Sunday 29 March 2020

ಪ್ರವಾಸ


ಬಾನಲ್ಲಿ ಸೂರ್ಯ ಮುಳುಗುತ್ತಿದ್ದಂತೆ ನಮ್ಮೊಳಗೊಂದು ಸೂರ್ಯೋದಯ ಆರಂಭವಾಗಿತ್ತು. ಆ ಸೂರ್ಯೋದಯದ ಖುಷಿಗಿಂತ ನಮಗೆ ನಮ್ಮಲ್ಲಿ ಅರಿವು-ಮರುವು ಜಾಸ್ತಿಯಾಗಿತ್ತು.
ಕೈಗೆ ಸಿಕ್ಕಿದ್ದನ್ನು ಎತ್ತಿಕೊಂಡು ಬ್ಯಾಗಿನೊಳಗೆ ಹಾಕಿ ಜಿಪ್ ಎಳೆದು, ಆ ಕಡೆಯಿಂದ ಈ ಕಡೆಯಿಂದ ಬಂದು ಮತ್ತೆ ಜಿಪ್ ತೆಗೆದು "ಮತ್ತ ಏನಾರ ಬಿಟ್ಟೆನಾ ?" ಎಂದು ಮನದಲ್ಲೇ ಪ್ರಶ್ನಿಸಿಕೊಳ್ಳುತ್ತ ಮೀಸೆಯೊಳಗೆ ನಕ್ಕು, ಶಿಸೆಯೊಳಗಿನ ನೀರು ಗುಟುಕಿಸುವಷ್ಟರಲ್ಲಿ ಸಮಯ 5-10 ಆಗಿತ್ತು. ನಮ್ಮ BCM ಹಾಸ್ಟೆಲ್ ಬಸ್ ಹಿಂತಿರುಗಿ ಹೊರಟಿತು ಎನ್ನುವಷ್ಟರಲ್ಲಿ ಓಡಿ ಓಡಿ ಹೋಗಿ ಯಾವುದೇ ಆಯಾಸವಿಲ್ಲದೇ ಬಸ್ ಹಿಡಿದುಕೊಂಡೆವು. ಯಾಕೆ ನಮಗೆ ಆಯಾಸವಾಗಿರಲಿಲ್ಲ ಎಂದರೆ ನಾವು ಹೊರಟಿದ್ದು ತೀರ್ಥಯಾತ್ರೆಗಲ್ಲ "ಶೈಕ್ಷಣಿಕ ಪ್ರವಾಸ" ಕ್ಕೆ. ಪ್ರವಾಸದ ಗುಂಗಿನಲ್ಲಿ ಇಂಥಹ ಆಯಾಸವೂ ನಿರಾಯಸವೇ.

7 ಗಂಟೆಗೆ DIET ಎಂಬ ದೇಗುಲ ತಲುಪಿದೆವು. ಅಲ್ಲಿದ್ದ ಗೆಳೆಯರ ಬಳಗವೂ ನಮ್ಮಷ್ಟೇ ಕಾತುರದಿಂದ ಕಾಯುತ್ತಿದ್ದರು. ಎಲ್ಲರೂ 8.30ಕ್ಕೆ ಊಟ ಮುಗಿಯುತ್ತಿದ್ದಂತೆ KSRTC ಬಸ್ 'ಪಾಂವ್ ಪಾಂವ್...' ಎಂದು ಸದ್ದು ಮಾಡಿತು. "ಎಲ್ಲರೊಳಗೊಂದಾಗು ಮಂಕುತಿಮ್ಮ " ಎಂಬ ಕವಿ ಡಿವಿಜಿಯವರ ಮಾತಿನಂತೆ ನಾನು "ಶಂಭೋ ಶಂಕರ " ಎಂದು ಪ್ರವಾಸದ ತೇರನ್ನು ಹತ್ತಿದೆ.

ನಾವು 44 ಜನ ಮತ್ತು ನಮ್ಮೊಂದಿಗೆ ನಮ್ಮ ಹಿರಿಯರು 6 ಜನ ಹಾಗೂ 3 ಜನ ಉಪನ್ಯಾಸಕರು, ಇಬ್ಬರು ಉಪನ್ಯಾಸಕಿಯರು ಮತ್ತು ಒಬ್ಬ ಬಸ್ ಚಾಲಕ, ಒಟ್ಟು 56 ಜನ. ಸರಿಯಾಗಿ ರಾತ್ರಿ 9 ಗಂಟೆಗೆ ವರ್ಗ ಶಿಕ್ಷಕರಾದ ಶ್ರೀ A N ಪ್ಯಾಟಿಯವರು ಮತ್ತು PSDE ವಿಭಾಗದ ಮುಖ್ಯಸ್ಥರಾದ ಶ್ರೀ M N ದಂಡಿನ ಗುರುಗಳು ಶುಭ ಹಾರೈಸಿದರು.

ಮೊದ ಮೊದಲು ಎಲ್ಲರೂ ಸುಮ್ಮನೆ ಕುಳಿತಿದ್ದೆವು ಆದರೂ ನಮ್ಮ-ನಮ್ಮಲ್ಲೇ ಮಿತಿ ಇರಲಿಲ್ಲ. ಬೆಳಗವಿಯಿಂದ ಕಿತ್ತೂರು ದಾಟಿಕೊಂಡು 55 ಕಿಮೀ. ದೂರ 'ಭಾರತ್ ಪ್ಯಾಲೇಸ್' ಧಾಬಾ ಗೆ ಬಸ್ ನಿಂತಿತು. ಇಚ್ಛಿಸಿದವರು ಚಾ ಕುಡಿದರೆ, ಮಿಕ್ಕವರು ಟ್ಯಾಂಕ್ ಖಾಲಿ ಮಾಡಿದರು. 10 ನಿಮಿಷದ ವಿರಾಮ ಮುಗಿದು ಮತ್ತೆ ಪಯಣ ಆರಂಭವಾಯ್ತು. ಎಲ್ಲರೂ ಮಲಗಿದ್ದರು, ಕೆಲವೊಬ್ಬರು ಎಚ್ಚರವಿದ್ದರು.

