Thursday 9 April 2020

ಯುದ್ಧ ಎಂದರೆ...





ಖಡ್ಗ, ಭರ್ಚಿ, ತೋಪುಗಳ
ವರ್ಷಧಾರೆಯ ಸದ್ದಲ್ಲ;
ಕೆಮ್ಮು, ಸೀನುವುದು,
ಗಂಟಲು ಹಿಡಿದುಕೊಂಡು
ಅರಚಾಡಿ ಸಾಯುವುದನ್ನೂ
ಈ ಯುದ್ಧ ಆವರಿಸಿಕೊಂಡಿದೆ !!

ಮಿಗ್, ರಫೆಲ್,ಎಫ್-ಸಿಕ್ಸ್ಟೀನುಗಳ
ಹಾರಾಟವೇನು ಬಾಣಲಿಲ್ಲ;
ಬಾಂಬು, ಬುಲ್ಲೆಟ್ಟುಗಳು
ಹೃದಯ ಕಂಪಿಸುವ ಧ್ವನಿಯಿಲ್ಲ;
AK47-56,ಸ್ನಿಪರ್ , ಟ್ಯಾಂಕರುಗಳು
ಇಲ್ಲೆಲ್ಲಿಯೂ ಕಾಣ ಸಿಗುವುದಿಲ್ಲ.
ಆದರೆ..,
ಯುದ್ಧ ಶುರುವಾಗಿ ಜಗದಾದ್ಯಂತ
ಮರಣ ಮೃದಂಗ ಬಾರಿಸಿದೆ !!

ಗಡಿ-ಗಡಿಗಳಲ್ಲಿ ಗನ್ನು ಹೆಗಲೇರಿಸಿಕೊಂಡು
ನಿಂತವರೆಲ್ಲ ರಕ್ಷಣಾ ಸೈನಿಕರೆಂದು
ಹೇಗೆ ಹೇಳಲಿ...?

ಗುಂಡಿನೇಟಿನ ಗಾಯದಂತೆ
ಮಾಸ್ಕ್ ಧರಿಸಿ ಮುಖ ಗಾಯವಾಗಿದೆ,
ಗ್ಲೌಸ್ ಹಾಕಿ, ಹಾಕಿ ಕೈ ಸುಲಿದಿದೆ !
"ವೈದ್ಯೋ ನಾರಾಯಣ ಹರಿ.."

ಸದಾ ಸಿದ್ಧ ಖಾಕಿ ಪಡೆ
ಲಾಠಿ-ಬೂಟು-ಬಂದೂಕಿನ ನಡೆ;
ಅಗೋಚರ ವೈರಿಯಿಂದ ಅಮಾಯಕರ
ರಕ್ಷಣೆಗೆ ಕಟಿಬದ್ಧ ಲಾಠಿ- ಖಾಕಿ ಕರ.

'ಅದೆಲ್ಲಿಯೂ ಕಾಣ ಸಿಗನು ವೈರಿ,
ಹುಡುಕಿ ಹುಡುಕಿ ವಿಷ ಹಾಕುತ್ತಿರುವಿರಿ..'
ಶಸ್ತ್ರಾಸ್ತ್ರಗಳ ಹಿಡಿದು ನಡೆದಿರುವ
ನೈರ್ಮಲ್ಯ ಕಾರ್ಮಿಕ ಸೇನೆಗೆ ಮುಗಿವೆ ಕರವ.

ಗುಂಡಿನ ಸದ್ದಿಲ್ಲದ ಯುದ್ಧ ನಡೆಯುತ್ತಿದೆ !!!
ಯೋಧರಿಲ್ಲಿ - ವೈದ್ಯರು, ಪೊಲೀಸರು, ಸ್ವಚ್ಛತಾ ಕರ್ಮಿಗಳು.

ಎಲ್ಲಾ ಯುದ್ಧದ ಪರಿಣಾಮ ಮಾತ್ರ ಒಂದೇ
"ಮರಣ ಜಾತ್ರೆ..!  ಹೆಣಗಳ ಮೆರವಣಿಗೆ...!!"

  ✍ ಸತೀಶ್ ಉ ನಡಗಡ್ಡಿ

No comments:

Post a Comment