Friday 11 December 2015

ಮುಂಗಾರಿನ ಕಂಕಣ



ಅರಿಶಿನ ಬಳಿದಂತೆ ವಧುವಿಗೆ
ಹಸುರು ಮೆತ್ತಿದೆ ಮಣ್ಣಿಗೆ
ಸುತ್ತ ಹಾಯಿಸಿದಲ್ಲೆಲ್ಲ ದಿಟ್ಟಿ
ಹೇರಳವಾಗಿ ರಾಚುವುದು ಚಿಗುರು
ಹಸುರೋ ಹಸುರು ಬರೀ ಹಸುರು

ವಸಂತ ಶುರುವಾಗಿ ಶ್ರಾವಣ-
ವ ಕರೆಯುವ ಸಂಭ್ರಮದ ಚಣ
ಭೂ ಗರ್ಭದಿ ಮೊಳೆತು ಐದೆಳೆ
ಎಲೆಯ ತೊಟ್ಟು ನಗುತಿವೆ ಬೆಳೆ
ಸಂಭ್ರಮವೋ ಸಂಭ್ರಮ ರೈತನಿಗೆ ಸಂಭ್ರಮ

ಜೋಡೆತ್ತನು ಕೊಳ್ಳಗಟ್ಟಿ, ನಸುಕಿನಿಂದ ಸಂಜಿತನ
ಹರಗಿ ಹೊಲವ, ಹದ ಮಾಡಿ ನೆಲವ ಬೆಳೆಗೆ
"ಮಕ್ಕಳೋ.. ಇವು ನನ್ನ ಮಕ್ಕಳು"- ಎಂದು
ನೇವರಿಸುವೆ ಮೊಳೆತ ಎಳೆ ಎಲೆಯನು
ಸಂತಸವೋ ಸಂತಸ ಬೆಳೆಗೆ ಹೇಳ ತೀರದ ಸಂತಸ.

ಓದಿಲ್ಲ ಕಲಿತಿಲ್ಲ. ಪುರಾಣ ಕೇಳಿದ್ದ ನಾ ಕಂಡಿಲ್ಲ.
ಆದರೂ ರಾಮಾಯನದ ಪಾರಾಯಣ ಮಾಡುವೆಯಲ್ಲ..!!
"ರಾಮ-ಲಕ್ಷ್ಮಣ"ರಿಗೆ ರಾಮ-ಲಕ್ಷ್ಮಣರ ಕತೆ ಹೇಳಿ
ದಣಿವಡಗಿಸಿ, ದಣಿವಾರಿಸುವೆ ನಿಮ್ಮದಾವ ನಂಟೋ ತಂದೆ ?
ಇರಬಹುದು ಇರಬಹುದು ರೈತಂಗೂ-ರಾಮಂಗೂ ಎಂದೆ.

ನೋಡಲ್ಲಿ ನಿನ್ನ ಜೋಡಿ ಬರುತಿದೆ
ನಿನಗಾಗಿ ಬುತ್ತಿಗಂಟು ತರುತಿದೆ
ಮಾವಿನ ಮರದ ನೆರಳ್ ನಗುತಿದೆ
'ಬಂದರೆನ್ನ ಕಂದರ್ ಮಡಿಲಿಗೆ’ನುತಿದೆ
ಶಿವ-ಗೌರಿ ಶಿವ-ಗೌರಿ ಹೌದು ನೀವೇ ಶಿವ-ಗೌರಿ
          (ಗಂಗೆಯದೋ ಭೂ ತಾಯಿ)
                                                         - ಸತೀಶ ಉ ನಡಗಡ್ಡಿ

No comments:

Post a Comment