್ಕೊ , ಯಾವುದಕ್ಕೊ ಹೋಗುವುದು ಮರೆಯಾಗಿ -
ಮೊಗದಲ್ಲಿನ ನಗು, ಕಣ್ಣ ಕಾಂತಿ, ಮನದ ಆ ಮುಗ್ಧತೆ.
ಮೂರ್ನಾಲ್ಕು ದಳಗಳರಳಿದ ಹೂವು ನೀನೀಗ
ಹೋಗ ಬರುವವರೆಲ್ಲರ ನೋಟ ನಿನ್ನತ್ತ ಈಗ ;
'ಏನು ಅಂದ-ಚಂದ, ನಿನಗೆ ನೀನೇ ಸರಿಸಾಟಿ' ಎಂದು :
ನೂರಾರು ದುಂಬಿಗಳ ಚುಂಬಣ, ಎದೆಯಾಳಕೆದೆ- ಆಳಕೆ
ಬಿಸಿಲೇರಿತ್ತು ನೆತ್ತಿಯ ಮೇಲೆ , ಎದೆಯಲಿ ಭಾವ ಬುಗ್ಗೆ.
ಹೊರಳುವುದು ಹೊತ್ತು ಮೂಡನದಿ ಪಡುವಣಕೆ
ನಳನಳಿಸುವ ಹೂವ ಕಿತ್ತು, ಅರ್ಪಿಸುವುದ ನೋಡುವುದಕೆ ;
ಮಹೋತ್ತರ ಘಟ್ಟ - ಜೀವನದಲ್ಲಿ ನೀಡಿ ಒಂದು ಪಟ್ಟ :
ಬಿಸಿಲು-ನೆರಳು, ಸಿಹಿ-ಕಹಿ, ಅಗಲಿಕೆ-ಪರಾಧೀನ, ಸ್ವಂತಿಕೆ
ಕೆಳಗಿನಿಂದ ಮೇಲೇರಿದ ಚಕ್ರ ಕೆಳಗಿಳಿಯಲನಿಯಾಗುತ್ತಿದೆ.
ಯಾವ ತೋಟದ ಹೂವು ಯಾವ ದೈವದ ಮುಡಿಗೇರಿತು ?
ಹೂವಿಗೇನು ಗೊತ್ತು , ಸೃಷ್ಠಿ ಚಕ್ರದಲ್ಲಿ ಬೆಳೆದು ಬಂದಿತ್ತಷ್ಟೆ .
ಅದೇನು ಆಶ್ಚರ್ಯ ಪ್ರತಿಯೊಂದರ ಲಯಬದ್ಧತೆಯಲಿ ?
✍ ಸತೀಶ ಉ ನಡಗಡ್ಡಿ
Monday, 21 January 2019
ಪೂಜ್ಯರಿಗೆ ನನ್ನ ಅಕ್ಷರ ನಮನ
ಸಾವು ಯಾರನ್ನೂ ಬಿಟ್ಟಿಲ್ಲ
ಆದರೆ, ಈ ಸಾವು ನ್ಯಾಯವಲ್ಲ.
ದೇವರನ್ನೇ ಬಿಡದ ಸಾವು
.....ಇನ್ನು ದಾನವರು ನಾವು....?
ಆದರೂ, ಈ ಸಾವು ನ್ಯಾಯವಲ್ಲ.
ಪುಣ್ಯ ಭರತ ಭೂಮಿ ಕಂಡ
ಪೂಜ್ಯ ಶ್ರೀ ಸಿದ್ದಗಂಗಾ ಈಶ-ಬ್ರಾಹ್ಮಾಂಡ,
ತ್ರಿವಿಧ ದಾಸೋಹಿ ನಡೆದೆಯಾ
ತ್ರಿಶೂಲಾಯುಧನ ಅಂಗಳಕೆ ದೇವಾ;
ಶ್ರೀ ಶಿವಕುಮಾರ ಸ್ವಾಮೀ, ನೀ ಸದಾ ಕುಮಾರ.
ಅನ್ನದ ಅಗಳು-
ನುಂಗುತ್ತಿದೆ ಉಗುಳು,
ಕಣ್ಣು ಬಿಟ್ಟೊಮ್ಮೆ ಏಳು
ಅಳುವ ಮಕ್ಕಳಿಗೆ ಸಾಂತ್ವನ ಹೇಳು
"ನಿಮ್ಮಲ್ಲಿರುವೆ; ನಗುತ, ನಲಿದಾಡುತ' ಎಂದು.