ಬೆಳಗಿನ 4 ಗಂಟೆಗೆ ಬಸ್ ಕಡೂರು ಬಸ್ ನಿಲ್ದಾಣದಲ್ಲಿ ನಿಂತಿತ್ತು. ಎಲ್ಲರೂ ಇಳಿದು ಅಲೋಇಯೇ ನಿತ್ಯ ಕರ್ಮಾಚರಣೆಗಳನ್ನು ಮುಗಿಸುವಷ್ಟರಲ್ಲಿ 7 ಗಂಟೆ ಆಗಿತ್ತು. ತಡಮಾಡದೇ ಮೈಸೂರಿನತ್ತ ಹೊರಟೆವು. ಈ ಕಡೂರಿಗೆ ಬರುವಷ್ಟರಲ್ಲಿ ಹಲವು ಘಾಟ್ ಗಳನ್ನು ದಾಟಿದ್ದೆವು, ಆ ಕಗ್ಗತ್ತಲಲ್ಲಿ ನೋಡದಿದ್ದರೂ ದೇಹ ಅನುಭವಿಸಿತ್ತು. ಮುಂದೆಲ್ಲ ಹಸಿರು ಹಬ್ಬ ತಳಿರು ತೋರಣದಂತೆ, ಸಲಾಗಿ ನಿಂತ ಮರಗಳು, ಚಕ್ಕೆ-ಚಕ್ಕೆ ಗದ್ದೆಗಳು, ಬೆಟ್ಟ-ಗುಡ್ಡಗಳು, ಹೊಸ ಪ್ರದೇಶ, ಜನರ ವಿಭಿನ್ನ ಮಾತಿನ ಶೈಲಿ. ನೋಡಿ ಮೋಜು ಮಾಡಲು ಹಣ ಕೋಡಬೇಕೇ? ಇಲ್ಲ.

ಹೊತ್ತು ಏರುವುದರಲ್ಲಿ ಮೈಸೂರಿನ DIET ಕಾಲೇಜಿನಲ್ಲಿದ್ದೆವು. ಎಲ್ಲರೂ ತಮ್ಮ ತಮ್ಮ ಬ್ಯಾಗುಗಳನ್ನು ತೆಗೆದುಕೊಂಡು ರೂಮಿಗೆ ಹೋಗಿ ''ಫ್ರೆಶ್ ಆಗಾಕ್ ಅರ್ಧ ತಾಸು...." ಗುರುಗಳಿಂದ ಸಮಯ ದೊರಕಿತು. ಅದರಂತೆ ಎಲ್ಲರೂ ಫ್ರೆಶ್ ಆಗಿ, ತಾಯಿ ಚಾಮುಂದಿಯ ದರ್ಶನಕ್ಕೆ ಹೋದೆವು. ಬಸ್ ಬೆಟ್ಟವನ್ನು ಹತ್ತುತ್ತಿದ್ದಂತೆ ಎಲ್ಲರೂ ಮೈಸೂರಿನ ಉದ್ದಗಲ ನೋಡಿ ಸಂತಸ ಪಟ್ಟೆವು. 12 ಗಂಟೆಗೆ ಬಸ್ ದೇವಸ್ಥಾನ ತಲುಪಿತು.

" ಮೇಲೆ ಸೂರ್ಯನ ಬಿರು-ಬಿರು ಬಿಸಿಲು,
ಕೆಳಗೆ ಚುರು-ಚುರು ಟಾರ್ ರೋಡ್
ಮೈಗೆಲ್ಲ ಬಿಸಿಲ ಧಗೆಯಂತೆ
ಎದೆಯಲ್ಲಿ ಗೆಳತಿಯ ನೆನಪಿನ ಹಾಗೆ..."

ಹೀಗೆ ಮಂಜುಗಡ್ಡೆಯ ಮೇಲೆ ನಡೆದವರಂತೆ ನಾನೂ ಹೊರಟಿದ್ದೆ. ಉಳಿದವರು ನೆರಳು, ತಂಪು ಮರಳಿನ ಆಸರೆ ಪಡೆದರು ನಂತರ ಸರದಿ ಸಾಲಿನಲ್ಲಿ ನಿಂತು , ದೇವಿಯ ದರ್ಶನ ಪಡೆದು, ಫೋಟೋ ಗೆ ಪೋಸ್ ನೀಡಿ, ಸ್ವಲ್ಪ ಸಮಯ ಅಲ್ಲಿಯೇ ಕಳೆದು ಬಸ್ಸಿನತ್ತ ಹೆಜ್ಜೆ ಹಾಕಿ, ನಂದಿಶನನ್ನು ಭೇಟಿ ಮಾಡಿದೆವು. ಅಲ್ಲಿಂದ ನೇರವಾಗಿ ಪ್ರಾಣಿ ಸಂಗ್ರಹಾಲಯಕ್ಕೆ ಪ್ರಾಣಿಗಳ ಹಿಂಡು ಹೊರಟು, ಪ್ರವೇಶ ಪಡೆದು ಅವನ್ನು ನೋಡಿ ನಾವು, ನಮ್ಮನ್ನು ನೋಡಿ ಅವು ಹರ್ಷವಾಯಿತು.

ಬಿಸಿಲ ಬೇಗೆಗೆ ಬಾಯಿ, ಗಂಟಲು ಒಣಗಿ, ಸಿಕ್ಕ ನೀರಿಗೆ ಹೋರಾಡಿ "ಏನಗಲಿ ಮುಂದೆ ಸಾಗು ನೀ...." ಎಂದು ನಡೆದೆವು. ಬಿಳಿ ರಂಗಿನ ಮಯೂರಿ, ಬಣ್ಣ ಬಣ್ಣದ ಗಿಳಿ, ಗುಬ್ಬಿ, ಕಾಡು ಕೋಳಿ, ಜಿಂಕೆ, ಜಿರಾಫೆ, ಹುಲಿ, ಸಿಂಹ, ತೋಳ, ಕರಡಿ, ಕಾಡ್ಹಂದಿ , ಕಾಡು ಪಾಪ, ಮಂಗ, ಗೋರಿಲ್ಲ ಚಿಂಪಾಂಜೀ, ಹಾವು-ಹೆಬ್ಬಾವು, ಮೊಸಳೆ, ಅಮೆ, ಕಪ್ಪೆ ಒಂದೋ ಎರಡೋ ನಮ್ಮನ್ನೂ ಸೇರಿ ತರ ತರದ ಪ್ರಾಣಿಗಳಿದ್ದವು, ಸಮಯ 3 ಗಂಟೆ ಆಗಿತ್ತು.

ಮಧ್ಯಾಹ್ನದ ಅಲ್ಪಾಹಾರ ಮುಗಿಸಿ, ಅರಸರ ಮನೆ ಅರಮನೆಯಲ್ಲಿ ಆಳರಸರಂತೆ ಪ್ರವೇಶಿಸಿದೆವು; ರಾಜನಿಗೆ ರಾಣಿ ಇರಲಿಲ್ಲ, ರಾಣಿಗೆ ರಾಜ ಇರಲಿಲ್ಲ.

