Tuesday, 1 April 2025

ನಾನೇ ನೀನು - ನೀನೇ ನಾನು

ನಾನಿರುವುದು ನಿನ್ನೊಳಗೆಯೇ 
ನನ್ನೊಳಗಿರುವುದು ನೀನೆಯೇ
ನಿನ್ನ ಹೊರತು ' ನನ್ನ ' ಹೇಗೆ ಊಹಿಸಲಿ
'ನಿನ್ನ' ಮರೆತು ಹೇಗೆ ನಾನು ಜೀವಿಸಲಿ ?

ಹಾರದೊಳಗಿನ ದಾರ ದಾಟಿ
ಸಾವಿರ ಹೂಗಳ ಬಂಧಿಸಿಟ್ಟುಕೊಂಡಂತೆ,
ದೇಹದೊಳಗಿನ ಲಕ್ಷ ಕೋಟಿ
ಜೀವಕೋಶಗಳ ಚೈತನ್ಯದ ಒಟ್ಟು ಮೊತ್ತ ನಾನಾದಂತೆ;
ನನ್ನಂತಹ ಅನಂತಾನಂತ ಕೋಟಿ ಜೀವತಂತಿ ಮೀಟಿ-
ಪ ಪರಮ ಚೈತನ್ಯದ ಒಟ್ಟು ಮೊತ್ತ ನೀನಾಗಿರುವೆ !!

ದೇಹದೊಳು ಉಪಸ್ಥಿತ ಶ್ವಾಸ, ನೆತ್ತರು,
ಮಾಂಸ, ಮೂಳೆ, ಹೊಲಸು ಕಲಸು ಇತ್ಯಾದಿಗಳಂತೆ
ನೆಲ, ಜಲ, ಕಲ್ಲು, ಮಣ್ಣು, 
ಅಂಡ - ಪಿಂಡ - ಬ್ರಹ್ಮಾಂಡ ಸರ್ವಲೋಕಗಳ
ತನ್ನೊಳಗೇ ಅಡಗಿಸಿಕೊಂಡ ಮಹತ್  ರೂಪಿ
ನಿನ್ನ ವಿರಾಟ್ ರೂಪ ಕಂಡು ಧನ್ಯನಾದೆ !

Sunday, 13 October 2024

ಮುದುಕಿ ಮನೆ - ಹುಣಸೆ ಮರ


 

ಮನೆ ಎದುರಿಗಿನ
ಮನೆಯೊಂದರಲಿ 
ಮುದುಕಿ ಜೀವನ ಮುಗಿಸಿದ್ದಳು;
ದಿನಗೂಲಿ, ಮತ್ತೇನೋ
ಕೆಲಸಗಳನು ಮಾಡಿದ
ಆಕೆ ಕೊನೆಗೊಮ್ಮೆ ಅಂತ್ಯಗೊಂಡಿದ್ದಳು !

ನಾನು ಎಳೆವಯಸ್ಸಿನಲ್ಲಿ
ಇದ್ದಾಗಿನಿಂದ ನೋಡಿದ
ಮನೆ - ಮುದುಕಿ ಇಬ್ಬರೂ ಈಗ ಇಲ್ಲ.
ಅದೆಂದಿನಿಂದಲೋ ಬೆಳೆದು
ಉಳಿದಿದ್ದ ಹುಣಸೆ ಮರವನು 
ಮುದುಕಿಯ ಹಿಂದೆ ಹಿಂದೆಯೇ ಸಾಗ ಹಾಕಿದರು !!

ಮನೆಯಲ್ಲಿದ್ದ ಮುದುಕಿಯೂ
ಹಾಗೂ ಆ ಹುಣಸೆ ಮರವೂ
ಅದೆಷ್ಟೋ 'ಕಿಡಿಗೇಡಿ'ಗಳ ಕಲ್ಲಿನೇಟು ತಿಂದಿವೆ:
ಆದರೂ, ಬದುಕಿದ್ದವು ಮನೆ
ಮತ್ತು ಮರ- ನೆರೆಹೊರೆಯವರಂತೆ;
ಈಗ ನೋಡಿದರೆ ಅಲ್ಲಿ ಎಲ್ಲವೂ ಖಾಲಿ ಖಾಲಿ ...

ನೇಸರನುದಯಕ್ಕೆ ಅಡ್ಡಿಯಾದ
ಮರವಿಂದು ಇಲ್ಲವಾಗಿ ಮನೆಯ
ಒಳ ನುಗ್ಗಿದೆ ಎಳೆ ಬಿಸಿಲ ಕಿರಣ ಹೊಸ್ತಿಲು ದಾಟಿ !
ಕಣ್ಣಳತೆಯ ದೂರಕ್ಕೆ ದೃಷ್ಟಿ
ಹಾಯಿಸಿದರೆ ಸಾಕು ಅದೋ 
ಕಾಣುತ್ತೇವೆ - ಬಸವಣ್ಣನ ಗುಡಿ, ಅರಗುಡಿ!

ಕಂಬಗಳು ಅರು ನಿಂತಿವೆ,
ಅವು ಹಾಗೆ ನಿಂತಲ್ಲೇ ನಿಂತು 
ಒಂದಷ್ಟು ವರ್ಷಗಳು ಕಳೆದಿವೆ, ಕಳೆಯಬೇಕು!
ಮನೆಯನ್ನು ಕೆಡವಿ
ಮತ್ತೊಂದನ್ನು ಕಟ್ಟುವ
ತವಕದಲ್ಲಿದ್ದಾರೆ ನಾಲ್ಕಾರು ಜನರು - ಮತ್ತೊಬ್ಬರಿಗೆ !!

 

Saturday, 28 September 2024

ನಾನು



ನಾನು.. ಹೌದು ನಾನೇ.

ಈ ನಾನು, ಅಂದರೆ -

ಪಂಚ ಮಹಾಭೂತಗಳಿಂದ,

ಪಂಚ ಪದಾರ್ಥಗಳಿಂದ,

ಪಂಚ ಜ್ಞಾನೇಂದ್ರಿಯಗಳಿಂದ,

ಪಂಚ ಕರ್ಮೇಂದ್ರಿಯಗಳಿಂದ

ಮತ್ತು ಮೂರು ಗುಣಗಳಿಂದ

ಆಗಿರುವ ಈ ದೇಹ ಪ್ರಕೃತಿಯ

ಒಳಗೆ ವಾಸವಿರುವ " ಈಶ್ವರ" ನ ಅಂಶ !

ನಾನೇ ದೇವರು, " ಅಹಂ ಬ್ರಹ್ಮಾಸ್ಮಿ " !!!


ಕಣ್ಣು ಮುಚ್ಚಿ ಒಳದೃಷ್ಠಿ ನೆಟ್ಟರೆ -

ಈ ನನ್ನ ದೇಹದೊಳಗೆ ವಾಸವಿರುವ

ಅಸಂಖ್ಯ ಜೀವಕೋಶಗಳು

ನಾನು ಭಕ್ಷಿಸಿದ ಯಾವ ಆಹಾರವ

ತಿಂದು - ತೇಗಿ - ಜೀರ್ಣಿಸಿಕೊಂಡು

ಶಕ್ತಿಯನುತ್ಪಾದಿಸಿ, ತ್ಯಾಜ್ಯ ವಿಸರ್ಜಿಸಿ

ಈ ದೇಹ ದೇವಾಲಯದೊಳಗಿಹ

'ದಿವ್ಯ ಚೇತನ' ದ  ಅನಂತದಿರುವಿಕೆಯ ಕಾಣುವೆ;

ಆ ಅಸಂಖ್ಯ ಜೀವಕೋಶಗಳ ಒಟ್ಟು ಮೊತ್ತ - ನಾನು !!

ಅವುಗಳಿಂದ ನಾನು, ನನ್ನಿಂದ ಅವುಗಳು : " ತತ್ವಮಸಿ".


ಮತ್ತೆ ಕಣ್ದೆರೆದು ಹೊರದೃಷ್ಟಿ ಬೀರಿದರೆ -

ನಭಕ್ಕೆ ಚಿಮ್ಮಿ, ನೆಗೆದು ವ್ಯೋಮಕ್ಕೆ 

ಅಂತ್ಯವಿರದಂಬರವ ಛೇದಿಸುವೆನು;

ಅದೋ ಕತ್ತಲು, ಕತ್ತಲು, ಸುತ್ತಲೂ ಕತ್ತಲು !

ಮೂಲವೆಲ್ಲಿ ? ಕೊನೆ ಎಲ್ಲಿ ? ಅದಿ - ಅಂತ್ಯಗಳಿರದ ಅನಂತತೆ;

ದೈವನ ದಕ್ಕಿಸಿಕೊಳ್ಳಲು ಧಾವಿಸುತಿಹೆನು;

ದಿವ್ಯ ಚಕ್ಷುವನು ದಯಪಾಲಿಸಿ ದಾರಿ ತೋರು,

ಮಹಾಸಾಗರದ ಗರ್ಬದೊಳಗಿನ ಸೂಕ್ಷ್ಮಾತಿ ಸೂಕ್ಷ್ಮ ಕ್ರಿಮಿ ನಾನು.

ನಿನ್ನೊಳಗೆ ನಾನು, ನನ್ನೊಳಗೆ ನೀನು - "ಕೃಷ್ಣ ಕೃಷ್ಣ".

Wednesday, 18 September 2024

ಹೆಂಗ ಅರ್ಧನಾರೀಶ್ವರ



ಅಯ್ಯೋ.....!

ಹಡೆದ ತಾಯಿ ಹೆಣ್ಣೇ ಆದರೂ

ಹಡೆವ ಘಳಿಗೆಯಲ್ಲಿಯೂ ತವಕಿಸುವಳು

' ಗಂಡು ಸಂತಾನ ಬೇಕು ' ಎಂದು.


ಏನಿದು .... ?

ಅಪ್ಪ - ಅಮ್ಮ, ಅತ್ತೆ - ಮಾವ

ಗಂಡ, ಅಣ್ಣ, ತಮ್ಮ, ತಂಗಿ ಎಲ್ಲರಿಗೂ

' ಹೆಣ್ಣು ಮಗು ಆಯ್ತು ' ಎಂದರೆ

ಅದೇನೋ ಮತ್ಸರ, ಹೆತ್ತವಳ ಮೇಲೆ ತಾತ್ಸಾರ.


ಇಗೋ ಕೇಳಿರಿ...

ಅಪ್ಪಂದಿರಾ, ಅಣ್ಣಂದಿರಾ, ಮಾವಂದಿರಾ, ಗಂಡಂದಿರಾ

ನೀವುಗಳು ಯಾರು ಗಂಡಸರಲ್ಲ!!!.

ಅಮ್ಮಂದಿರಾ, ಅತ್ತೆಯಂದಿರಾ, ಅಕ್ಕಂದಿರಾ, ಹೆಂಡತಿಯರಾ

ನೀವುಗಳು ಯಾರು ಹೆಂಗಸರೇ ಅಲ್ಲ !

ಸ್ತ್ರೀ - ಪುರುಷ ತತ್ವ ನಿಮ್ಮೆಲ್ಲರಲ್ಲಿಯೂ ಇದೆ.


ಬಲ್ಲಿರೇನು.... ?

ಪುರುಷ ದೇಹದೊಳಗೆ ಕ್ಷಣ ಕ್ಷಣಕ್ಕೂ ಕೋಟ್ಯಾನು ಕೋಟಿ 

ಜೀವಕೋಶಗಳಿಗೆ ಜನ್ಮ ನೀಡುವ 'ಸ್ತ್ರೀ ತತ್ವ ' ವಿದೆ !!!

ಸ್ತ್ರೀ ದೇಹದೊಳಗೆ ಕ್ಷಣ ಕ್ಷಣಕ್ಕೂ ಕೋಟ್ಯಾನು ಕೋಟಿ 

ಜೀವಕೋಶಗಳ ಜನ್ಮಕ್ಕೆ ಕಾರಣವಾದ ' ಪುರುಷತ್ವ ' ವಿದೆ !!!!

ನಾವು ಪುರುಷರೂ ಅಲ್ಲ, ಸ್ತ್ರೀಯೂ ಅಲ್ಲ, ನಪುಂಸಕರೂ ಅಲ್ಲ

ಈ ಎಲ್ಲವನ್ನೂ ಒಳಗೊಂಡ ದೈವಾಂಶ ಬೀಜದ ಅರ್ಧ ನಾರೀಶ್ವರರು ನಾವು.


Wednesday, 17 August 2022

ಸಾವೇ ಸಾಧನೆ

ಸಾವಿರ ಕಷ್ಟ-ಸುಖಗಳ ಅನುಭವಿಸಿ
ಸಾವಿನೆಡೆಗೆ ಸಾಗುವ ದಾರಿ - ಬದುಕು,
ಸಾವನ್ನು ಪಡೆಯುವುದೇ ಕೊನೆಯ ಸಾಧನೆ !

ನೋಡಿದ್ದು, ಕಂಡಿದ್ದು, ಕೇಳಿದ್ದು,
ಎಟುಕಿದ್ದು, ತಿಳಿದಿದ್ದು, ಪಡೆದದ್ದು
ಎಂಬೆಲ್ಲ ಹಮ್ಮು, ಬಿಮ್ಮುಗಳ ಬೋಧನೆ !

ಹನಿ ನೀರು ಹೊಳೆಯಲ್ಲಿ ಯಾವ ಲೆಕ್ಕ ?
ಮಾಣಿ, ನೀ ಮೆರೆಯುವುದೂ ಅಷ್ಟೇ ತಿಳ್ಕ !
ಹೊರಟು ಹೋಗುವೆ ನೀ ಮರೆತು ಜೀವನದ ಬವಣೆ.

Thursday, 9 June 2022

ದೇವರು ಎಲ್ಲಿದ್ದಾನೆ

ದೇವರು ಸರ್ವವ್ಯಾಪಿ.


ನನ್ನ ದೇಹ ದೇವರು ಎಂದುಕೊಳ್ಳೋಣ. ಎಂದುಕೊಳ್ಳುವುದೇನು ಅದು ದೇವರದೇ ಒಂದು ಸೂಕ್ಷ್ಮಾತಿ ಸೂಕ್ಷ್ಮ ಕಣ. ಹೇಗೆಂದರೆ,  ನನ್ನ ಈ ಒಂದು ದೇಹದಲ್ಲಿ ಕೋಟ್ಯಾನು ಕೋಟಿ, ನನ್ನ ಕಣ್ಣಿಗೆ ಕಾಣದ  ಸೂಕ್ಷ್ಮತಿ ಸೂಕ್ಷ್ಮ ಜೀವಾನುಗಳಿವೆ. ಹಾಗೆ ಒಂದು ಮೈಟೊಕಾಂಡ್ರಿಯ ಕೂಡ ಹಲವಾರು ಅತಿಸೂಕ್ಷ್ಮ ಜೀವಕಣಗಳಿಂದ ಅದ ಒಂದು ಕಣ. ಮೈಟೊಕಾಂಡ್ರಿಯ ಒಳಗಿರುವ ಕೋಟ್ಯಾನು ಕೋಟಿ ಜೀವಕಣಗಳದ್ದೇ ಒಂದು ಜಗತ್ತು ಅವುಗಳಿಗೆ ಅದೇ ಬ್ರಾಂಹಾಂಡ. ವಾಸ್ತವದಲ್ಲಿ  ಅವುಗಳ ಬ್ರಂಹ್ಮಾಂಡದಿಂದಲೇ ಮೈಟೊಕಾಂಡ್ರಿಯ ಅಸ್ತಿತ್ವದಲ್ಲಿರುತ್ತದೆ. ಇದೇರೀತಿ ಮನುಷ್ಯನ ಪ್ರತಿಯೊಂದು ಅಂಗವೂ ಸಹ ಸಹಸ್ರ ಸಹಸ್ರ ಮೈಟೊಕಾಂಡ್ರಿಯಗಳ ಆಗರ. ಆ ಮೈಟೊಕಾಂಡ್ರಿಯಾಗಳದ್ದೂ ಒಂದು ವಿಭಿನ್ನ ಜಗತ್ತು. ಅಲ್ಲಿಯೂ ಸಹ ಅವುಗಳ ಇರುವಿಕೆಯಿಂದಲೇ ಮನುಷ್ಯನ ಅಂಗದ ಅಸ್ತಿತ್ವ ಸಾಧ್ಯ ಎಂಬುದು ಶತಸಿದ್ಧ. ಇಂತಹ ಕೋಟಿ, ಕೋಟಿ, ಕೋಟಿ, ಕೋಟಿ ಕಣಗಳಿಂದ ಆದದ್ದು ಈ ದೇಹ. 

ದೇವರ ವ್ಯಾಪಕತೆ ನಮ್ಮ ಗ್ರಹಿಕೆಗೆ ದಕ್ಕಬೇಕಾದರೆ ಈ ಮೇಲಿನ ಅರಿವಿನ ಮೂಲಕ ನೋಡಬೇಕಾದದ್ದು ಅವಶ್ಯಕ. ಮನುಷ್ಯ ಈ ದೇವ ಎನ್ನುವ ಮಹತ್ ನ ಕೋಟಿ ಕೋಟಿ ಅಂಗಗಳಲ್ಲೊಂದರ, ಕೋಟ್ಯಾನು ಕೋಟಿ ಮೈಟೊಕಾಂಡ್ರಿಯಾಗಳೊಂದರ, ಅತೀ ಸೂಕ್ಷ್ಮಾತಿ ಸೂಕ್ಷ್ಮ ಕಣಗಳೊಳಗಿನ ಕೋಟ್ಯಾನು ಕೋಟಿ ಅತೀ ಅತೀ ಸೂಕ್ಷ್ಮ ಕಾಣದ ಒಂದು ಸಣ್ಣ ಕಣ !

ಇನ್ನೊಂದು ರೀತಿಯಲ್ಲಿ ನೋಡುವುದಾದರೆ,
ಹೇಗೆ ಒಂದು ಪುಸ್ತಕವಾಗಲು 10 ಅಧ್ಯಯಗಳು, ಹತ್ತು ಅಧ್ಯಯಗಳಾಗಲು ನೂರಾರು ಪ್ಯಾರಾಗಳು, ನೂರಾರು ಪ್ಯಾರಾಗಳಾಗಲು, ಸಾವಿರಾರು ಸಾಲುಗಳು, ಸಾವಿರಾರು ಸಾಲುಗಳಾಗಲು ಲಕ್ಷಾಂತರ ಪದಗಳು, ಲಕ್ಷಾಂತರ ಪದಗಳಾಗಲು ಕೋಟಿಗಟ್ಟಲೇ ಅಕ್ಷರಗಳು ಅಸ್ತಿತ್ವದಲ್ಲಿರುತ್ತವೆಯೋ ಹಾಗೆ ದೇವರು ಎಂಬ ಮಹತ್ ಇದೆ. 

ಅಕ್ಷರಗಳಿಂದ ಪದ, ಪದಗಳಿಂದ ವಾಕ್ಯ, ವಾಕ್ಯಗಳಿಂದ ಪ್ಯಾರಾ, ಪ್ಯಾರಗಳಿಂದ ಅಧ್ಯಾಯ, ಅಧ್ಯಯಗಳಿಂದ ಒಂದು ಪುಸ್ತಕ !

ಅತೀ ಸೂಕ್ಷ್ಮಾತಿ ಸೂಕ್ಷ್ಮ ಜೀವಕಣಗಳಿಂದ, ಸೂಕ್ಷ್ಮಾಣು ಕಣ, ಸೂಕ್ಷ್ಮಾಣು ಕಣಗಳಿಂದ ಮೈಟೊಕಾಂಡ್ರಿಯಾ, ಮೈಟೊಕಾಂಡ್ರಿಯಾಗಳಿಂದ ಅಂಗ, ಅಂಗಗಳಿಂದ ಒಂದು ದೇಹ !

ಮನುಷ್ಯನಿರುವ ಭೂಮಿ, ಭೂಮಿಯಂತಹ ಅಕಾಶಕಯಾಗಳ ಒಳಗೊಂಡ ಸೌರಮಂಡಲ, ಸೌರಮಂಡಲಗಳನ್ನೊಳಗೊಂಡ ಗ್ಯಾಲಕ್ಸಿ, ಗ್ಯಾಲಕ್ಸಿಗಳನ್ನೊಳಗೊಂಡ ಬ್ರಂಹ್ಮಾಂಡ ಈ ರೀತಿ ನಮ್ಮೊಳಗಿನ ಸೂಕ್ಷ್ಮಾತಿ ಸೂಕ್ಷ್ಮ ಜೀವಕಣಗಳಿಂದ ವಿರಾಟ್ ರೂಪಿ ದೈವ ಎಂಬ *ಮಹತ್* ಅಸ್ತಿತ್ವದಲ್ಲಿದೆ. 

ನಮ್ಮೊಳಗಿನ ಅತೀ ಸೂಕ್ಷ್ಮಾತಿ ಸೂಕ್ಷ್ಮ ಕಣಕ್ಕೆ ನಮ್ಮ ಒಂದು ಕ್ಷಣದ ಜೀವಿತಾವಧಿ ಇದ್ದರೆ ಸೂಕ್ಷ್ಮಾತಿ ಸೂಕ್ಷ್ಮ ಜೀವಕಣಕ್ಕೆ 1 ಗಂಟೆ ಜೀವಿತಾವಧಿ; ಅಂತಹ ಸೂಕ್ಷ್ಮಾತಿ ಸೂಕ್ಷ್ಮ ಜೀವಕಣಗಳಿಂದ ಆದ ಕಣಕ್ಕೆ 1 ದಿನ, ಆ ಜೀವಕಣಗಳಿಂದ ಅದ ಜೀವಕಣಕ್ಕೆ 1 ತಿಂಗಳು, ಆ ಜೀವಕಣಗಳಿಂದ ಅದ ಜೀವಕಣಕ್ಕೆ 1 ವರ್ಷ, ಆ ಜೀವಕಣಗಳಿಂದ  ದೇಹಕ್ಕೆ ಇಂತಿಷ್ಟು ವರ್ಷ. ಇದು ಹೀಗೆ ಎಲ್ಲಿಯವರೆಗೆ ಸಾಗುತ್ತದೆ ಎಂದರೆ ಬ್ರಂಹ್ಮಾಂಡದ ಆಯಸ್ಸು ಮುಗಿಯುವ ತನಕ. 

ನಮ್ಮ ನೂರು ವರ್ಷ ನಮ್ಮೊಳಗಿನ ಸೂಕ್ಷ್ಮಾತಿ ಸೂಕ್ಷ್ಮ ಜೀವಕಣದ ಜೀವಿತಾವಧಿಯ ಕೋಟಿ ಕೋಟಿ ಪಟ್ಟು ಹೆಚ್ಚು. 

ಅದೇ ರೀತಿ ನಮ್ಮ ಜೀವಿತಾವಧಿಯ ಕೋಟಿ  ಪಟ್ಟು ಹೆಚ್ಚು ಈ ಭೂಮಿಯ ಆಯಸ್ಸು.

ಭೂಮಿಯ ಜೀವಿತಾವಧಿಯ ಕೋಟಿ ಪಟ್ಟು ಹೆಚ್ಚು ಗ್ಯಾಲಕ್ಸಿಗಳ  ಆಯಸ್ಸು.

ಗ್ಯಾಲಕ್ಸಿಗಳ ಜೀವಿತಾವಧಿಯ ಕೋಟಿ ಪಟ್ಟು ಹೆಚ್ಚು ಈ ಬ್ರಂಹ್ಮಾಂಡದ ಆಯಸ್ಸು. 

ಬ್ರಂಹ್ಮಾಂಡದ ಆಯಸ್ಸಿನ ಕೋಟಿ ಪಟ್ಟು ಹೆಚ್ಚು ಮಹತ್ ನ ಆಯಸ್ಸು.


       ✍🏻 ಸತೀಶ ಉ ನಡಗಡ್ಡಿ