ತೆರೆದ ಹೊತ್ತಗೆಯು ಕೂತಿದೆ
ತ್ರಿಲೋಕದಜ್ಞಾನ ನೀಗಲಾರದೆ
ಲೇಖನಿಯೂ ಅಳುತಿದೆ...
✍ ಸೂರ್ಯ
Wednesday, 9 January 2019
Monday, 12 November 2018
Wednesday, 7 November 2018
Saturday, 7 July 2018
-:ಮದುವೆಯಾದ ಮೂರೇ ತಿಂಗಳಲ್ಲಿ ಮುರಿದು ಬಿದ್ದ ಮೂರು ಗಂಟಿನ ನಂಟು:-
ಹುಬ್ಬಳ್ಳಿಗೆ ಬರ್ತಾ ಇದ್ದೆ ಟ್ರೈನಿನಲ್ಲಿ, ನಿಗದಿತ ಸಮಯಕ್ಕಿಂತ 30 ನಿಮಿಷ ಟ್ರೈನ್ ಲೇಟ್ ಆಗಿದ್ದಕ್ಕೊ ಏನೋ ಒಂದು ಹೊಸ ವಿಷಯ ಸಿಕ್ಕಿತು ಬರೆಯಲು.
ಮೂರು ಜನ ಓಡೋಡಿ ಬಂದು ಟ್ರೈನ್ ಹತ್ತಿದರು, ನಾಲ್ಕನೆಯವನು ಸ್ವಲ್ಪ ಲೇಟ್ ಆಗಿ ಓಡಿ ಬಂದು ಹತ್ತಿದ. ಕೈಯಲ್ಲಿ ಟಿಕೆಟ್ ಇದ್ದುದನ್ನು ಕಂಡು , 'ಟಿಕೆಟ್ ತರಲು ಹೋಗಿ ಲೇಟ್ ಆಯಿತು; ಅದಕ್ಕೆ ಓಡಿ ಬರ್ತಿದೆ ಹುಲಿ' ಎಂದು ಮನಗಂಡು ನನ್ನ ಪಾಡಿಗೆ ನಾನು ನೀರು ಕುಡಿದು ಕುಳಿತಿದ್ದೆ. ಟ್ರೈನ್ ಹೊರಟಿತು. ನಾಲ್ವರೂ ಮಾತನಾಡಲು ಶುರುವಿಟ್ಟರು. ಎಂದಿನಂತೆ ಪ್ರಯಾಣದಲ್ಲಿರುವಾಗ ಹುಡುಕುವ ಹೊಸ ಜಗತ್ತಿನ ಹುಡುಕಾಟದಲ್ಲಿ ನಾನಿದ್ದೆ. ಹಾಗಾಗಿ ಇವರ ಮಾತಿನ ಕಡೆ ಅಷ್ಟೊಂದು ಗಮನ ಕೊಟ್ಟಿರಲಿಲ್ಲ.
"ನೀ ಏನೇ ಹೇಳು ರಾಘಣ್ಣಾ ..... ಮನೇಲಿ ಎಲ್ಲಾ ಹೊಂದಿಕೊಂಡು ಹೋದರೆನೇ ಜೀವನ. ಇಲ್ಲಾಂದ್ರೆ ಭಾಳ ಕಠಿಣ." ಎಂದು ಬೇಸರ ವ್ಯಕ್ತಪಡಿಸಿದ.
"ಒಬ್ಬೊಬ್ಬರ ಜೀವನ ಒಂದೊಂದು ತರ..... " ಎಂದೊಬ್ಬ ನಿಟ್ಟುಸಿರು ಬಿಟ್ಟ.
ನನ್ನ ತಪಸ್ಸು ಭಂಗವಾದಂತೆ ಭಾಸವಾಗಿ, ಅವರ ಮಾತಿನತ್ತ ಗಮನ ಕೊಟ್ಟೆ.
" ಮದ್ವೆ ಮಾಡಿ ಇಬ್ಬರ ಜೀವ್ನಾ ಹಾಳು ಮಾಡಿದ್ರು ..."