ಬಾಗಿಲುಗಳೆಲ್ಲ ಗಂಧದ ಮರದ ಬಳಕೆ, ಗೋಡೆಗಳಿಗೆಲ್ಲ ಚಿತ್ರ ವಿನ್ಯಾಸ: ಅದು ಬರಿಯ ಅರಮನೆಯಲ್ಲ ಅಗಣಿತ ಅಳಿಸಲಾಗದ ಕಲೆಗಳ ಅಗರದ ಮನೆ. ಅರಸರ ದಿನ ಬಳಕೆಯ ವಸ್ತುಗಳು, ಯುದ್ಧೋಪಕರಣಗಳು, ಆಟಿಕೆಗಳು, ಅತ್ಯಪರೂಪದ ವಸ್ತುಗಳಿದ್ದವು. ಸಮಯ 5 ಗಂಟೆಯಾಗಿದ್ದು ಗೊತ್ತಾಗಿ ತಟ್ಟನೆ ಬಸ್ಸನ್ನೇರಿ ಹೊರಟೆವು. ಎಲ್ಲಿಗೆ ? ಸರ್ M ವಿಶ್ವೇಶ್ವರಯ್ಯನವರ ಅತ್ಯದ್ಭುತ ತಂತ್ರಗರಿಕೆಯ ಕಟ್ಟಡ ನೋಡಲು.

KRS. ಅಂದ್ರೆ, ಕೃಷ್ಣ ರಾಜ ಸಾಗರ. ಇದನ್ನು ಕನ್ನಡದ ಜೀವನದಿ ಎಂದೂ, ದಕ್ಷಿಣ ಭಾರತದ ಗಂಗಾ ನದಿ ಎಂದೂ ಕರೆಯಲ್ಪಡುವ ಕಾವೇರಿ ನದಿಗೆ ಕಟ್ಟಲಾಗಿದೆ. 6 ಗಂಟೆಗೆ KRS ತಲುಪಿದೆವು, ದಿನವಿಡೀ ನಡೆದು ಆಯಾಸವಾದರೂ ಓಡೋಡಿ ನುಗ್ಗಿ, ತಂಪು ಪಾನೀಯ ಜಗ್ಗಿ ಹೋಗುವಷ್ಟರಲ್ಲಿ ಸಮಯ 7 ಗಂಟೆ ಆಗಿತ್ತು.

ಕಾರಂಜಿಯ ನೃತ್ಯ ವೀಕ್ಷಣೆಗಾಗಿ ಕಾತುರದಿಂದ ಕಾಯ್ದಿದ್ದ ನಮಗೆ ದಿಕ್ಕು ತೋಚದಂತಾಗಿ ನೀರ ನೃತ್ಯ ಸ್ಥಳದತ್ತ ಕಲ್ಕಿತ್ತೆವು. ಮೊದಲೇ ಸ್ಥಳ ಪರಿಚಯವಿದ್ದ ನಾವು (ನಾನು, ದಳವಾಯಿ, ಬೊಮ್ಮಣ್ಣವರ್, ಕೋಟಿ) ನಮ್ಮೊಂದಿಗೆ ಕೆಲವರನ್ನು ಎಳೆದುಕೊಂಡು ಕಾಲಿಗೆ ಕೀ ಕೊಟ್ಟು ಓಡಲಾರಂಭಿಸಿದೆವು. ಆ ಜನ ಜಂಗುಳಿಯಲ್ಲಿ ನುಸುಳಿಕೊಂಡು ಹರ ಸಾಹಸ ಮಾಡಿ ಹೋದೆವಾದರೂ ಸಮಯ ಮೀರಿತ್ತು, ಕೊನೆಯ ಹಾಡಿನ ನೃತ್ಯ ನೋಡಿ ಮೃತ್ಯುವಿನ ಕದ ತಟ್ಟುವಂತೆ ಓಡಿದ ನಮಗೆ ಸಾಕಾಗಿತ್ತು. ಸಾಯುವವರ ಬಾಯಿಗೆ ಹನಿ ನೀರು ಸಿಕ್ಕಂತೆ ಒಂದೇ ಒಂದು ಹಾಡಿನ ನೃತ್ಯ ನೋಡಿದೆವು "ವಂದೇ ಮಾತರಂ" ಹಾಡು. ನಮ್ಮ ನಿಮ್ಮೆಲ್ಲರ ಏಕತೆಯ ಜಾಡು ಇದೇ ಅಲ್ಲವೇ ? ಎಲ್ಲರೂ ಒಟ್ಟುಗೂಡಿ ಬಸ್ಸಿನತ್ತ ನಡೆದೆವು, ಇಚ್ಛಿಸದವರು ಇಷ್ಟದ ಖಾದ್ಯವನ್ನು ತಿಂದರು. ಪಯಣ ಮೈಸ್ಯುರು DIET ಕಡೆ ಹೊರಟಿತು. ಸಮಯ ಸರಿಯಾಗಿ 10 ಗಂಟೆ ಆಗಿತ್ತು. KRS ಇಂದ DIET ಗೆ ಬಂದ ಸಮಯ ಹೇಗೆ ಜಾರಿತು ಎಂದು ತಿಳಿಯಲಿಲ್ಲ ಯಾಕೆಂದರೆ, ಜೋಕ್ ಹೇಳುವುದು, ಹಾಡು ಹಾಡುವುದು, ಡಾನ್ಸ್ ಮತ್ತು ನಟಿಸುವುದು ಹುಗೆ ವಿವಿಧ ಚಟುವಟಿಕೆಗಳೊಂದಿಗೆ ಎಲ್ಲರೂ ಎಲ್ಲರನ್ನೂ ನಗಿಸುತ್ತ ನಗುತ್ತ ಮನರಂಜಿಸಿದೆವು. ಗುಡಿಗೆ ಬಂದು ಕೈ ಕಾಲು ಮುಖ ತೊಳೆದು, ಬಿಸಿ ಊಟ ಸ್ವಾಹಾ ಮಾಡಿ ಸಣ್ಣಗೆ ಸುದ್ಧಿಯಿಲ್ಲದೆ ನಿದ್ದೆಯ ಕಡಲಲ್ಲಿ ಜಾರಿದೆವು.

