Wednesday 6 January 2016

ಸಂಜೆ ಹೊತ್ತಲ್ಲಿ ಅಪ್ಪಾ ನೆನಪಿಸಿದ ಕನ್ನಡ ಮೇಷ್ಟ್ರ ಪಾಠ....



ಒಂದು ದಿನ ಸಾಯಂಕಾಲ ನಾನು ಮತ್ತೆ ಅಪ್ಪಾ ಇಬ್ಬರೂ ಮನೆಯಲ್ಲಿ ಟೀ ಕುಡೀತಾ ಕೂತಿದ್ವಿ. ಅಪ್ಪಾ ಏನೋ ನೆನಪಿಸಿಕೊಂಡು, ಒಂದು ರೀತಿಯ ಜೀವನ ಸಾರ್ಥಕ್ಯದ ನಗೆ ಬೀರಿ ಹೇಳಿದರು "ನಿಮ್ಮ ವಾರಿಗಿ ಹುಡುಗೋರ್ ಆಯ್ತು, ದೊಡ್ಡವ್ರ ಆಯ್ತು, ಸಣ್ಣಾವ್ರ ಆಯ್ತು, ಒಟ್ಟ ನಿಂಗಾ ಮತ್ತ ಅಣ್ಣಾಗ ಬಳಕಿ ಇದ್ದ ಯಾವ ಹುಡಗೋರ್ ಆದ್ರೂ…. ಎಲ್ಲ್ಯರ ಬಸ್ಸಿನ್ಯಾಗ ಅದೂ ನಾಂವ್ ಕಂಡ್ರ ತಾಂವ್ ಕುಂತಿದ್ದ ಸೀಟ್ ಬಿಟ್ಟ ಕೊಡ್ತಾರ. ‘ಬಸ್ಸುಗೊಳ ಅವ್ವ-ಅಪ್ಪ, ಸತೀಶಗೊಳ ಅವ್ವ-ಅಪ್ಪ’ ಅಂತಂದ ನಿಲ್ಲಾಕ ಬಿಡುದುಲ್ಲ. ಸೀಟಿನೊಳಗ್ ಕುಣಸತಾರ."

              ಅಪ್ಪಾ ಹಾಗೆ ಹೇಳಿದ ತಕ್ಷಣ ನನಗೆ ಮೊದಲು ನೆನಪಾಗಿದ್ದು ಹೈಸ್ಕೂಲಿನಲ್ಲಿ ಓದುತ್ತಿದ್ದಾಗ ನನ್ನನ್ನು ಯಾವಾಗಲೂ ಅಪ್ಪನ ಹೆಸರಿನಿಂದಲೇ ಕರೆಯುತ್ತಿದ್ದ ಕನ್ನಡ ಶಿಕ್ಷಕರಾದ ಶ್ರೀ ಅಶೋಕ ಖೋತ ಗುರುಗಳು ಮತ್ತು ಒಂದು ದಿನ ಕ್ಲಾಸಿನಲ್ಲಿ ’ಹಾಗೇಕೆ ನನ್ನನ್ನು ಕರೆಯುತ್ತಾರೆ?" ಎಂಬುದನ್ನು ವಿವರಿಸಿದ ದೃಶ್ಯ.