"ಖರೆ...ಖರೆ"
"ಹಿಂಗೆಲ್ಲಾ ಆದೀತಂತ ಯಾರಿಗೆನ್ ಕನಸ ಬೀಳತ್ತೆನ್ ಲಾ... ನೀನೊಳ್ಳೆ..? "
ಏನಿರಬಹುದು ಕಥೆ ಎಂದು ಆಲಿಸುತ್ತಿದ್ದೆ. ಅಷ್ಟರಲ್ಲಿ ಒಬ್ಬ ...
"ಏನ್ ಅಂದ್ರೂ ..... ಆ ಹುಡ್ಗೀ ಮನೆಯವ್ರು ಹಾಗೆಲ್ಲ ಮಾಡಬಾರ್ದಿತ್ಲಾ."
"ಮಕ್ಕಳನ್ನ ಮುದ್ದ ಮಾಡಿ ಬೆಳಿಸಿರ್ತಾರ್ ಅಂದಮ್ಯಾಲ ಅಷ್ಟ ಇರೋದsss."
"ಮುದ್ದು ಮಾಡೋದು ತಪ್ಪಲ್ಲ ಕಣಣ್ಣಾ...ಮಾಡುವ ಆ ಮುದ್ದುತನ ಮಕ್ಕಳ್ನ ತಮ್ಮ್ ಜೀವಂದಾಗ ಅಸಮರ್ಥನ್ ಮಾಡಬಾರ್ದು.... ನನ್ನ ಮಗಳು ಭಾಳ ಸೂಕ್ಷ್ಮ ಅಂತ ಬೆಳಿಸಿರ್ತಾರ್ ಮುಂದ ಬಂದ್ಮ್ಯಾಲ್ ಸ್ವಲ್ಪ ಅಸ್ತವ್ಯಸ್ಥ ಅಯ್ತಂತಂದ್ರೆ ಬಿಟ್ಟ ನಿಲ್ಲೋ ಹಂತಕ್ಕ ಬರ್ತಾವ.."
"ಈ ರಾಮನು ಜಾಣ ಆಗ್ಲಿಲ್ಲ.. ಹೆಂಗಾರಾಗ್ಲಿ ಅಂತಂದು ಬ್ಯಾರೆ ಮನಿ ಮಾಡ್ಕಂಡಿದ್ರೆ ಚಂದಿತ್ತು ಅನ್ಸತಾಯಿತಿ. "
"ಹೆಂಗಂತಿಯಾ ಮಂಜಣ್ಣ ಹಂಗೆ... ಹುಟ್ದಾಗಿಂತ ಅಮ್ಮಪ್ಪನ್ ಜತಿಗಿದ್ದು, ಹೆಂಡ್ತಿ ಬಂತಕ್ಷಣ ಅವರನ್ನ ಬಿಟ್ಟ, ಹುಟ್ದೂರ್ ಬಿಟ್ಟು ಬಂದಾನಾ ಆ ಸಾಮಿ ?"
"ಇದೊಳ್ಳೆ ಕಾತ್ಯಾಯ್ತು ಕಣಪ್ಪಾ.. ... ಮತ್ತ ಆ ಹೆಣ್ ಮಗಿ ಏನ್ ಅವ್ರಪ್ಪಮ್ಮನ್ ಕರ್ಕೊಂಡ್ ಬಂದೈತಾ.....? ಬಿಟ್ಟ ಬಂದಿಲ್ವೆ...?"
"ಬಿಟ್ಬಂದಾರೆ ಅಣ್ಣಾ, ಸರಿ.. ಅದ್ ಅವ್ನಿಗೂ ಗೊತ್ತು, ಅವ್ನೆನ್ ಸಣ್ಣ ಮಗು ಅಲ್ಲಾ. Ph.D ಮಾಡಿ ಪ್ರೊಫೆಸ್ಸಾರ್ ಆಗಿ ಕೆಲಸ ಮಾಡ್ತಿದಾನಂದ್ರೆ ಇದೆಲ್ಲ ತಿಳಿಯಲ್ವೆ ಅವ್ನಿಗೆ...? ಆದರೆ ಸ್ವಲ್ಪ ದಿನ ಅಪ್ಪಮ್ಮನ್ ಜತಿಗೆ ಹೆಂಡತಿ ಇರಲಿ, ಅಪ್ಪಮ್ಮನೂ ಸ್ವಲ್ಪ ಹಾಯಾಗಿರ್ಲಿ ಅಂತ ಬಯ್ಸಲ್ವೆ ಅವನುವೆ..? ಆಮೇಲೆ ಗಂಡನ್ ಜತಿಗೆ ಹೆಂಡತಿ ಇದ್ದದ್ದೇ .... ಮನೆ ಒಳಿಗೆ ಅಪ್ಪಮ್ಮರೆ , ಆಮ್ಯಾಲೆ ಗಂಡನ ಜತಿ ಹೆಂಡ್ತಿ ಇರಬಕು ಅಂತ ಕಳಸಲ್ವೇ ? "
"ಪಟ್ನದಲ್ ಓದಿದ್ ಹುಡ್ಗಿ ಕಣ್ಲಾ ಅದು. ಅದ್ಕೆಯ ಆ ಮನೆಲ್ ಇರೋಕೆ ಒಪ್ದೆ ಅಮ್ಮನ ಮನೆಗೆ ಹೋಂಟಾಗಿತ್ತಂತೆ... ... "
"ಪಟ್ನದ್ ಒಳಿಗ ಇದ್ ಮಾತ್ರಕ್ಕೆ. ಗಂಡನ ಮನೇಲಿ, ಅವ್ರಪ್ಪಮ್ಮನ್ ಜತಿಗೆ ಇರ್ಬಾರ್ದ್ ಅಂತ ಐತಾ..?"
"ಅಂಗಲ್ಲಾ ಕಣಸಾಮಿ ನಾನ್ ಏಳಿದ್ದು.. ಪಟ್ನದ್ ಒಳಿಕೆ ಬೆಳೆದು ಹೆಣ್ಣು ಆ ಊರಿಗಿನ್ ಒಲ್ಲೆ ಅಂದಿರ್ಬೆಕು..."
"ಇರಪ್ಪಾ ಅಂಗಾರೆ. ಅಲ್ಲ ಕಣಾ.. ನಾಲ್ಕ್ ದಿಸಾ ಆ ಊರ್ನಾಗೆ ಇರೋ ಅಷ್ಟು ಗಟ್ಟಿ ಇಲ್ದ ಹೆಣ್ಣು ಇನ್ ಏನ್ಲಾ ಜೀವನ್ ಮಾಡ್ತಾಳೆ ಸಾಯೋಗಂಟಾ..?
"ನೋಡು ದ್ಯಾವಣ್ಣ.. ನಮ್ ಮನಸಿ ಜೀವನಕ್ಕಿಂತ್ಲು ಅವರಿವರು ಆಡೋ ಮಾತಿನ ಮ್ಯಾಲೆ ನಮ್ಮ ಮುಂದಿನ ಕನಸ್ಗಳು ಬೆಳಿತಾ ಹೋಗ್ತಾವೆ.... ಆ ಹುಡ್ಗೀ ಓರ್ಗಿತ್ತಿಯರು, ಮನೆ ಸುತ್ತ್ಲಿನ ಚಿಕ್ಕ-ದೊಡಮ್ಮಂದ್ರು ಆಡೋ ಮಾತಗಳೆಲ್ಲ ಈ ಹುಡ್ಗೀ ಮನಸಿನ ಮ್ಯಾಲೆ ಪ್ರಭಾವ ಇರ್ತವೆ.... "
"ಹೂಂ. ಅದು ನಿಜಾ ಅನ್ನು ರಾಘಣ್ಣ... ನಿನ್ ಯಜ್ಮಾನ್ರಿಗೆ ಏನ್ ಕಡಿಮೆ, ಪ್ರೊಫೆಸರ್... ಅಷ್ಟು ಸಂಬಳ ಬರತ್ತಿಷ್ಟು ಸಂಬಳ ಬರತ್ತ್ ಅಂದು ಅಂದು ಹುಡಗಿನ್ ಗೋಪ್ರಾಕ್ಕ್ ಏರಿಸಿರ್ತಾರೆ... ಆ ಗೋಪ್ರಾ ಕನ್ಸು ಅಂತ ಅನ್ನಿಸೋಕ್ ಶುರು ಆಗಿ, ಹಿಂಗ್ ಆಗ್ತಾವೆ."
"ತಗೊಳ್ಳಪ್ಪಾ... ಅವರಿವರು ಹೊಗಳಿ ಅಟ್ಟಕ್ಕ ಕೂರಸ್ತಾರ್ ಅಂದ್ರೆ ಜೀವನ ಮಾಡೋರಿಗೆ ತಿಳಿಯಾಕಿಲ್ವೆ....ಅಂದೋರ್ ಬಂದು ಮಾಡಿಯಾರೆಯಾ..?."
"ಕೆಟ್ಟ ಮ್ಯಾಲೆ ಎಲ್ಲಾ ಕಾರಣಗಳೂವೇ ಎದ್ದು ಕಾಂತಾವೆ ಬಿಡ್ರಣ್ಣ ಅತ್ಲಾಗೆ ಓಗ್ಲಿ.. ಹುಡ್ಗನ್ ಜೀವನ ಏನ್ ತಿರಗಾ ಬರತ್ತಾ.. ಮಾತಾಡಿ ಏನುಪಯೋಗ..?"
"ನನ್ನ ಮಾತ್ ಒಸಿ ಕೇಳಣ್ಣೋ, ನಿನ್ ಆಮೇಲೆ ಉಸ್ರುವಂತೆ...... "
" ಹೂಂ... ಹೇಳಪ್ಪಾ..."
"ಅಮ್ಮನ ಮನೇಲಿ ಬಂಗಾರದ್ ಲೋಟ್ದಾಗೆ ಊಟಾ ಮಾಡಿರ್ಬೋದು, ಬೆಳ್ಳಿ ಲೋಟ್ದಾಗೆ ನೀರು ಕುಡದಿರ್ಬೋದು.. ಗಂಡನ ಮನೆನು ಅಂಗೆ ಬರಲಿ ಅಂದ್ರೆ ಇದ್ ಯಾವ ಬುದ್ಧಿವಂತಿಕೆನಪಾ....? ಇರೋರು ಇಬ್ಬರು ಮಕ್ಕಳು ಇವರು.. ಇವ್ನ ದುಡಿಯೋದ್ರಾಗೆ ಮನೆ ಸಂತೆ, ತಮ್ಮನ್ ಓದು, ಅವನ್ ಅಲ್ಲಿ ಜೀವನ, ಎಲ್ಲಾ.... ಅಂದ್ಮೇಲೆ ಹೆಂಡತಿ ಬಯಸಿದ ಹಾಗೆಲ್ಲಾ ಎಲ್ ನೆರ್ವೇರ್ಸೋಕೆ ಆದೀತು ಆ ರಾಮನಿಗೆ....? .... ಬರಿ ಮುದ್ದು ಮಾಡಿ ಬೆಳಸಿದ್ರೆ ಅಲ್ಲ ಕಣಣ್ಣೋ ಅಪ್ಪಮ್ಮ, ಕಷ್ಟ ಬಂದಾಗ ಹೆಂಗ್ ನಿಭಾಯ್ಸಿಬೇಕು, ಹೆಂಗ್ ಹೊಂದ್ಕೇ0ಡು ಹೋಗ್ಬೇಕು ಅನ್ನೋದನ್ನು ಕಲಿಸಬೇಕು...... ಅದು ಮಾರ್ಗ್ದರ್ಶನ."
"ಸರಿನಪಾ.. ನಿನ್ ಪ್ರಕಾರನೇ ಬರೋಣ.. ಅಂಗಾರೆ, ರಾಮನ್ ಅಪ್ಪಮ್ಮ ಯಾಕ ಸೊಸೆ ಮನೇಲೆ ಇರಲಿ ಅಣಬೇಕಿತ್ತು ... ಎಲ್ಲರ ಇರಲಿ ಒಟ್ನಾಗೆ ಚಂದಿರಲಿ ಅಂತ ಅವರ ಪಾಡಿಗೆ ಅವ್ರನ್ ಬಿಟ್ಟಿದ್ರಾಗ್ತಿರ್ಲಿಲ್ವೆ..?"
"ಏನ್ಲಾ ತಪ್ಪು ಸೊಸೆ ಮನಿಯಾಗೆ ಇರ್ಲಿ ಅಂದ್ರಲ್ಲಿ..... ಯಾವನಾದರೂ ತಪ್ಪು ಅನ್ನಲಿ ಅವ್ನಿಗೆ ಮೆಟ್ಟು ತಗೊಂತಿನಿ....ಒಹೋಹೊ ಬಂದ್ಬಿಟ್ಟಾ ಇಲ್ಲಿ...." ಎಣ್ಣೆಯ ಏಟಿನಲ್ಲಿ ಮಂಜಣ್ಣ ಕೆಂಡವಾದ.
"ಏ ಮಂಜಾ... ನಿಂಗ ಎಣ್ಣೆ ಜಾಸ್ತಿ ಅಗೈತೆ ಕಣ್ಲಾ.. ಅದ್ಕೆ ಭಾಳ ಮಾತಾಡ್ತಿದಿಯಾ..... "
"ಅದ್ಕೆ ಅಲ್ಲೇನ್ ರಾಜು ತಾಳಿಕೋಟೆ ಹೇಳಿದ್ದು: 'When wine is in, wit is out' ಅಂತ".
"ವಿಟ್ಟೋ ಸೊಟ್ಟೋ.. ಒಟ್ನಾಗೆ ರಾಮಣ್ಣನ್ ಕಥೆ ಸುಟ್ಟ ಕರಕ್ಲಾತು. ಇದೆ ಮೇ ತಿಂಗಳಾಗೆ ಮದ್ವೆ ಆಗಿದ್ದ... ಇವತ್ತು ಬಿಡುಗಡೆ ಪತ್ರ ತಗೊಂಡ್ ಬಂದ....ಛೆ... ಆಗಬಾರ್ದಿತ್ತು ಹಿಂಗ್."
"ವಿಟ್ಟೋ ಸೊಟ್ಟೋ.. ಒಟ್ನಾಗೆ ರಾಮಣ್ಣನ್ ಕಥೆ ಸುಟ್ಟ ಕರಕ್ಲಾತು. ಇದೆ ಮೇ ತಿಂಗಳಾಗೆ ಮದ್ವೆ ಆಗಿದ್ದ... ಇವತ್ತು ಬಿಡುಗಡೆ ಪತ್ರ ತಗೊಂಡ್ ಬಂದ....ಛೆ... ಆಗಬಾರ್ದಿತ್ತು ಹಿಂಗ್."
ಮದುವೆಯಾದ ಮೂರು ತಿಂಗಳೂ ಆಗದೆ ಇರುವ ದಂಪತಿಗಳ ಮೂರು ಗಂಟಿನ ನಂಟು ಅದೆಷ್ಟು ಬೇಗ ಕಳಚಿತು !!!!
ಕರಿಮಣಿ ಸರ ಕಟ್ಟುವಾಗ ಶಾಸ್ತ್ರಿಗಳು ಹೇಳಿದ ಮಂತ್ರಘೋಷ ವಾಕ್ಯಗಳೆಲ್ಲ ಇಷ್ಟು ಬೇಗ ಸತ್ವ ಕಳೆದುಕೊಂಡು ಬಿಟ್ಟವೇ ????
ಅಪ್ಪಮ್ಮನ ಪ್ರೀತಿ-ವಾತ್ಸಲ್ಯದಲ್ಲಿ ಬಂಧಿಯಾದ ಮಗನು ಜೀವನ ನಡೆಸಲು ಅಸಮರ್ಥನೇ ? ?????
ಅವರಿವರ ಮಾತಿನ ಹೊಗಳಿಕೆಯ ಮೇಲೆ ಭವಿಷ್ಯದ ಆಶಾ ಗೋಪುರ ಕಟ್ಟಿಕೊಂಡ ಆ ಹೆಣ್ಣು ಜೀವನದಲ್ಲಿ ಸಮರ್ಥಳೇ !!!!
ದಾವಣಗೆರೆಗೆ ಹತ್ತಿದ್ದ ಈ ನಾಲ್ವರು ಹಾವೇರಿಗೆ ಇಳಿದು ನನಗೆ ನಾಲ್ಕು ಪ್ರಶ್ನೆಗಳನ್ನು ಬಹುಮಾನ ನೀಡಿ ಹೊರಟು ಹೋದರು.
***ಅಂತೆ-ಕಂತೆಗಳ ಮೇಲಿನ ಕಥೆ ಇದಾಗಿರಬಹುದು, ನೈಜ ಕಥೆಯೂ ಆಗಿರಬಹುದು.
✍ ಸತೀಶ ಉ ನಡಗಡ್ಡಿ
Subscribe to:
Posts (Atom)






