Monday 2 December 2019

ಅದೇ ಜುಬಿಲಿ ಸರ್ಕಲ್ ಟ್ರಾಫಿಕ್ ಸಿಗ್ನಲ್-ನಲ್ಲಿ ನಿಂತಾಗ

              

               ಇವತ್ತು ಆಫೀಸ್ ಕೆಲಸ ಮುಗಿಸ್ಕೊಂಡು ಬೇಗನೆ ಮನೆಗೆ  ಬರ್ತಿದ್ದೆ. ಆಫೀಸ್ ಬಿಡುವ ಮುಂಚೆ ಸಹೋದ್ಯೋಗಿಗಳು ಕಳೆದ ವಾರ ಆಗಿಹೋದ IP ಎಕ್ಸಾಮ್ಸ್ ಬಗ್ಗೆ ಚರ್ಚಿಸುತ್ತಿದ್ದರು, ಸರ್ ಕ್ಷಿಪ್ರವಾಗಿ table ಮೇಲಿನ ಫೈಲುಗಳನ್ನೆಲ್ಲ ಸಾಗಿಸಿದ ಪರಿಣಾಮ ಗತಿ ಕಾಣಿಸಬೇಕಾದುದ್ದನ್ನೆಲ್ಲ ಗತಿಗಾಣಿಸುವಷ್ಟರಲ್ಲಿ ಅನಾರೋಗ್ಯದ ಕಾರಣ ತಲೆ ಸಿಡಿಯುತ್ತಿತ್ತು ಹೋಗಿ ರೆಸ್ಟ್ ಮಾಡುವ ಎಂದುಕೊಂಡು ಅವರ ಚರ್ಚೆಯಲ್ಲಿ ತಲೆಹಾಕದೆ ಸೀದಾ ಮನೆ ಸೇರುವ ಹಂಬಲದಲ್ಲಿದ್ದೆ. ಓಲ್ಡ್ DySP ಸರ್ಕಲ್ ಹತ್ತಿರ ಟ್ರಾಫಿಕ್ ದಾಟಿಕೊಂಡು ಬರುವಾಗ ನನ್ನನ್ನು ಹಿಂಬಾಲಿಸುತ್ತಿದ್ದ ಯಾರೋ ಒಬ್ಬರು ಒಂದೇ ಸಮನೆ ಹಾರ್ನ್ ಮಾಡುತ್ತಿದ್ದರು. ಬಹುಷಃ ಸ್ಟ್ಯಾಂಡ್ ಹಾಕಿದ್ದಿರಬಹುದೆಂದು ಕಾಲಿನಿಂದ ಸ್ಟ್ಯಾಂಡ್ ಚೆಕ್ ಮಾಡಿದೆ. ಸರಿ ಇತ್ತು. ಸುಮ್ಮನೆ ಮುನ್ನಡೆದೆ, ಮತ್ತೆ ಹಾರ್ನ್ ಒಂದೇ ಸಮನೆ ಶುರುವಾಯ್ತು. ಸೈಡ್ ಬಿಟ್ಟೆ, ಓವರ್ ಟೇಕ್ ಮಾಡಿ ಮುಂದೆ ಬಂದು;

 "ಏನ್ರಿ ಎಷ್ಟು ಹಾರ್ನ್ ಕೊಟ್ಟ್ರು ನಿಲ್ಲಂಗಿಲ್ ಅಲ್ರೀ...." ಎಂದ ಲಕ್ಕಿ.
 "ಏನ್ ಸರ್ ನೀವು...." ಎಂದು ನಾನು ನಕ್ಕೆ. 
"ಅಲ್ಲೋ ಎಷ್ಟ್ ಹಾರ್ನ್ ಕೊಟ್ರು ಹಂಗs ಹೊಂಟಿಯಲ್ಲೋ..."
"ಈಗ ಸೈಡ್ ಕೊಟ್ಟಿನಲ್ ಪಾ...... ಮತ್ತ....?"
"ಒಸ್ವಾಲ್ ಹೊಂಟನಿ, ಟ್ರ್ಯಾಕ್ ಪ್ಯಾಂಟ್ ತಗೊಳ್ಳಾಕ್.."
"ಸಿಂಧೂರ ಹಾಲ್ ಒಳಗ್ ಎಕ್ಸಿಬಿಷನ್ ಐತಿ, ಅಲ್ಲೇ ನೋಡಬೇಕಿಲ್ಲ ಆಫೀಸ್ ಮುಂದ್..." 
"ಹೌದಾ.... ನೋಡಲೇ ಇಲ್ಲಲ್ ನಾ... ಚಲೋ ಅದಾವ ಏನಲ್ಲಿ..?"
"ಚಲೋ ಅವ, ಚಲೋ ಅವ...."
"ಆಯ್ತ್ ತಡಿ ಹಂಗಾರ... "
"ಹೆಂಗೂ ಬಂದs ಬಿಟ್ಟಿs, ಒಸವಾಲ್ ನೋಡ್ಕೊಂಡ್ ಹೋಗ್ ಮತ್ತ್.."
"ಓಕೆ ದೋಸ್ತ್.."
ಎಂದು ಲಕ್ಕಿನೂ ಹೋರಾಟ ನಾನೂ ಹೊರಟೆ. ನಾನು ಜುಬಿಲಿ ಸರ್ಕಲ್ ಗೆ ಬಂದೆ, ಟ್ರಾಫಿಕ್ ಸಿಗ್ನಲ್ ಇತ್ತು, ನಿಂತಿದ್ದೆ. ಎಡಗಡೆ ಜಗಜ್ಯೋತಿ ಬಸವಣ್ಣನವರ ಮೂರ್ತಿಯ ಎದುರಿಗೆ ಹುಡುಗಿಯೊಬ್ಬಳು ಹುಡುಗನನ್ನು "ಬಾರೋ ಬಾ ಬಾ..." ಎಂದು ಅವನ ಹೆಗಲ ಮೇಲೆ ಕೈ ಹಾಕಿ ಎಳೆಯುತ್ತಿದ್ದಳು. ಹುಡುಗ ಮುಜುಗರ ಪಟ್ಟುಕೊಳ್ಳುತ್ತಿದ್ದನೋ, ಹೆದರುತ್ತಿದ್ದನೋ ಗೊತ್ತಾಗಲಿಲ್ಲ. ಒಟ್ಟಿನಲ್ಲಿ ಹುಡುಗಿಯ ಜೊತೆ ಹೋಗಲು ಹಿಂದೇಟು ಹಾಕುತ್ತಿದ್ದ. ಆದರೆ ಆಕೆ ಆ ಬಾಲಕನನ್ನು ಹಾಗೆ ಕರೆಯುತ್ತಲೇ ಇದ್ದಳು.  ಹುಡುಗ ಸಂಜೆ ವಾಣಿ ಪತ್ರಿಕೆ ಮತ್ತು 2020ರ ಕ್ಯಾಲೆಂಡರ್ ಮಾರುತ್ತಿದ್ದ, ಹುಡುಗಿ ಹೆಚ್ಚು-ಕಡಿಮೆ ಕಾಲೇಜು ಓದುತ್ತಿರಬಹುದು. "ಇಷ್ಟು ಸಣ್ಣ ವಯಸ್ಸಿನಲ್ಲಿ ನೀನು ಪೇಪರ್ ಮಾರಿ..." ಅಂತೇನೋ ಸಂಭಾಷಣೆ ನಡೆದಿತ್ತು ಆ ಟ್ರಾಫಿಕ್ ಒಳಗೆ ಅವರ ಸಂಭಾಷಣೆ ಸ್ಪಷ್ಟವಾಗಿರಲಿಲ್ಲ. ಹುಡುಗನ ತಲೆ, ಕೆನ್ನೆ ನೇವರಿಸಿ ಮತನಾಡಿಸುತ್ತಿದ್ದಳು. ಹುಡುಗ ಸಂಕೋಚದಲ್ಲೇ ಉತ್ತರಿಸುತ್ತಿದ್ದ. 

"ಬಾ ನಿಂಗ್ ಡ್ರೆಸ್ ಕೊಡಸ್ತೆನಿ "
"ಬ್ಯಾಡ್ ಅಕ್ಕಾ.. ನಾ ಇವಷ್ಟ್ ಮಾರಿ ಮನಿಗಿ ಹೋಗಬೇಕು."
"ಏ ಬಾರೋ ಬಾ ಬಾ..." 

        ಇದನ್ನು ನೋಡುತ್ತಿದ್ದಂತೆಯೇ ನನ್ನ ಹೆಂಡತಿ ನನಗೆ ನಿನ್ನೆ ಹೇಳಿದ "ರೀ, ನಾಳೆ ಬರುವಾಗ ಕ್ಯಾಲೆಂಡರ್ ತಗೊಂಡ್ ಬರ್ರಿ" ಎಂದಿದ್ದು ನೆನಪಾಯಿತು. ಬೈಕ್ ಸೈಡ್ ಗೆ ತೆಗೆದುಕೊಳ್ಳುವ ತವಕದಲ್ಲಿದ್ದೆ, ಟ್ರಾಫಿಕ್ ಪೊಲೀಸ್ ಸೀಟಿ ಹಾಕಿ, ಕೈ ಮಾಡಿದ. ಹಿಂದಿನವರೆಲ್ಲ ನಾನೆಲ್ಲೋ LoC ಕ್ರಾಸ್ ಮಾಡಿದವನ ತರ 'ಕಿನ್ ಕೀ, ಪಾಂವ್ ಪಾಂವ್, ಪ್ಯಾಂವ್ ಪ್ಯಾಂವ್' ಶುರುವಿಟ್ಟರು. ಎಲ್ಲವನ್ನು ಅಷ್ಟಕ್ಕೇ ಬಿಟ್ಟು ಸರ್ಕಲ್ ಕ್ರಾಸ್ ಮಾಡಿದೆ. 

       ಮನೆಗೆ ಬರುವವರೆಗೂ ಆ ಹುಡುಗಿ, ಹುಡುಗನ ಸಂಭಾಷಣೆ ಆಕೆಯ ಆತ್ಮೀಯತೆ, ಅವನ ಸಂಕೋಚ; ಅವನ ಬಗೆಗಿನ ಅವಳ ಅಂತಃಕರಣ, ಅವನಿಗಿರಬಹುದಾದ ಜವಾಬ್ಧಾರಿಗಳು ತಲೆಯಲ್ಲಿ ಬೈಕಿನಷ್ಟೇ ವೇಗವಾಗಿ ಓಡತೊಡಗಿದವು.

2 comments: