Tuesday 8 December 2015

ಸೃಷ್ಠಿ ಸಮತೋಲನ

          ಈ ಜಗತ್ ಸೃಷ್ಠಿಯಲಿ ಒಂದು ಬೆಳೆಯಬೇಕೆಂದರೆ ಒಂದು ಬಲಿಯಾಗಲೇಬೇಕು. ಅದೇ ಈ ಸೃಷ್ಠಿಯಲಿ ಅಡಗಿರುವ ನಿಗೂಢ. ಇಡೀ ಪ್ರಕೃತಿಯೇ ಒಂದು ತರದ ರಣಾಂಗಣ. ಹಕ್ಕಿ ತನ್ನ ಕರುಳ ಕುಡಿಯ ಹಸಿವಡಗಿಸಲು ಅಲ್ಲೆಲ್ಲೋ ಎಲೆಯಿಂದೆಲೆಗೆ ಜಿಗಿವ, ದುಂಬಿಯಿಂದ ದುಂಬಿಗೆ ಮಕರಂದ ಹೀರುವ ಪತಂಗವೊಂದನ್ನು ಬೇಟೆಯಾಡಿದೆ. ಹಕ್ಕಿಗೆ ಆಹಾರ ದೊರೆತ ಆನಂದ;  ಉಂಡ ಜೀವಕ್ಕೆ ಪರಮಾನಂದ. ತಾಯಿಯ ಕಾಳಜಿ, ಪ್ರೀತಿ, ಶ್ರಮ ಅಮೋಘ  ಅನನ್ಯ. ಆದರೆ ಪತಂಗ......... ? ಪತಂಗ, ಅದೂ ಸಹ ಅದರ ಕರುಳ ಕುಡಿಗಾಗಿಯೋ ಇಲ್ಲ ಮಕರಂದ ಹೀರುವ ನೆಪದಲ್ಲಿ ಪರೋಕ್ಷ ಸಂತಾನೋತ್ಪತ್ತಿಯ ವಾಹಕವಾಗಿಯೋ ಸೃಷ್ಠಿಯಲ್ಲಿ ತನ್ನ ಕಾರ್ಯ ನಿರ್ವಹಿಸುತ್ತಿತ್ತು. ಪಾಪ "ಅಮ್ಮ ಬರುತ್ತಾಳೆ ಹೊಟ್ಟೆಗೇನನ್ನೋ ತರುತ್ತಾಳೆ" ಎಂದು ದಾರಿ ಕಾಯುತ್ತ ಪತಂಗದ ಮಕ್ಕಳೂ ಸಹ ಕಾಯುತ್ತಿರಬಹುದಲ್ಲ .....? 

                   ಕೆದಕುತ್ತ ಹೋದಂತೆ ಕುಪ್ಪೆ ಕುಪ್ಪೆ ಸಿಗತ್ತೆ ಈ ನಿಗೂಢ ಸೃಷ್ಠಿಯಲ್ಲಿ. ಪ್ರಕೃತಿ ತನ್ನ ಸಮತೋಲನ ಕಾಯ್ದುಕೊಳ್ಳುವುದು ಅದೆಷ್ಟು ಚಂದ. ಅದಕ್ಕೆ ಇರಬೇಕು ಜಗತ್ತು ಇಷ್ಟು ಸುಂದರವಾಗಿರುವುದು. ಪತಂಗದ ಅಶಾ ಗೋಪುರದ  ಸಮಾಧಿಯ ಮೇಲೆ ಹಕ್ಕಿಯ ಆನಂದದ ಮಹಲು ಕಳೆಗಟ್ಟಿ ನಳನಳಿಸುತ್ತಿರುವುದು. ಹಕ್ಕಿಗಳ ಆನಂದವನ್ನಷ್ಟೇ ಕಂಡು ಹುಬ್ಬೆರಿಸಿದರೆ ಪತಂಗದ ತ್ಯಾಗಕ್ಕೆ ಶಬಾಷಗಿರಿ ಕೊಡೋದು ಬೇಡ್ವಾ,, ?
ಎಲ್ಲವೂ ನಿನ್ನಲ್ಲೇ  ಇದೆ ಮನುಜ. ಒಳಿತು ನಿನ್ನಲ್ಲೇ  ಕೆಡುಕು ನಿನ್ನಲ್ಲೇ .

    -ಸತೀಶ ಉ ನಡಗಡ್ಡಿ

No comments:

Post a Comment