ಮರುದಿನ ಮುಂಜಾಯ 5.30ಕ್ಕೆ ಎದ್ದು, ಎಲ್ಲ ಮಾಡಬೇಕಾದ ಕೆಲಸಗಳನ್ನು ಮಾಡಿ, 7.30ಕ್ಕೆ ಶ್ರೀ ರಂಗಪಟ್ಟಣಕ್ಕೆ ಹೊರಟೆವು. ದರಿಯಾ ದೌಲತ್ ಅರಮನೆಯನ್ನು ದರ್ಬಾರಿನಲ್ಲಿ ನೋಡದಿದ್ದರೂ, ದಾರಿಯಲ್ಲೇ ನೋಡಿ, ರಂಗನಾಥ ಸ್ವಾಮಿಯ ದೇವಸ್ಥಾನಕ್ಕೆ ಹೋಗಿ, ದರ್ಶನ ಪಡೆದು, ರಂಗನ ಜೊತೆ ಫೋಟೋ ತೆಗೆಸಿಕೊಳ್ಳಲು ಹೋಗಿ ಅರ್ಚಕನಿಂದ ಬೈಸಿಕೊಂಡು ಹೊರ ಬಂದು, ಶ್ರವಣ ಬೆಳಗೊಳದತ್ತ ನಡೆದೆವು.

ಬಸ್ಸಿನಲ್ಲಿ ಸಮಯ ಕಳೆಯಲು ಏನು ಮಾಡುವುದೆಂದು ತಿಳಿಯದೆ ಕಂಗಾಲಾಗಿ ಹಿಂದಿನ ದಿನದ ನಟನೆ, ಅಂತ್ಯಕ್ಷರಿ ನೆನಪಾಗಿ ಚುಟುಕು ಹಾಡುಗಳೊಂದಿಗೆ ಯಡಿಯೂರಪ್ಪನವರ ಸರಕಾರಕ್ಕೆ ವಿರೋಧ ಪಕ್ಷಗಳು ಹೆಣಗುವಂತೆ ಗೆಲ್ಲಲ್ಲು ನಾವು ಹುಡುಗ-ಹುಡುಗಿಯರು ಒಬ್ಬರ ಮೇಲೊಬ್ಬರಂತೆ, ಯಾರಿಗೆ ಯಾರು ಕಡಿಮೆ ಇಲ್ಲದಂತೆ ಸ್ಪರ್ಧಿಸಿದರೂ ಆಡಳಿತದ ಚುಕ್ಕಾಣಿಯನ್ನು ಸಮರ್ಥವಾಗಿ ನಿಭಾಯಿಸಲು ನಮಗಾಗದೆಂದು ಸ್ತ್ರೀಯರು ಗೆಲುವಿನ ಸೋಪಾನ ನಮಗೆ ಬಿಟ್ಟು ಪಯಣ ಸಾಗಿತು.

ಕಡಿದಾದ ಬೆಟ್ಟ-ಗುಡ್ಡಗಳ ಮಧ್ಯೆ
ಚಿಕ್ಕ-ಪುಟ್ಟ ಹಾಡುಗಳೊಂದಿಗೆ
ಅಲ್ಲಲ್ಲಿ ತಿಳಿಹಾಸ್ಯದಿಂದ ಎಲ್ಲರನ್ನೂ 
ಸುಳಿಸುತ್ತುವ ನಗೆ.

ರೋಡಿನ ದುರವಸ್ಥೆಯಿಂದ ಹಿಂಬದಿಯಲ್ಲಿ ಕುಳಿತ ಪಾಪಿಗಳ ಗೊಳಿನ ಬಗೆ, ನಮ್ಮ ಅತಿಯಾದ ಸಂತೋಷಕ್ಕೆ ಮಿತವಾಗಿ ಹೊಗೆ ಹಾಕಿತ್ತು. "ದೋಣಿ ಸಾಗಲಿ ಮುಂದೆ ಹೋಗಲಿ" ಎಂಬ ಕವಿ ವಾಣಿಯಂತೆ ಶ್ರವಣಬೆಳಗೊಳ ತಲುಪಿದೆವು.

ಆ ಬೃಹತ್ ಕಲ್ಬೆಟ್ಟ ಏರುವಷ್ಟರಲ್ಲಿ ಅರ್ಧ ಜನರು ಅರ್ಧಕ್ಕೆ "ಉಸ್...." ಎಂದು ನಿಟ್ಟುಸಿರು ಬಿಟ್ಟು, ಟೊಂಕಕ್ಕೆ ಕೈ ಇಟ್ಟು ಸೂರ್ಯನತ್ತ ದಿಟ್ಟಿಸಿ ನೋಡತೊಡಗಿದರು. ನಾವಂತೂ ನಮ್ಮದೇ ಕಿತಾಪತಿಯೊಂದಿಗೆ ಮೇಲೆ ಹೋಗಿ ಫೋಟೋ ಪೋಸ್ ಕಪಿಚೇಷ್ಟೆಯಲ್ಲಿ ತೊಡಗಿದ್ದೆವು.

ಮುಂದಾದವನೆ ನಾಯಕ
ಹಿಂದುಳಿದ ಹಿಂಬಾಲಕ
ಬರುತ್ತಿತ್ತು ಹೈಬ್ರಿಡ್ ಪೀಳಿಗೆ.

ಗೊಮ್ಮಟೇಶನ ಭವ್ಯ ಮೂರ್ತಿಗೊಂದು ಚಿಕ್ಕದಾಗಿ ನಮಿಸಿ, ಹೊರ ಬರುವಷ್ಟರಲ್ಲಿ ನಮ್ಮ ಸ್ತ್ರೀ ಸಮೂಹ ಶಾಸನ ಕಲ್ಲುಗೆಳೆದುರು ಕುಳಿತು ಬರೆಯುತ್ತಿದ್ದರು, ಏನೆಂದು ನಮಗೂ ತಿಳಿಯಲಿಲ್ಲ, " Go ahead" ಎಂದು ಹಾರೈಸಿದೆವು. ಮುಂದೊಮ್ಮೆ ನಮಗೂ ಸಹಾಯಕ್ಕೆ ಬರಬಹುದಲ್ಲವೇ ಅವರ ಈ ಪ್ರಯತ್ನ ! ಕೆಳಗಿಳಿದು ಬರುವಾಗ ಇಬ್ಬರು ವಿದೇಶಿ ಪ್ರವಾಸಿಗರು ಸಿಕ್ಕರು, ಅವರೊಂದುಗೆ ಫೋಟೋ ತೆಗೆಸಿಕೊಂಡು ಕೆಲ ಪ್ರಶ್ನೆಗಳನ್ನು ಕೇಳಿ 'ಗೊಳ್..' ಎಂದು ನಕ್ಕು ಕಲ್ಲು ಮೆಟ್ಟಿಲುಗಳನ್ನಿಳಿದೆವು. ಬಾಯಾರಿಕೆ ಆಗಿ ನೀರಿನ ದಾಹಕ್ಕೆ ಎಲ್ಲೇ ಇಲ್ಲದಂತಾಯಿತು ಒಲ್ಲೆ ಈ ಜೀವನ ಎನ್ನುತ್ತ ನೀರಿಗಾಗಿ ಸಾಲಲ್ಲಿ ನಿಂತು, ನೀರು ಕುಡಿದು,  ಹೋಟೆಲ್ ಒಳ ನುಗ್ಗಿ ತಿಂಡಿ ತಿಂದು ಎಲ್ಲರೂ ಬಸ್ ಹತ್ತಿರ ಬಂದರು. ನಾನು ಮತ್ತು ನನ್ನ ನಾಲ್ಕು ಜನ ಸ್ನೇಹಿತರು ಎಳೆನಿರು ಕುಡಿದು "ಬೇಡ" ಎಂದರು ಕೇಳದೆ ಎಳೆ ಕೊಬ್ಬರಿ ತಿನ್ನಿಸಿದರು. ತಿಂದೆ. ಮುಂದೆ ಇಂದೇ ನನಗೆ ಸ್ವಲ್ಪ ತೊಂದರೆ ಮಾಡಿತು.

ಹಾಸನ ಜಿಲ್ಲೆಯ ಹಳೇಬೀಡಿನ ಕಡೆಗೆ ಅದೇ ಮನರಂಜನೆಯೊಂದಿಗೆ ಪಯಣ ಸಾಗಿತು. ಅಲ್ಲಿ ಹೋಗಿ ಅಲ್ಲಿನ ಶಿಲ್ಪ ಕಲೆಗೆ ತಬ್ಬಿಬ್ಬಾಗಿ, ಬಾಯಿ ಬಿಟ್ಟುಕೊಂಡು ನೋಡುತ್ತಾ ತಿರುಗಡಿದೆವು. ಅಲ್ಲೆಯೇ ಅನ್ನ ದಾಸೋಹ ಇದ್ದಿದ್ದರಿಂದ ಊಟ ಮುಗಿಸಿಕೊಂಡು ಬೇಲೂರಿನ ಕಡೆಗೆ ನಡೆದೆವು. ಈಗ ಈಲ್ಲರಲ್ಲೂ ಕುತೂಹಲ. ಏನೋ ಒಂದು ಮನದಲ್ಲಿ ಗೋಣಗುವಿಕೆ. ಶೀಲಾ ಬಾಲಿಕೆಯರ ವೈಯಾರದ ಶಿಲ್ಲಗಳನ್ನು ನೀಡಬೇಕೆಂದು. ಸಲಹೆಗಾರನೊಬ್ಬನ ಸಹಾಯದೊಂದಿಗೆ ಪ್ರತಿ ಪ್ರತಿಮೆಯ ಮಾಹಿತಿ ಮಹಾತ್ಮೆ ಮಾಡಿದೆವು. ಫೋಟೋ ಪೋಸ್ ಕಾಪಿ ಚೇಷ್ಟೆ ಎಲ್ಲೆಲ್ಲಿಯೂ ನಿಲ್ಲುವ ಮಾತೇ ಇಲ್ಲ ಎಂಬುದು ತಿಳಿದಿರಿ.

ಎಲ್ಲ ಮುಗಿದು ಬಸ್ಸಿನಲ್ಲಿ ಬಂದು ಕುಳಿತು ಧರ್ಮಸ್ಥಳದ ಕಡೆಗೆ ನಡೆದೆವು. ಬಸ್ ಹೊರಟಿತು ಆದರೆ ಇಬ್ಬರು ಸ್ನೇಹಿತರು ( ಚೇತನ್ ಮತ್ತು ಯಲ್ಲಪ್ಪ) ಬಸ್ಸಿನಲ್ಲಿ ಇರಲಿಲ್ಲ. ಇದು ಯಾರ ಗಮನಕ್ಕೂ ಬಂದಿರಲಿಲ್ಲ. ಸ್ವಲ್ಪ ದೂರ ಹೋದ ನಂತರ ಅವರು ಮೊಬೈಲ್ ಮೂಲಕ ನಮ್ಮನ್ನು ಸಂಪರ್ಕಿಸಿದಾಗ ಡ್ರೈವರ್ ಬ್ರೇಕ್ ಹಾಕಿದ ಅವರು ಬರುವವರೆಗೂ ಗುರುಗಳ ಮಂತ್ರ ಪಟನೆ ಶುರುವಾಯಿತು. ಬಂದ ಮೇಲೆ ಸದ್ದಿಲ್ಲದೆ ಪಯಣ ಸಾಗಿತು.

ಬಸ್ ವೇಗವಾಗಿ ರಸ್ತೆಯನ್ನು ನುಂಗುತ್ತಿದ್ದಂತೆಲ್ಲ ದಟ್ಟಡವಿಯಲ್ಲಿ ತಿರುವು-ಮುರುವುಗನ್ನು ದಾಟುತ್ತಿದ್ದೆವು. ಕಿಕ್ಕಿರಿದು ನಿಂತ ಬೆಟ್ಟಗಳು ಮುಗಿಳಿಗೆ ಮುತ್ತಿಕ್ಕುವಂತಿದ್ದವು. ಪ್ರಕೃತಿಯ ಈ ವೈಭವ ನೋಡುವ ನಮಗೆ ಸಂತೋಷದ ಎಲ್ಲೆ ಮೀರಿ ಸ್ವರ್ಗಕ್ಕೆ ಒಂದೇ ಗೇಣು ಎಂಬಂತೆ ನಲಿದೆವು. ಬಸ್ ಬೆಟ್ಟವನ್ನು ತಿರುವು-ಮುರುವು ಬಳಸಿ ಹತ್ತಿತ್ತಿದ್ದರೆ ಹಿಂದಿನ ಸೀಟಿನಲ್ಲಿ ಕುಳಿತವರು ಆಕಡೆ ಈಕಡೆ ಜೋಲಿ ಆಡಿ, ಮಿತಿ ಮೀರಿ ತಡೆಯಲಾಗದೆ ವಾಂತಿ ಮಾಡಿಕೊಳ್ಳಲಾರಂಭಿಸಿದರು. ಅಂತವರಲ್ಲಿ ಮೊದಲಿಗ ನಾನು. ನನ್ನ ನಂತರ ಏಳೆಂಟು ಜನ ನನ್ನನ್ನು ಹಿಂಬಾಲಿಸಿದರು.

