Friday 10 September 2021

ದಶಕದ ಮೆಲುಕು

 


           ಅದು 2011 ರ, ಮೇ 13ನೆಯ ತಾರೀಕು. ನಾನು ಕಣಬರ್ಗಿ ಬಿ. ಸಿ. ಎಂ ಹಾಸ್ಟೆಲ್-II ರ ರೂಮ್ ನಂಬರ್ 10ರಲ್ಲಿ ಇದ್ದೆ. ರಾತ್ರಿಯ ಹತ್ತು ಗಂಟೆಗೆ ಅಪ್ಪನಿಂದ ಫೋನ್ ಬಂತು.

" ಹಲೋ ಅಪ್ಪಾ..."

"ಸತೇಶ್........  " ಎಂದು ಸ್ವಲ್ಪ ಸುಮ್ಮನಾದರು. ನನಗೆ ಹೆದರಿಕೆ ಆಯಿತು ; ಏನು ಅಶುಭ ಸುದ್ಧಿಯೋ ಏನೋ ಎಂದು !

"ಏನಾತ್ ಪಾ... " ಹೆದರಿಕೆಯಲ್ಲಿ ಕೇಳಿದೆ.

"ಮುಲ್ಲಾ ಸಾಯಿಬರ ಬಂದಾರ್, ಬಾಳೋತ್ ಬಂದ್ ಕುತ್ತಾರ."

ಮೊದಲು ನನಗೆ ಬೇಗನೆ ಯಾರೆಂದು ಹೊಳೆಯಲಿಲ್ಲ ಹಾಗಾಗಿ ಬರಿ "ಹೂಂ... ಹೂಂ.." ಅಂತಷ್ಟೇ ಅಂದೆ.

"ನಿನ್ ಹಿಂಬಾಲಿ ಮಾತಾಡ್ತಾರ ಅಂತ ಕೊಡ್ತೇನ್ ನೋಡ್, ಮಾತಾಡ."

"ಹೂಂ....."

"ಹಲೋ..."

"ಹಲೋ ರೀ..."

"ಆರಾಮ ಅದಿ..."

"ಹಾಂ ಅಂಕಲ್ ಆರಾಮ ಅದೇನ್ರಿ... ನೀವರಿ ?" ಬಂದಿರೋದು ಪೋಸ್ಟ್ ಮಾಸ್ತರ್ ಮುಲ್ಲಾ ಅಂಕಲ್ ಎಂಬುದು ಖಾತರಿಯಾಯಿತು. ಬಹುಷಃ ಗ್ರಾಮ ಲೆಕ್ಕಿಗ ಹುದ್ದೆಗೆ ಅರ್ಜಿ ಹಕ್ಕಿದ್ದರ ಬಗ್ಗೆ ಏನಾದರೂ ಪತ್ರ ಬಂದಿರಬೇಕು ಅಂದುಕೊಂಡೆ.

" ಎಲ್ಲಿದಿ ಈಗ..?"

"ನಾ ಈಗ ಕಣಬರ್ಗಿ ಹಾಸ್ಟೆಲ್ ಒಳಗ್ ಅದೇನ್ರಿ ಅಂಕಲ್. "

" ನಾಳಿ, ನಿನ್ನ ಸಾಲೀವ್ ಒರ್ಜಿನಲ್ ಕಾಗದಗೋಳ್ ತುಗೊಂಡ್ ಮನಿಗಿ ಬಾ ."

" ನಾಳಿ ಎರಡನೇ ಶನಿವಾರ ಕಾಲೇಜ್ ಬಂದ್ ಐತ್ರಿ ನಮದ. ಒರ್ಜಿನಲ್ ಎಲ್ಲಾ ಕಾಲೇಜ್ ಕೊಟ್ಟೇವ್ರಿ D. ed ಅಡ್ಮಿಷನ್ ಮಾಡುವಾಗ."

"ಒಟ್ ಏನರೆ ಮಾಡಿ, ನಾಳಿ ಅವನ್ನೆಲ್ಲ ತುಗೊಂಡ್ ಮನಿಗಿ ಬಾ"

"ಹೌದ್ರಿ...."

"ಹೂಂ.. ನಿಮ್ ಅಪ್ಪಾರ್ ಕಡೆ ಕೊಡ್ತೇನ್ ನೋಡಿಲ್ಲಿ. " ಎಂದು 'ನೀವ್ ಹೇಳ್ರಿ' ಎಂದದ್ದು ಕೇಳಿತು. ಮುಲ್ಲಾ ಸಾಹೇಬರು ನನ್ನ ಅಪ್ಪನ ಬಾಯಿಂದಲೇ ಶುಭ ಸುದ್ಧಿ ಹೇಳಿಸುವ ಯೋಚನೆ ಮಾಡಿ ಹಾಗಂದಿರಬಹುದು ಎನಿಸಿತು.

"ಯಪ್ಪು..."

"ಹೇಳಪಾ..."

"ಇದ್sss... ಪೋಸ್ಟ್ ಅಫಿಸ್ ಅರ್ಜಿ ಹಾಕಿದ್ದಿ ?"

"ಹೂಂ... ಅವತ್ತು ಅಣ್ಣಾ ಅರ್ಜಿ ತಂದು ಕೊಟ್ಟಿದ್ದ. ಹಾಕಿದ್ನಿ. ಎಕ್ಸಾಮ್ ಬರದಿದ್ನಿ. ಪಾಸ್ ಆಗಿಲ್ಲ... ಪಾ "

"ಅದss. ಈಗ ಮುಲ್ಲಾ ಸಾಹಿಬರ ಸುದ್ಧಿ ತುಗೊಂಡ್ ಬಂದಾರ್."

"ಏನ್ ಅಂತ... ?"

"ಸೋಮಾರ್ ಒಟ್ಟ ಯಾವದs ಪರಿಸ್ಥಿತಿ ಒಳಗ್ ಸಾಲಿ ಕಾಗದ ತುಗೊಂದ್ ಅಲ್ಲಿ ಹಜರ್ ಇರಬೇಕ್ ಅಂತ" 

"ಅಂಕಲ್ ಕಡೆ ಕೊಡು ಕೇಳ್ತೆನ್.."

"ಕೊಡ್ತೇನ್ ಮಾತಾಡ . "

"ಹಲೋ ಅಂಕಲ್.."

"ಹೂಂ.. ನನಗ ಇವತ್ ನಮ್ಮ ಅಕೌಂಟ್ ಆಫೀಸ್ ಹತ್ತರಿಕಿ ಇಂದ್ ಫೋನ್ ಬಂದಿತ್ತು. ಅವರಿಗೆ ಗೋಕಾಕ್ ಡಿವಿಜನ್ ಆಫೀಸ್ ಇಂದ ಮತ್ತು ಗೋಕಾಕದವರಿಗೆ ಶಿವಮೊಗ್ಗ ಡಿವಿಜನ್ ಆಫೀಸ್ ಇಂದ ಫೋನ್ ಮಾಡಿ ಹೇಳಿದಾರ್... ಅದ್ಕ ನೀ ನಿನ್ನ ಕಾಗದಗೋಳ್ ತುಗೊಂಡ್ ಬಾ."

"ಅದ್ರ ಅಂಕಲ್ ಎಕ್ಸಾಮ್ ರಿಸಲ್ಟ್ ಬಿಟ್ಟಾಗ ನಾನು ಶಿವಮೊಗ್ಗ ಆಫೀಸ್ ಕೇಳಿದಾಗ 'ನಿಮ್ ಹೆಸರು ಲಿಸ್ಟ್ ಒಳಗೆ ಇಲ್ಲಾ ಕಣ್ರೀ.." ಅಂದಿದ್ರು."

