ಮನೆ ಎದುರಿಗಿನ
ಮನೆಯೊಂದರಲಿ
ಮುದುಕಿ ಜೀವನ ಮುಗಿಸಿದ್ದಳು;
ದಿನಗೂಲಿ, ಮತ್ತೇನೋ
ಕೆಲಸಗಳನು ಮಾಡಿದ
ಆಕೆ ಕೊನೆಗೊಮ್ಮೆ ಅಂತ್ಯಗೊಂಡಿದ್ದಳು !
ನಾನು ಎಳೆವಯಸ್ಸಿನಲ್ಲಿ
ಇದ್ದಾಗಿನಿಂದ ನೋಡಿದ
ಮನೆ - ಮುದುಕಿ ಇಬ್ಬರೂ ಈಗ ಇಲ್ಲ.
ಅದೆಂದಿನಿಂದಲೋ ಬೆಳೆದು
ಉಳಿದಿದ್ದ ಹುಣಸೆ ಮರವನು
ಮುದುಕಿಯ ಹಿಂದೆ ಹಿಂದೆಯೇ ಸಾಗ ಹಾಕಿದರು !!
ಮನೆಯಲ್ಲಿದ್ದ ಮುದುಕಿಯೂ
ಹಾಗೂ ಆ ಹುಣಸೆ ಮರವೂ
ಅದೆಷ್ಟೋ 'ಕಿಡಿಗೇಡಿ'ಗಳ ಕಲ್ಲಿನೇಟು ತಿಂದಿವೆ:
ಆದರೂ, ಬದುಕಿದ್ದವು ಮನೆ
ಮತ್ತು ಮರ- ನೆರೆಹೊರೆಯವರಂತೆ;
ಈಗ ನೋಡಿದರೆ ಅಲ್ಲಿ ಎಲ್ಲವೂ ಖಾಲಿ ಖಾಲಿ ...
ನೇಸರನುದಯಕ್ಕೆ ಅಡ್ಡಿಯಾದ
ಮರವಿಂದು ಇಲ್ಲವಾಗಿ ಮನೆಯ
ಒಳ ನುಗ್ಗಿದೆ ಎಳೆ ಬಿಸಿಲ ಕಿರಣ ಹೊಸ್ತಿಲು ದಾಟಿ !
ಕಣ್ಣಳತೆಯ ದೂರಕ್ಕೆ ದೃಷ್ಟಿ
ಹಾಯಿಸಿದರೆ ಸಾಕು ಅದೋ
ಕಾಣುತ್ತೇವೆ - ಬಸವಣ್ಣನ ಗುಡಿ, ಅರಗುಡಿ!
ಕಂಬಗಳು ಅರು ನಿಂತಿವೆ,
ಅವು ಹಾಗೆ ನಿಂತಲ್ಲೇ ನಿಂತು
ಒಂದಷ್ಟು ವರ್ಷಗಳು ಕಳೆದಿವೆ, ಕಳೆಯಬೇಕು!
ಮನೆಯನ್ನು ಕೆಡವಿ
ಮತ್ತೊಂದನ್ನು ಕಟ್ಟುವ
ತವಕದಲ್ಲಿದ್ದಾರೆ ನಾಲ್ಕಾರು ಜನರು - ಮತ್ತೊಬ್ಬರಿಗೆ !!
No comments:
Post a Comment