           
               ಅವತ್ತೊಂದು ದಿನ ಊಟ ಮುಗಿದ ನಂತರ ಮಧ್ಯಾಹ್ನ ಇತಿಹಾಸ ಕ್ಲಾಸ್ ಇತ್ತು. ಆದರೆ ಆ ವಿಷಯದ ಶಿಕ್ಷಕಿಯವರು ಅವತ್ತು ಪಾಠದ ಬದಲಾಗಿ ಪ್ರಶ್ನೋತ್ತರ ಬರೆಯಿಸುತ್ತಿದ್ದರು. ಬರೆಯಿಸುತ್ತ, ಬರೆಯಿಸುತ್ತ ಪಕ್ಕದ ಕ್ಲಾಸಿನ ಹುಡುಗರ ಗಲಾಟೆ ಜಾಸ್ತಿ ಆಗಿದ್ದಕ್ಕೆ ವಿಚಾರಿಸಲು ಹೋದರು. ಹೋಗಬೇಕಾದರೆ ಆ ಪ್ರಶ್ನೋತ್ತರ ಪತ್ರಿಕೆಯನ್ನು ನನ್ನ ಕೈಗೆ ಕೊಟ್ಟು " ಏಯ್ ಸತೀಶಾ.... ಇವನ್ನ ಎಲ್ಲರಿಗೂ ಬರೆಯಿಸೊ...." ಎಂದು ಹೇಳಿ ಹೋದರು. ನಾನೂ ಅವರು ಹೇಳಿದಂತೆ ಮುಂದೆ ಹೋಗಿ ನಿಂತು ಓದಿ ಹೇಳುತ್ತ ಬರೆಯಿಸುತ್ತಿದ್ದೆ. ಸ್ವಲ್ಪ ಸಮಯದ ನಂತರ ಕೊನೆಯ ಕಿಟಕಿಯಲ್ಲಿ ಯಾರೋ ಬಂದ ಹಾಗೆ ಕಾಣಿಸಿತು. ಖಾತರಿ ಪಡಿಸಿಕೊಳ್ಳಲು ಮತ್ತೊಮ್ಮೆ ಆ ಕಡೆ ದೃಷ್ಠಿ ಹಾಯಿಸಿದೆ; ಖೋತ ಸರ್ ಬರುತ್ತಿದ್ದದು ಗೊತ್ತಾಗಿ, ಧ್ವನಿ ತಗ್ಗಿಸಿದೆ. ಅವತ್ತು ಅವರು ರಜೆಯಲ್ಲಿದ್ದರೂ ಯಾಕೋ ಮಧ್ಯಾಹ್ನ ಶಾಲೆಗೆ ಬಂದಿದ್ದರು. ಮೆಲ್ಲಗೆ ಮುಂದಿನ ಪ್ರಶ್ನೆ ‘ಸತಿ-ಸಹಗಮನ ಪದ್ಧತಿಯನ್ನು ರದ್ಧುಪಡಿಸಿದವರಾರು ?’ ಎಂದು ಹೇಳುತ್ತಿರಬೇಕಾದರೆ ಬಾಗಿಲಿಗೆ ಬಂದು ನಿಂತು ಗುರುಗಳು
" ಹೂಂ.... ಏನ್ ಸತೀಶ-ಉಮೇಶ, ಉಮೇಶ-ಸತೀಶ..?" ಎಂದರು.
   
       ಎಲ್ಲ ಹುಡುಗರೂ ‘ಗೊಳ್ಳ್’ ಎಂದು ನಗಲು ಪ್ರಾರಂಭಿಸಿದರು, ನಾನು ತಲೆ ಕೆಳಗೆ ಹಾಕಿಕೊಂಡು ನಿಂತೆ. ಗುರುಗಳು ಒಳಗೆ ಬಂದು ಮೇಜಿಗೆ ಒರಗಿ ನಿಂತು…
"ಏನ್ ಬರಸಾತಿನೋ....?"
" ಇತಿಹಾಸ ಪ್ರಶ್ನೆ-ಉತ್ತರ ಬರಸಾತಿದ್ನಿ ಸರ್..." ಅಂಜಂಜತ್ತು ಹೇಳಿದೆ.
" ಈಗ ನಾ ಬಂದಿನೊ ಇಲ್ಲೊ...?"
" ಹೂಂ... ಸರ್"
" ಮತ್ತ ನಡೀ ಇನ್ನ..... ಇಲ್ಲ್ಯಾಕ್ ನಿಂತಿ....?"

ಪ್ರಶ್ನೋತ್ತರ ಪತ್ರಿಕೆಯನ್ನು ತೆಗೆದುಕೊಂಡು ನಾನು ನನ್ನ ಬೆಂಚಿಗೆ ಹೋಗಿ ಕುಳಿತುಕೊಂಡೆ. ಒಂದೆರಡು ನಿಮಿಷ ನಿರಾಳರಾಗಿ ಅವರು ಮಾತನಾಡಲು ಶುರು ಮಾಡಿದರು.

" ನಾ ಅಂವಗ ಉಮೇಶ್-ಸತೀಶ್, ಸತೀಶ್-ಉಮೇಶ್ ಅಂದದ್ಕ ನೀವೆಲ್ಲ ನಕ್ಕಿದ್ರಿ ಅಲಾ.....?"
"........................................." ಪೂರ್ತಿ ಕ್ಲಾಸಿಗೆ ಕ್ಲಾಸು ಮೌನ. ಗುರುಗಳು ಮತ್ತೆ ಮುಂದುವರಿದು ಮಾತನಾಡಲು ಅಣಿಯಾದರು.
" ನಾ ಯಾಕ ಅವಂಗ್ ಹಂಗ ಅಂದೆ ಅಂದ್ರ...... ಇವತ್ತ್ ಜನ ಅವನ್ನ, ’ಇಂವ ಇಂತವರ ಮಗ’ ಅಂತ ಗುರುತ ಹಿಡಿತಾರ. ಅಂದ್ರ, ಉಮೇಶನ ಮಗ ಸತೀಶ... ಅಂತ. ಆದರ ಮುಂದ ಒಂದಿನ ನೀವೆಲ್ಲ ಮತ್ತ ಇದ ಜನಾ ಎಲ್ಲಾ ಇವರ ಅಪ್ಪಾನ್ ಹೆಸರಿನಿಂದ ಇವನ್ನ ಗುರುತ್ಸುದಿಲ್ಲ.... ಬದಲಾಗಿ; ಇವನ್ನ್ ಹೆಸರಿನಿಂದ ಇವರ ಅಪ್ಪಾನ್ ಗುರುತಿಸ್ತಾರ. ..................  ......................... ಏನ್ ಉಮೇಶ ನೆನಪಿಟ್ಕೋ ಈ ಮಾತ." ಎಂದು ಹೇಳಿ ಹೊರಟು ಹೋದರು.

ಗ್ಲಾಸಲ್ಲಿರೋ ಚಹ ಖಾಲಿಯಾಗಿತ್ತು ಆದರೆ ಆ ಕ್ಷಣ ಮನದ ತುಂಬ, ತಲೆಯ ತುಂಬ ಬರೀ ಹೈಸ್ಕೂಲಿನ ಕನ್ನಡ ಮೇಷ್ಟ್ರು, ಕ್ಲಾಸಿನೊಳಗಿನ ಆವತ್ತಿನ ದೃಶ್ಯಾವಳಿಯೇ ಕಣ್ಣಿಗೆ ಕಟ್ಟಿತ್ತು. ಇಂದಿಗೂ ಎಷ್ಟೊ ಸಲ ಅನಿಸಿದೆ " ಸರ್ ಹೇಳಿದ್ದು ನೂರಕ್ಕೆ ನೂರು ಸತ್ಯ.." ಅಂತ. " ನಾ ಈಗ ಹೇಳಿದ್ದನ್ನ ಮುಂದ ನೀವೆಲ್ಲ ಭಾಳ ನೆನಸ್ಕೋತಿರಿ- ಮತ್ತ..... ನಿರಾಶರೂ ಅಗ್ತೀರಿ. ನೆನಪಿಟ್ಕೊರಿ." ಇವ್ಯಾವನ್ನೂ ಮರೆಯೋಕ ಸಾಧ್ಯಇಲ್ಲ ಸರ್, ಪ್ರತೀ ದಿನ ಒಂದಲ್ಲ ಒಂದ ಕ್ಷಣ ನೀವು ಹೇಳಿದ ಹಾಗೇನೇ ನಡೇದಿರತ್ತೆ. ಬುದ್ಧಿ ಹೇಳಿದ ಗುರುವನ್ನು, ಜೀವನದ ಪಾಠ ಹೇಳಿದ ಗುರುಗಳನ್ನು ಮರೆಯಲಾದೀತೆ,,,..?

ನಿಜ ಹೇಳಬೇಕು ಅಂದ್ರೆ ನಾನೇನ್ ಮಹ ಸಾಧನೆ ಮಾಡಿಲ್ಲ. ಆದರೆ ಆ ದಿನಗಳಲ್ಲಿ, ಆ ಊರಲ್ಲಿ, ಆ ವಯಸ್ಸಿನಲ್ಲಿ, ಆ ಜನರಲ್ಲಿ ನಾನು ನನ್ನ 19ನೆಯ ವಯಸ್ಸಿಗೆ 19000/- ಸಂಬಳ ಸಿಗುವ ಕೇಂದ್ರ ಸರಕಾರದ ಅಂಚೆ ಇಲಾಖೆಯಲ್ಲಿ ನೌಕರಿಯಲ್ಲಿ ಸೇರಿದ್ದು ಒಂದು ಸಾಧನೆಯೇ ಅನಿಸಿತ್ತು.
                                                                - ಸತೀಶ ಉ ನಡಗಡ್ಡಿ