" ಇವತ್ ಫೋನ್ ಬಂದೇತಿ ಅಂದ್ರ್ ಮತ್ತ ಏನರೆ ಬದ್ಲಾವ್ ಆಗಿರ್ಬೇಕ್... ಒಂದ್ಸಲ ಕಾಗದ ತುಗೊಂಡ್ ಹೋಗಿ ಬಾ "

" ಆಯ್ತು ಅಂಕಲ್.."

         ನಾನು ಎಕ್ಸಾಮ್ ರಿಸಲ್ಟ್ ಬಂದಾಗ ಶಿವಮೊಗ್ಗ ಆಫೀಸ್ ಗೆ ಕೇಳಿದಾಗ ನನ್ನ ಹೆಸರು ಇಲ್ಲ ಅಂದಿದ್ದು, ಇನ್ನೊಂದಿಷ್ಟು ನನ್ನ ಸ್ನೇಹಿತರು ಸೆಲೆಕ್ಟ್ ಆದವರು ಅಂದು ಪಟ್ಟ ಖುಷಿ, ಸೆಲೆಕ್ಟ್ ಆಗದೆ ಇರುವ ಹುಡುಗಿಯೊಬ್ಬಳು ಗೋಳೋ ಎಂದು ಅಳುತ್ತಾ ಕುಳಿತದ್ದು ಎಲ್ಲಾ ನನ್ನ ನೆನಪಿಗೆ ಬಂತು. 

"ಏನೇ ಆಗಲಿ ಒಂದು ಸಲ ಸೆಲೆಕ್ಟ್ ಆಗಿರುವವರನ್ನು ಕೇಳಿ ನೋಡೋಣ " ಎಂದಂದುಕೊಂಡು ಬಸಯ್ಯ ಒಡೆಯರ್ ಗೆ ಫೋನ್ ಮಾಡಿದೆ.

"ಹೇಳೋ ದೋಸ್ತ್... ಆರಾಮ ಅದಿ ?"

"ಆರಾಮ ದೋಸ್ತ್..ನೀ ?"

"ನಾನು ಆರಾಮ.. ಮತ್ತೆನ್ ವಿಶೇಷ...?"

ವಿಷಯವನ್ನು ಹೇಳಿದೆ ಅವನಿಗೆ, 

" ದೋಸ್ತ್... congratulations. ನೀ ಲಕ್ಕಿ ಅದಿ. ನಿನ್ನ ಹೆಸರನ್ಯಾಗ್ ಒಂದ್ ಫೈಲ್ ಓಪನ್ ಆಗಿರ್ತದ. ತಲಿ ಕೆಡಸ್ಕೊಬ್ಯಾಡ್ ದೋಸ್ತ್, ಒಟ್ಟ ಡಾಕ್ಯುಮೆಂಟ್ಸ್ ಎಲ್ಲಾ ತುಗೊಂಡ್ ಹೊಂಟ ಬಿಡನಿ. "

"ಅಲ್ಲೋ ದೋಸ್ತ್.. ರಿಸಲ್ಟ್ ಬಂದಾಗ ಹಿಂಗ್ ಅಂದಿದ್ರು ಮತ್ತsss..." 

"ಖರೆ ಖರೆ.. ನಿಂದ ಈಗ ವೇಟಿಂಗ್ ಲಿಸ್ಟ್ ಒಳಗ ಆಗೇತಿ... ನೀ ಚಿಂತಿ ಮಾಡ್ಬ್ಯಾಡಲೇ ಮಗನ ಹೋಗ್ "

"ಹಂಗ ಅಂದ್ಯs "

"ಶಿವಮೊಗ್ಗ ಡಿವಿಜನ್ ಆಫೀಸ್ ಒಳಗ ರಾಧಾ ಮೇಡಂ ಅಂತ ಇರ್ತಾರ್ ಅವರಿಗೆ ಫೋನ್ ಮಾಡು ಕೇಳ್ಕೊಂಡ್ ಹೋಗ್.... ನಂಬರ್ ಕೊಡ್ತೇನಿ."

"ಓಕೆ ದೋಸ್ತ್, ಥಾಂಕ್ಸ್..."

"ಅಲ್ಲಲೇ ಮಗನ, ನಿಂದs ಭೇಷ್ ಆಯ್ತ್ ನೋಡ್ಲೆ... ಕಾಲೇಜ ಟ್ರಿಪ್ ಮುಗ್ಸಿದಿ, ಈಗ ನೌಕರಿನೂ join ಆಗಕತ್ತಿ.. ನಾವ್ ಸೆಲೆಕ್ಟ್ ಆಗಿವಿ ಅಂತ ಕಾಲೇಜ್ ಬಿಟ್ ಆಕಡೆ ಇನ್ನ join ಆಗ್ಲಿಲ್ಲ. ಈ ಕಡೆ ಕಾಲೇಜ್ ಟ್ರಿಪ್ಪು ಆಗ್ಲಿಲ್ಲ. " ಎಂದು ತನ್ನ ನಶೀಬ್ ಬಗ್ಗೆ ಹೇಳಿದನು.


           ಮರು ದಿನ (ಶನಿವಾರ ತಾ. 14.05.2011) ಬೆಳಿಗ್ಗೆ 10 ಗಂಟೆಗೆ ನಾನು ಶಿವಮೊಗ್ಗ ಡಿವಿಜನ್ ಆಫೀಸ್ ನಂಬರಿಗೆ ಫೋನ್ ಮಾಡಿ ;

"ರಾಧಾ ಮೇಡಂ ಬೇಕಿತ್ರಿ.."

"ನಾನೇ ಹೇಳಿ. "

"ನಮಸ್ತೆ ಮೇಡಂ, ನಾನು ಸತೀಶ್ ಅಂತ ಬೆಳಗಾವಿಯಿಂದ ರೀ... .."

"ಅಯ್ಯೋ ದೇವ್ರೇ, ಸತೀಶ್ ಅವ್ರೇ ನೀವು ಪೋಸ್ಟಲ್ ಅಸ್ಸಿಸ್ಟಂಟ್ ಅಂತ ಸೆಲೆಕ್ಟ್ ಆಗಿದಿರಾ ಕಣ್ರೀ.. ಸೋಮವಾರ ನೀವು ಡಾಕ್ಯುಮೆಂಟ್ಸ್ ತಗೊಂಡ್ ಬನ್ನಿ ವೇರಿಫಿಕೇಶನ್ ಗೆ.. "

"ಅಲ್ಲ ಮೇಡಂ.. ರಿಸಲ್ಟ್ ಬಂದಾಗ ನನ್ನ ಹೆಸರ್ ಲಿಸ್ಟ್ ಒಳಗ್ ಇರ್ಲಿಲ್ರಿ..."

"ಹೌದು ಕಣ್ರೀ.. ನೀವು ವೇಟಿಂಗ್ ಲಿಸ್ಟ್ ಒಳಗೆ ಸೆಲೆಕ್ಟ್ ಆಗಿದಿರಾ. "

" ಆಯ್ತ್ರಿ ಮೇಡಂ ಬರ್ತೀನಿ. " 


          ನಿನ್ನೆ ರಾತ್ರಿಯಿಂದ ಇಲ್ಲಿಯವರೆಗೆ ಕನಸಲ್ಲಿ ಇದ್ದೋನ ತರ ಇದ್ದ ನನಗೆ ಇದು ಕನಸಲ್ಲ ನನಸು ಅನಿಸಿತು. ಖುಷಿಯೋ ಖುಷಿ. ಕೇಂದ್ರ ಸರಕಾರದ ನೌಕರಿ, ತಿನ್ನೋಕೆ ಒಂದು ತುತ್ತು ಅನ್ನ ಸಿಕ್ಕರೆ ಸಾಕು ಅಂತಿದ್ದ ನನಗೆ ಕೆಜಿ ಕೆಜಿ ಗಟ್ಟಲೆ ಆಪಲ್ ಕೊಟ್ಟು ತಿನ್ನಲು ಕೂರಿಸಿದಂಗಾಗಿತ್ತು.

