Sunday 8 January 2017

ಇದೇನು ನಿನ್ನ ಆವಸ್ಥೆ ?



ಇದೇನು ನಿನ್ನ ಅವಸ್ಥೆ...?
ತಂತಿ ಬೇಲಿಯ ಗಡಿಯಾವುದೊಂದನ್ನೋ
ದಾಟಿ ಓಡಿ ಹೋಗುತ್ತಿರುವೆ,
ಕಾಲ ಮೇಲೆಲ್ಲಾ ಗಾಯ-ರಕ್ತ ;
ಅದಾವ ಗೂಢಾರಣ್ಯವ ಸಾಗಿ ಬಂದಿರುವೆ ?
ಹೇಳು ಏನಾಯ್ತು ಓ ಹೆಣ್ಣೆ.

ಮೈಮೇಲೆ ತುಂಡು ಬಟ್ಟೆಯೂ ಇಲ್ಲ
ಮೈ ತುಂಬ ಬರಿ ಗೀರು ಗಾಯಗಳಿವೆಯಲ್ಲ !!
ಸಿಗರೆಟಿನಿಂದ ಸುಟ್ಟ ಗಾಯ,
ಚಾಕುವಿನಿಂದ ತಿವಿದ ಗಾಯ,
ನಾಲಗೆ ತುಟಿ ಹರಿದ ಗಾಯ,
ತೊಟ್ಟಿಕ್ಕುತಿದೆ ರಕ್ತ ಪ್ರತಿ ಗಾಯದಿಂದ !
ಕೆದರಿಕೊಂದಿದೆ ತಲೆಗೂದಲೆಲ್ಲ.

ನೀ ಬರುತ್ತಿರುವುದು ದಾರಿಯಲ್ಲ ,
ಕಾಲು ದಾರಿಯಂತೂ ಅಲ್ಲವೇ ಅಲ್ಲ:
ಒಡೆದು ಬಿದ್ದ ಹೆಂಡದ ಬಾಟಲಿ ರಾಶಿಯಲ್ಲಿ
ನೋವಿನ ಅರಿವಿಲ್ಲದೇ ಓಡುತ್ತಿರುವೆ !!
ಹೆಜ್ಜೆಯುದ್ದಕ್ಕೂ ದಾರಿಯಲಿ ರಕ್ತ, ರಕ್ತ, ರಕ್ತ !!!

ಮುಖವೂ ಕಾಣದು ಬಿರುಗಾಳಿಯಾಕ್ರೋಶಕೆ 
ತಲೆಗೂದಲು ಹರಿದು ಹಾರುತ್ತಿವೆ
ನೋಡಬೇಕೆಂದರೆ ನಿನ್ನ ಮುಖ -ಅಸ್ಪಷ್ಠ.

ಅಯ್ಯೋ...!!?
ನನಗರಿವಾಯಿತು ನಿನ್ನ ಸ್ಥಿತಿ.
ನಗ್ನವಾದ ನಿನ್ನ ಅವಸ್ಥೆ
ಭಗ್ನವಾದ ಬೇಲೂರ ಶಿಲ್ಪದಂತಿದೆ.
ವಿಘ್ನ. !!!!!
ನಿನಗೊದಗಿದ ವಿಘ್ನದ ಅರಿವಾಯಿತು.
ಅತ್ಯಾಚಾರಕ್ಕೆ ಬಲಿಯಾಗಿ,
'ಹೋದರೆ ಹಾಯಿತದು; ಜೀವವಾದರೂ ಉಳಿಯಲಿ' 
ಎಂದು ಓಡುತ್ತಿರುವೆ, ಓಡುತ್ತಿರುವೆ.

ನಿರ್ಜನ ಪ್ರದೇಶದಲ್ಲಿ ಅದಾರಿಗೆ
ಆಹಾರವಾಗಿ ಹೋದೆ ಕುಸುಮವೇ ?
ಬೀಸಿ ಬರುವ ಬಿರುಗಾಳಿಯಲೊಂದು
ತರಗೆಲೆ ನಿನ್ನ ಅಂಗ ಮುಚ್ಚಿದೆ.

ಮರದ ತರಗೆಲೆ, ತೊಗಟೆಯಿಂದ
ಮೈಯ ಮುಚ್ಚಿಕೊಂಡಿದ್ದೆ
ಶತ ಶತಮಾನಗಳ ಹಿಂದೆ ;
ಶತಮಾನಗಳೆಲ್ಲ ಗತಿಸಿದ ಮೇಲೆ
ಮೈ ಮುಚ್ಚಿದ್ದು ಮತ್ತದೇ ತರಗೆಲೆ :
'ಮಣ್ಣಿನಿಂದ ಮಣ್ಣಿಗೆ'ನುವಂತೆ
'ತರಗೆಳೆಯಿಂದ ತರಗೆಲೆ' - ಇಂತೆ.

ತರಗೆಲೆಯನು ಬಿಟ್ಟು, ತೊಗಟೆಯನು ತೊಟ್ಟೆ
ತೊಗಟೆಯನು ಬಿಟ್ಟು, ಲಂಗ ಸೀರೆಯನುಟ್ಟೆ
ಲಂಗ ಸೀರೆಯನೂ ಬಿಟ್ಟು ಚೂಡಿಯ ತೊಟ್ಟೆ :
ಪ್ಯಾಂಟ್, ಟಿ-ಶರ್ಟ್ ನು ಹಾಕಿ ನೀ ಕೆಟ್ಟೆ.
ತರ ತರದ ಬಟ್ಟೆ- ಅದೆಂಥಾ ಮಾರುಕಟ್ಟೆ !!!!

ದಿಟ್ಟೆ, ನಿಜವಾಗಲೂ ನೀನು ದಿಟ್ಟೆ
ಬೇಕಾದ ಸ್ವಾತಂತ್ರ್ಯವನೆಲ್ಲ ಪಡೆದುಕೊಂಡೆ ಬಿಟ್ಟೆ
'ನಾನೂ ಪುರುಷ ಸಮಾನಳೆಂದು ಸಮಾಜದಲ್ಲಿ
ನಿನ್ನ ನೀನೇ ತೆರೆದುಕೊಂಡು ಬಿಟ್ಟೆ..... 
ಸರ್ವವ್ಯಾಪಿಯಾಗಿ ಪ್ರವೇಶಿಸಿದೆ,
ಬೆಳೆದೆ, ಬೆಳೆಸಿದೆ,ಬೆಳಗಿಸಿದೆ,
ಜಗತ್ತನ್ನೇ  ಅಭಿವೃದ್ಧಿಯತ್ತ ಕೊಂಡೊಯ್ದೆ.

ಅದರೂ.... ..
ಎಲ್ಲೋ ಒಂದು ಕಡೆ ಎಡವಿ
'ನಿನಗೆ ನೀನೇ ಸಂಚು'-
ತಂದುಕೊಂಡಂತೆ ಎನಿಸುತಿದೆ. 
                ✍ ಸತೀಶ ಉ ನಡಗಡ್ಡಿ 

No comments:

Post a Comment