Sunday 14 March 2021

ಮೋಸ ಹೋದ ಕಣ್ಣು


         "ಮಾನವನ ಮನಸ್ಸು ಸ್ಪರ್ಶಿಸಲಾಗದ ಅನುಭವ ಮಾತ್ರಕ್ಕೆ ದಕ್ಕಬಲ್ಲ ಗಾಳಿ ಇದ್ದಂತೆ."


        ಸರಕಾರಿ ಹಿರಿಯ ಕನ್ನಡ ಪ್ರಥಮಿಕ ಶಾಲೆಯಲ್ಲಿ 6ನೇ ತರಗತಿಯಲ್ಲಿ ಓದುತ್ತಿರುವಾಗ ವರ್ಗ ಗುರುಗಳಾದ ಶ್ರೀ NS ಪಂಗಣ್ಣವರ ಗುರುಗಳು ಒಂದು ದಿನ ತಮ್ಮ ಇಡೀ ವರ್ಗ ವಿದ್ಯಾರ್ಥಿಗಳ ಮೇಲೆ ಸಿಟ್ಟಾಗಿದ್ದರು. ಕಾರಣ, ಪಕ್ಕದ ಕೊನೆಯಲ್ಲಿನ ವರ್ಗದ ನಿರ್ವಹಣೆ ತಮಗಿದ್ದರಿಂದಾಗಿ ಆ ವಿದ್ಯಾರ್ಥಿಗಳಿಗೆ ಬರವಣಿಗೆಯ ಕೆಲಸ ಕೊಟ್ಟು ಬರುವಷ್ಟರಲ್ಲಿ 6ನೇ ವರ್ಗದ ವಿದ್ಯಾರ್ಥಿಗಳು ಶಾಲೆಯ ಹೆಂಚು ಕಿತ್ತು, ಹಾರಿ ಹೋಗುವಂತೆ ಗದ್ದಲ ಮಾಡುತ್ತಿದ್ದರು !!


         ಗುರುಗಳು ಬಂದು ಮನಸೋ ಇಚ್ಛೆ ಬೈದರು. ಅಷ್ಟೆಲ್ಲ ಬೈಗುಳಗಳಲ್ಲಿ "ಶಾಲೆ ಒಳಗ ಮಾಸ್ತರ್ ಹೇಳಿದ್ ಮಾತಿಗೆ ಬೆಲೆ ಕೊಡಬೇಕು ಅಂತ ಮನಸ್ಸು ಹೇಳಲಿಲ್ಲಾ ನಿಮಗ್ ?... ಮನಸ್ಸು ಎಲ್ಲೈತಿ ಅಂತರ ಗೊತ್ತೈತಿಲ್ಲೋ ನಿಮಗ್ ?... ಏ ಸತ್ಯಾ ಎಲ್ಲಿ ಐತ್ಯೋ ಮನಸ್ಸು" ಎಂದದ್ದು ಇಂದಿಗೂ ಆಗಾಗ ತಲೆಯಲ್ಲಿ ಅನ್ನುವುದಕ್ಕಿಂತ ಮನಸ್ಸಿನಲ್ಲಿ ತನ್ನ ರೌದ್ರತೆಯನ್ನು ಪ್ರಕಟಿಸುತ್ತದೆ.


           ಉಸಿರಾಡಲು ಗಾಳಿ ಹೇಗೆ ಎಲ್ಲರಿಗೂ ಅತ್ಯವಶ್ಯವೋ ಹಾಗೆಯೇ ಮನಸ್ಸು ಎಂಬುದು ಅವಶ್ಯ. 'ಮನಸ್ಸಿಲ್ಲದೇ' ಯಾವುದು ಪರಿಪೂರ್ಣ ಅಲ್ಲ. ಸೃಷ್ಠಿಯಲ್ಲಿರುವ ಪ್ರತಿಯೊಂದು ಜೀವಿಗೂ ಮನಸ್ಸಿದೆ. "ಬುದ್ಧಿ"ವಂತನೆನಿಸಿಕೊಂಡ  ಮಾನವನಿಗೆ ಈ ಮನಸ್ಸಿನ ಅನುಭೂತಿ ಬೇರೆಲ್ಲ ಜೀವ-ಜಂತುಗಳಿಗೆ ಹೋಲಿಸಿದರೆ  ಸ್ಪಷ್ಟವಾಗಿರುತ್ತದೆ. ಹಾಗಾಗಿಯೇ ಮನುಷ್ಯ ಇಂದಿನ ಆಧುನಿಕ ಜಗದಲ್ಲಿ "ಅಸಾಧ್ಯ" ಎನಿಸಿಕೊಳ್ಳುವ ಯಾವುದನ್ನೂ "ಸಾಧ್ಯ"ವಾಗುಸುತ್ತಲೇ ಇದ್ದಾನೆ. ಇದರೊಳಗೆ ಬುದ್ಧಿಯ ವಿಚಾರ ಮನಸ್ಸಿನ ಇಂಗಿತದ ಪ್ರಭಾವ ಬಹುವಾಗುರುತ್ತದೆ. ನಮ್ಮಲ್ಲಿರುವ ಮನಸ್ಸು ಇಷ್ಟವಾದುದನ್ನು ಪಡೆಯಲು ಬೆಷರತ್ತಾಗಿ ಕಾರ್ಯಪ್ರವೃತ್ತವಾದರೆ; ಬುದ್ಧಿ ಅದನ್ನು ಪಡೆಯಲು ನಾನು ಅರ್ಹನೆ ? ಅನರ್ಹನೆ ? ಅದು ಏನು ? ಅದರ ಅವಶ್ಯಕತೆ ನನಗೆಷ್ಟು ? ಇತ್ಯಾದಿ ಇತ್ಯಾದಿಯಾಗಿ ವಿವೇಚನೆಗೆ ಒಳಪಡಿಸಿ ಮಹತ್ವದ ಆಧಾರದ ಮೇಲೆ ಬೇಕು-ಬೇಡವನ್ನು ನಿರ್ಧರಿಸುತ್ತದೆ. ಮನುಷ್ಯನ ಮನಸ್ಸು ತನಗೆ ಇಷ್ಟವಾದುವೆಲ್ಲವನ್ನೂ ಪಡೆದುಕೊಳ್ಳಲು ಸದಾ ಹಾತೊರೆಯುತ್ತಿರುತ್ತದೆ. ಹಾಗಾಗಿ, ಮನಸ್ಸಿನಿಂದ ಮಾಡುವುದಕ್ಕೂ, ಬುದ್ಧಿವಂತಿಕೆಯಿಂದ ಮಾಡುವುದಕ್ಕೂ ವ್ಯತ್ಯಾಸವಿದೆ. ಮನಸ್ಸು ಇಷ್ಟವಾದುದನ್ನು ಪಡೆಯಲು ಪರಾಪರ ಯೋಚಿಸದೆ, ಬುದ್ಧಿಯ ಸಲಹೆ ಪಡೆಯದೇ ತನ್ನ ಅಧೀನಕ್ಕೊಳಪಟ್ಟ ಪಂಚೇಂದ್ರಿಯಗಳಿಗೆ  ಆಜ್ಞೆಯನ್ನು ನೀಡಿಯೇ ಬಿಡುತ್ತದೆ. ಮನಸ್ಸಿನ ಈ ಪ್ರವೃತ್ತಿಯೇ ಕೆಲವೊಮ್ಮೆ ಅಪಾಯದ ಅಂಚಿಗೆ ತಂದು ನಿಲ್ಲಿಸಿ ಬಿಡುತ್ತವೆ.


    ಮನಸ್ಸು ಎಷ್ಟು ಹಪಹಪಿ ಎಂದರೆ, ಅದಕ್ಕೆ ಕಿಂಚಿತ್ ಸಮಾಧಾನ ಇರದು. ಆಗಿಂದಾಗಲೇ ಹೇಗಾದರೂ ಸರಿಯೇ ಪಡೆದೇ ತೀರಬೇಕು ಎಂದು ಮಾಡಿಸಿಯೇ ಬಿಡುತ್ತದೆ. ಈ ರೀತಿಯ ಮನಸ್ಸಿನ ತರಾತುರಿಯ ಆಜ್ಞೆಯಿಂದ ನಮ್ಮ ಪಂಚೇಂದ್ರಿಯಗಳೂ ಮೋಸ ಹೋಗುತ್ತವೆ ! ಹೌದು, ಪಂಚೇಂದ್ರಿಯಗಳು ಸುಮಾರು ಸಲ ಮೋಸ ಹೋಗುತ್ತವೆ. ಯೋಚಿಸಿ ನೋಡಿ : ನಿಮ್ಮ ಮನಸ್ಸು ಯಾವುದೋ ಒಂದನ್ನು ಗಹಣವಾಗಿ ಯೋಚಿಸುತ್ತಿರುತ್ತದೆ, ಆಗ ನಿಮ್ಮ ಎದುರಿಗೆ ಏನೋ ಒಂದು ಘಟನೆ ಅಥವಾ ಚಿತ್ರ ಇಲ್ಲವೇ ಎಲ್ಲೋ ಯಾರೋ ಬರೆದ ಯಾವುದೋ ಸಾಲು ನಿಮ್ಮ ಕಣ್ಣಿಗೆ ಬೀಳುತ್ತದೆ. ತಕ್ಷಣ ನಿಮ್ಮ ಮನಸ್ಸು ತಾನು ಗಹಣವಾಗಿ ಯೋಚಿಸುತ್ತಿರುವ ವಿಷಯ ವಸ್ತುವಿನ ಸಹ-ಸಂಬಂಧಿತವಾಗಿ ಅಥವಾ ಅನುಗುಣವಾಗಿ ತಿಳಿದುಕೊಂಡು ಅದನ್ನು ತನ್ನಿಷ್ಟದಂತೆ ಗ್ರಹಿಸಿಕೊಂಡು ಸ್ಮೃತಿಯಲ್ಲಿ ಎಚ್ಚೊತ್ತಿ, ಸೂಕ್ತ ಪಂಚೇಂದ್ರಿಯಕ್ಕೆ ಆಜ್ಞೆಯನ್ನು ನೀಡುತ್ತದೆ. ವಾಸ್ತವದಲ್ಲಿ, ಆ ವಸ್ತು, ವಿಷಯ, ಘಟನೆ ಬೇರೆಯೇ ಇದ್ದರೂ ಮನಸ್ಸು ತನ್ನಿಷ್ಟದಂತೆ ಗ್ರಹಿಸಿಕೊಂಡು ಮುಂದುವರೆದಿರುತ್ತದೆ ! ಹೀಗೆ ಯಾವುದೇ ಆದರೂ ಅದರಲ್ಲಿ 1. ತೋರಿಕೆ, 2. ಗ್ರಹಿಕೆ ಮತ್ತು 3. ವಾಸ್ತವಿಕತೆ. ಎಂಬು ಮೂರು ಮುಖ್ಯ ಆಯಾಮಗಳಿರುತ್ತವೆ.


     ಇದಕ್ಕೆ ಪೂರಕವಾದ ಒಂದೆರಡು ಉದಾಹರಣೆಗಳನ್ನು ನೋಡೋಣ:


ನಾವು ಬಳಸುವ ವಾಟ್ಸಾಪ್ ಸ್ಟೇಟಸ್.

      ಪ್ರತಿಯೊಬ್ಬರು ವಾಟ್ಸಾಪ್ ಸ್ಟೇಟಸ್ ಇಡುತ್ತಾರೆ; ಅದು ಆಗಿನ ಅವರ ಮನಸ್ಥಿತಿ ತಕ್ಕಂತೆ. ಆದರೆ ಅದನ್ನು ನೋಡುವ ಜನರು ತಮ್ಮ ಮನೋ ಸಾಮರ್ಥ್ಯದ ಮೇಲೆ ಗ್ರಹಿಸಿಕೊಂಡು ಅದಕ್ಕೊಂದು ಕಾಮೆಂಟ್ ಹಾಕುತ್ತಾರೆ. ಸ್ಟೇಟಸ್ ಹಾಕಿದಾತ ತನ್ನ ಕಾಂಟ್ಯಾಕ್ಟ್ ಲಿಸ್ಟ್ ಒಳಗಿನ ಪರಮಾಪ್ತರು ತನ್ನ ಆ ಸ್ಟೇಟಸ್ ಅನ್ನು ಹೇಗೆ ಸ್ವೀಕರಿಸಿದರು, ಗ್ರಹಿಸಿದರು, ಊಹಿಸಿಕೊಂಡರು ಎಂಬುದನ್ನು ತಿಳಿದು ನಗಬಹುದು ಇಲ್ಲ ಆಶ್ಚರ್ಯಚಕಿತನಾಗಬಹುದು ! 

        ಇದು ನನ್ನ ಸ್ವಂತದ ಅನುಭವ. ನನ್ನ ವಾಟ್ಸಾಪ್ ಸ್ಟೇಟಸ್ ಗೆ ನಾನು ಆವಾಗಾವಾಗ ಕವನಗಳನ್ನು ಬರೆದು ಹಾಕುತ್ತಿರುತ್ತೇನೆ. ಅದನ್ನು ನೋಡಿದವರಲ್ಲಿ ಒಂದಷ್ಟು ಜನ ಕೆಲ ಸಾಲುಗಳು ತಮಗೆಂದೇ ಬರೆದಿರುವನು ಎಂದು ಗ್ರಹಿಸಿಕೊಂಡು ಅದಕ್ಕೊಂದು ಪ್ರತಿಕ್ರಿಯೆ ನೀಡುತ್ತಾರೆ. ಮತ್ತೆ ಕೆಲವರು ನನ್ನ ಕವಿತೆಯ ವಸ್ತು ವಿಷಯದಲ್ಲಿ ತಮ್ಮ ಆರಾಧ್ಯವೊಂದು ಇದ್ದುದನ್ನು ಗ್ರಹಿಸಿ ಮೆಚ್ಚುಗೆ ವ್ಯಕಗಪಡಿಸುತ್ತಾರೆ. ಆದರೆ ಆ ಸಾಲುಗಳನ್ನು ಬರೆಯುವ ಆ ಘಳಿಗೆಯಲ್ಲಿ ಈ ಜನರು ಬೆಳಕು ಚೆಲ್ಲುವ ಯಾವ ಅಂಶಗಳೂ ಕವಿಯ ತಲೆಯಲ್ಲಿರುವುದೇ ಇಲ್ಲ. ಅವನು ಅದೊಂದು ಬೇರೆಯದೇ ಆದ ದೃಷ್ಟಿಯಲ್ಲಿ ನೋಡಿ ಸೆರೆ ಹಿಡಿದಿರುತ್ತಾನೆ ಅಷ್ಟೇ. ಹೀಗೆ ಬರೆದ ವಾಸ್ತವ ಬೇರೆ, ಜನರಿಗೆ ತೋರಿದ್ದು ಬೇರೆ ಮತ್ತು ಜನರು ಅದನ್ನು ಗ್ರಹಿಸಿದ್ದು ಬೇರೆಯಾಗಿರುತ್ತದೆ.


            ಮೊನ್ನೆ ಒಂದು ದಿನ ನಾವು ನಾಲ್ಕು ಜನ ಸ್ನೇಹಿತರು ಒಂದು ಕಡೆ ಟೀ ಕುಡಿಯಲು ಕಲೆತಿದ್ದೆವು. ಅಲ್ಲಿ ಒಂದು ಹಾಳೆಯ ಮೇಲೆ 'INACTIVE' ಎಂದು ಬರೆದದ್ದು ಗೊತ್ತಾಗುವುದಕ್ಕೂ ಮೊದಲು ನಾನು ಅದನ್ನು "INCENTIVE"  ಎಂದು ಓದಿಬಿಟ್ಟಿದ್ದೆ. ಇದಕ್ಕೆ ಕಾರಣ, ನಾನು ಅಲ್ಲಿ ಸೇರುವುದಕ್ಕೂ ಮೊದಲು ಹಳ್ಳಿಯ post officeಲ್ಲಿ ಪೋಸ್ಟ್ ಮಾಸ್ತರರು ಕೆಲ ವರ್ಗದ ಅಕೌಂಟ್ ಒಪೆನ್ ಮಾಡಿದರೆ ಪಡೆಯುವ incentive ಬಗೆಗೆ ಲೆಕ್ಕಾಚಾರ ಹಾಕುತ್ತಿದ್ದೆ. ಜೊತೆಗಿದ್ದ ಸ್ನೇಹಿತ ಪ್ರವೀಣ್ 'ಸರ್ ನೀವು ತಪ್ಪು ತಿಳ್ಕೊಂಡ್ರಿ.. ಅದು 'INCENTIVE" ಅಲ್ಲಾ "INACTIVE"..' ಎಂದರು. ಕಣ್ಣು ಉಜ್ಜಿಕೊಂಡು ಮತ್ತೊಮ್ಮೆ ನೋಡಿದಾಗ ಗೊತ್ತಾಯ್ತು ಅದು  'INCENTIVE" ಅಲ್ಲಾ "INACTIVE".. ಎಂದು. ಅದಕ್ಕೆ ಪ್ರವೀಣ್  "ಮೋಸ ಹೋದ ಕಣ್ಣು" ಎಂದು ಸರಿಯಾದ ಒಕ್ಕಣೆ ನೀಡಿದ. ಇಲ್ಲಿ ಕಣ್ಣು ನಿಜವಾಗಿಯೂ ಮನಸ್ಸಿನ ಬೆನ್ನುಬಿದ್ದು ಮೋಸ ಹೋಗಿತ್ತು. ಸ್ನೇಹಿತ ಅದರ ವಿಮರ್ಶೆ ಮಾಡಿದಾಗಲೇ ಮನಸ್ಸು ಅದನ್ನು ಬುದ್ಧಿಗೆ ಕಳುಹಿಸಿ ಪರಾಮರ್ಶಿಸಿಕೊಂಡು ತನ್ನ ದುಡುಕು ಸ್ವಭಾವವನ್ನು ಹೀಗಳೆಯಿತು. 


            ಮನುಷ್ಯ ಸದಾ ತನ್ನ ಮನಸ್ಸಿನ ಮೇಲೆ ಹಿಡಿತವನ್ನು ಸಾಧಿಸಬೇಕು ಎಂಬುದು ಇದೆ ಕಾರಣಕ್ಕೆ. ಯಾಕೆಂದರೆ ಮನಸ್ಸು  ಸಂಚಾರಿ, ಚಂಚಲ. ಈ ತರದ ಚಂಚಲತೆಯಿಂದ ಕೂಡಿದ ಮನಸ್ಸಿಗೆ ಸ್ಥಿರತೆ ಮತ್ತು ಏಕಾಗ್ರತೆ ಬಹಳ ಕಡಿಮೆಯಿರುತ್ತದೆ ಮತ್ತು ದುಡುಕುವುದು. ಏಕಾಗ್ರತೆ ಕೊರತೆ ಇದ್ದಲ್ಲಿ ಯಾವುದೇ ಕೆಲಸ-ಕಾರ್ಯ, ಕಲಿಕೆ, ಬೋಧನೆ, ಸಾಧನೆ ಸಾಧ್ಯವಾಗದು. ಸವಾರನು ಹೇಗೆ ಲಗಾಮು ಎಳೆದು ನಿಲ್ಲಿಸುವ ಮೂಲಕ ಕುದುರೆಯನ್ನು ನಿಯಂತ್ರಿಸುವನೋ ಹಾಗೆ ಏಕಾಗ್ರತೆಯಿಂದಿರುವ ಮನಸ್ಸು ಸದಾ ಬುದ್ಧಿಯ ಅಧೀನದಲ್ಲಿ ಕಾರ್ಯ ನಿರ್ವಹಿಸುವಂತೆ ನಾವು ನಿಯಂತ್ರಿಸಬೇಕು. ಬುದ್ಧಿಯ ಅಧೀನದಲ್ಲಿರುವ ಮನಸ್ಸು ಶಾಂತವಾಗಿರುತ್ತದೆ. ಶಾಂತವಾದ ಮನಸ್ಸಿನಲ್ಲಿ ಶುದ್ಧವಾದ ವಿಚಾರಗಳು ಜನ್ಮ ತಳೆಯುತ್ತವೆ. ಶುದ್ಧ ಮತ್ತು ಶ್ರೇಷ್ಠ ವಿಚಾರವುಳ್ಳ ಮನುಷ್ಯನ ವ್ಯಕ್ತಿತ್ವ ಉನ್ನತ ಮಟ್ಟದಲ್ಲಿರುತ್ತದೆ.