            ದೊಡ್ಡಪ್ಪರಿಗೆ ಫೋನ್ ಮಾಡಿದೆ;

"ಸತೀಶ್ ನಿನ್ನೆ ರಾತ್ರಿ ಅಪ್ಪ ಮಾತಾಡಿದಾನು. ನಿನ್ ಕಾಲೇಜ್ ಒಳಗ್ ಡಾಕ್ಯುಮೆಂಟ್ಸ್ ಕೊಟ್ರೇನೋ... ?"

" ದೊಡ್ಡಪ್ಪಾ.. ಈಗ ಫೋನ್ ಮಾಡಬೇಕ ಪ್ರಿನ್ಸಿಪಾಲರಿಗೆ. "

"ಫೋನ್ ಮಾಡು, ಮಾಡಿ ಡಾಕ್ಯುಮೆಂಟ್ಸ್ ರೆಡಿ ಇಟ್ಕೋ. ನಾಳೆ ನೈಟ್ ಬಸ್ ಹಿಡ್ಕೊಂಡ್ ಹೋಗೋಣ."

"ಹೂಂ. ದೊಡ್ಡಪ್ಪ ಇವತ್ತು ತುಗೊಂಡ್ ಇಟ್ಕೋತೆನಿ."

       ಅವತ್ತೆ ಡಯಟ್ ಪ್ರಾಂಶುಪಾಲರೂ, ಉಪನ್ಯಾಸಕರೂ ಆಗಿದ್ದ ದಂಡಿನ ಸರ್ ಗೆ ಫೋನ್ ಮಾಡಿ ವಿಷಯವನ್ನು ತಿಳಿಸಿದೆ. ಮೂಲ ದಾಖಲೆಗಳನ್ನು ಮರಳಿಸುವ ಭರವಸೆ ಕೊಟ್ಟರು. ಕಾಲೇಜಿಗೆ ಹೋಗಿ ವಿನಂತಿ ಪತ್ರ ಬರೆದುಕೊಟ್ಟು ಮೂಲ ದಾಖಲೆಗಳನ್ನು ತೆಗೆದುಕೊಂಡು ಹಾಸ್ಟೆಲ್ ಗೆ ಹಿಂತಿರುಗಿದೆ.


             ಮರುದಿನ (ರವಿವಾರ ತಾ. 15.05.2011) ರಾತ್ರಿ 10.30ಕ್ಕೆ ನಾನು ದೊಡ್ಡಪ್ಪ ಶಿವಮೊಗ್ಗ ಬಸ್ ಹತ್ತಿದೆವು. ಬೆಳಗಿನ 4.00 ಗಂಟೆಗೆ ಶಿವಮೊಗ್ಗ ತಲುಪಿದೆವು. ಹತ್ತಿರದ ಲಾಡ್ಜ್ ನಲ್ಲಿ ಉಳ್ಕೊಂಡು ಸ್ವಲ್ಪ ಹೊತ್ತು ರೆಸ್ಟ್ ಮಾಡಿ ಸೋಮವಾರ (ತಾ. 16.05.2011)ಬೆಳಿಗ್ಗೆ 10 ಗಂಟೆಗೆ ಸರಿಯಾಗಿ ಕೋಟೆ ರೋಡ್ನಲ್ಲಿರುವ ಅಂಚೆ ಅಧೀಕ್ಷಕರ ಕಚೇರಿ ಶಿವಮೊಗ್ಗಕ್ಕೆ ತಲುಪಿದೆವು. "ರಾಧಾ ಮೇಡಂ" ಅವರನ್ನು ಕೇಳಿದೆವು. ಅವರನ್ನು ತೋರಿಸಿದರು. ಅವರ ಹತ್ತಿರ ಹೋಗುತ್ತಿದ್ದಂತೆ ;

"ಸತೀಶ್ ಅವರೇ welcome to ಪೋಸ್ಟಲ್ ಫ್ಯಾಮಿಲಿ. "

"ಥಾಂಕ್ಸ್ ಮೇಡಂ.." ದೊಡ್ಡಪ್ಪ ಮತ್ತು ನಾನು ಒಟ್ಟಿಗೆ ಹೇಳಿದೆವು.

" ಬನ್ನಿ SP ಸರ್ ಗೆ ಭೇಟಿ ಮಾಡಿಸ್ತೀನಿ."

"....... " ರಾಧಾ ಮೇಡಂ ಅವರನ್ನು ಹಿಂಬಾಲಿಸಿದೆವು.

" ಸರ್ ಇವರು ಸತೀಶ್ ಅಂತಾ. ಬೆಳಗಾವಿಯಿಂದ ಬಂದಿದಾರೆ. ನ್ಯೂ ಅಪ್ಪೋಯಿಂಟ್ ಆಗಿರೋರು." ಎಂದು ಪರಿಚಯಿಸಿದರು. ಟೇಬಲ್ ಮೇಲೆ "J. C. ಶ್ರೀನಿವಾಸ್ Superintendent of Post Offices, Shimogga Division, shimoga 577202" ಬೋರ್ಡ್ ಇತ್ತು.

"ಏನಪ್ಪಾ ರಾಜಾ.. ಹೇಗಿದಿಯಾ ?"

"ಆರಾಮ ಅದೀನ್ರಿ ಸರ್.."

"Welcome to the Department. ಚನ್ನಾಗಿ ಕೆಲ್ಸ ಮಾಡು. ಯಾರಿಗೂ ಒಂದು ರೂಪಾಯಿ ಕೊಡದೆ ಸಿಕ್ಕಿರೊ ನೌಕರಿ. All the best ರಾಜಾ"

" ಆಯ್ತು ಸರ್." ಎಂದು SP ಸರ್ ಕೊಠಡಿಯಿಂದ ಹೊರಗೆ ಬಂದೆವು. 

     ರಾಧಾ ಮೇಡಂ ಎಲ್ಲಾ ದಾಖಲೆಗಳನ್ನು ಪರಿಶೀಲಿಸಿ, ಮೆಗ್ಗಾನ್ ಹಾಸ್ಪಿಟಲ್ ಗೆ ಮೆಡಿಕಲ್ ಮಾಡಿಸಿಕೊಂಡು ಪ್ರಮಾಣಪತ್ರ ತರಲು ಹೇಳಿದರು. ದೊಡ್ಡಪ್ಪಾ ಮತ್ತು ನಾನು ಮೆಗ್ಗಾನ್ ಹಾಸ್ಪಿಟಲ್ ಗೆ ಹೋಗಿ ಪ್ರಮಾಣಪತ್ರ ತೆಗೆದುಕೊಂಡು ತಂದು ರಾಧ ಮೇಡಂ ಗೆ ನೀಡಿದೆವು.

"ಸರಿ ಆಯ್ತು .. ನೀವು ಚನ್ನಗಿರಿ ಪೋಸ್ಟ್ ಆಫೀಸ್ ಗೆ ಹೋಗಿ join ಆಗಬೇಕು."

"ಮೇಡಂ ಈಗ ನಾವು ಬರಿ documents ವೇರಿಫಿಕೇಶನ್ ಸಲವಾಗಿ ಅಷ್ಟೇ ಬಂದೇವ್ರಿ. ಒಂದ್ ಹತ್ತು ದಿನ ಟೈಮ್ ಕೊಡ್ರಿ join ಅಗಾಕೆ." ದೊಡ್ಡಪ್ಪ ವಿನಂತಿಸಿ ಕೊಂಡರು.

"ಹೌದ್ರಿ ಮೇಡಂ. ನಾನು ಹಾಸ್ಟೆಲ್ ಒಳಗಿಂದ ದೊಡ್ಡಪ್ಪಾರ ಹಿಂಬಾಲಿ ಬಂದೆನ್ರಿ. ಒಂದ್ ಹತ್ತು ದಿನ ಟೈಂ ಕೊಡ್ರಿ ಮೇಡಂ. ಬಂದು join ಅಗ್ತೇನ್ರಿ."

"ಆಯ್ತು ಹೋಗಿ ಬನ್ನಿ. ಸಾಧ್ಯ ಆದಷ್ಟು ಬೇಗ ಬಂದು join ಆಗಿಬಿಡಿ ಆಯ್ತಾ."

"ಅವಶ್ಯವಾಗಿ ಮೇಡಂ. ನಮಸ್ಕಾರ . ಬರ್ತೇವಿ." ಎಂದು ದೊಡ್ಡಪ್ಪ ಹೇಳಿದರು. 


      ಇಬ್ಬರು ಲಾಡ್ಜ್ ಗೆ ಹೋಗಿ ಬ್ಯಾಗ್ ರೆಡಿ ಮಾಡಿಕೊಂಡು ಅವತ್ತಿನ ರಾತ್ರಿಯ ನೈಟ್ ಡ್ಯೂಟಿ ಹಜರ್ ಆಗುವ ತವಕದಲ್ಲಿ ನಾನು ದೊಡ್ಡಪ್ಪಾ ಶಿವಮೊಗ್ಗ ಇಂದ ಹರಿಹರ, ಹರಿಹರ ಇಂದ ರಣೆಬೆನ್ನೂರು, ರಣೆಬೆನ್ನೂರಿಂದ ಹಾವೇರಿ, ಹಾವೇರಿ ಇಂದ ಶಿಗ್ಗಾವಿ, ಶಿಗ್ಗಾವಿಯಿಂದ ಹುಬ್ಬಳ್ಳಿ, ಹುಬ್ಬಳ್ಳಿಯಿಂದ ಬೆಳಗಾವಿ ಹೀಗೆ ಎಲ್ಲಿಯೂ ಹೆಚ್ಚಿನ ಸಮಯ ಪೋಲು ಮಾಡದೆ ಅವತ್ತು ಯಮಕನಮರಡಿ ಪೊಲೀಸ್ ಸ್ಟೇಶನ್ ಗೆ ಬಂದು ರಾತ್ರಿಯ 10.30ಕ್ಕೆ ತಲುಪಿದೆವು. ನನ್ನನ್ನು ಕ್ವಾರ್ಟರ್ಸ್ ಗೆ ಬಿಟ್ಟು 

" ನೀ ಆರಾಮ ಮಾಡೋ ಸತೀಶ... ನಾನು ಡ್ಯೂಟಿ ಮುಗಸ್ಕೊಂಡ್ ಬೆಳಗಿನ 4 ಗಂಟೆಗೆ ಬರ್ತೇನಿ. ನಿಧಾನಲೇ ಎದ್ದು ರೆಡಿ ಆಗಿ ಮನಿಗೆ ಹೋಗೋಣು"

"ಹೂಂ. ದೊಡ್ಡಪ್ಪಾ.." ಎಂದು ಮಲಗಿಕೊಂಡೆ. 

        ಒಂದು ವಾರದ ಸಮಯ ಕಾಲೇಜಿಗೆ ಹೋಗಿ ಕಳೆದೆ. ಒಂದು ದಿನ ಹಾಸ್ಟೆಲ್ ವಾರ್ಡನ್ (I. D. ವಿವೇಕಿ ಸರ್) ಗೆ ವಿಷಯ ತಿಳಿಸಿ ಅವರಿಂದ "ಬೆಸ್ಟ್ ಆಯ್ತು ಬಿಡ... All the best" ಹೇಳಿಸಿಕೊಂಡು ಅಲ್ಲಿಂದ ಬಟ್ಟೆ-ಬರೆ-ಪುಸ್ತಕಗಳೊಂದಿಗೆ ಮನೆಗೆ ಹೋದೆ. ಅಜ್ಜ ಮನೆಯಲ್ಲಿದ್ದ. ಅಪ್ಪಾ-ಅಮ್ಮಾ ಹೊಲಕ್ಕೆ ಹೋಗಿದ್ದರು.

"ಚಲುs ಗಂಡ ಕೆಲಸಾ ಮಾಡಿದಿಲಾ..."

"ಹೂಂ ಅಜ್ಜಾ... ನಿನ್ನ ಮೊಮ್ಮಗ .. ಮತ್ತs"

"ಸತ್ಯುಳ್ಳ ದೇವರು, ನಿಮ್ಮವ್ವಾ-ಅಪ್ಪನ ಹರಿಕಿ, ನಿನ್ನ ತೆಲಿ...ಅದಕ್ಯಾರ್ ಎನ್ !"

          ಸಾಯಂಕಾಲ 6 ಗಂಟೆಗೆ ಅಪ್ಪ-ಅಮ್ಮ ಹೊಲದಿಂದ ಮನೆಗೆ ಬಂದರು. 2 ದಿನ ಹಿಂದಿನ ರಾತ್ರಿಯ ವೃತ್ತಾಂತವನ್ನೆಲ್ಲ ಮತ್ತೊಮ್ಮೆ ಹೇಳಿದರು. ರವಿವಾರ (ತಾ. 22.05.2011) ರಾತ್ರಿಯ ಪ್ರಯಾಣ ಎಂದು ಮಾತನಾಡಿಕೊಂಡೆವು - ಈ ಕಡೆಯಿಂದ ನಾನು ಮತ್ತೆ ಅಪ್ಪಾ. ಆ ಕಡೆಯಿಂದ (ಬೆಂಗಳೂರು) ಅಣ್ಣಾ ಬರಲು ಸಿದ್ಧನಾದನು. ದೊಡ್ಡಪ್ಪಾ ಫೋನ್ ಮಾಡಿ ಹೋಗುವುದು ಮತ್ತು ಲಾಡ್ಜ್ ಮಾಡಿಕೊಂಡು ರೆಸ್ಟ್, ಮಾಡಿ ಫ್ರೆಶ್ ಆಗುವುದು. ಅಣ್ಣಾ ಬಂದ ಮೇಲೆ ತಾ. 23.05.2011 ರಂದು ಮೂವರು ಕೋಟೆ ರೋಡ್ ಶಿವಮೊಗ್ಗ ಡಿವಿಜನ್ SP ಅಫಿಸ್ ಗೆ ಹೋಗಿ, ಅಲ್ಲಿ ಅವರಿಗೆ ಭೇಟಿಯಾಗಿ, ಅಲ್ಲಿಂದ ಚನ್ನಗಿರಿಗೆ ಹೋಗಿ, join ಆಗುವುದು.

         ಮೂವರು ಚನ್ನಗಿರಿ ಬಸ್ ಸ್ಟ್ಯಾಂಡ್ ಒಳಗೆ ಪೋಸ್ಟ್ ಆಫೀಸ್ ಹುಡುಕಿಕೊಂಡು ಹೋದೆವು. ಕಂಪೌಂಡ್ ಒಳಗೆ ಸುತ್ತಲೂ ಮರಗಳು ಮಧ್ಯದಲ್ಲಿ ಪೋಸ್ಟ್ ಆಫೀಸ್ ಇತ್ತು. ಒಳಗೆ ಹೋದೆವು. G. ಶೇಖರಪ್ಪ ಪೋಸ್ಟ್ ಮಾಸ್ತರ್ ಆಗಿದ್ದರು. ನನ್ನ joining ಲೆಟರ್ ಅವರಿಗೆ ತೋರಿಸಿದೆವು. 

" ರಾಧಾ ಮೇಡಂ ಫೋನ್ ಮಾಡಿ ಹೇಳಿದ್ರು... ಹೀಗೆ ಬಂದು join ಆಗ್ತಾರೆ ಅಂತ. ಒಳ್ಳೆದಾಯ್ತು. ಕೂತ್ಕೊಳ್ಳಿ."

         ಉಭಯ ಕುಶಲೋಪರಿ ಆಯ್ತು. ಒಂದಿಬ್ಬರು ಬಂದು "welcome to Postal Family" ಎಂದರು. "ಥಾಂಕ್ಸ್" ಹೇಳಿದೆವು.

" ತೀರ್ಥಪ್ರಕಾಶ್, ರಾಧಾ ಮೇಡಂ ಬೆಳಿಗ್ಗೆ ಹೇಳಿದ್ರಲ್ಲಪ್ಪಾ ಸತೀಶ್ ಅಂತ ಒಬ್ಬರು ಇವತ್ತು ಚನ್ನಗಿರಿ ಆಫೀಸ್ ಗೆ join ಆಗ್ತಾರೆ ಅಂತ.."

" ಹೂಂ ಸಾರ್.. ಹೂಂ ಸಾರ್.."

"ಅವರು ಬಂದಿದಾರೆ. ಇವರೇ ನೋಡಿ.. " ನನ್ನತ್ತ ಕೈ ತೋರಿದರು.

"ಸತೀಶ್ ಅವ್ರೇ ನಮ್ ಇಲಾಖೆಗೆ ಸ್ವಾಗತ. ಎನ್ ಮಾಡ್ಕೊಂಡಿದ್ರಿ ?

"D. ed ಮಾಡ್ತಿದ್ನಿ ಸರ್..."

"ಹೌದೇನ್ರಿ... ಮತ್ತೆ ಆರಾಮ ಎಲ್ಲಾ "

" ಹೂಂ ಸರ್. ನೀವ್ ಆರಾಮ ಏನ್ರಿ ಸರ್"

ನನ್ನ ಮಾತಿನಲ್ಲಿ ರೀ ರೀ ಹೆಚ್ಚು ಕಂಡಿದ್ದು ನೋಡಿ ಎಲ್ಲರೂ ನಕ್ಕರು. 

"ಉಳ್ಕೊಳ್ಳೋಕೆ ಸದ್ಯಕ್ಕೆ ಕ್ವಾರ್ಟರ್ಸ್ ಲ್ಲಿ ನನ್ನ ಜೊತೆಗೆ ಇರು" ಶೇಖರಪ್ಪಾ ಸರ್ ಅಂದರು.

"ನೀವರಿ ಅಂವಗ ಎಲ್ಲಾ ಇನ್ ಮ್ಯಾಲ " ಅಂದು ಮಗನನ್ನು ಬೇರೆಯವರ ಸುಪರ್ದಿಗೆ ಬಿಡುವ ಹಾಗೆ ಹೇಳಿದರು ಅಪ್ಪ.

" ನಾನು ಸದ್ಯ ಒಬ್ಬನೇ ಇರ್ತೀನಿ.. ನನ್ ಜೊತೆ ಒಬ್ಬ ಹುಡುಗ ಆದ. ಊಟ ವಸತಿ ಎಲ್ಲ ಇಲ್ಲೇ" ಅಂದರು.

" ನಿಮ್ಮಿಂದ ಭಾಳ ಹೆಲ್ಪ್ ಆಯ್ತು ಸರ್.." ಅಣ್ಣ ಹೇಳಿದನು.

" ಆಯ್ತು. ಇವನು ಇಲ್ಲೇ ಇರ್ತಾನೆ. ನೀವು ಇನ್ನು ಹೋಗಬಹುದು." ಎಂದರು.

        ನಂತರ ಪ್ರಕಾಶ್ ಸರ್ ಆದಮೇಲೆ, ಕಿರಣ್ ಸರ್, ಮಂಜುಳಾ ಮೇಡಂ, ಮಂಜುಳಾ ದೇಗಿನಾಳ ಮೇಡಂ, ಭಾಗ್ಯಶ್ರೀ ಮೇಡಂ, ಪೋಸ್ಟ್ಮ್ಯಾನ್ ಮಹಾರುದ್ರಪ್ಪ, ಪ್ರಭು, ಕರಿಯಪ್ಪಾ ಮತ್ತು ತಿಮ್ಮಣ್ಣಾ, ದುರಗೋಜಿ, ಸುರೇಶ್, ಮಾರ್ಕೊಡ್ ಜೀ ಎಲ್ಲರೂ ಪರಿಚಯ ಮಾಡಿಕೊಂಡರು. ಕಿರಣ್ ಸರ್ ಮತ್ತೆ ತೀರ್ಥಪ್ರಕಾಶ್ ಸರ್ ಹಾಗೂ ಮಂಜುಳಾ ಮೇಡಂ ನನಗೆ ತುಂಬಾ ಚೆನ್ನಾಗಿ ತಿದ್ದಿ, ಬುದ್ಧಿ ಹೇಳಿ, ಮಾರ್ಗದರ್ಶನ ಮಾಡಿದರು. ಸುಮಾರು 2 ತಿಂಗಳುಗಳ ನಂತರ ಕುಮಾರ್ ಜಿ. ಪಿ. ಮತ್ತು ಅನಿಲ್ ಅವರು ಟ್ರೈನಿಂಗ್ ಮುಗಿಸ್ಕೊಂಡು ಬಂದರು. ತೀರ್ಥಪ್ರಕಾಶ್ ಸರ್ Receipt Dispatch Counter ಬಗ್ಗೆ, ಕಿರಣ್ ಸರ್ MPCM ಕೌಂಟರ್ ಬಗ್ಗೆ ಆಫೀಸ್ ಲ್ಲಿ ಹಾಗೂ ಅಡುಗೆ ಬಗ್ಗೆ ಕ್ವಾರ್ಟರ್ಸ್ ಲ್ಲಿ ಸಂಪೂರ್ಣವಾಗಿ ಹೇಳಿಕೊಟ್ಟರು. ಕುಮಾರ್ ಸರ್ ಒಂದು ದಿನ SB ಕೌಂಟರ್ ಗೆ ನನ್ನ ಕೂರಿಸಿ ಹಿಂದೆ ನಿಂತು ಪ್ರತಿಯೊಂದನ್ನೂ ಹೇಳಿಕೊಟ್ಟು  ಸಾಯಂಕಾಲ "ಸತೀಶಣ್ಣಾ SB  ಕೌಂಟರ್ 100% ಟ್ಯಾಲಿ" ಎಂದಿದ್ದರು. MPKBY ಏಜೆಂಟ್ ಆಗಿದ್ದ ಮಾರ್ಕೊಂಡ್ ಜೀ SBM ಬ್ಯಾಂಕ್ ಒಳಗೆ ನನಗೊಂದು ಅಕೌಂಟ್ ತೆಗೆದು ಕೊಟ್ಟರು ಅದು ನನ್ನ ಮೊದಲ ಬ್ಯಾಂಕ್ ಅಕೌಂಟ್. ಅದಾದ ಮೇಲೆ ಪೋಸ್ಟ್ ಆಫೀಸ್ ಒಳಗಿನ SB ಅಕೌಂಟ್ ನ್ನು ಭಾಗ್ಯಶ್ರೀ ಮೇಡಂ 'ಸಂಚಯಾ' ದಲ್ಲಿ ಒಪೆನ್ ಮಾಡಿ " ಸತೀಶ್ ಅವ್ರೇ ನಿಮ್ಮ ಅಕೌಂಟ್ ನಂಬರ್ 2030**" ಎಂದು ಹೇಳಿದರು.

            6 ತಿಂಗಳ ನಂತರ ಮೈಸೂರ PTC ಗೆ ಟ್ರೈನಿಂಗ್ ಹೋದಲ್ಲಿ ಸತ್ಯನಾರಾಯಣ ವಿ. ಮತ್ತು ಬಿಂದು ಕೆ. ಅವರು ಪರಿಚಯವಾದರು. ಅಲ್ಲಿಂದ ಸತ್ಯನಾರಾಯಣ ಮತ್ತು ನನ್ನ ಸ್ನೇಹ-ಸೋದರತೆ ಬೆಳೆಯಿತು. ಈ ಸ್ನೇಹ ಇಂದಿನ ನನ್ನ ಸಾಹಿತ್ಯದ ಹುಚ್ಚಿಗೆ ಕಾರಣ ಎಂದರೂ ತಪ್ಪಾಗದು. 2013ರ ನವೆಂಬರ್ನಲ್ಲಿ ನನಗೆ ಶಿವಮೊಗ್ಗ ಇಂದ ಧಾರವಾಡಕ್ಕೆ ವಿದ್ಯಾಶ್ರೀ ಎಸ್. ಎಲ್. ಅವರೊಂದಿಗೆ ಮುಚ್ಯುಅಲ್ ಟ್ರಾನ್ಸ್ಫರ್ ಸಿಕ್ಕಿತು.  11ನೆಯ ತಾರೀಕು 9 ಗಂಟೆಗೆ ಧಾರವಾಡ HO ದಲ್ಲಿ K. S. ಸಾಂಬ್ರಾಣಿ, ರವಿ ಕಟ್ಟಿಮನಿ ಸರ್, ಮೋಹನ ಸೊಪ್ಪಡ್ಲಾ ಸರ್ ಪರಿಚಯವಾದರು. ಅವತ್ತು 4ನೇ ನಂಬರಿನ MPCM ಕೌಂಟರ್ ಕೆಲಸ ಮಾಡಿದೆ. ಪೋಸ್ಟ್ ಮಾಸ್ಟರ್ ಆಗಿ ಹದಡಿ ಸರ್ ಇದ್ದರು. 

        ಬರೆಯುತ್ತ ಸಾಗಿದರೆ ನಿನ್ನೆಯವರೆಗೂ ಬರೆಯಬೇಕು ಎಂದೆನಿಸುತ್ತದೆ. ಸಧ್ಯಕ್ಕೆ ಇಷ್ಟು ಸಾಕು. 

Sunday 14 March 2021

ಮೋಸ ಹೋದ ಕಣ್ಣು


         "ಮಾನವನ ಮನಸ್ಸು ಸ್ಪರ್ಶಿಸಲಾಗದ ಅನುಭವ ಮಾತ್ರಕ್ಕೆ ದಕ್ಕಬಲ್ಲ ಗಾಳಿ ಇದ್ದಂತೆ."


        ಸರಕಾರಿ ಹಿರಿಯ ಕನ್ನಡ ಪ್ರಥಮಿಕ ಶಾಲೆಯಲ್ಲಿ 6ನೇ ತರಗತಿಯಲ್ಲಿ ಓದುತ್ತಿರುವಾಗ ವರ್ಗ ಗುರುಗಳಾದ ಶ್ರೀ NS ಪಂಗಣ್ಣವರ ಗುರುಗಳು ಒಂದು ದಿನ ತಮ್ಮ ಇಡೀ ವರ್ಗ ವಿದ್ಯಾರ್ಥಿಗಳ ಮೇಲೆ ಸಿಟ್ಟಾಗಿದ್ದರು. ಕಾರಣ, ಪಕ್ಕದ ಕೊನೆಯಲ್ಲಿನ ವರ್ಗದ ನಿರ್ವಹಣೆ ತಮಗಿದ್ದರಿಂದಾಗಿ ಆ ವಿದ್ಯಾರ್ಥಿಗಳಿಗೆ ಬರವಣಿಗೆಯ ಕೆಲಸ ಕೊಟ್ಟು ಬರುವಷ್ಟರಲ್ಲಿ 6ನೇ ವರ್ಗದ ವಿದ್ಯಾರ್ಥಿಗಳು ಶಾಲೆಯ ಹೆಂಚು ಕಿತ್ತು, ಹಾರಿ ಹೋಗುವಂತೆ ಗದ್ದಲ ಮಾಡುತ್ತಿದ್ದರು !!


         ಗುರುಗಳು ಬಂದು ಮನಸೋ ಇಚ್ಛೆ ಬೈದರು. ಅಷ್ಟೆಲ್ಲ ಬೈಗುಳಗಳಲ್ಲಿ "ಶಾಲೆ ಒಳಗ ಮಾಸ್ತರ್ ಹೇಳಿದ್ ಮಾತಿಗೆ ಬೆಲೆ ಕೊಡಬೇಕು ಅಂತ ಮನಸ್ಸು ಹೇಳಲಿಲ್ಲಾ ನಿಮಗ್ ?... ಮನಸ್ಸು ಎಲ್ಲೈತಿ ಅಂತರ ಗೊತ್ತೈತಿಲ್ಲೋ ನಿಮಗ್ ?... ಏ ಸತ್ಯಾ ಎಲ್ಲಿ ಐತ್ಯೋ ಮನಸ್ಸು" ಎಂದದ್ದು ಇಂದಿಗೂ ಆಗಾಗ ತಲೆಯಲ್ಲಿ ಅನ್ನುವುದಕ್ಕಿಂತ ಮನಸ್ಸಿನಲ್ಲಿ ತನ್ನ ರೌದ್ರತೆಯನ್ನು ಪ್ರಕಟಿಸುತ್ತದೆ.


           ಉಸಿರಾಡಲು ಗಾಳಿ ಹೇಗೆ ಎಲ್ಲರಿಗೂ ಅತ್ಯವಶ್ಯವೋ ಹಾಗೆಯೇ ಮನಸ್ಸು ಎಂಬುದು ಅವಶ್ಯ. 'ಮನಸ್ಸಿಲ್ಲದೇ' ಯಾವುದು ಪರಿಪೂರ್ಣ ಅಲ್ಲ. ಸೃಷ್ಠಿಯಲ್ಲಿರುವ ಪ್ರತಿಯೊಂದು ಜೀವಿಗೂ ಮನಸ್ಸಿದೆ. "ಬುದ್ಧಿ"ವಂತನೆನಿಸಿಕೊಂಡ  ಮಾನವನಿಗೆ ಈ ಮನಸ್ಸಿನ ಅನುಭೂತಿ ಬೇರೆಲ್ಲ ಜೀವ-ಜಂತುಗಳಿಗೆ ಹೋಲಿಸಿದರೆ  ಸ್ಪಷ್ಟವಾಗಿರುತ್ತದೆ. ಹಾಗಾಗಿಯೇ ಮನುಷ್ಯ ಇಂದಿನ ಆಧುನಿಕ ಜಗದಲ್ಲಿ "ಅಸಾಧ್ಯ" ಎನಿಸಿಕೊಳ್ಳುವ ಯಾವುದನ್ನೂ "ಸಾಧ್ಯ"ವಾಗುಸುತ್ತಲೇ ಇದ್ದಾನೆ. ಇದರೊಳಗೆ ಬುದ್ಧಿಯ ವಿಚಾರ ಮನಸ್ಸಿನ ಇಂಗಿತದ ಪ್ರಭಾವ ಬಹುವಾಗುರುತ್ತದೆ. ನಮ್ಮಲ್ಲಿರುವ ಮನಸ್ಸು ಇಷ್ಟವಾದುದನ್ನು ಪಡೆಯಲು ಬೆಷರತ್ತಾಗಿ ಕಾರ್ಯಪ್ರವೃತ್ತವಾದರೆ; ಬುದ್ಧಿ ಅದನ್ನು ಪಡೆಯಲು ನಾನು ಅರ್ಹನೆ ? ಅನರ್ಹನೆ ? ಅದು ಏನು ? ಅದರ ಅವಶ್ಯಕತೆ ನನಗೆಷ್ಟು ? ಇತ್ಯಾದಿ ಇತ್ಯಾದಿಯಾಗಿ ವಿವೇಚನೆಗೆ ಒಳಪಡಿಸಿ ಮಹತ್ವದ ಆಧಾರದ ಮೇಲೆ ಬೇಕು-ಬೇಡವನ್ನು ನಿರ್ಧರಿಸುತ್ತದೆ. ಮನುಷ್ಯನ ಮನಸ್ಸು ತನಗೆ ಇಷ್ಟವಾದುವೆಲ್ಲವನ್ನೂ ಪಡೆದುಕೊಳ್ಳಲು ಸದಾ ಹಾತೊರೆಯುತ್ತಿರುತ್ತದೆ. ಹಾಗಾಗಿ, ಮನಸ್ಸಿನಿಂದ ಮಾಡುವುದಕ್ಕೂ, ಬುದ್ಧಿವಂತಿಕೆಯಿಂದ ಮಾಡುವುದಕ್ಕೂ ವ್ಯತ್ಯಾಸವಿದೆ. ಮನಸ್ಸು ಇಷ್ಟವಾದುದನ್ನು ಪಡೆಯಲು ಪರಾಪರ ಯೋಚಿಸದೆ, ಬುದ್ಧಿಯ ಸಲಹೆ ಪಡೆಯದೇ ತನ್ನ ಅಧೀನಕ್ಕೊಳಪಟ್ಟ ಪಂಚೇಂದ್ರಿಯಗಳಿಗೆ  ಆಜ್ಞೆಯನ್ನು ನೀಡಿಯೇ ಬಿಡುತ್ತದೆ. ಮನಸ್ಸಿನ ಈ ಪ್ರವೃತ್ತಿಯೇ ಕೆಲವೊಮ್ಮೆ ಅಪಾಯದ ಅಂಚಿಗೆ ತಂದು ನಿಲ್ಲಿಸಿ ಬಿಡುತ್ತವೆ.


    ಮನಸ್ಸು ಎಷ್ಟು ಹಪಹಪಿ ಎಂದರೆ, ಅದಕ್ಕೆ ಕಿಂಚಿತ್ ಸಮಾಧಾನ ಇರದು. ಆಗಿಂದಾಗಲೇ ಹೇಗಾದರೂ ಸರಿಯೇ ಪಡೆದೇ ತೀರಬೇಕು ಎಂದು ಮಾಡಿಸಿಯೇ ಬಿಡುತ್ತದೆ. ಈ ರೀತಿಯ ಮನಸ್ಸಿನ ತರಾತುರಿಯ ಆಜ್ಞೆಯಿಂದ ನಮ್ಮ ಪಂಚೇಂದ್ರಿಯಗಳೂ ಮೋಸ ಹೋಗುತ್ತವೆ ! ಹೌದು, ಪಂಚೇಂದ್ರಿಯಗಳು ಸುಮಾರು ಸಲ ಮೋಸ ಹೋಗುತ್ತವೆ. ಯೋಚಿಸಿ ನೋಡಿ : ನಿಮ್ಮ ಮನಸ್ಸು ಯಾವುದೋ ಒಂದನ್ನು ಗಹಣವಾಗಿ ಯೋಚಿಸುತ್ತಿರುತ್ತದೆ, ಆಗ ನಿಮ್ಮ ಎದುರಿಗೆ ಏನೋ ಒಂದು ಘಟನೆ ಅಥವಾ ಚಿತ್ರ ಇಲ್ಲವೇ ಎಲ್ಲೋ ಯಾರೋ ಬರೆದ ಯಾವುದೋ ಸಾಲು ನಿಮ್ಮ ಕಣ್ಣಿಗೆ ಬೀಳುತ್ತದೆ. ತಕ್ಷಣ ನಿಮ್ಮ ಮನಸ್ಸು ತಾನು ಗಹಣವಾಗಿ ಯೋಚಿಸುತ್ತಿರುವ ವಿಷಯ ವಸ್ತುವಿನ ಸಹ-ಸಂಬಂಧಿತವಾಗಿ ಅಥವಾ ಅನುಗುಣವಾಗಿ ತಿಳಿದುಕೊಂಡು ಅದನ್ನು ತನ್ನಿಷ್ಟದಂತೆ ಗ್ರಹಿಸಿಕೊಂಡು ಸ್ಮೃತಿಯಲ್ಲಿ ಎಚ್ಚೊತ್ತಿ, ಸೂಕ್ತ ಪಂಚೇಂದ್ರಿಯಕ್ಕೆ ಆಜ್ಞೆಯನ್ನು ನೀಡುತ್ತದೆ. ವಾಸ್ತವದಲ್ಲಿ, ಆ ವಸ್ತು, ವಿಷಯ, ಘಟನೆ ಬೇರೆಯೇ ಇದ್ದರೂ ಮನಸ್ಸು ತನ್ನಿಷ್ಟದಂತೆ ಗ್ರಹಿಸಿಕೊಂಡು ಮುಂದುವರೆದಿರುತ್ತದೆ ! ಹೀಗೆ ಯಾವುದೇ ಆದರೂ ಅದರಲ್ಲಿ 1. ತೋರಿಕೆ, 2. ಗ್ರಹಿಕೆ ಮತ್ತು 3. ವಾಸ್ತವಿಕತೆ. ಎಂಬು ಮೂರು ಮುಖ್ಯ ಆಯಾಮಗಳಿರುತ್ತವೆ.


     ಇದಕ್ಕೆ ಪೂರಕವಾದ ಒಂದೆರಡು ಉದಾಹರಣೆಗಳನ್ನು ನೋಡೋಣ:


ನಾವು ಬಳಸುವ ವಾಟ್ಸಾಪ್ ಸ್ಟೇಟಸ್.

      ಪ್ರತಿಯೊಬ್ಬರು ವಾಟ್ಸಾಪ್ ಸ್ಟೇಟಸ್ ಇಡುತ್ತಾರೆ; ಅದು ಆಗಿನ ಅವರ ಮನಸ್ಥಿತಿ ತಕ್ಕಂತೆ. ಆದರೆ ಅದನ್ನು ನೋಡುವ ಜನರು ತಮ್ಮ ಮನೋ ಸಾಮರ್ಥ್ಯದ ಮೇಲೆ ಗ್ರಹಿಸಿಕೊಂಡು ಅದಕ್ಕೊಂದು ಕಾಮೆಂಟ್ ಹಾಕುತ್ತಾರೆ. ಸ್ಟೇಟಸ್ ಹಾಕಿದಾತ ತನ್ನ ಕಾಂಟ್ಯಾಕ್ಟ್ ಲಿಸ್ಟ್ ಒಳಗಿನ ಪರಮಾಪ್ತರು ತನ್ನ ಆ ಸ್ಟೇಟಸ್ ಅನ್ನು ಹೇಗೆ ಸ್ವೀಕರಿಸಿದರು, ಗ್ರಹಿಸಿದರು, ಊಹಿಸಿಕೊಂಡರು ಎಂಬುದನ್ನು ತಿಳಿದು ನಗಬಹುದು ಇಲ್ಲ ಆಶ್ಚರ್ಯಚಕಿತನಾಗಬಹುದು ! 