ನನ್ನನ್ನು ನಾನು ತುಂಬಾ ಬೈದುಕೊಂಡೆ. ಯಾಕೆಂದರೆ ಪ್ರಕೃತಿಯ ಅತ್ಯಮೂಲ್ಯ ಸೌಂದರ್ಯವನ್ನು ನೋಡಲು ನನ್ನ ವಾಂತಿಯು ಕಣ್ಣಿಗೆ ಬಟ್ಟೆ ಕಟ್ಟಿತು. ಹೀಗಾಗಲು ಬೇಲೂರಿನಲ್ಲಿ ತಿಂದ ಆಹಾರ ಮತ್ತು ಎಳೆ ಕೊಬ್ಬರಿ ಕಾರಣ. ನಮ್ಮ ಪರಿಸ್ಥಿತಿ ನೋಡಲಾಗದೆ ಮರುಗಿದ ಚಾಲಕ ಘಾಟ್ ಪ್ರದೇಶದ ಕಾರಣ ಎಲ್ಲೂ ನಿಲ್ಲಿಸದೆ ಚಲಿಸಿ ಸ್ವಲ್ಪ ದೂರ ಹೊದ ಮೇಲೆ ನಿಲ್ಲಿಸಿದ. ಮಾತ್ರೆ ತೆಗೆದುಕೊಂಡೆವು ಸ್ವಲ್ಪ ವಿಶ್ರಾಂತಿಯ ನಂತರ ಪ್ರಯಾಣ ಬೆಳೆಸಿ ಸಂಜೆಯ 7.30ಕ್ಕೆ ಧರ್ಮಸ್ಥಳ ತಲುಪಿದೆವು. ಲಾಡ್ಜ್ ಮಾಡಿ, ಲಗೇಜ್ ಎಲ್ಲಾ ರೂಮಿನಲ್ಲಿಟ್ಟು, ಫ್ರೆಶ್ ಆಗಿ ಊಟಕ್ಕೆ ಎಲ್ಲರೂ ದೇವಸ್ಥಾನಕ್ಕೆ ಹೋದರು. ಆದರೆ ನಾನು ಮತ್ತು ಚೇತನ್ ರೂಮಿನಲ್ಲೇ ಉಳಿದೆವು ಯಾಕೆಂದರೆ ಅತಿಯಾಗಿ ವಾಂತಿ ಮಾಡಿಕೊಂಡಿದ್ದರಿಂದ ನಮ್ಮಲ್ಲಿ ತ್ರಾಣ ನಿಶಕ್ತಗೊಂಡಿತ್ತು. ಅವರೆಲ್ಲ ಊಟ ಮಾಡಿ ಬರುವಾಗ ನಮಗೆ ಫ್ರೂಟಿ ತಂದು ಕೊಟ್ಟರು ಅದನ್ನಷ್ಟೇ ಕುಡಿದು ಮಲಗಿದೆವು.

ಮರುದಿನ ಬೆಳಗಿನ 5 ಗಂಟೆಗೆ ಎದ್ದು, ನಿತ್ಯ ಕರ್ಮಾದಿಗಳನ್ನು ಮುಗಿಸಿ, ಮಂಜುನಾಥನ ದರ್ಶನಕ್ಕಾಗಿ ಸಾಲಲ್ಲಿ ನಿಂತು , ದೇವರಿಗೊಂದು ಕೋರಿಕೆ ಸಲ್ಲಿಸಿ "ಆ ಅರ್ಜಿಯನ್ನು ರಿಜೆಕ್ಟ್ ಮಾಡಿದಿರಪ್ಪಾ.." ಎಂದು ಕೇಳಿಕೊಂಡು ಹೊರ ಬಂದೆ. 10 ಗಂಟೆಗೆ ಮಂಜೂಷ ವಸ್ತು ಸಂಗ್ರಹಲಯಕ್ಕೆ ಪ್ರವೇಶ ಪಡೆದು ಹಿಂದೆಂದೂ ಕಂಡು ಕೇಳರಿಯದ ಭಿನ್ನ-ವಿಭಿನ್ನ ವಸ್ತುಗಳನ್ನು ವೀಕ್ಷಿಸಿದೆವು. ಇಲ್ಲಿ ನನ್ನ ಮನ ಸೆಳೆದ ವಸ್ತುವೆಂದರೆ, ಆನೆ ದಂತದಲ್ಲಿ ಕೆತ್ತಿದ 8 ಇಂಚು ಎತ್ತರದ ಗಣೇಶ ವಿಗ್ರಹ. ಮತ್ತು, ಅದರ ಸುತ್ತಣ ಕಲಾಕೃತಿ ವರ್ಣಾತೀತವಾಗಿತ್ತು. ಕಲೆಗಾರನ ತಾಳ್ಮೆ ಮೆಚ್ಚುವಂತದ್ದು, ಅಷ್ಟು ಸೂಕ್ಷ್ಮ ಕೆತ್ತನೆಯೇ ಅದು. ಅಲ್ಲೇ ಪಕ್ಕದಲ್ಲಿದ್ದ ಕಾರ್ ಮ್ಯೂಸಿಯಂ ಗೆ ಹೋಗಿ ತರ-ತರದ ಕಾರುಗಳನ್ನು ನೋಡಿ ಹೊರಬಂದ ಕೆಲ ಹಸಿದವರು ಧರ್ಮಸ್ಥಳದ ಪ್ರಸಾದಕ್ಕೆ ಮೊರೆ ಹೋದರು. ನಾನು ಅಜೀತ್, ಶಿವರುದ್ರ, ಸಿದ್ದು, ಬಸ್ಸಿನಲ್ಲೇ ಕುಳಿತೆವು.

ಎಲ್ಲರೂ ಬಂದ ನಂತರ ಮಣಿಪಾಲ್ ಗೆ ಹೊರಟೆವು. ಅಲ್ಲಿ ವಿಜ್ಞಾನಕ್ಕೆ ಸಂಬಂಧಿಸಿದ ಆಟೋನೋಮಿ ಮ್ಯೂಸಿಯಂ ಗೆ ಹೋಗಿ ಮಾನವ ಶರೀರದ ಒಳ-ಹೊರ ಅಂಗಗಳ ನೀಳ-ಅಡ್ಡ ಸೀಳಿಕೆ ಸಂಗ್ರಹ ವೀಕ್ಷಿಸಿ " ಏನೇನಿದೆ ಈ ದೇಹದಲ್ಲಿ... ಈ ಜೀವನದಲ್ಲಿ..." ಎಂದು ಹೇಳಿಕೊಳ್ಳುತ್ತ ಬಸ್ಸನ್ನೇರಿದೆವು. ಸಮಯ 2ರ ಆಸುಪಾಸಿತ್ತು, 3ರ ಹೊತ್ತಿಗೆ ಮಲ್ಪೆಗೆ ಹೋಗಿ ಸಮುದ್ರದ ಉಪ್ಪು ನೀರಿನಲ್ಲಿ ಬೆಪ್ಪರಂತೆ ಜಿಗಿದಾಡಿ, ಕುಣಿದು-ಕುಪ್ಪಳಿಸಿದೆವು.

ತೀರಕ್ಕೆ ರಭಸದಿಂದ ಬರುವ
ತೆರೆ-ತೊರೆಗಳಂತೆ ನಿನ್ನ
ನೆನಪನ್ನು ಹೆಕ್ಕಿ ತಂದು ಮನಸ್ಸು
ಎದೆಯಾಚೆ ಹಾಕುತ್ತಿದೆ ಹುಡುಗಿ.

ಅಲ್ಲಿಂದ ಸಂಜೆಯ 5 ಗಂಟೆಗೆ ಉಡುಪಿಯ ಶ್ರೀ ಕೃಷ್ಣನ ಸನ್ನಿಧಾನಕೆಜೆ ಬಂದೆವು. ಯಾರೂ ತಡ ಮಾಡದೇ ನೆರವೇರುತ್ತಿದ್ದ ಪೂಜೆಯಲ್ಲಿ ಪಾಲ್ಗೊಂಡೆವು. ಅಲ್ಲಿನ ಬಿಸಿಲ ಝಳಕ್ಕೆ ಮತ್ಯೋಮ್ಮೆ ಸ್ನಾನವಾಗಿತ್ತು. ಪೂಜೆ ಮುಗಿಸಿ ಹೊರ ಬಂದು ತಂಗುವುದರ ಬಗ್ಗೆ ಚರ್ಚಿಸಿ 7.30ಕ್ಕೆ ಕೊಲ್ಲೂರಿನ ಕಡೆಗೆ ಪಯಣ ಆರಂಭಿಸಿದೆವು.

ಬಸ್ಸಿನಲ್ ಹಾಡುತ್ತ, ನಗಿಸುತ್ತ, ನಟಿಸುತ್ತ ಮನರಂಜನೆ ಸಾಗಿತ್ತು.

ಇಲ್ಲಿ ನಾನು ಮತ್ತು ಮಹಾಕೂಟೇಶ ಬಬ್ರುವಾಹನ ಚಿತ್ರದ 'ಏನು ಪಾರ್ಥ....' ನಟನೆ ಮೂಲಕ ರಂಜಿಸಿದೆವು. ರಾತ್ರಿಯ 11ಕ್ಕೆ ಕೊಲ್ಲೂರು ತಲುಪಿ ಲಾಡ್ಜ್ ಆಶ್ರಯ ಪಡೆದುಕೊಂಡೆವು.

ಬೆಳಿಗ್ಗೆ 4.30ಕ್ಕೆ ಎದ್ದು ಮುಗಿಸಬೇಕಾದ ಕೆಲಸಗಳನ್ನೆಲ್ಲ ಮುಗಿಸಿ ತಾಯಿ ಮುಕಾಂಬಿಕೆಯ ದರ್ಶನಕ್ಕೆ ಹೊರಡುವ ಸಮಯಕ್ಕೆ ಈಶ್ವರ್ ಪಾಟೀಲ್ ತೀವ್ರ ಹೊಟ್ಟೆ ನೋವಿನಿಂದ ನರಳಲಾರಂಭಿಸಿದ.  ಒಂದಷ್ಟು ಜನ ದರ್ಶನಕ್ಕೆ ಹೋದರೆ ಮತ್ತೆ ಒಂದಷ್ಟು ಜನ ಆಸ್ಪತ್ರೆಗೆ ಹೋದೆವು. ನಂತರ ಮುರುಡೇಶ್ವರಕ್ಕೆ ಪಯಣ ಬೆಳೆಸಿದೆವು. ಶಿವನ ಭವ್ಯ ಪ್ರತಿಮೆಯನ್ನು ಕಣ್ಣೆದುರಿಗೆ ಮನಸ್ಸು ತಂದುಕೊಂಡಿತಾದರು ಅದರ ಅಪ್ರತಿಮ ಚೆಲುವನ್ನು ಸವಿಯಲು ಅಲ್ಲಿಗೆ ಹೋಗುವವರೆಗೆ ಕಾಯಲೇ ಬೇಕಿತ್ತು.

ಬಸ್ಸಿನಿಂದ ಇಳಿದ ತಕ್ಷಣ ಎಲ್ಲರೂ ದಿಢೀರ್ ಶಿವನತ್ತ ನಡೆದರು. ತಿರುಗಾಡಿ ಸ್ಥಳದ ಅಂದ-ಚಂದವನ್ನು ಸವಿದು ಹೊಟ್ಟೆಗಿಷ್ಟು ಹಿಟ್ಟು ಹಾಕಿಕೊಂಡು ಗಟ್ಟಿಯಾಗಿ ಸಮುದ್ರಕ್ಕಿಳಿಯುವ ಎಂದು ಯೋಜಿಸಿದೆವು. ಈ ನಮ್ಮ ಯೋಜನೆ ಸುನಾಮಿಗೆ ಸಿಕ್ಕ ಬೇನಾಮಿ ಮಿನಿನಂತೆ ಆಯಿತು. ಯಾಕೆಂದರೆ, ನಮ್ಮ 56 ವಾನರ ಸೈನ್ಯಕ್ಕೆ ಯಾವೊಬ್ಬ ಹೋಟೆಲ್ ನವನೂ ಅಡುಗೆ ಮಾಡಿ ಹಾಕಲು ಮುಂದೆ ಬರದಾದ. ಕೊನೆಗೊಬ್ಬ ಕೋಟಿಗೊಬ್ಬ ಎಂಬಂತೆ ಒಪ್ಪಿದ ಆದರೆ " ಹೋಟೆಲ್ ಇಲ್ಲಿಂದ ಸ್ವಲ್ಪ ದೂರ ಉಂಟು ಬಸ್ಸಲ್ಲಿ ಹೋಗಿ " ಎಂದು ಬಿಟ್ಟಿ ಸಲಹೆ ಕೊಟ್ಟ, ನಾವು ಸ್ವಲ್ಪ ದೂರ ಅಲ್ಲವೇ ಹಾಗಾಗಿ ಕಾಲ್ನಡಿಗೆಯಲ್ಲಿ ಹೊರಟೆವು. ನಮ್ಮ ಎಣಿಕೆಯಂತೆ ಅದು ಸ್ವಲ್ಪ ದೂರದಲ್ಲಿರಲಿಲ್ಲ, ಸ್ವಲ್ಪ ದೂರವೇ ಇತ್ತು. ಹೆಜ್ಜೆಗಳನ್ನು ಎಷ್ಟು ಕಿತ್ತಿಟ್ಟರು ಬಡ್ಡಿ ಮಗನ  'ಕಾಮತ್ ಹೋಟೆಲ್' ಮಾತ್ರ ಕಾಣದು. ನಡೆದು ನಡೆದು ಹೋದಂತೆ ಹುಡುಗಿಯರು ಉಪಹಾರ ಮುಗಿಸಿ "ಮತ್ತೆ 3 ಕಿಮೀ. ನಡೆದು ಬೀಚ್ ಗೆ ಬರಬೇಕಾ ..?" ಎಂದು ಉದ್ಘಾರಿಸಿದರು. ಈ ಉದ್ಘಾರದಲ್ಲೇ ಬೀಚಿನಲ್ಲಿ ಮಾಡಬೇಕಾದ ಮೋಜು ಮಾಸ್ತಿ ಕರಗಿ ಹೋಗಿತ್ತು.

ಕಡೆಗೆ ತಮ್ಮಣ್ಣವರ ಸರ್ ಈ 'ಬೀಚ್ ಮೋಜಿಗೆ ಬೆಂಕಿ ಬಿತ್ತು..' ಎಂದು ರಿಕ್ಷಾ ಮಾಡಿ ಡ್ರೈವರನನ್ನು ಕಳಿಸಿ ಬಸ್ ತರ ಹೇಳಿದರು. ಹೀಗೆ ಮಧ್ಯಾಹ್ನದ 12 ರ ಉರಿ ಬಿಸಿಲಿನಲ್ಲಿ ಮುರುಡೇಶ್ವರದಿಂದ  ಇಡಗುಂಜಿ ಗಣೇಶನತ್ತ ಪಯಣ ಮತ್ತದೇ ಮೋಜು ಮಸ್ತಿ ಮಡುಗತ್ತಿತ್ತು. ಒಂದು ಗಂಟೆಯ ಅಂತರದಲ್ಲಿ ಇಡಗುಂಜಿ ತಲುಪಿ ದರ್ಶನ ಮುಗಿಸ್ಕೊಂಡು ಗೋಕರ್ಣದ ಕಡೆ " ಗೋವಿಂದಾ... ಗೋ.... ವಿಂದ" ಎಂದೆವು.

ಸಂಜೆಯ 5 ಗಂಟೆಗೆ ಗೋಕರ್ಣಕ್ಕೆ ಕಾಲಿಟ್ಟು ಆತ್ಮಲಿಂಗ ಸ್ಪರ್ಶಿಸಿ ಹಿರ ಬಂದು ಬೀಚ್ ಕಡೆಗೆ ನಡೆದೆವು.

 ಬೀಚಿನಲ್ಲಿ ಮನಸು ಬಿಚ್ಚಿ,
ಬೆಚ್ಚಗಿನ ಭಾವಗಳ ಬಾಚಿ,
ಹೃದಯದಾಳದ ಮಾತುಗಳ ದೋಚಿ, 
ಚುಟುಕು ಹನಿಗವನಗಳ ಗೀಚಿದೆ.

ತಿರುಗುವಷ್ಟರಲ್ಲಿ ಎಲ್ಲರೂ ಸಲಾಗಿ ಕುಳಿತು ಸೂರ್ಯನ ಸಾವನ್ನು ಎದುರು ನೋಡುತ್ತಿದ್ದರು. ಅಳಿದುಳಿದ ಚಕ್ಕುಲಿ, ಚೂಡಾ ಲಾಡುಗಳಷ್ಟೇ ಸಿಕ್ಕವು. ಅವನ್ನೇ ತಿನ್ನುತ್ತಾ ನಾನು ಸೂರ್ಯ ಸಾವನ್ನು ನೀಡಲು ಸನ್ನದ್ಧನಾಗಿ ಕುಳಿತೆ.

ಅತಿಯಾದ ಮೋಡ ಕವಿದ ವಾತಾವರಣ ಇದ್ದ ಕಾರಣ ಎಲ್ಲರಿಗೂ ನಿರಾಶೆಯಾಯಿತು. ಹೊಳೆಯಲ್ಲಿ ಹುಣಿಸೆ ಹಣ್ಣು ತೊಳೆದಂತೆ ನಮ್ಮ ಆಸೆಯೂ ಆಯಿತು. ಸ್ವಲ್ಪ ಸಮಯದ ನಂತರ ಬಸ್ ಕಡೆಗೆ ಬಂದು 8 ಗಂಟೆಗೆ ಊಟ ಮುಗಿಸ್ಕೊಂಡು 9 ಗಂಟೆಗೆ ತವರೂರಿನ ಕಡೆ ಮುಖ ಮಾಡಿದೆವು. ಈಗಂತೂ ಎಲ್ಲೆ ಇಲ್ಲದ ಮಲ್ಲರಂತೆ ರಂಜಿಸಿದೆವು. ಅಂದು ರಾತ್ರಿಯ ಪಯಣದಲ್ಲಿ ಗಮನ ಸೆಳೆದ ವ್ಯಕ್ತಿ ಸಿದ್ದು ಪುಠಾಣಿ, ನಾನು, ಅಜೀತ್, ಮಹಾಕೂಟೇಶ. ಸಿದ್ದುವಿನ ಕೊಳಲ ನಾದ ಕಿವಿಗೆ ಇಂಪು ಕೊಡುವ ಬದಲು ಪಾಪ್ ಗಾಯನದ ಕದ ತಟ್ಟಿತ್ತು. ಮುಂಗಾರು ಮಳೆ ದೃಶ್ಯಾವಳಿಗಳ ನಟನೆ (ರಾಜು ಕುಂಬಾರ) ಭಾರಿ ಇತ್ತು. ಸುಮಾರು 12 ಗಂಟೆ ಆಗುರಬಹುದು ಬಹಳಷ್ಟು ಜನ ನಿದ್ದೆ ಮಾಡಿದ ಕಾರಣ "ಪ್ರೇಕ್ಷಕರಿಲ್ಲದೆ ಪ್ರದರ್ಶನ ಹೇಗೆ ಮಾಡುವುದು ...?" ಎಂದು ನಾವು ನಿದ್ರಾ ದೇವಿಯ ಮಡಿಲು ಸೇರಿದೆವು. ಬೆಳಿಗ್ಗೆ 4.30ಕ್ಕೆ ನಮ್ಮ ಸಾಮ್ರಾಜ್ಯ "DIET ಮಣ್ಣೂರ" ತಲುಪಿದೆವು. 6 ಗಂಟೆಯವರೆಗೆ ಅಲ್ಲೇ ಇದ್ದು ನಂತರ ತಮ್ಮ ತಮ್ಮ ಮನೆಗ ಕಡೆಗೆ ಸಾಗಿದೆವು.

11 comments: