Tuesday, 1 April 2025

ನಾನೇ ನೀನು - ನೀನೇ ನಾನು

ನಾನಿರುವುದು ನಿನ್ನೊಳಗೆಯೇ 
ನನ್ನೊಳಗಿರುವುದು ನೀನೆಯೇ
ನಿನ್ನ ಹೊರತು ' ನನ್ನ ' ಹೇಗೆ ಊಹಿಸಲಿ
'ನಿನ್ನ' ಮರೆತು ಹೇಗೆ ನಾನು ಜೀವಿಸಲಿ ?

ಹಾರದೊಳಗಿನ ದಾರ ದಾಟಿ
ಸಾವಿರ ಹೂಗಳ ಬಂಧಿಸಿಟ್ಟುಕೊಂಡಂತೆ,
ದೇಹದೊಳಗಿನ ಲಕ್ಷ ಕೋಟಿ
ಜೀವಕೋಶಗಳ ಚೈತನ್ಯದ ಒಟ್ಟು ಮೊತ್ತ ನಾನಾದಂತೆ;
ನನ್ನಂತಹ ಅನಂತಾನಂತ ಕೋಟಿ ಜೀವತಂತಿ ಮೀಟಿ-
ಪ ಪರಮ ಚೈತನ್ಯದ ಒಟ್ಟು ಮೊತ್ತ ನೀನಾಗಿರುವೆ !!

ದೇಹದೊಳು ಉಪಸ್ಥಿತ ಶ್ವಾಸ, ನೆತ್ತರು,
ಮಾಂಸ, ಮೂಳೆ, ಹೊಲಸು ಕಲಸು ಇತ್ಯಾದಿಗಳಂತೆ
ನೆಲ, ಜಲ, ಕಲ್ಲು, ಮಣ್ಣು, 
ಅಂಡ - ಪಿಂಡ - ಬ್ರಹ್ಮಾಂಡ ಸರ್ವಲೋಕಗಳ
ತನ್ನೊಳಗೇ ಅಡಗಿಸಿಕೊಂಡ ಮಹತ್  ರೂಪಿ
ನಿನ್ನ ವಿರಾಟ್ ರೂಪ ಕಂಡು ಧನ್ಯನಾದೆ !