Wednesday, 10 July 2019

ಟ್ರಾಫಿಕ್ ಸಿಗ್ನಲ್ - ಪೋಸ್ಟ್ ಆಫೀಸ್


             ಮಧ್ಯಾಹ್ನ, ಆಫೀಸಿನಿಂದ ಊಟಕ್ಕೆ ಅಂತ ಬರ್ತಿದ್ದೆ. ಓಲ್ಡ್ ಎಸ್ಪಿ ಸರ್ಕಲ್ ದಾಟಿ ಬಂದು, ಪೆಟ್ರೋಲ್ ಪಂಪ್ ಹತ್ತಿರದಲ್ಲಿ ಆಗುತ್ತಿರುವ ಕಾಂಕ್ರೀಟ್ ರೋಡು ಕಾಮಗಾರಿಯನ್ನು ಕಂಡು "ಏನ್ ಡೆವೆಲಪ್ ಮಾಡ್ತಾರೋ ಏನೋ.... ಸರಿಯಾಗಿ ಡ್ರೈನೇಜ್ ವ್ಯವಸ್ಥೆ ಮಾಡಲ್ಲಾ, ಚರಂಡಿ ಸಂಪರ್ಕ ಹೋಗಿ ಕುಡಿಯೋ ನೀರಿಗೆ ಕುಡಿರ್ತದ... ಬಿಸಿಲಲ್ಲಿ ಮಾಡಿರೋ ಡ್ರೈನೇಜಗಳು ಮಳ್ಯಾಗ ನೀರು ವಾಂತಿ ಮಾಡ್ತಿರ್ತಾವ... " ಅಂತ ಏನೇನೋ ಮನಸ್ಸಿನಲ್ಲಿ ಅಂದುಕೊಳ್ಳುತ್ತಾ ಹೊರಟಿದ್ದೆ. ಪೀಟರ್ ಇಂಗ್ಲೆಂಡ್ ಎದುರಿಗೆ ನಿಂತಿದ್ದ ಆಟೋ ಡ್ರೈವರ್ ಒಬ್ಬಂವ 'ಗರ್ರ್ರ್ರ್...' ಅಂತ ಜುಬಲಿ ಸರ್ಕಲ್ ಕಡೆ ಆಟೋ ತಿರಿವಿದ. ಮೊದಲೇ ಸ್ವಲ್ಪ ಅವಸರದಲ್ಲಿದ್ದೆ, ಬ್ರೇಕ್ ಹಾಕಿದೆ, ಬೈಕ್ 'ಟರ್ರ್ರ್ರ್...'  ಎಂದು ಎಳೆಯಿತು. ಅವನೋ ಅವನ ಪಾಡಿಗೆ ಹೋದ. "ಆ ಇಂಡಿಕೇಟರ್ ಏನ್ ಚಂದಕ್ಕ ಇಟ್ಟರ ಅಂದ್ಕೊಂಡಿ ಏನ್ ಪಾ..... ? " ಅಂದೆ. ಅದಾಗಲೇ ಆಟೋ 10 ಅಡಿ ಮುಂದೆ ಹೋಗಿತ್ತು. 
                  ಜ್ಯೂಬಿಲಿ ಸರ್ಕಲ್ ಗೆ ಬಂದಾಗ ಸಿಗ್ನಲ್ ಇತ್ತು. ಆಟೋ ರಿಕ್ಷಾ ದಾಟಿತು. ನಾನು ಅಲ್ಲೇ ನಿಂತೆ. ಪಕ್ಕದಲ್ಲಿ ಒಂದು ಸ್ಕೂಟಿ ಬಂದು ನಿಂತಿತು. ಇಬ್ಬರು ಇದ್ದರು. ಸುಮ್ಮನೆ ಕಣ್ಣು ಹಾಯಿಸಿದೆ. 
         " ಎಲ್ಯಂತ ಹುಡುಕೂದ್ಲೇ.... " ಹಿಂದೆ ಕುಳಿತವ ಕೇಳಿದ.
         " ಇಲ್ಲಿ ಪೋಸ್ಟ್ ಆಫೀಸ್ ಎಲ್ಯವs ರೀ...?" ಮುಂದಿನವ ನನ್ನ ಕೇಳಿದ.
         " ನಿಮಗ ಯಾವ ಪೋಸ್ಟ್ ಆಫೀಸ್ ಬೇಕ....?"
         "ಯಾವ್ದಾದ್ರೂ ನಡಿತದ....?" 
         " ಈ ಕಾರ್ನೆರ್ ಒಳಗ ಹೋಗಿ, ಹಣಮಂತ ದೇವರ ಗುಡಿ ಹಿಂದ RIGHT TURN ತುಗೊಂಡ್ LEFT ಹೋದ್ರ Line Bazar ಪೋಸ್ಟ್ ಆಫೀಸ್ ಅದ. ಹಿಂಗss ಸ್ಟ್ರೆಟ್ ಹೋದ್ರ Head ಪೋಸ್ಟ್ ಆಫೀಸ್ ಸಿಗ್ತದೆ. ಅದನೂ ದಾಟಿ ಮುಂದ ಹೋದ್ರ ರೈಲ್ವೆ ಸ್ಟೇಷನ್ ಪೋಸ್ಟ್ ಆಫೀಸ್ ಬರ್ತದ. Head ಪೋಸ್ಟ್ ಆಫೀಸ್ ಇಂದ BSNL ಆಫೀಸ್ ಮೂಲಕ DC ಕಾಂಪೌಂಡ್ ಹೋದ್ರ ಕಚೇರಿ post ಆಫೀಸ್ ಅದ. ಹಂಗss ಆಲೂರ್ ವೆಂಕಟರಾವ್ ಸಭಾಭವನ ಕಡೆ ಇಂದ, KCD ಸರ್ಕಲ್ ಗೆ ಬಂದು SBM ATM ಹತ್ರ ನಿಂತ್ರ ಸಪ್ತಾಪುರ ಪೋಸ್ಟ್ ಆಫೀಸ್ ಸಿಗ್ತದೆ. ಅಲ್ಲಿಂದ ಮುಂದ ಸರ್ಕಲ್ ಗೆ ರೈಟ್ TURN ತುಗೊಂಡ್ ಹಳಿಯಾಳ ರೋಡ್ ಇಂದ ಜರ್ಮನ್ ಹಾಸ್ಪಿಟಲ್ ರೋಡ್ ಹಿಡ್ಕೊಂಡ್ ಬಂದು ಕೆನರಾ ಬ್ಯಾಂಕ್ ಎದುರಿನ ರೋಡಿಗೆ ಹೋದ್ರ ನಾರಾಯಣಪುರ ಪೋಸ್ಟ್ ಆಫೀಸ್ ಅದ. ಅಲ್ಲಿಂದ ಬಂದು TV ಟವರ್ ಸರ್ಕಲ್ ಗೆ ಲೆಫ್ಟ್ TURN ತುಗೊಂಡ್ ಗಿರಿಯಾಸ್ ದಾಟಿ ಹೋದ್ರ ಅಲ್ಲಿ K C ಪಾರ್ಕ್ ಪೋಸ್ಟ್ ಆಫೀಸ್ ಅದ. ಹಾಂಗSS ಮುಂದ ಓಲ್ಡ್ ಎಸ್ಪಿ ಸರ್ಕಲ್ ಇಂದ ಸವದತ್ತಿ ರೋಡಿಗೆ ಹೋದ್ರ M J ನಗರ ಪೋಸ್ಟ್ ಆಫೀಸ್ ಸಿಗ್ತದ. ಅಲ್ಲಿಂದ ಶಿವಾಜಿ ಸರ್ಕಲ್ ಕಡಿಂದ ಹಳೆ ಬಸ್ ಸ್ಟ್ಯಾಂಡ್ ದಾಟಿ ಸುಭಾಸ ರೋಡಿಲೆ KCC ಬ್ಯಾಂಕ್ ದಾಟಿ ಗಾಂಧಿ ಚೌಕ್ ದಾಟಿದ್ರ ಧಾರವಾಡ ಸಿಟಿ ಮತ್ತ ಮಾರ್ಕೆಟ್ ಪೋಸ್ಟ್ ಆಫೀಸ್ ಸಿಗ್ತಾವ್...... "
     "  ಸಾಕ್ ಬಿಡ ಅಣ್ಣಾ..." ಎಂದು ಗೊಂದಲಕ್ಕೀಡಾದ.
     "ಅದ್ಕ ಕೇಳಿದೆ ನಾ ಯಾವ ಪೋಸ್ಟ್ ಆಫೀಸ್ ಬೇಕ ನಿಮಗ ಅಂತ..."
    " THANKS ಅಣ್ಣಾ..."
  ಅಷ್ಟರಲ್ಲಿ ಟ್ರಾಫಿಕ್ ಪೋಲಿಸ್ ಸೀಟಿ ಹಾಕಿ ಕೈ ಮಾಡಿದ. ನನ್ನ ದಾರಿಗೆ ನಾ ಬಂದೆ. ಆದರ ಟ್ರಾಫಿಕ್ ಸಿಗ್ನಲ್ ಒಳಗ ನಿಂತ 'ಪೋಸ್ಟ್ ಆಫೀಸ್ ಎಲ್ಯವ ...?' ಅಂತ ಕೇಳಿ ತಲಿ ಒಳಗ ಟ್ರಾಫಿಕ್ ಜಾಮ್ ಮಾಡ್ಕೊಂಡ ಹೋದ್ರ ಅವರ.

                                         ✍ ಸತೀಶ ಉ ನಡಗಡ್ಡಿ

Monday, 3 June 2019

ಮಾರ್ಕೆಟ್ ಕವಿತೆ




ಇಷ್ಟೊಂದು ಗಡಿಯಾರ ಇಟ್ಕೊಂಡಿರುವ
ಇವನಿಗದೆಷ್ಟು ಸಮಯವಿರಬಹುದು !!

ಇಷ್ಟೆಲ್ಲಾ ಬ್ಯಾಟರಿಗಳಿಟ್ಟುಕೊಂಡಿರುವ
ಈತನಲ್ಲಿ ಎಷ್ಟೊಂದು ಬೆಳಕಿರಬಹುದು !!!

ಸೊಳ್ಳೆಗಳ ಮ್ಯಾಟ್ ಮಾರುವ ಇವ
ಸೊಳ್ಳೆ ಸಾಮ್ರಾಜ್ಯಕ್ಕೆ ನಿಜಕ್ಕೂ ಯಮನಾಗಿರಬಹುದು !!!!
✍ ಸತೀಸಾ...



Monday, 27 May 2019

ಒಂದು ಹೂವಿನ ಕಥೆಯು



ಅದೇನು ಹೊಳಪು ನಿನ್ನ ಕಣ್ಣಾಲಿಯಲಿ  ?
ಚಂದಿರನ ಊರಿಂದ ಚಂದಿರನನ್ನೆ ತಂದಂತೆ !
ನೂರು ನಕ್ಷತ್ರಗಳನ್ನೆಲ್ಲ ಒಗ್ಗೂಡಿಸಿಟ್ಟಂತೆ ;
ನುಣು ನುಣುಪು ನೋಟ ನೋಡಿ ಈ ಮನಸು
ತ್ಸುನಾಮಿಯಲಿ ಸಿಲುಕಿದಂತಾಗಿದೆ ಭಾವದಗಣಿತ ಕನಸು.

ಹಾಲಗೆನ್ನೆ , ಹವಳದುಟಿಯ ನಿನ್ನ ನಗು
ರಂಭೆ, ಊರ್ವಶಿ,ತಿಲೋತ್ತಮೆಯರನ್ನೂ ಬದಿಗಿಟ್ಟಂತೆ ;
ಬಿಗುಮಾನವೆಲ್ಲ ಬದಿಗಿಟ್ಟು ನಗು ಚೆಲ್ಲು ಮತ್ತೊಮ್ಮೆ ,
ದಿನಗಳೆದಂತೆಲ್ಲ ಬೆಳೆ ಬೆಳೆದು ನಿಂತಂತೆ
ಇದಾವ ನಗುವೂ ನಿನ್ನ ಮೊಗದಲ್ಲಿ ಸುಳಿಯದು ಮುಂದೊಮ್ಮೆ.

ಅರಳದ ಹೂ ಮೊಗ್ಗು ನೀನಿನ್ನೂ ಮಡಿಲಲಿ
ಎಳೆ ಬಿಸಿಲಿನ ಕಿರಣಕೆ ವಜ್ರಖಚಿತ ಮೇಲೆ ;
ಬಿಸಿಲೇರಿದಂತೆ ವಜ್ರ ಮಂಜಿನ ಹನಿಯೂ ಕರಗಿ
ಬಿಸಿಲ ಝಳಕ್ಕೊ , ಯಾವುದಕ್ಕೊ ಹೋಗುವುದು ಮರೆಯಾಗಿ -
ಮೊಗದಲ್ಲಿನ ನಗು, ಕಣ್ಣ ಕಾಂತಿ, ಮನದ ಆ ಮುಗ್ಧತೆ.

ಮೂರ್ನಾಲ್ಕು ದಳಗಳರಳಿದ ಹೂವು ನೀನೀಗ
ಹೋಗ ಬರುವವರೆಲ್ಲರ ನೋಟ ನಿನ್ನತ್ತ ಈಗ ;
'ಏನು ಅಂದ-ಚಂದ, ನಿನಗೆ ನೀನೇ ಸರಿಸಾಟಿ' ಎಂದು :
ನೂರಾರು ದುಂಬಿಗಳ ಚುಂಬಣ, ಎದೆಯಾಳಕೆದೆ- ಆಳಕೆ
ಬಿಸಿಲೇರಿತ್ತು ನೆತ್ತಿಯ ಮೇಲೆ , ಎದೆಯಲಿ ಭಾವ ಬುಗ್ಗೆ.

ಹೊರಳುವುದು ಹೊತ್ತು ಮೂಡನದಿ ಪಡುವಣಕೆ
ನಳನಳಿಸುವ ಹೂವ ಕಿತ್ತು, ಅರ್ಪಿಸುವುದ ನೋಡುವುದಕೆ ;
ಮಹೋತ್ತರ ಘಟ್ಟ - ಜೀವನದಲ್ಲಿ ನೀಡಿ ಒಂದು ಪಟ್ಟ :
ಬಿಸಿಲು-ನೆರಳು, ಸಿಹಿ-ಕಹಿ, ಅಗಲಿಕೆ-ಪರಾಧೀನ, ಸ್ವಂತಿಕೆ
ಕೆಳಗಿನಿಂದ ಮೇಲೇರಿದ ಚಕ್ರ ಕೆಳಗಿಳಿಯಲನಿಯಾಗುತ್ತಿದೆ.


ಯಾವ ತೋಟದ ಹೂವು ಯಾವ ದೈವದ ಮುಡಿಗೇರಿತು ?
ಹೂವಿಗೇನು ಗೊತ್ತು , ಸೃಷ್ಠಿ ಚಕ್ರದಲ್ಲಿ ಬೆಳೆದು ಬಂದಿತ್ತಷ್ಟೆ .
ಅದೇನು ಆಶ್ಚರ್ಯ ಪ್ರತಿಯೊಂದರ ಲಯಬದ್ಧತೆಯಲಿ ?

                        ✍ ಸತೀಶ ಉ ನಡಗಡ್ಡಿ 

Monday, 21 January 2019

ಪೂಜ್ಯರಿಗೆ ನನ್ನ ಅಕ್ಷರ ನಮನ



ಸಾವು ಯಾರನ್ನೂ ಬಿಟ್ಟಿಲ್ಲ
ಆದರೆ, ಈ ಸಾವು ನ್ಯಾಯವಲ್ಲ.
ದೇವರನ್ನೇ ಬಿಡದ ಸಾವು
.....ಇನ್ನು ದಾನವರು ನಾವು....?
ಆದರೂ, ಈ ಸಾವು ನ್ಯಾಯವಲ್ಲ.

ಪುಣ್ಯ ಭರತ ಭೂಮಿ ಕಂಡ
ಪೂಜ್ಯ ಶ್ರೀ ಸಿದ್ದಗಂಗಾ ಈಶ-ಬ್ರಾಹ್ಮಾಂಡ,
ತ್ರಿವಿಧ ದಾಸೋಹಿ ನಡೆದೆಯಾ
ತ್ರಿಶೂಲಾಯುಧನ ಅಂಗಳಕೆ ದೇವಾ;
ಶ್ರೀ ಶಿವಕುಮಾರ ಸ್ವಾಮೀ, ನೀ ಸದಾ ಕುಮಾರ.

ಅನ್ನದ ಅಗಳು-
ನುಂಗುತ್ತಿದೆ ಉಗುಳು,
ಕಣ್ಣು ಬಿಟ್ಟೊಮ್ಮೆ ಏಳು
ಅಳುವ ಮಕ್ಕಳಿಗೆ ಸಾಂತ್ವನ ಹೇಳು
"ನಿಮ್ಮಲ್ಲಿರುವೆ; ನಗುತ, ನಲಿದಾಡುತ' ಎಂದು.

ತೆರೆದ ಹೊತ್ತಗೆಯು ಕೂತಿದೆ
ತ್ರಿಲೋಕದಜ್ಞಾನ ನೀಗಲಾರದೆ
ಲೇಖನಿಯೂ ಅಳುತಿದೆ...

               ✍ ಸೂರ್ಯ 

Wednesday, 9 January 2019

ಬಾಡಿಗೆ ತಾಯ್ತನ



ಈ ಲಲಿತೆ ಎಲ್ಲರಂತಲ್ಲ
(ಅ)ಸಾಮಾನ್ಯಳೆಂದೂ ಹೇಳುವಂತಿಲ್ಲ !

ಯಾವನದೋ ಅಸೆಗಳೀಡೇರಿಕೆಗೆ
'ಮೈಲಿ'-'ಗಲ್ಲ'ಆಗಿ ನಿಂತಿಹಳು ಹೀಗೆ:

ಮತ-ಧರ್ಮದ ಕಟ್ಟಳೆಗಳ ಸುಟ್ಟಾಕೆ-
ಯ ಮೇಲೆ ಈ ಪ್ರತಿಷ್ಠೆಯ ಮೊಹರೇಕೆ ?

'ಗರ್ಭ'ವೂ ಬಾಡಿಗೆಗೆ ಸಿಗುತ್ತಿದೆ
'ಆಗರ್ಭ' ಶ್ರೀಮಂ'ತನ-ಮನ' ತಣಿದಿದೆ.

                         ✍ ಸತೀಶ ಉ ನಡಗಡ್ಡಿ 

Monday, 12 November 2018

ಕೊತ್ತಂ-ಬರ್ರೀss ಕೊಡ್ತಂಬರ್ರಿss


ಮೂವತ್ರುಪಾಯಿಗೆ 
ಮುರ್ರುಪಾಯ್ ಕಡಿಮಿ ಕೊಡ್ತೇನ್ 
ಅಂದ್ರೂ ಮೂಗು ಮುರದಿದ್ಯಲ್ಲ ಪೋರಿ
"ಮುಟ್ಟಬ್ಯಾಡ್ "ಅಂತಂದ-
ಕೊತ್ತಂಬ್ರಿ.

ಇಂದ.........
'ಹ್ಹಾ ಬರ್ರೀ, 
ಐದ್ರುಪಾಯ್ಕ್ ಯಾಡ್ಡ್ 
ಐದ್ರುಪಾಯ್ಕ್ ಯಾಡ್ಡ್ 
ಸೂಡ ಕೊಡ್ತಂಬರ್ರಿ'
ಅಂತ ವದರಲಿಕ್ಕತ್ಯಲ್ಲ "ಕೊತ್ತಂಬರಿ"
ಹಾದ್ಯಾಗ್ ಮಾಡಿ ಸದ್ದ.
       ✍ ಸತೀಶ ಉ ನಡಗಡ್ಡಿ


Wednesday, 7 November 2018

ದೀಪಾವಳಿ


ದಿಂಡು, ಬಾಳೆಲೆ
ಕಬ್ಬಿನ ಜಲ್ಲೆ
ಹೂವಿನ ಹಾರ l
ಹಸಿರು ತೋರಣದೆಲೆ
ಅಂಗಳದಿ ಮಿಂಚುತಾವಲೆ
ರಂಗೋಲಿ ಚಿತ್ತಾರ !
ಹೋಳಿಗೆ-ತುಪ್ಪ ಭೋಜನ
ಏ, ಬರಪ್ಪ ಮಾಡೋಣ !!!!

ಹಚ್ಚಿಸಿಕೊಳ್ಳೋ ಸುರಬತ್ತಿ
ಎತ್ತಿಸಿಕೊಳ್ಳೋ ಆರತಿ
'ಹುಷಾರ್  ಮಗನ,..
ಹೊಗ್ಗೋ ಅವನೌನ..
ಬೆಂಕಿ ಐತಿ ಲೇ ....
ಹಚ್ಚು ಕಿಡಿ ಜೋಕಿಲೇ.'
    ✍ ಸತೀಶ ಉ ನಡಗಡ್ಡಿ