        ಇದು ನನ್ನ ಸ್ವಂತದ ಅನುಭವ. ನನ್ನ ವಾಟ್ಸಾಪ್ ಸ್ಟೇಟಸ್ ಗೆ ನಾನು ಆವಾಗಾವಾಗ ಕವನಗಳನ್ನು ಬರೆದು ಹಾಕುತ್ತಿರುತ್ತೇನೆ. ಅದನ್ನು ನೋಡಿದವರಲ್ಲಿ ಒಂದಷ್ಟು ಜನ ಕೆಲ ಸಾಲುಗಳು ತಮಗೆಂದೇ ಬರೆದಿರುವನು ಎಂದು ಗ್ರಹಿಸಿಕೊಂಡು ಅದಕ್ಕೊಂದು ಪ್ರತಿಕ್ರಿಯೆ ನೀಡುತ್ತಾರೆ. ಮತ್ತೆ ಕೆಲವರು ನನ್ನ ಕವಿತೆಯ ವಸ್ತು ವಿಷಯದಲ್ಲಿ ತಮ್ಮ ಆರಾಧ್ಯವೊಂದು ಇದ್ದುದನ್ನು ಗ್ರಹಿಸಿ ಮೆಚ್ಚುಗೆ ವ್ಯಕಗಪಡಿಸುತ್ತಾರೆ. ಆದರೆ ಆ ಸಾಲುಗಳನ್ನು ಬರೆಯುವ ಆ ಘಳಿಗೆಯಲ್ಲಿ ಈ ಜನರು ಬೆಳಕು ಚೆಲ್ಲುವ ಯಾವ ಅಂಶಗಳೂ ಕವಿಯ ತಲೆಯಲ್ಲಿರುವುದೇ ಇಲ್ಲ. ಅವನು ಅದೊಂದು ಬೇರೆಯದೇ ಆದ ದೃಷ್ಟಿಯಲ್ಲಿ ನೋಡಿ ಸೆರೆ ಹಿಡಿದಿರುತ್ತಾನೆ ಅಷ್ಟೇ. ಹೀಗೆ ಬರೆದ ವಾಸ್ತವ ಬೇರೆ, ಜನರಿಗೆ ತೋರಿದ್ದು ಬೇರೆ ಮತ್ತು ಜನರು ಅದನ್ನು ಗ್ರಹಿಸಿದ್ದು ಬೇರೆಯಾಗಿರುತ್ತದೆ.


            ಮೊನ್ನೆ ಒಂದು ದಿನ ನಾವು ನಾಲ್ಕು ಜನ ಸ್ನೇಹಿತರು ಒಂದು ಕಡೆ ಟೀ ಕುಡಿಯಲು ಕಲೆತಿದ್ದೆವು. ಅಲ್ಲಿ ಒಂದು ಹಾಳೆಯ ಮೇಲೆ 'INACTIVE' ಎಂದು ಬರೆದದ್ದು ಗೊತ್ತಾಗುವುದಕ್ಕೂ ಮೊದಲು ನಾನು ಅದನ್ನು "INCENTIVE"  ಎಂದು ಓದಿಬಿಟ್ಟಿದ್ದೆ. ಇದಕ್ಕೆ ಕಾರಣ, ನಾನು ಅಲ್ಲಿ ಸೇರುವುದಕ್ಕೂ ಮೊದಲು ಹಳ್ಳಿಯ post officeಲ್ಲಿ ಪೋಸ್ಟ್ ಮಾಸ್ತರರು ಕೆಲ ವರ್ಗದ ಅಕೌಂಟ್ ಒಪೆನ್ ಮಾಡಿದರೆ ಪಡೆಯುವ incentive ಬಗೆಗೆ ಲೆಕ್ಕಾಚಾರ ಹಾಕುತ್ತಿದ್ದೆ. ಜೊತೆಗಿದ್ದ ಸ್ನೇಹಿತ ಪ್ರವೀಣ್ 'ಸರ್ ನೀವು ತಪ್ಪು ತಿಳ್ಕೊಂಡ್ರಿ.. ಅದು 'INCENTIVE" ಅಲ್ಲಾ "INACTIVE"..' ಎಂದರು. ಕಣ್ಣು ಉಜ್ಜಿಕೊಂಡು ಮತ್ತೊಮ್ಮೆ ನೋಡಿದಾಗ ಗೊತ್ತಾಯ್ತು ಅದು  'INCENTIVE" ಅಲ್ಲಾ "INACTIVE".. ಎಂದು. ಅದಕ್ಕೆ ಪ್ರವೀಣ್  "ಮೋಸ ಹೋದ ಕಣ್ಣು" ಎಂದು ಸರಿಯಾದ ಒಕ್ಕಣೆ ನೀಡಿದ. ಇಲ್ಲಿ ಕಣ್ಣು ನಿಜವಾಗಿಯೂ ಮನಸ್ಸಿನ ಬೆನ್ನುಬಿದ್ದು ಮೋಸ ಹೋಗಿತ್ತು. ಸ್ನೇಹಿತ ಅದರ ವಿಮರ್ಶೆ ಮಾಡಿದಾಗಲೇ ಮನಸ್ಸು ಅದನ್ನು ಬುದ್ಧಿಗೆ ಕಳುಹಿಸಿ ಪರಾಮರ್ಶಿಸಿಕೊಂಡು ತನ್ನ ದುಡುಕು ಸ್ವಭಾವವನ್ನು ಹೀಗಳೆಯಿತು. 


            ಮನುಷ್ಯ ಸದಾ ತನ್ನ ಮನಸ್ಸಿನ ಮೇಲೆ ಹಿಡಿತವನ್ನು ಸಾಧಿಸಬೇಕು ಎಂಬುದು ಇದೆ ಕಾರಣಕ್ಕೆ. ಯಾಕೆಂದರೆ ಮನಸ್ಸು  ಸಂಚಾರಿ, ಚಂಚಲ. ಈ ತರದ ಚಂಚಲತೆಯಿಂದ ಕೂಡಿದ ಮನಸ್ಸಿಗೆ ಸ್ಥಿರತೆ ಮತ್ತು ಏಕಾಗ್ರತೆ ಬಹಳ ಕಡಿಮೆಯಿರುತ್ತದೆ ಮತ್ತು ದುಡುಕುವುದು. ಏಕಾಗ್ರತೆ ಕೊರತೆ ಇದ್ದಲ್ಲಿ ಯಾವುದೇ ಕೆಲಸ-ಕಾರ್ಯ, ಕಲಿಕೆ, ಬೋಧನೆ, ಸಾಧನೆ ಸಾಧ್ಯವಾಗದು. ಸವಾರನು ಹೇಗೆ ಲಗಾಮು ಎಳೆದು ನಿಲ್ಲಿಸುವ ಮೂಲಕ ಕುದುರೆಯನ್ನು ನಿಯಂತ್ರಿಸುವನೋ ಹಾಗೆ ಏಕಾಗ್ರತೆಯಿಂದಿರುವ ಮನಸ್ಸು ಸದಾ ಬುದ್ಧಿಯ ಅಧೀನದಲ್ಲಿ ಕಾರ್ಯ ನಿರ್ವಹಿಸುವಂತೆ ನಾವು ನಿಯಂತ್ರಿಸಬೇಕು. ಬುದ್ಧಿಯ ಅಧೀನದಲ್ಲಿರುವ ಮನಸ್ಸು ಶಾಂತವಾಗಿರುತ್ತದೆ. ಶಾಂತವಾದ ಮನಸ್ಸಿನಲ್ಲಿ ಶುದ್ಧವಾದ ವಿಚಾರಗಳು ಜನ್ಮ ತಳೆಯುತ್ತವೆ. ಶುದ್ಧ ಮತ್ತು ಶ್ರೇಷ್ಠ ವಿಚಾರವುಳ್ಳ ಮನುಷ್ಯನ ವ್ಯಕ್ತಿತ್ವ ಉನ್ನತ ಮಟ್ಟದಲ್ಲಿರುತ್ತದೆ.