Saturday 14 March 2020

ವಿಭಿನ್ನ ವಾಸ್ತವ


          ಊರಿಗೆ ಹೋಗುವುದಿತ್ತು, ಹಾಗಾಗಿ, ಬೆಳಿಗ್ಗೆ ಬೇಗ ಎಂದರೂ 6.30ಕ್ಕೆ ಎದ್ದು ಸ್ನಾನ ಮಾಡಿ, ಹೊಸಯಲ್ಲಾಪುರ್ BRTS ಬಸ್ ಸ್ಟಾಪ್ ಒಳಗೆ 201B ಸಲುವಾಗಿ 15 ನಿಮಿಷಗಳ ಕಾಲಹರಣವಾಗಿ ಹೊಸ ಬಸ್ ಸ್ಟ್ಯಾಂಡ್ ಗೆ ಬಂದು ಬೆಳಗಾವಿಗೆ ಹೋಗುವ ತಡೆರಹಿತ ಬಸ್ಸಲ್ಲಿ ಕುಳಿತೆ. ಕಂಡಕ್ಟರ್ ಬಂದು ಟಿಕೆಟ್ ಕೊಟ್ಟ, 'ನೂರು ರೂಪಾಯಿಗೆ ಟಿಕೆಟ್ ಜೊತೆ 10 ಹಿಂತಿರುಗಿಸುವರು' ಎಂದೇ ನಾನು ನಂಬಿದ್ದೆ. ಆದರೆ, ಬಸ್ ಪ್ರಯಾಣ ದರಗಳಲ್ಲಿ ಏರಿಕೆಯಾಗಿ 100ಕೆ 100 ಲೆಕ್ಕ ಪಕ್ಕಾ ಮಾಡಿದ್ದರು. 

           ಬಸ್ ಹೊರಗೆ ಬಂದು ರೆಸಿಡೆನ್ಸಿ ಲಿಕ್ಕರ್ ಎದುರಿಗೆ, ಎಲ್ಲರ ಟಿಕೆಟ್ ಪಡೆದ ಬಗ್ಗೆ ದೃಢಪಡಿಸಿಕೊಳ್ಳಲು ನಿಂತಿತ್ತು. ಒಂದಿಬ್ಬರು ಹೋಗುತ್ತಿರುವ ಬಸ್ಸಿಗೆ ಓಡಿ ಬಂದು, ಹತ್ತಿ, ಸಾಹಸ ಮೆರೆದವರಿಗೆ ಕಂಡಕ್ಟರ್ ಕಾಸಿಗೆ ಪ್ರತಿಯಾಗಿ ಟಿಕೆಟ್ ಕೊಡಲು ಬಂದ. ನನ್ನ ದೃಷ್ಠಿ ಕಿಡಕಿಯಿಂದ ಹೊರ ಹೋಯಿತು. ರೆಸಿಡೆನ್ಸಿ ಲಿಕ್ಕರ್, ಬಾರ್ ರೆಸಿಡೆನ್ಸಿ ಏನೋ ಮುಚ್ಚಿತ್ತು ಆದರೆ ಅದರ ಮುಂದೆ ಕುಳಿತ ಮುಪ್ಪಾವಸ್ಥೆಗೆ ಕಾಲಿಡುತ್ತಿದ್ದ ಇಬ್ಬರು ಕುಳಿತಿದ್ದರು. ಕೈ ಯಲ್ಲಿ ದೊಡ್ಡ ಬಾಟಲಿ, "ಯಾವ ಬ್ರಾಂಡ್ ಇರಬಹುದು " ಎಂದು ದಿಟ್ಟಿಸಿ ನೋಡಿದೆ "ಒರಿಜಿನಲ್ ಚಾಯ್ಸ್... ಬೆಳಿಗ್ಗೆ ಬೆಳಿಗ್ಗೆ...!!" ನೋಡೋಕೆ ಅಜ್ಜ ಹಂಗೇನೂ ಚಹರೆ ಇರದಿದ್ದರೂ ಬೆಳಿಗ್ಗೆ ಬೆಳಿಗ್ಗೆ ಕೈಯಲ್ಲಿ ಒರಿಜಿನಲ್ ಚಾಯ್ಸ್ ನೋಡಿ "ವಯಸ್ಸಾದ್ರೂ ಅಜ್ಜ ಬ್ರಾಂಡ್ ಎನ್ ಬಿಟ್ಟಿಲ್ಲ.." ಎಂದು ಯೋಚನೆ ಬರುವಷ್ಟರಲ್ಲಿ ಕೋರೋನ  ನೆನಪಾಗಿ, "ನೆರೆ-ಹೊರೆಯ ಕಿಡಿಗೇಡಿ ಹುಡುಗರರಾದ್ರೂ  ಔಷಧ ಅಂಗಡಿಗಳೆಲ್ಲ ಬಂದ್ ಆಗ್ಯಾವ್, ಎಲ್ಯು ಸ್ಟಾಕ್ ಇಲ್ಲ ಅಂತ ಏನೇನೋ ಹೇಳಿ ಅಜ್ಜನ ಬ್ರೈನ್ ವಾಷ್ ಮಾಡಿರಬಹುದು, ಅದಕ್ಕೆ ಅಜ್ಜ ಬೆಳಿಗ್ಗೆ ಬೆಳಿಗ್ಗೆ ಸ್ಯಾನಿಟೈಜೆರ್ ತಗೊಂಡ್ ಹೋಗ್ತಿರಬಹುದು " ಎನಿಸಿತು. 

          ಇದೆಲ್ಲ ವಿಚಾರ ಮಾಡುತ್ತಲೇ ಒಂದೆರಡು ಫೋಟೋ ಕ್ಲಿಕ್ಕಿಸಿಕೊಂಡೆ ಅದು ಅಜ್ಜನ ಗಮನಕ್ಕೆ ಬಂದು ನಗೆ ಬೀರಿದ, ನಾನೂ ಪ್ರತಿಕ್ರಿಯಿಸಿದೆ. ಅಷ್ಟೊತ್ತಿಗಾಗಲೇ ಬಸ್ ಡ್ರೈವರ್ ಸೆಲ್ಫ್ ಸ್ಟಾರ್ಟ್ ಒತ್ತಿ, ಎಕ್ಸಿಲೇಟರ್ ಕೊಡುವುದರಲ್ಲಿದ್ದ; ಅಜ್ಜನ ಮೊಮ್ಮಗ ಇರಬಹುದು, ಬಂದು " ಏಯ್ ಯಜ್ಜ ನೀರ್ ಕೊಡೋ ಕುಡ್ಯಾಕ್" ಎಂದ. ಬಸ್ ಮುಂದೆ ಬಂದಿದ್ದರೂ ಎದ್ದು ನಿಂತು ತಿರುಗಿ ನೋಡಿ ಖಚಿತಪಡಿಸಿಕೊಂಡೆ. ಆ ಬಾಟಲಿ ಒಳಗಿದ್ದದ್ದು "ನೀರು" ಎಂದು. 

               "ಎಷ್ಟೋ ಸಲ ಈ ಜಗತ್ತು ನಮಗೆ ಅದು ಇರುವ ವಾಸ್ತವಕ್ಕಿಂತ ವಿಭಿನ್ನವಾಗಿ ಕಾಣುತ್ತದೆ. ಆ ಆಧಾರದ ಮೇಲೆ ನಾವು ಅಲ್ಲಿಯ ಸುತ್ತಣವನ್ನೂ, ಪ್ರಚಲಿತ ವಿದ್ಯಮಾನಗಳನ್ನು ಪರಿಗಣಿಸಿ ನಮ್ಮದೇ ಆದ ಒಂದು ನಿರ್ಧಾರಕ್ಕೆ ಬಂದು ಬಿಡುತ್ತೇವೆ. ಆದರೆ ಅದು ನಮ್ಮ ಗ್ರಹಿಕೆಗಿಂತ ಬೇರೆಯೇ ಆಗಿರುತ್ತದೆ."

1 comment:

  1. ನಿಜ ಗೆಳೆಯ...ಅದಕ್ಕೇನೆ ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡು ಎಂದಿರುವುದು.

    ReplyDelete