Saturday, 1 November 2025

ಸೋತಿದ್ದೇನೆ - ಸತ್ತಿಲ್ಲ !


ಸೋತಿದ್ದೇನೆ - ಸತ್ತಿಲ್ಲ !
ಮರುಹುಟ್ಟು ಪಡೆದರೂ 
ಹಳೇ ನೆನಪು ಪ್ರವಾಹದೋಪಾದಿಯಲ್ಲಿ 
ಇಲ್ಲಸಲ್ಲದ ಸಮಯದಲ್ಲಿ
ಮರುಕಳಿಸಿ ನಿದ್ದೆಗೆಡಿಸಿ,
ನನ್ನ 'ನಾನೇ ಮೂರ್ಖ'ನನ್ನಾಗಿಸಿ,
"ದೇಹವೆಂಬ ದೇವಾಲಯ"ವನ್ನು
ಹಾಳುಗೆಡವಿ, ಕನ್ನಡಿಯ ಕೈಯಲ್ಲೂ
ಉಗಿಸಿಕೊಳ್ಳುತ್ತಿದ್ದೇನೆ ನೋಡಿಕೊಂಡಾಗ
ನನ್ನನೇ ನಾನು ಅದರೆದುರು !!!
ಸೋತಿದ್ದೇನೆ ನಾನು
ಆದರೆ, ಇನ್ನೂ ಸತ್ತಿಲ್ಲ !!

ಆದರ್ಶಗಳಿಗೆ ಕಟ್ಟುಬಿದ್ದು,
ಪ್ರತಿಷ್ಠೆಗೆ ಪಟ್ಟುಬಿದ್ದು 
"ಕೆಲಸಕ್ಕೆ ಬಾರದ ಮರದ ದಿಮ್ಮಿ"
ಬಿದ್ದಲ್ಲಿ ಬಿದ್ದು ಲಡ್ಡಾಗಿ ಹೋಗದೆ
'ಬಳಸಿ ಬಳಸಿ' ಸವೆದಾಗ ಎಸೆದ 
ಮರದ ತುಂಡು ನಾನಾದೆನೋ? 
ಮೂರ್ಖನೊಂದಿಗೆ ವಾದಕ್ಕಿಳಿದ 
"ಶತಮುರ್ಖ"ನು ನಾನಾದೆನೋ ?
ನಿಯಮ, ಕಟ್ಟುಪಾಡುಗಳ ಕಾಲಡಿಯಲ್ಲಿ
ಸಿಲುಕಿ ಹುಡಿ ಹಾರಿದ 'ತರಗೆಲೆ'ಯಾದೆನೋ ?
ಏನಾದೆನೋ ಏನೋ - ಒಂದಂತೂ ನಿಜ
ಸೋತಿದ್ದೇನೆ - ಆದರೆ ಸತ್ತಿಲ್ಲ !!