Saturday, 28 March 2020

ಐದು ಕಲ್ಲು

                    


ಸಂಖ್ಯೆ ಐದು ಹಿಂದೂ ಸಂಸ್ಕೃತಿಯಲ್ಲಿ ಒಂದು ವಿಶಿಷ್ಠ ಸ್ಥಾನವನ್ನು ಪಡೆದುಕೊಂಡಿದೆ. ಏನಾದರೂ ಪೂಜಿಸುವಾಗ ಐದು ಬೊಟ್ಟು ಕುಂಕುಮ , ಭಂಡಾರ ಇಡುವುದು  ಸಾಮಾನ್ಯ . ಭಾರತದಲ್ಲಿ , ಅದೂ ಗ್ರಾಮೀಣ ಪ್ರದೇಶದಲ್ಲಿ ಯುಗಾದಿ ಹಬ್ಬದ ಸಂದರ್ಭದಲ್ಲಿ ಐದು ಸಣ್ಣ ಕಲ್ಲುಗಳನ್ನು ಪೂಜಿಸುವ  ವಾಡಿಕೆಯಿದೆ. ಈ ಐದು ಹಿಂದೂ ಸಂಸ್ಕೃತಿಯಲ್ಲಿ ಯಾಕಿಷ್ಟು ವೈಶಿಷ್ಟ್ಯ ಪಡೆದಿದೆ ಎಂದರೆ;

ಆಕಾಶ, ವಾಯು, ಅಗ್ನಿ, ನೀರು, ಭೂಮಿ ಎಂಬ ಪಂಚಭೂತ;
ಸತ್ಯ, ಧರ್ಮ, ನ್ಯಾಯ, ಪ್ರೀತಿ, ಸಂಯಮ ಎಂಬ ಪಂಚತತ್ವಗಳು; 
ಚಿನ್ನ, ಬೆಳ್ಳಿ, ಟ್ರ, ಕಬ್ಬಿನ, ಹಿತ್ತಾಳೆ ಎಂಬ ಪಂಚಲೋಹ;
ಕಣ್ಣು, ಕಿವಿ, ಮೂಗು, ಬಾಯಿ, ಚರ್ಮ ಎಂಬ ಪಂಚ ಇಂದ್ರಿಯಗಳು  ಇತ್ಯಾದಿ ಇತ್ಯಾದಿ ಪ್ರತಿನಿಧಿಸುತ್ತವೆ.

ಮಹಾಭಾರತದಲ್ಲಿ ಭಗವಾನ್ ಶ್ರೀಕೃಷ್ಣ ಐದು ಹರಳುಗಳನ್ನು ಎರಡು ಬಾರಿ ಉಪಯೋಗಿಸಿದ್ದಾನೆ. 

ಒಂದು;
ಕೌರವ ಸೇನೆ ದ್ರುಪದ ರಾಜನ ಜೊತೆ ಸೋತ ನಂತರ ಪಾಂಡು ಪುತ್ರರು ದ್ರುಪದ ರಾಜನ ಮೇಲೆ ದಾಳಿ ಮಾಡಿ, ಅರ್ಜುನನು ದ್ರುಪದ ರಾಜನು  ರಚಿಸಿದ ಚಕ್ರವ್ಯೂಹ ಭೇಧಿಸಿ, ದ್ರುಪದನ ಎದುರು ಬಿಲ್ಲು ಹೂಡಿದಾಗ ತನ್ನ ವಿಶಿಷ್ಟ ಶಕ್ತಿಯಿಂದ ದ್ರುಪದ ರಾಜನು ತನ್ನನ್ನು ತಾನು ಐದು ಜನ ದ್ರುಪದರನ್ನಾಗಿಸಿ   ವಿಭಜಿಸಿಕೊಂಡು ಅರ್ಜುನನಲ್ಲಿ ದ್ವಂದ್ವ ಉಂಟು ಮಾಡುತ್ತಾನೆ. ಆಗ ಅಚಾನಕ್ ಆಗಿ ಅರ್ಜುನನ ಬಳಿ ಇದ್ದ, ಕೆಲ ದಿನಗಳ ಹಿಂದೆ ಶ್ರೀಕೃಷ ಸುಭದ್ರೆಯ ಮೂಲಕ ಅರ್ಜುನನಿಗೆ ತಲುಪಿಸಿದ ಐದು ಹರಳುಗಳು ಭೂಮಿಯ ಮೇಲೆ ಬೀಳುತ್ತವೆ. ಆ ಹರಲುಗಳ ಮೇಲೆ ಎರೆಡೆರಡು ಬೇರೆ ಬೇರೆ ದಿಕ್ಕಿನತ್ತ ಮುಖ ಮಾಡಿರುವ ಚುಕ್ಕಿಗಳಿರುತ್ತವೆ. ಈ ಸಂಕೇತಗಳ ಆಧಾರದ ಮೇಲೆ ಅರ್ಜುನನು ನಿಜವಾದ ದ್ರುಪದ ರಾಜ ಯಾರೆಂದು ಪತ್ತೆಮಾಡಿ ಬಂಧಿಸುತ್ತಾನೆ.

ಎರಡು, ಪಾಂಡು ಪುತ್ರರು ದ್ರೌಪದಿಯನ್ನೊಳಗೊಂಡು ಇಂದ್ರಪ್ರಸ್ಥದಲ್ಲಿ ಹೊಸ ನಗರ ನಿರ್ಮಿಸಿ ವಾಸವಿರುವಾಗ ಶ್ರೀ ಕೃಷ್ಣನು ದ್ರೌಪದಿಗೆ ಅದೇ ಐದು ಹರಳುಗಳನ್ನು ನೀಡಿ ಧರ್ಮದ ಪಥದಲ್ಲಿ, ಸತ್ಯವನ್ನು ಬಿಡದೇ, ನ್ಯಾಯಯುತವಾಗಿ, ಪ್ರೀತಿಯಿಂದ, ಎಲ್ಲವನ್ನೂ ಸಂಯಮದಿಂದ ಕಾಪಾಡಿಕೊಂಡು ಪಾಂಡು ಪುತ್ರರ ಜೊತೆಗೆ ಸಂಸಾರ ನಡೆಸುವ ಕುರಿತು ಮಾರ್ಗದರ್ಶನ ಮಾಡುತ್ತಾನೆ.

ಕುರುಕ್ಷೇತ್ರ ಯುದ್ಧದಲ್ಲಿ ಅದೇ ಐದು ಹರಳುಗಳನ್ನು ಅರ್ಜುನ ಮತ್ತು ಸುಭದ್ರೆಯ ಮಗ ಅಭಿಮನ್ಯುವಿನ ತೋಳಿಗೆ ದ್ರೌಪದಿ ಕಟ್ಟಿ, 'ಈ ಐದು ಹರಳುಗಳು ನಿನ್ನ ಕೈಯಲ್ಲಿರುವವರೆಗೆ ನಿನಗೆ ಪಾಂಡುಪುತ್ರರ ರಕ್ಷಣೆ ಇರುತ್ತದೆ.' ಎಂದು ಹೇಳಿರುತ್ತಾಳೆ. ಕುರುಕ್ಷೇತ್ರ ಯುದ್ಧದ ಒಂದು ದಿನ ಅಭಿಮನ್ಯು ಯುದ್ಧಕ್ಕೆ ಹೊರಡುತ್ತಿರುವಾಗ ಆ ಹರಳಿನ ಕಟ್ಟು ಕಳಚಿ ಬೀಳುತ್ತದೆ. ಅದು ಕೃಷ್ಣನಿಗೆ ತಿಳಿಯುತ್ತದೆಯಾದರೂ ಏನೂ ಮಾಡದೇ ಪಾರ್ಥ ಸಾರಥಿಯಾಗಿ ಯುದ್ಧಕ್ಕೆ ಹೋಗುತ್ತಾರೆ. 

ಅಂದಿನ ಯುದ್ಧದಲ್ಲಿ, ಕೌರವ ಸೇನೆ ಹಿಂದಿನ ದಿನ ಅಭಿಮನ್ಯುವಿನ ದಾಳಿಯಿಂದ ತತ್ತರಿಸಿ ಹೋಗಿರುತ್ತದೆ. ಹಾಗಾಗಿ, ಅಭಿಮನ್ಯುನನ್ನು ವಧಿಸುವುದು ಕೌರವರ ಅಂದಿನ ಎಲ್ಲ ವ್ಯೂಹಗಳ ಏಕಮಾತ್ರ ಉದ್ದೇಶವಾಗಿರುತ್ತದೆ. ಶಕುನಿಯ ಕಪಟತನದಿಂದ ಅರ್ಜುನನನ್ನು ಅಭಿಮನ್ಯುವಿನಿಂದ ದೂರಾತಿ ದೂರ ಸರಿಸಿ, ಚಕ್ರವ್ಯೂಹ ರಚಿಸಿ ಕೌರವರು ಅಭಿಮನ್ಯುನನ್ನು ವಧಿಸುತ್ತಾರೆ. 

ಕೃಷ್ಣನಿಗೆ ಅಭಿಮನ್ಯುವಿನ ಸಾವು ನಿಶ್ಚಿತ ಎಂದು ತಿಳಿದಿದ್ದರೂ, ಅಭಿಮನ್ಯು ತನ್ನ ಸ್ವಂತ ತಂಗಿಯ ಮಗನೇ ಆಗಿದ್ದರೂ ಅವನನ್ನು ಉಳಿಸಿಕೊಳ್ಳುವ ಯಾವುದೇ ಪ್ರಯತ್ನವನ್ನು ಕೃಷ್ಣ ಮಾಡುವುದಿಲ್ಲ. ಇಡೀ ಸೃಷ್ಟಿಯೇ ನಾರಾಯಣನ ಕೈಯಲ್ಲಿರುವಾಗ ಅಭಿಮನ್ಯುವನ್ನು ಉಳಿಸಿಕೊಳ್ಳುವುದು ಕೃಷ್ಣನಿಗೆ ದೊಡ್ಡ ಕೆಲಸವೇನಾಗಿರಲಿಲ್ಲ. ಆದರೆ, ಕೃಷ್ಣನ ಯೋಜನೆ ಸೃಷ್ಠಿಯ ಜನನ-ಮರಣಗಳ ಚಕ್ರದಿಂದ ಹೊರತು ಪಡಿಸಿ ವಿಶಿಷ್ಠ ಶಕ್ತಿಗಳ ಮೂಲಕ ಜನ್ಮ ಪಡೆದವರ ಮೂಲಕ ಧರ್ಮ ಸ್ಥಾಪನೆ ಮಾಡುವುದಿತ್ತು. 

ಇದೇ ಕಾರಣಕ್ಕಾಗಿ ಕೃಷ್ಣನು, ದುರ್ವಾಸ ಮುನಿಯು ನೀಡಿದ ಮಂತ್ರ ವರದ ಮೂಲಕ ಕುಂತಿದೇವಿ ಪಾಂಡು ರಾಜನೊಂದಿಗೆ ಸಂಪರ್ಕಕ್ಕೆ ಬರದೇ ಮಂತ್ರ ಪಠಣೆಯ ಮೂಲಕ ಯಮನಿಂದ ಯುಧಿಷ್ಠಿರನನ್ನು, ವಾಯುವಿನಿಂದ ಭೀಮನನ್ನು, ಇಂದ್ರನಿಂದ ಅರ್ಜುನನನ್ನು, ಅಶ್ವಿನಿ ದೇವತೆಗಳಿಂದ ನಕುಲ-ಸಹದೇವ (ಮಾದ್ರಿಗೆ) ರನ್ನು ಪಡೆದಿರುತ್ತಾಳೆ. ಹಾಗಾಗಿ, ಈ ಪಾಂಡು ಪುತ್ರರನ್ನು ಕೃಷ್ಣ ಧರ್ಮ ಸ್ಥಾಪನೆಗೆ ಆಯ್ದುಕೊಳ್ಳುತ್ತಾನೆ.

ದ್ರೌಪದಿ; 
ದ್ರುಪದ ರಾಜ ಮತ್ತು ದ್ರೋಣರು ಗುರು ಭಾರದ್ವಾಜರ ಆಶ್ರಮದಲ್ಲಿ ಜ್ಞಾನಾರ್ಜನೆ ಮಾಡುವಾಗ ದ್ರೋಣ ಬಡವನಿರುತ್ತನೆ. ಮತ್ತು ದ್ರುಪದನು ರಾಜ ಇರುತ್ತಾನೆ. ದ್ರುಪದನು ದ್ರೋಣರಿಗೆ ಅವಮಾನ ಮಾಡಿದ್ದಕ್ಕೆ ದ್ರೋಣ ಕೊಲ್ಲಲು ಸಮರ್ಥ ಗಂಡು ಸಂತಾನ ಬೇಕು ಎಂದು ಸಾವಿರಾರು ಮುನಿಗಳ ಹತ್ತಿರ ಬೇಡಿಕೊಂಡರು ಅದು ನೆರವೇರುವುದಿಲ್ಲ. ಆಗ 3 ಮುನಿಗಳು ಯಜ್ಞ ನಡೆಸಿಕೊಡಲು ಒಪ್ಪಿಕೊಂಡು ಒಂದು ಕರರು ಹಾಕುತ್ತಾರೆ. ಈ ಯಜ್ಞದ ನಂತರ ನಿನಗೆ ಗಂಡು ಸಂತಾನ ಸಿಗುತ್ತದೆ. ಜೊತೆಗೆ ಒಂದು ಹೆಣ್ಣು ಸಂತನವು ಇದೆ ಅದನ್ನು ನೀನು ಪಡೆಯಲೇಬೇಕು. ಯಜ್ಞ ಫಲವಾಗಿ ಯಜ್ಞಕುಂಡದಿಂದ ಗಂಡು ಮಗು ದೃಷ್ಠ್ಯದ್ಯುಮ್ನ ಬರುತ್ತಾನೆ. ದ್ರುಪದ ರಾಜ ಗಂಡು ಸಂತಾನ ಒಂದೇ ಸಾಕೆಂದು ಯಜ್ಞ ತ್ಯಜಿಸಿ ಹೋಗುತ್ತಾನೆ. ಆಗ ಮುನಿಗಳು ಎಷ್ಟು ಬೇಡಿಕೊಂಡರು ದ್ರುಪದ ರಾಜ ಅವರನ್ನು ನಿಂದಿಸಿ ಹೋಗಲು ಸಿದ್ಧನಾಗುತ್ತಾನೆ ಆಗ ಯಜ್ಞದಲ್ಲಿ ಬೆಂಕಿ ಜ್ವಾಲೆ ಹೆಚ್ಚಾಗಿ ಆಕಾಶಕ್ಕೆ ಮುಟ್ಟುತ್ತದೆ. ಈ ಘೋರತೆಯನ್ನು ಕಂಡು ದ್ರುಪದ ರಾಜ ಒಂದು ವಿಚಿತ್ರ ಕೋರಿಕೆಯ ಮೂಲಕ ಯಜ್ಞನಿರತನಗುತ್ತಾನೆ. ಏನೆಂದರೆ ಬರುವ ಸ್ತ್ರೀ ಸಂತಾನ ಹೇಗಿರಬೇಕು ಎಂದರೆ ಅವಳಿಗೆ ಯಾರಿಗೂ ಬರದಂತ ಕಷ್ಟಗಳು ಬರಬೇಕು, ಎಲ್ಲರಿಂದಲೂ ಹಿಯಾಳಿಕೆ, ತಾತ್ಸಾರ, ಆಗಬೇಕು. ಇಷ್ಟಾದರೂ ಅವಳು ಯಾರನ್ನು ದ್ವೇಷಿಸಬಾರದು ಅಂತ ಸ್ತ್ರೀ ಸಂತಾನ ಕೊಡು ಎಂದು ಕೇಳಿ ಯಜ್ಞದಲ್ಲಿ ಪಾಲ್ಗೊಳ್ಳುತ್ತಾನ. ಇದರ ಫಲವೇ ಯಜ್ಞಾಸೇನಿ. ಯಜ್ಞಾಸೇನಿ  ಎಂಬುದು ದ್ರೌಪದಿಯ ಇನ್ನೊಂದು ಹೆಸರು.

ಪಾಂಡುಪುತ್ರರು ಮತ್ತು ದ್ರೌಪದಿಯು ಜನನ-ಮರಣದ ಚಕ್ರದಲ್ಲಿ ಬಂದವರಲ್ಲವಾದ್ದರಿಂದ ಕೃಷ್ಣ ಭಾಗವನಾನು ಇವರ ಮೂಲಕ ಧರ್ಮ ಸ್ಥಾಪಿಸುವನು.


ಇದರಲ್ಲೇನಾದರೂ ತಪ್ಪುಗಳಿದ್ದರೆ, ತಿದ್ದಿಕೊಳ್ಳುವ ಮನಸ್ಸಿದೆ. ತಪ್ಪಿದ್ದರೆ ತಿಳಿಸಿ.

Saturday, 14 March 2020

ವಿಭಿನ್ನ ವಾಸ್ತವ


          ಊರಿಗೆ ಹೋಗುವುದಿತ್ತು, ಹಾಗಾಗಿ, ಬೆಳಿಗ್ಗೆ ಬೇಗ ಎಂದರೂ 6.30ಕ್ಕೆ ಎದ್ದು ಸ್ನಾನ ಮಾಡಿ, ಹೊಸಯಲ್ಲಾಪುರ್ BRTS ಬಸ್ ಸ್ಟಾಪ್ ಒಳಗೆ 201B ಸಲುವಾಗಿ 15 ನಿಮಿಷಗಳ ಕಾಲಹರಣವಾಗಿ ಹೊಸ ಬಸ್ ಸ್ಟ್ಯಾಂಡ್ ಗೆ ಬಂದು ಬೆಳಗಾವಿಗೆ ಹೋಗುವ ತಡೆರಹಿತ ಬಸ್ಸಲ್ಲಿ ಕುಳಿತೆ. ಕಂಡಕ್ಟರ್ ಬಂದು ಟಿಕೆಟ್ ಕೊಟ್ಟ, 'ನೂರು ರೂಪಾಯಿಗೆ ಟಿಕೆಟ್ ಜೊತೆ 10 ಹಿಂತಿರುಗಿಸುವರು' ಎಂದೇ ನಾನು ನಂಬಿದ್ದೆ. ಆದರೆ, ಬಸ್ ಪ್ರಯಾಣ ದರಗಳಲ್ಲಿ ಏರಿಕೆಯಾಗಿ 100ಕೆ 100 ಲೆಕ್ಕ ಪಕ್ಕಾ ಮಾಡಿದ್ದರು. 

           ಬಸ್ ಹೊರಗೆ ಬಂದು ರೆಸಿಡೆನ್ಸಿ ಲಿಕ್ಕರ್ ಎದುರಿಗೆ, ಎಲ್ಲರ ಟಿಕೆಟ್ ಪಡೆದ ಬಗ್ಗೆ ದೃಢಪಡಿಸಿಕೊಳ್ಳಲು ನಿಂತಿತ್ತು. ಒಂದಿಬ್ಬರು ಹೋಗುತ್ತಿರುವ ಬಸ್ಸಿಗೆ ಓಡಿ ಬಂದು, ಹತ್ತಿ, ಸಾಹಸ ಮೆರೆದವರಿಗೆ ಕಂಡಕ್ಟರ್ ಕಾಸಿಗೆ ಪ್ರತಿಯಾಗಿ ಟಿಕೆಟ್ ಕೊಡಲು ಬಂದ. ನನ್ನ ದೃಷ್ಠಿ ಕಿಡಕಿಯಿಂದ ಹೊರ ಹೋಯಿತು. ರೆಸಿಡೆನ್ಸಿ ಲಿಕ್ಕರ್, ಬಾರ್ ರೆಸಿಡೆನ್ಸಿ ಏನೋ ಮುಚ್ಚಿತ್ತು ಆದರೆ ಅದರ ಮುಂದೆ ಕುಳಿತ ಮುಪ್ಪಾವಸ್ಥೆಗೆ ಕಾಲಿಡುತ್ತಿದ್ದ ಇಬ್ಬರು ಕುಳಿತಿದ್ದರು. ಕೈ ಯಲ್ಲಿ ದೊಡ್ಡ ಬಾಟಲಿ, "ಯಾವ ಬ್ರಾಂಡ್ ಇರಬಹುದು " ಎಂದು ದಿಟ್ಟಿಸಿ ನೋಡಿದೆ "ಒರಿಜಿನಲ್ ಚಾಯ್ಸ್... ಬೆಳಿಗ್ಗೆ ಬೆಳಿಗ್ಗೆ...!!" ನೋಡೋಕೆ ಅಜ್ಜ ಹಂಗೇನೂ ಚಹರೆ ಇರದಿದ್ದರೂ ಬೆಳಿಗ್ಗೆ ಬೆಳಿಗ್ಗೆ ಕೈಯಲ್ಲಿ ಒರಿಜಿನಲ್ ಚಾಯ್ಸ್ ನೋಡಿ "ವಯಸ್ಸಾದ್ರೂ ಅಜ್ಜ ಬ್ರಾಂಡ್ ಎನ್ ಬಿಟ್ಟಿಲ್ಲ.." ಎಂದು ಯೋಚನೆ ಬರುವಷ್ಟರಲ್ಲಿ ಕೋರೋನ  ನೆನಪಾಗಿ, "ನೆರೆ-ಹೊರೆಯ ಕಿಡಿಗೇಡಿ ಹುಡುಗರರಾದ್ರೂ  ಔಷಧ ಅಂಗಡಿಗಳೆಲ್ಲ ಬಂದ್ ಆಗ್ಯಾವ್, ಎಲ್ಯು ಸ್ಟಾಕ್ ಇಲ್ಲ ಅಂತ ಏನೇನೋ ಹೇಳಿ ಅಜ್ಜನ ಬ್ರೈನ್ ವಾಷ್ ಮಾಡಿರಬಹುದು, ಅದಕ್ಕೆ ಅಜ್ಜ ಬೆಳಿಗ್ಗೆ ಬೆಳಿಗ್ಗೆ ಸ್ಯಾನಿಟೈಜೆರ್ ತಗೊಂಡ್ ಹೋಗ್ತಿರಬಹುದು " ಎನಿಸಿತು. 

          ಇದೆಲ್ಲ ವಿಚಾರ ಮಾಡುತ್ತಲೇ ಒಂದೆರಡು ಫೋಟೋ ಕ್ಲಿಕ್ಕಿಸಿಕೊಂಡೆ ಅದು ಅಜ್ಜನ ಗಮನಕ್ಕೆ ಬಂದು ನಗೆ ಬೀರಿದ, ನಾನೂ ಪ್ರತಿಕ್ರಿಯಿಸಿದೆ. ಅಷ್ಟೊತ್ತಿಗಾಗಲೇ ಬಸ್ ಡ್ರೈವರ್ ಸೆಲ್ಫ್ ಸ್ಟಾರ್ಟ್ ಒತ್ತಿ, ಎಕ್ಸಿಲೇಟರ್ ಕೊಡುವುದರಲ್ಲಿದ್ದ; ಅಜ್ಜನ ಮೊಮ್ಮಗ ಇರಬಹುದು, ಬಂದು " ಏಯ್ ಯಜ್ಜ ನೀರ್ ಕೊಡೋ ಕುಡ್ಯಾಕ್" ಎಂದ. ಬಸ್ ಮುಂದೆ ಬಂದಿದ್ದರೂ ಎದ್ದು ನಿಂತು ತಿರುಗಿ ನೋಡಿ ಖಚಿತಪಡಿಸಿಕೊಂಡೆ. ಆ ಬಾಟಲಿ ಒಳಗಿದ್ದದ್ದು "ನೀರು" ಎಂದು. 

               "ಎಷ್ಟೋ ಸಲ ಈ ಜಗತ್ತು ನಮಗೆ ಅದು ಇರುವ ವಾಸ್ತವಕ್ಕಿಂತ ವಿಭಿನ್ನವಾಗಿ ಕಾಣುತ್ತದೆ. ಆ ಆಧಾರದ ಮೇಲೆ ನಾವು ಅಲ್ಲಿಯ ಸುತ್ತಣವನ್ನೂ, ಪ್ರಚಲಿತ ವಿದ್ಯಮಾನಗಳನ್ನು ಪರಿಗಣಿಸಿ ನಮ್ಮದೇ ಆದ ಒಂದು ನಿರ್ಧಾರಕ್ಕೆ ಬಂದು ಬಿಡುತ್ತೇವೆ. ಆದರೆ ಅದು ನಮ್ಮ ಗ್ರಹಿಕೆಗಿಂತ ಬೇರೆಯೇ ಆಗಿರುತ್ತದೆ."

Friday, 27 December 2019

ಹರಿವ ನದಿಯಾಗು



ನೀ ಯಾಕೆ ಇಷ್ಟೊಂದು ಮೌನಿ
ಹರಿವಿಲ್ಲದ ನದಿಯಂತೆ;
ಇದ್ದುದನಷ್ಟೇ ಇಟ್ಟುಕೊಂಡು
ಒಳಗೂ ಬಾರದೇ, ಹೊರಗೂ ಹೋಗದೇ
ಸ್ತಬ್ಧವಾಗಿ ನಿಂತಿರುವೆ:
ಮುಂಬೆಳಕು ಕಾಣುವ ಮನಸಿಲ್ಲವೇ ?

ಜವಳು ಭೂಮಿಯಲದೇನು ಬೆಳೆದೀತು ?
ಬರಿಯ ಪಾಚಿ; ಪಾಚಿಯ ಜಾರು.
ಹರಿವ ನದಿಯಾಗು ನೀನು
ಜಿಗಿವ ಝರಿಯಾಗು; ಮೀನು -
ಬಯಸುವ ಒಡಲಾಗು.

ಹೊಸ ದಿಗಂತ, ಹೊಸ ಪ್ರಪಂಚ,
ಕಾಡು-ಮೇಡಲಿ ಜಿನುಗಿ, ತಣಿಸಿ
ಸಾಗುವ ನದಿಯಾಗು ನೀ-
ಹರಿವ ನದಿಯಾಗು.

Monday, 2 December 2019

ಅದೇ ಜುಬಿಲಿ ಸರ್ಕಲ್ ಟ್ರಾಫಿಕ್ ಸಿಗ್ನಲ್-ನಲ್ಲಿ ನಿಂತಾಗ

              

               ಇವತ್ತು ಆಫೀಸ್ ಕೆಲಸ ಮುಗಿಸ್ಕೊಂಡು ಬೇಗನೆ ಮನೆಗೆ  ಬರ್ತಿದ್ದೆ. ಆಫೀಸ್ ಬಿಡುವ ಮುಂಚೆ ಸಹೋದ್ಯೋಗಿಗಳು ಕಳೆದ ವಾರ ಆಗಿಹೋದ IP ಎಕ್ಸಾಮ್ಸ್ ಬಗ್ಗೆ ಚರ್ಚಿಸುತ್ತಿದ್ದರು, ಸರ್ ಕ್ಷಿಪ್ರವಾಗಿ table ಮೇಲಿನ ಫೈಲುಗಳನ್ನೆಲ್ಲ ಸಾಗಿಸಿದ ಪರಿಣಾಮ ಗತಿ ಕಾಣಿಸಬೇಕಾದುದ್ದನ್ನೆಲ್ಲ ಗತಿಗಾಣಿಸುವಷ್ಟರಲ್ಲಿ ಅನಾರೋಗ್ಯದ ಕಾರಣ ತಲೆ ಸಿಡಿಯುತ್ತಿತ್ತು ಹೋಗಿ ರೆಸ್ಟ್ ಮಾಡುವ ಎಂದುಕೊಂಡು ಅವರ ಚರ್ಚೆಯಲ್ಲಿ ತಲೆಹಾಕದೆ ಸೀದಾ ಮನೆ ಸೇರುವ ಹಂಬಲದಲ್ಲಿದ್ದೆ. ಓಲ್ಡ್ DySP ಸರ್ಕಲ್ ಹತ್ತಿರ ಟ್ರಾಫಿಕ್ ದಾಟಿಕೊಂಡು ಬರುವಾಗ ನನ್ನನ್ನು ಹಿಂಬಾಲಿಸುತ್ತಿದ್ದ ಯಾರೋ ಒಬ್ಬರು ಒಂದೇ ಸಮನೆ ಹಾರ್ನ್ ಮಾಡುತ್ತಿದ್ದರು. ಬಹುಷಃ ಸ್ಟ್ಯಾಂಡ್ ಹಾಕಿದ್ದಿರಬಹುದೆಂದು ಕಾಲಿನಿಂದ ಸ್ಟ್ಯಾಂಡ್ ಚೆಕ್ ಮಾಡಿದೆ. ಸರಿ ಇತ್ತು. ಸುಮ್ಮನೆ ಮುನ್ನಡೆದೆ, ಮತ್ತೆ ಹಾರ್ನ್ ಒಂದೇ ಸಮನೆ ಶುರುವಾಯ್ತು. ಸೈಡ್ ಬಿಟ್ಟೆ, ಓವರ್ ಟೇಕ್ ಮಾಡಿ ಮುಂದೆ ಬಂದು;

 "ಏನ್ರಿ ಎಷ್ಟು ಹಾರ್ನ್ ಕೊಟ್ಟ್ರು ನಿಲ್ಲಂಗಿಲ್ ಅಲ್ರೀ...." ಎಂದ ಲಕ್ಕಿ.
 "ಏನ್ ಸರ್ ನೀವು...." ಎಂದು ನಾನು ನಕ್ಕೆ. 
"ಅಲ್ಲೋ ಎಷ್ಟ್ ಹಾರ್ನ್ ಕೊಟ್ರು ಹಂಗs ಹೊಂಟಿಯಲ್ಲೋ..."
"ಈಗ ಸೈಡ್ ಕೊಟ್ಟಿನಲ್ ಪಾ...... ಮತ್ತ....?"
"ಒಸ್ವಾಲ್ ಹೊಂಟನಿ, ಟ್ರ್ಯಾಕ್ ಪ್ಯಾಂಟ್ ತಗೊಳ್ಳಾಕ್.."
"ಸಿಂಧೂರ ಹಾಲ್ ಒಳಗ್ ಎಕ್ಸಿಬಿಷನ್ ಐತಿ, ಅಲ್ಲೇ ನೋಡಬೇಕಿಲ್ಲ ಆಫೀಸ್ ಮುಂದ್..." 
"ಹೌದಾ.... ನೋಡಲೇ ಇಲ್ಲಲ್ ನಾ... ಚಲೋ ಅದಾವ ಏನಲ್ಲಿ..?"
"ಚಲೋ ಅವ, ಚಲೋ ಅವ...."
"ಆಯ್ತ್ ತಡಿ ಹಂಗಾರ... "
"ಹೆಂಗೂ ಬಂದs ಬಿಟ್ಟಿs, ಒಸವಾಲ್ ನೋಡ್ಕೊಂಡ್ ಹೋಗ್ ಮತ್ತ್.."
"ಓಕೆ ದೋಸ್ತ್.."
ಎಂದು ಲಕ್ಕಿನೂ ಹೋರಾಟ ನಾನೂ ಹೊರಟೆ. ನಾನು ಜುಬಿಲಿ ಸರ್ಕಲ್ ಗೆ ಬಂದೆ, ಟ್ರಾಫಿಕ್ ಸಿಗ್ನಲ್ ಇತ್ತು, ನಿಂತಿದ್ದೆ. ಎಡಗಡೆ ಜಗಜ್ಯೋತಿ ಬಸವಣ್ಣನವರ ಮೂರ್ತಿಯ ಎದುರಿಗೆ ಹುಡುಗಿಯೊಬ್ಬಳು ಹುಡುಗನನ್ನು "ಬಾರೋ ಬಾ ಬಾ..." ಎಂದು ಅವನ ಹೆಗಲ ಮೇಲೆ ಕೈ ಹಾಕಿ ಎಳೆಯುತ್ತಿದ್ದಳು. ಹುಡುಗ ಮುಜುಗರ ಪಟ್ಟುಕೊಳ್ಳುತ್ತಿದ್ದನೋ, ಹೆದರುತ್ತಿದ್ದನೋ ಗೊತ್ತಾಗಲಿಲ್ಲ. ಒಟ್ಟಿನಲ್ಲಿ ಹುಡುಗಿಯ ಜೊತೆ ಹೋಗಲು ಹಿಂದೇಟು ಹಾಕುತ್ತಿದ್ದ. ಆದರೆ ಆಕೆ ಆ ಬಾಲಕನನ್ನು ಹಾಗೆ ಕರೆಯುತ್ತಲೇ ಇದ್ದಳು.  ಹುಡುಗ ಸಂಜೆ ವಾಣಿ ಪತ್ರಿಕೆ ಮತ್ತು 2020ರ ಕ್ಯಾಲೆಂಡರ್ ಮಾರುತ್ತಿದ್ದ, ಹುಡುಗಿ ಹೆಚ್ಚು-ಕಡಿಮೆ ಕಾಲೇಜು ಓದುತ್ತಿರಬಹುದು. "ಇಷ್ಟು ಸಣ್ಣ ವಯಸ್ಸಿನಲ್ಲಿ ನೀನು ಪೇಪರ್ ಮಾರಿ..." ಅಂತೇನೋ ಸಂಭಾಷಣೆ ನಡೆದಿತ್ತು ಆ ಟ್ರಾಫಿಕ್ ಒಳಗೆ ಅವರ ಸಂಭಾಷಣೆ ಸ್ಪಷ್ಟವಾಗಿರಲಿಲ್ಲ. ಹುಡುಗನ ತಲೆ, ಕೆನ್ನೆ ನೇವರಿಸಿ ಮತನಾಡಿಸುತ್ತಿದ್ದಳು. ಹುಡುಗ ಸಂಕೋಚದಲ್ಲೇ ಉತ್ತರಿಸುತ್ತಿದ್ದ. 

"ಬಾ ನಿಂಗ್ ಡ್ರೆಸ್ ಕೊಡಸ್ತೆನಿ "
"ಬ್ಯಾಡ್ ಅಕ್ಕಾ.. ನಾ ಇವಷ್ಟ್ ಮಾರಿ ಮನಿಗಿ ಹೋಗಬೇಕು."
"ಏ ಬಾರೋ ಬಾ ಬಾ..." 

        ಇದನ್ನು ನೋಡುತ್ತಿದ್ದಂತೆಯೇ ನನ್ನ ಹೆಂಡತಿ ನನಗೆ ನಿನ್ನೆ ಹೇಳಿದ "ರೀ, ನಾಳೆ ಬರುವಾಗ ಕ್ಯಾಲೆಂಡರ್ ತಗೊಂಡ್ ಬರ್ರಿ" ಎಂದಿದ್ದು ನೆನಪಾಯಿತು. ಬೈಕ್ ಸೈಡ್ ಗೆ ತೆಗೆದುಕೊಳ್ಳುವ ತವಕದಲ್ಲಿದ್ದೆ, ಟ್ರಾಫಿಕ್ ಪೊಲೀಸ್ ಸೀಟಿ ಹಾಕಿ, ಕೈ ಮಾಡಿದ. ಹಿಂದಿನವರೆಲ್ಲ ನಾನೆಲ್ಲೋ LoC ಕ್ರಾಸ್ ಮಾಡಿದವನ ತರ 'ಕಿನ್ ಕೀ, ಪಾಂವ್ ಪಾಂವ್, ಪ್ಯಾಂವ್ ಪ್ಯಾಂವ್' ಶುರುವಿಟ್ಟರು. ಎಲ್ಲವನ್ನು ಅಷ್ಟಕ್ಕೇ ಬಿಟ್ಟು ಸರ್ಕಲ್ ಕ್ರಾಸ್ ಮಾಡಿದೆ. 

       ಮನೆಗೆ ಬರುವವರೆಗೂ ಆ ಹುಡುಗಿ, ಹುಡುಗನ ಸಂಭಾಷಣೆ ಆಕೆಯ ಆತ್ಮೀಯತೆ, ಅವನ ಸಂಕೋಚ; ಅವನ ಬಗೆಗಿನ ಅವಳ ಅಂತಃಕರಣ, ಅವನಿಗಿರಬಹುದಾದ ಜವಾಬ್ಧಾರಿಗಳು ತಲೆಯಲ್ಲಿ ಬೈಕಿನಷ್ಟೇ ವೇಗವಾಗಿ ಓಡತೊಡಗಿದವು.

Tuesday, 6 August 2019

ಮಳೆ



ಮಳೆ ಮಳೆ ಮಳೆ
ಯಾಕಿಷ್ಟು ಅಳುವೆ ತಾಳೇ..
ನಿಲ್ಲದ ಈ ನಿನ್ನ ನೀರ ಧಾರೆ-
ಗೆ ಬೇಸ್ತು ಬಿದ್ದಿದೆ ಧರೆ !!

ಒತ್ತರಿಸಿ ಬಂದ ದುಃಖವನು
ಅವಡುಗಚ್ಚಿ ಹಿಡಿದರೂ ನಿಲ್ಲದೇ
ಸುರಿಯುತಿರುವೆ ಮುಗಿಲ ಮಣಿನಿ ನೀನು
ಕಣ್ಣೀರು; ಇಷ್ಟೊಂದು ದುಃಖ ಯಾಕಾಗಿದೆ ??

ಒಣ ಮೊಗದಲ್ಲಿ ಕಳೆ ರಾರಾಜಿಸಿ
ಇಳೆಯ ಒಡಲೆಲ್ಲ ನೀರ ತುಂಬಿಸಿ;
ಬಹು ವರ್ಷದಿಂದ ಬತ್ತಿದೊಡಲುಣಿಸಿ
ಸುರಿಸುವೆ ಅನಂದಬಾಷ್ಪ ಚುಂಬಿಸಿ-ಚುಂಬಿಸಿ.

  ✍ಸತೀಶ ಉ ನಡಗಡ್ಡಿ

Wednesday, 10 July 2019

ಟ್ರಾಫಿಕ್ ಸಿಗ್ನಲ್ - ಪೋಸ್ಟ್ ಆಫೀಸ್


             ಮಧ್ಯಾಹ್ನ, ಆಫೀಸಿನಿಂದ ಊಟಕ್ಕೆ ಅಂತ ಬರ್ತಿದ್ದೆ. ಓಲ್ಡ್ ಎಸ್ಪಿ ಸರ್ಕಲ್ ದಾಟಿ ಬಂದು, ಪೆಟ್ರೋಲ್ ಪಂಪ್ ಹತ್ತಿರದಲ್ಲಿ ಆಗುತ್ತಿರುವ ಕಾಂಕ್ರೀಟ್ ರೋಡು ಕಾಮಗಾರಿಯನ್ನು ಕಂಡು "ಏನ್ ಡೆವೆಲಪ್ ಮಾಡ್ತಾರೋ ಏನೋ.... ಸರಿಯಾಗಿ ಡ್ರೈನೇಜ್ ವ್ಯವಸ್ಥೆ ಮಾಡಲ್ಲಾ, ಚರಂಡಿ ಸಂಪರ್ಕ ಹೋಗಿ ಕುಡಿಯೋ ನೀರಿಗೆ ಕುಡಿರ್ತದ... ಬಿಸಿಲಲ್ಲಿ ಮಾಡಿರೋ ಡ್ರೈನೇಜಗಳು ಮಳ್ಯಾಗ ನೀರು ವಾಂತಿ ಮಾಡ್ತಿರ್ತಾವ... " ಅಂತ ಏನೇನೋ ಮನಸ್ಸಿನಲ್ಲಿ ಅಂದುಕೊಳ್ಳುತ್ತಾ ಹೊರಟಿದ್ದೆ. ಪೀಟರ್ ಇಂಗ್ಲೆಂಡ್ ಎದುರಿಗೆ ನಿಂತಿದ್ದ ಆಟೋ ಡ್ರೈವರ್ ಒಬ್ಬಂವ 'ಗರ್ರ್ರ್ರ್...' ಅಂತ ಜುಬಲಿ ಸರ್ಕಲ್ ಕಡೆ ಆಟೋ ತಿರಿವಿದ. ಮೊದಲೇ ಸ್ವಲ್ಪ ಅವಸರದಲ್ಲಿದ್ದೆ, ಬ್ರೇಕ್ ಹಾಕಿದೆ, ಬೈಕ್ 'ಟರ್ರ್ರ್ರ್...'  ಎಂದು ಎಳೆಯಿತು. ಅವನೋ ಅವನ ಪಾಡಿಗೆ ಹೋದ. "ಆ ಇಂಡಿಕೇಟರ್ ಏನ್ ಚಂದಕ್ಕ ಇಟ್ಟರ ಅಂದ್ಕೊಂಡಿ ಏನ್ ಪಾ..... ? " ಅಂದೆ. ಅದಾಗಲೇ ಆಟೋ 10 ಅಡಿ ಮುಂದೆ ಹೋಗಿತ್ತು. 
                  ಜ್ಯೂಬಿಲಿ ಸರ್ಕಲ್ ಗೆ ಬಂದಾಗ ಸಿಗ್ನಲ್ ಇತ್ತು. ಆಟೋ ರಿಕ್ಷಾ ದಾಟಿತು. ನಾನು ಅಲ್ಲೇ ನಿಂತೆ. ಪಕ್ಕದಲ್ಲಿ ಒಂದು ಸ್ಕೂಟಿ ಬಂದು ನಿಂತಿತು. ಇಬ್ಬರು ಇದ್ದರು. ಸುಮ್ಮನೆ ಕಣ್ಣು ಹಾಯಿಸಿದೆ. 
         " ಎಲ್ಯಂತ ಹುಡುಕೂದ್ಲೇ.... " ಹಿಂದೆ ಕುಳಿತವ ಕೇಳಿದ.
         " ಇಲ್ಲಿ ಪೋಸ್ಟ್ ಆಫೀಸ್ ಎಲ್ಯವs ರೀ...?" ಮುಂದಿನವ ನನ್ನ ಕೇಳಿದ.
         " ನಿಮಗ ಯಾವ ಪೋಸ್ಟ್ ಆಫೀಸ್ ಬೇಕ....?"
         "ಯಾವ್ದಾದ್ರೂ ನಡಿತದ....?" 
         " ಈ ಕಾರ್ನೆರ್ ಒಳಗ ಹೋಗಿ, ಹಣಮಂತ ದೇವರ ಗುಡಿ ಹಿಂದ RIGHT TURN ತುಗೊಂಡ್ LEFT ಹೋದ್ರ Line Bazar ಪೋಸ್ಟ್ ಆಫೀಸ್ ಅದ. ಹಿಂಗss ಸ್ಟ್ರೆಟ್ ಹೋದ್ರ Head ಪೋಸ್ಟ್ ಆಫೀಸ್ ಸಿಗ್ತದೆ. ಅದನೂ ದಾಟಿ ಮುಂದ ಹೋದ್ರ ರೈಲ್ವೆ ಸ್ಟೇಷನ್ ಪೋಸ್ಟ್ ಆಫೀಸ್ ಬರ್ತದ. Head ಪೋಸ್ಟ್ ಆಫೀಸ್ ಇಂದ BSNL ಆಫೀಸ್ ಮೂಲಕ DC ಕಾಂಪೌಂಡ್ ಹೋದ್ರ ಕಚೇರಿ post ಆಫೀಸ್ ಅದ. ಹಂಗss ಆಲೂರ್ ವೆಂಕಟರಾವ್ ಸಭಾಭವನ ಕಡೆ ಇಂದ, KCD ಸರ್ಕಲ್ ಗೆ ಬಂದು SBM ATM ಹತ್ರ ನಿಂತ್ರ ಸಪ್ತಾಪುರ ಪೋಸ್ಟ್ ಆಫೀಸ್ ಸಿಗ್ತದೆ. ಅಲ್ಲಿಂದ ಮುಂದ ಸರ್ಕಲ್ ಗೆ ರೈಟ್ TURN ತುಗೊಂಡ್ ಹಳಿಯಾಳ ರೋಡ್ ಇಂದ ಜರ್ಮನ್ ಹಾಸ್ಪಿಟಲ್ ರೋಡ್ ಹಿಡ್ಕೊಂಡ್ ಬಂದು ಕೆನರಾ ಬ್ಯಾಂಕ್ ಎದುರಿನ ರೋಡಿಗೆ ಹೋದ್ರ ನಾರಾಯಣಪುರ ಪೋಸ್ಟ್ ಆಫೀಸ್ ಅದ. ಅಲ್ಲಿಂದ ಬಂದು TV ಟವರ್ ಸರ್ಕಲ್ ಗೆ ಲೆಫ್ಟ್ TURN ತುಗೊಂಡ್ ಗಿರಿಯಾಸ್ ದಾಟಿ ಹೋದ್ರ ಅಲ್ಲಿ K C ಪಾರ್ಕ್ ಪೋಸ್ಟ್ ಆಫೀಸ್ ಅದ. ಹಾಂಗSS ಮುಂದ ಓಲ್ಡ್ ಎಸ್ಪಿ ಸರ್ಕಲ್ ಇಂದ ಸವದತ್ತಿ ರೋಡಿಗೆ ಹೋದ್ರ M J ನಗರ ಪೋಸ್ಟ್ ಆಫೀಸ್ ಸಿಗ್ತದ. ಅಲ್ಲಿಂದ ಶಿವಾಜಿ ಸರ್ಕಲ್ ಕಡಿಂದ ಹಳೆ ಬಸ್ ಸ್ಟ್ಯಾಂಡ್ ದಾಟಿ ಸುಭಾಸ ರೋಡಿಲೆ KCC ಬ್ಯಾಂಕ್ ದಾಟಿ ಗಾಂಧಿ ಚೌಕ್ ದಾಟಿದ್ರ ಧಾರವಾಡ ಸಿಟಿ ಮತ್ತ ಮಾರ್ಕೆಟ್ ಪೋಸ್ಟ್ ಆಫೀಸ್ ಸಿಗ್ತಾವ್...... "
     "  ಸಾಕ್ ಬಿಡ ಅಣ್ಣಾ..." ಎಂದು ಗೊಂದಲಕ್ಕೀಡಾದ.
     "ಅದ್ಕ ಕೇಳಿದೆ ನಾ ಯಾವ ಪೋಸ್ಟ್ ಆಫೀಸ್ ಬೇಕ ನಿಮಗ ಅಂತ..."
    " THANKS ಅಣ್ಣಾ..."
  ಅಷ್ಟರಲ್ಲಿ ಟ್ರಾಫಿಕ್ ಪೋಲಿಸ್ ಸೀಟಿ ಹಾಕಿ ಕೈ ಮಾಡಿದ. ನನ್ನ ದಾರಿಗೆ ನಾ ಬಂದೆ. ಆದರ ಟ್ರಾಫಿಕ್ ಸಿಗ್ನಲ್ ಒಳಗ ನಿಂತ 'ಪೋಸ್ಟ್ ಆಫೀಸ್ ಎಲ್ಯವ ...?' ಅಂತ ಕೇಳಿ ತಲಿ ಒಳಗ ಟ್ರಾಫಿಕ್ ಜಾಮ್ ಮಾಡ್ಕೊಂಡ ಹೋದ್ರ ಅವರ.

                                         ✍ ಸತೀಶ ಉ ನಡಗಡ್ಡಿ

Monday, 3 June 2019

ಮಾರ್ಕೆಟ್ ಕವಿತೆ




ಇಷ್ಟೊಂದು ಗಡಿಯಾರ ಇಟ್ಕೊಂಡಿರುವ
ಇವನಿಗದೆಷ್ಟು ಸಮಯವಿರಬಹುದು !!

ಇಷ್ಟೆಲ್ಲಾ ಬ್ಯಾಟರಿಗಳಿಟ್ಟುಕೊಂಡಿರುವ
ಈತನಲ್ಲಿ ಎಷ್ಟೊಂದು ಬೆಳಕಿರಬಹುದು !!!

ಸೊಳ್ಳೆಗಳ ಮ್ಯಾಟ್ ಮಾರುವ ಇವ
ಸೊಳ್ಳೆ ಸಾಮ್ರಾಜ್ಯಕ್ಕೆ ನಿಜಕ್ಕೂ ಯಮನಾಗಿರಬಹುದು !!!!
✍ ಸತೀಸಾ...